varthabharthi


ಕರ್ನಾಟಕ

ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ: ಆರು ಕಾರ್ಮಿಕರು ಮೃತ್ಯು, ಮೂವರು ಗಂಭೀರ

ವಾರ್ತಾ ಭಾರತಿ : 23 Feb, 2021

ಘಟನಾ ಸ್ಥಳಕ್ಕೆ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿಕ್ಕಬಳ್ಳಾಪುರ, ಫೆ.23: ಕ್ರಶರ್ ಗೆ ಅಕ್ರಮವಾಗಿ ಜಿಲೆಟಿನ್‌ ಸಾಗಿಸುತ್ತಿದ್ದ ವೇಳೆ ಸ್ಫೋಟ ಉಂಟಾಗಿ ಆರು ಮಂದಿ ಕಾರ್ಮಿಕರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಿರೇನಾಗವೇಲಿ ಗ್ರಾಮದ ಬಳಿ ಕಳೆದ ಮಧ್ಯರಾತ್ರಿ ಸಂಭವಿಸಿದೆ.

ಪೆರೇಸಂದ್ರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹಗಳು ಗುರುತು ಸಿಗಲಾರದಷ್ಟು ಛಿದ್ರವಾಗಿವೆ. ಇವರಲ್ಲಿ ಮೂವರು ಆಂಧ್ರ ಪ್ರದೇದವರು, ಓರ್ವ ನೇಪಾಳ ಹಾಗೂ ಓರ್ವ ಬಾಗೇಪಲ್ಲಿಯವರು ಎಂದು ತಿಳಿದುಬಂದಿದೆ. ಇವರೆಲ್ಲರೂ ಭ್ರಮರವಾಸಿನಿ ಎಂಬ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.

 ದುರಂತದಲ್ಲಿ ಗಾಯಗೋಮಡಿರುವ ಟಾಟಾ ಏಸ್ ಚಾಲಕ ರಿಯಾಝ್ ಎಂಬಾತ ಸೇರಿದಂತೆ ಮೂವರು ಸ್ಥಿತಿ ಗಂಭೀರವಾಗಿದ್ದು, ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ ಭ್ರಮರವಾಸಿನಿ ಕ್ರಷರ್ ನಿಂದ ಸರಿಸುಮಾರು ಒಂದೂವರೆ ಕಿಲೋಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ.  ಟಾಟಾ ಏಸ್ ಹಾಗೂ ಒಂದು ಬೈಕ್ ಮೂಲಕ ಭ್ರಮರವಾಸಿನಿ ಕ್ರಷರ್ ನಿಂದ ಒಂದು ಕಿಲೋಮೀಟರ್ ದೂರದ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಹಾಗೂ ಎಲೆಕ್ಟ್ರಿಕ್ ಡಿಟೋನೇಟರ್ಸ್ ತರುವ ಪ್ರಯ್ನತದಲ್ಲಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

 ಮೃತರನ್ನು ರಾಮು, ಮಹೇಶ್, ಮುರಳಿ, ಗಂಗಾಧರ್, ಉಮಾಕಾಂತ್, ಅಭಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಭ್ರಮರವಾಸಿನಿ ಎಂಬ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.

  ಘಟನಾ ಸ್ಥಳಕ್ಕೆ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.

ಈ ನಡುವೆ ಕ್ರಶರ್‌ ನಾಗರಾಜ ರೆಡ್ಡಿ ಎಂಬವರ ಒಡೆತನಕ್ಕೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. 

ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಹುಣಸೋಡು ಎಂಬಲ್ಲಿ ಕ್ರಶರ್ ನಲ್ಲಿ ಇದೇರೀತಿ ಸ್ಫೋಟ ಸಂಭವಿಸಿ ಹಲವಾರು ಮಂದಿ ಸಾವನ್ನಪ್ಪಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)