varthabharthi


ನಿಮ್ಮ ಅಂಕಣ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಶೀಘ್ರ ನಿರ್ಮಾಣವಾಗಲಿ

ವಾರ್ತಾ ಭಾರತಿ : 22 Feb, 2021
-ರಾಜಸ ಸದಾನಂದ ತೋಡುರ, ಕಾರವಾರ

ಮಾನ್ಯರೇ,

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ದಶಕಗಳ ಹಿಂದೆ ಶಂಕುಸ್ಥಾಪನೆ ಮಾಡಿದ್ದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ನಿರ್ಮಾಣದ ಕೆಲಸ ಇನ್ನೂ ಪ್ರಾರಂಭವಾಗದಿರುವುದು ಇದರ ಉಪಯೋಗ ಪಡೆಯಬೇಕಾದ ಜನತೆಯ ನಿರಾಶೆಗೆ ಕಾರಣವಾಗಿದೆ. ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಈ ರೈಲ್ವೆ ಯೋಜನೆಗೆ, ಕೇಂದ್ರ-ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿದ್ದರೂ ಕೂಡ, ಜನಪ್ರತಿನಿಧಿಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಕಾಣದ ಕೈಗಳ ಕೈವಾಡದಿಂದಾಗಿ ಈ ರೈಲ್ವೆ ಯೋಜನೆ ನನೆಗುದಿಗೆ ಬಿದ್ದಿದೆ. ಧಾರವಾಡ ಹಾಗೂ ಉತ್ತುರ ಕನ್ನಡ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ರೈಲ್ವೆ ಯೋಜನೆ ಬಗ್ಗೆ ಇನ್ನಾದರೂ ಹೆಚ್ಚಿನ ಜವಾವ್ದಾರಿ ಹಾಗೂ ಮುತುವರ್ಜಿಯನ್ನು ವಹಿಸಬೇಕು ಹಾಗೂ ಈ ಯೋಜನೆಯ ಉಪಯೋಗದ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಅರಿವು ಮೂಡಿಸಿ, ಅವರ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬೇಕಾಗಿದೆ. ಪರಿಸರ, ವನ್ಯಜೀವಿಗಳಿಗೆ ಹೆಚ್ಚಿನ ಹಾನಿಯಾಗದಂತೆ ವೈಜ್ಞಾನಿಕವಾಗಿ ಯೋಜನೆಯನ್ನು ರೂಪಿಸಿ ಹಾಗೂ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅತೀ ಶೀಘ್ರವಾಗಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯನ್ನು ಮುಗಿಸಬೇಕು. ಉತ್ತರ ಕರ್ನಾಟಕದ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಉತ್ತರ ಕನ್ನಡ ಜಿಲ್ಲೆಯ ಅಲಗೇರಿಯಲ್ಲಿ ವಿಮಾನ ನಿಲ್ದಾಣದ ಸ್ಥಾಪನೆ, ಬೇಲೆಕೇರಿಯಲ್ಲಿ ಬಂದರು ಅಭಿವೃದ್ಧಿ, ಕಾರವಾರದಲ್ಲಿ ಸೂಪರ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಸ್ಥಾಪನೆ, ಹುಬ್ಬಳ್ಳಿ-ಅಂಕೋಲಾದ ಜೊತೆಗೆೆ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲ್ವೆ ಮಾರ್ಗದ ನಿರ್ಮಾಣ ಹಾಗೂ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಹಾಗೂ ಶಿರಸಿ-ಕುಮಟಾ ಮತ್ತು ಶಿರಸಿ-ಹುಬ್ಬಳ್ಳಿ ರಸ್ತೆಯ ಅಗಲೀಕರಣವೂ ನಿಗದಿತ ಕಾಲಮಿತಿಯೊಳಗೆ ಅತೀ ಶೀಘ್ರವಾಗಿ ಆಗಬೇಕು. ಹಲವು ವರ್ಷಗಳಿಂದ ನಿರೀಕ್ಷೆ ಮೂಡಿಸುತ್ತಲೇ ಇರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ನಿರ್ಮಾಣ ಹಾಗೂ ಉದ್ಘಾಟನೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ಮಾಡುತ್ತಿರುವ ಈ ಸಮಯದಲ್ಲಾದರೂ ನಡೆಯಬಹುದೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)