varthabharthi


ರಾಷ್ಟ್ರೀಯ

ಏಳು ರಾಜ್ಯಗಳಲ್ಲಿ ಕೊರೋನ ಸೋಂಕು ಏರಿಕೆ

ವಾರ್ತಾ ಭಾರತಿ : 23 Feb, 2021

ಹೊಸದಿಲ್ಲಿ, ಫೆ.23: ಮಹಾರಾಷ್ಟ್ರಕ್ಕೆ ಕೊರೋನ ಸೋಂಕಿನ ಎರಡನೇ ಅಲೆ ಅಪ್ಪಳಿಸಿರುವ ಸಾಧ್ಯತೆ ನಿಚ್ಚಳವಾಗಿರುವ ನಡುವೆಯೇ ಏಳು ರಾಜ್ಯಗಳಲ್ಲಿ ದೈನಿಕ ಕೋವಿಡ್-19 ಸೋಂಕು ಪ್ರಕರಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ ವಾರ ದೇಶದ 29 ರಾಜ್ಯ ಹಾಗೂ ಏಳು ಕೇಂದ್ರಾಡಳಿತ ಪ್ರದೇಶಗಳ ಪೈಕಿ 16ರಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. 16 ರಾಜ್ಯಗಳ ಪೈಕಿ ಅರ್ಧದಷ್ಟು ರಾಜ್ಯಗಳಲ್ಲಿ ಏರಿಕೆ ಪ್ರಮಾಣ ಅತ್ಯಲ್ಪ ಅಥವಾ ಶೇಕಡ 5ಕ್ಕಿಂತ ಕಡಿಮೆ.

ಆದರೆ ಏಳೆಂಟು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ ವಾರದ ಏರಿಕೆಯನ್ನು ಗಮನಿಸಿದಾಗ ಆತಂಕಕಾರಿ ಚಿತ್ರಣ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಿ ಹಿಂದಿನ ವಾರಕ್ಕಿಂತ ಶೇಕಡ 81ರಷ್ಟು ಪ್ರಕರಣಗಳು ಹೆಚ್ಚಿದ್ದರೆ, ಮಧ್ಯಪ್ರದೇಶದಲ್ಲಿ ಶೇಕಡ 43, ಪಂಜಾಬ್‌ನಲ್ಲಿ 31, ಜಮ್ಮು ಮತ್ತು ಕಾಶ್ಮೀರದಲ್ಲಿ 22, ಛತ್ತೀಸ್‌ಗಢದಲ್ಲಿ 13 ಹಾಗೂ ಹರ್ಯಾಣದಲ್ಲಿ ಶೇಕಡ 11ರಷ್ಟು ಪ್ರಕರಣಗಳು ಹೆಚ್ಚಿವೆ.

ಚಂಡೀಗಢದಲ್ಲಿ ಶೇಕಡ 43ರಷ್ಟು ಏರಿಕೆ ಕಂಡುಬಂದಿದ್ದರೂ, ಒಟ್ಟು ಪ್ರಕರಣಗಳ ಸಂಖ್ಯೆ ಕೇವಲ 187. ಇನ್ನೊಂದೆಡೆ ಕರ್ನಾಟಕದಲ್ಲಿ ಶೇಕಡ 4.6, ಗುಜರಾತ್‌ನಲ್ಲಿ ಶೇಕಡ 4ರಷ್ಟು ಏರಿಕೆ ಕಂಡುಬಂದಿದ್ದರೂ ಪ್ರಕರಣ ಸಂಖ್ಯೆ ಅಧಿಕ. ಕರ್ನಾಟಕದಲ್ಲಿ ಕಳೆದ ವಾರ 2,879 ಪ್ರಕರಣಗಳು ಹೆಚ್ಚಿದ್ದು, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡು ಹೊರತುಪಡಿಸಿದರೆ ಅತ್ಯಧಿಕ ಪ್ರಕರಣಗಳು ದಾಖಲಾದ ರಾಜ್ಯಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಗುಜರಾತ್‌ನಲ್ಲಿ ಕಳೆದ ವಾರ 1,860 ಪ್ರಕರಣಗಳು ದೃಢಪಟ್ಟಿವೆ.

ದಿಲ್ಲಿಯಲ್ಲಿ ಕಳೆದ ವಾರ 954 ಪ್ರಕರಣಗಳು ಹೆಚ್ಚಿದ್ದು, ಏರಿಕೆ ಪ್ರಮಾಣ ಶೇಕಡ 4.7ರಷ್ಟು. ಸೋಮವಾರ ದೇಶಾದ್ಯಂತ 10,570 ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ ಆರು ವಾರಗಳಲ್ಲಿ ಸೋಮವಾರಗಳಂದು ದಾಖಲಾದ ಅತ್ಯಧಿಕ ಸಂಖ್ಯೆಯಾಗಿದೆ. ವಾರಾಂತ್ಯದಲ್ಲಿ ಪರೀಕ್ಷೆಗಳು ಕಡಿಮೆ ನಡೆಯುತ್ತಿರುವುದರಿಂದ ವರದಿಯಾಗುವ ಹೊಸ ಪ್ರಕರಣಗಳು ಕೂಡಾ ಕಡಿಮೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)