varthabharthi


ಕ್ರೀಡೆ

"ಜೀವನದ ಅತ್ಯಂತ ಸುಂದರ ಉಡುಗೊರೆ": ತನ್ನ ಪುತ್ರಿ, ಪತ್ನಿಯೊಂದಿಗಿನ ಚಿತ್ರ ಹಂಚಿಕೊಂಡ ಕ್ರಿಕೆಟಿಗ ನಟರಾಜನ್

ವಾರ್ತಾ ಭಾರತಿ : 23 Feb, 2021

ಹೊಸದಿಲ್ಲಿ: ಭಾರತದ ಫಾಸ್ಟ್ ಬೌಲರ್ ಟಿ ನಟರಾಜನ್ ಸೋಮವಾರ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಮ್ಮ ಪುತ್ರಿ ನಾಲ್ಕು ತಿಂಗಳು ಪೂರೈಸಿದ ಸಂದರ್ಭದ ಫೋಟೋ ಒಂದನ್ನು ಪೋಸ್ಟ್ ಮಾಡಿ ʼನಮ್ಮ ಪುಟ್ಟ ದೇವತೆ ಹನ್ವಿಕಾʼ ಎಂದು ಬರೆದಿದ್ದಾರೆ.

ಚಿತ್ರದಲ್ಲಿ ನಟರಾಜನ್ ಅವರ ಪತ್ನಿ ಮಗುವನ್ನು ಎತ್ತಿಕೊಂಡಿದ್ದಾರೆ. "ನೀನು ನಮ್ಮ ಜೀವನದ ಅತ್ಯಂತ ಸುಂದರ ಉಡುಗೊರೆ.  ನಮ್ಮ ಜೀವನ ಇಷ್ಟೊಂದು ಖುಷಿಯಾಗಿರಲು ನೀನು ಕಾರಣ. ನಮ್ಮನ್ನು ನಿನ್ನ ಹೆತ್ತವರನ್ನಾಗಿ ಆರಿಸಿದ್ದಕ್ಕೆ ಥ್ಯಾಂಕ್ಯೂ ಲಡ್ಡೂ, ನಾವು ನಿಮ್ಮನ್ನು ಎಂದೆಂದಿಗೂ ಪ್ರೀತಿಸುತ್ತೇವೆ" ಎಂದು ಬರೆದಿದ್ದಾರೆ.

ಅತಿ ಸರಳವಾದ ಚಿತ್ರಕ್ಕೆ ನಟರಾಜನ್‌ ಅಭಿಮಾನಿಗಳು ಸೇರಿದಂತೆ ಹಲವರು ಹಾರೈಸಿದ್ದಾರೆ. 

ಟೀಮ್ ಇಂಡಿಯಾವನ್ನು ಮೊದಲ ಬಾರಿ ಪ್ರತಿನಿಧಿಸಲು  ಆಸ್ಟ್ರೇಲಿಯಾಗೆ ಬರಲು ಅವರಿಗೆ  ಆಹ್ವಾನ ಬಂದಿದ್ದರಿಂದ ನಟರಾಜನ್ ತಮ್ಮ ಪುತ್ರಿಯ ಜನನ ಸಮಯ ಭಾರತದಲ್ಲಿರಲಿಲ್ಲ. ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕೇವಲ ಟಿ-20ಗೆ ಮಾತ್ರ ಆಯ್ಕೆಯಾಗಿದ್ದ ಅವರು ನಂತರ ತಂಡಕ್ಕೆ ಕಾಡಿದ ಗಾಯಾಳು ಸಮಸ್ಯೆಗಳಿಂದಾಗಿ ಏಕದಿನ ಪಂದ್ಯ ಮತ್ತು ಟೆಸ್ಟ್ ಪಂದ್ಯದಲ್ಲೂ ಆಡುವಂತಾಗಿತ್ತು.

ಐಪಿಎಲ್‍ನಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದರೆ ಟಿ20 ಪಂದ್ಯದಲ್ಲಿ ಮೂರು ವಿಕೆಟ್  ಪಡೆದಿದ್ದರು.

ಭಾರತ ತಂಡಕ್ಕೆ ಆಡಿದ ಚೊಚ್ಚಲ ಪಂದ್ಯದಲ್ಲಿ ಅವರು ಗಬ್ಬಾದಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ ಮೂರು ವಿಕೆಟ್ ಕಿತ್ತು ಮಿಂಚಿದ್ದರು. ಕುಟುಂಬದೊಂದಿಗೆ ಸಮಯ ಕಳೆಯುವಂತಾಗಲು ಅವರಿಗೆ ಇಂಗ್ಲೆಂಡ್  ಟೆಸ್ಟ್ ಸರಣಿಯಿಂದ ವಿರಾಮ ನೀಡಲಾಗಿದೆ. ಆದರೆ ಮಾರ್ಚ್ 12ರಿಂದ ಆರಂಭಗೊಳ್ಳಲಿರುವ ಟಿ-20 ಸರಣಿಯಲ್ಲಿ ಅವರು ತಂಡಕ್ಕಾಗಿ ಆಡಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)