varthabharthi


ರಾಷ್ಟ್ರೀಯ

ಉನ್ನಾವೊ: ಇಬ್ಬರು ಬಾಲಕಿಯರ ಹತ್ಯೆ ಪ್ರಕರಣ; 8 ಟ್ವಿಟ್ಟರ್ ಹ್ಯಾಂಡಲ್ ವಿರುದ್ಧ ಎಫ್ಐಆರ್ ದಾಖಲು

ವಾರ್ತಾ ಭಾರತಿ : 22 Feb, 2021

ಲಕ್ನೋ, ಫೆ. 22: ಉತ್ತರಪ್ರದೇಶದ ಆದಿತ್ಯನಾಥ್ ಸರಕಾರ ಸಾಮಾಜಿಕ ಮಾಧ್ಯಮದ ‘ಅಪರಾಧಿ’ಗಳನ್ನು ನಿಗ್ರಹಿಸಲು ಆರಂಭಿಸಿದೆ. ಜಿಲ್ಲೆಯ ಬಬುರ್ಹಾ ಗ್ರಾಮದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೃತದೇಹಗಳು ಪತ್ತೆಯಾಗಿರುವುದಕ್ಕೆ ಸಂಬಂಧಿಸಿ ಹಾದಿ ತಪ್ಪಿಸುವ ಮಾಹಿತಿಯನ್ನು ಹರಡುತ್ತಿರುವ ಆರೋಪದಲ್ಲಿ ಹಿರಿಯ ಪತ್ರಕರ್ತೆ ಬರ್ಖಾ ದತ್ತ್ ಅವರ @themojostory ಸೇರಿದಂತೆ 8 ಟ್ವಿಟ್ಟರ್ ಹ್ಯಾಂಡಲ್ ಹಾಗೂ ಅದರ ಬಳಕೆದಾರರ ವಿರುದ್ಧ ಉನ್ನಾವೊ ಪೊಲೀಸರು ರವಿವಾರ ಎಫ್ಐಆರ್ ದಾಖಲಿಸಿದ್ದಾರೆ. 

ಎಫ್ಐಆರ್ ದಾಖಲಿಸಿದ ಇತರ ಹ್ಯಾಂಡಲ್ಗಳಲ್ಲಿ @bhimsenaChief (ನವಾಬ್ ಸತ್ಪಾಲ್), @NilimDutta, @janjagranlive, @SurajKrBaudh (ಅಜಾದ್ ಸಮಾಜ ಪಕ್ಷದ ವಕ್ತಾರ), @vijayambedkarUP, @Abhaykumarazad97 @Rahuldiwkr ಕೂಡಾ ಸೇರಿವೆ.

ತನ್ನ ಟ್ವೀಟ್ಗಳ ಮೂಲಕ ತಪ್ಪು ಮಾಹಿತಿ ಹರಡಿದ ಆರೋಪದಲ್ಲಿ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರ ವಿರುದ್ಧ ಉನ್ನಾವೊ ಪೊಲೀಸರು ಶನಿವಾರ ಬೆಳಗ್ಗೆ ಪ್ರಕರಣ ದಾಖಲಿಸಿದ್ದರು. ಉನ್ನಾವೊದ ಹೊಲದಲ್ಲಿ ಪತ್ತೆಯಾದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು ಹಾಗೂ ಬಾಲಕಿಯರ ಕುಟುಂಬದ ಅಭಿಪ್ರಾಯಕ್ಕೆ ವಿರುದ್ಧವಾಗಿ ಅಂತ್ಯ ಕ್ರಿಯೆ ನಡೆಸಲಾಗಿತ್ತು ಎಂದು ಈ 8 ಟ್ವಿಟ್ಟರ್ ಹ್ಯಾಂಡಲ್ನ ಬಳಕೆದಾರರು ಟ್ವೀಟ್ ಮಾಡಿದ್ದರು ಎಂದು ಉನ್ನಾವೊ ಪೊಲೀಸರು ಪ್ರತಿಪಾದಿಸಿದ್ದಾರೆ. ಗಲಬೆ ಕಾರಣವಾಗುವ ಉದ್ದೇಶದಿಂದ ವದಂತಿ ಹರಡಿದ ಆರೋಪದ ಅಡಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಕಲಂಗಳ ಅಡಿಯಲ್ಲಿ ಈ ಟ್ವಿಟ್ಟರ್ ಬಳಕೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಿಧ ಸಾಮಾಜಿಕ ಮಾಧ್ಯಮದ ಮೂಲಕ ಉದ್ವಿಗ್ನತೆಯ ಹೆಚ್ಚಿಸಲು ಹಾಗೂ ಕೋಮ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಟ್ವೀಟ್ಗಳ ಬಗ್ಗೆ ತನಿಖೆ ನಡೆಸಲಾಗುವುದು. ಆಡಳಿತಾರೂಡ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿ ನಿರ್ದಿಷ್ಟ ಪಕ್ಷ, ಘಟಕ ಹಾಗೂ ಗುಂಪುಗಳಿಗೆ ಸಂಬಂಧಿಸಿ ಜನರು ಉದ್ದೇಶಪೂರ್ವಕವಾಗಿ ಈ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಅಲ್ಲದೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಉನ್ನಾವೊ ಪೊಲೀಸ್ ಅಧೀಕ್ಷಕ ಆನಂದ್ ಕುಲಕರ್ಣಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)