varthabharthi


ಸಂಪಾದಕೀಯ

ಕೊರೋನದ ಕೆಸರಲ್ಲಿ ಮೀನು ಹಿಡಿಯಲು ಹೊರಟ ಪತಂಜಲಿ

ವಾರ್ತಾ ಭಾರತಿ : 24 Feb, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಈ ದೇಶ ಕೊರೋನ ಅಸ್ತಿತ್ವವನ್ನೇ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡಿಲ್ಲ, ಇನ್ನು ಸರಕಾರ ಆತುರಾತುರವಾಗಿ ಹೊರ ತಂದಿರುವ ಕೊರೋನ ಲಸಿಕೆಯನ್ನು ಒಪ್ಪುತ್ತದೆ ಎಂದು ನಿರೀಕ್ಷಿಸುವುದು ಎಷ್ಟು ಸರಿ? ಕೊರೋನ ಮತ್ತು ಲಸಿಕೆಗಳ ಕುರಿತಂತೆ ಜನರಲ್ಲಿರುವ ಆತಂಕಗಳಿಗೆ ಸರಕಾರದ ಗೊಂದಲಕಾರಿ ನಡೆಗಳೇ ಕಾರಣ ಎನ್ನುವುದನ್ನು ನಾವು ಈ ಸಂದರ್ಭದಲ್ಲಿ ಮರೆಯಬಾರದು. ಒಂದೆಡೆ ಕೊರೋನ ಹರಡದಂತೆ ತಡೆಯಲು ಲಾಕ್‌ಡೌನ್ ವಿಧಿಸುವ ರಾಜಕಾರಣಿಗಳು, ಇನ್ನೊಂದೆಡೆ ಸಾವಿರಾರು ಜನರನ್ನು ಸೇರಿಸಿ ಚುನಾವಣಾ ಪ್ರಚಾರ ನಡೆಸುತ್ತಾರೆ. ರಾಜಕಾರಣಿಗಳು ತಮ್ಮ ಮದುವೆ, ಹುಟ್ಟು ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಕೊರೋನದ ಹೆಸರಿನಲ್ಲಿ ಆಸ್ಪತ್ರೆಗಳು ನಡೆಸಿರುವ ಲೂಟಿಯ ಬಗ್ಗೆ ಜನರಲ್ಲಿ ವ್ಯಾಪಕ ಅಸಮಾಧಾನಗಳಿವೆ. ಇದೇ ಸಂದರ್ಭದಲ್ಲಿ ಭಾರತದ ಲಸಿಕೆಯೂ ಬಿಡುಗಡೆಯಾಯಿತು. ಆದರೆ ಬಿಡುಗಡೆಯಾದ ಕೋವ್ಯಾಕ್ಸಿನ್ ವೈದ್ಯಕೀಯ ಮಾನದಂಡಗಳನ್ನು ಪೂರ್ಣವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನುವ ಆರೋಪ ವೈದ್ಯಕೀಯ ವಲಯಗಳಿಂದಲೇ ಕೇಳಿ ಬಂತು. ಆರೋಗ್ಯ ಸಿಬ್ಬಂದಿಯೇ ಈ ಲಸಿಕೆಯನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಹಲವರ ಮೇಲೆ ಲಸಿಕೆ ವ್ಯತಿರಿಕ್ತ ಪರಿಣಾಮವನ್ನೂ ಬೀರಿದೆ.

 ಲಸಿಕೆಯ ಬಗ್ಗೆ ಪೂರ್ಣ ಭರವಸೆಯನ್ನು ಹೊಂದಿ ಎಂದು ಹೇಳುವ ಸರಕಾರ, ಅದು ವ್ಯತಿರಿಕ್ತ ಪರಿಣಾಮ ಬೀರಿದರೆ ಅದಕ್ಕಾಗಿ ಯಾವುದೇ ವಿಮೆ ಒದಗಿಸಲಾಗುವುದಿಲ್ಲ ಎಂದೂ ಹೇಳುತ್ತದೆ. ಒಂದೆಡೆ ಲಸಿಕೆ ತೆಗೆದುಕೊಳ್ಳುವುದು ಐಚ್ಛಿಕ ಎನ್ನುತ್ತಾ, ಇನ್ನೊಂದೆಡೆ ಅದನ್ನು ತೆಗೆದುಕೊಳ್ಳಲು ಜನರಿಗೆ ಬೇರೆ ಬೇರೆ ರೀತಿಯ ಒತ್ತಡಗಳನ್ನು ಹಾಕುತ್ತಿದೆ. ಇದು ಲಸಿಕೆಯ ಕುರಿತಂತೆ ಜನರಲ್ಲಿ ಇನ್ನಷ್ಟು ಆತಂಕಗಳನ್ನು ಸೃಷ್ಟಿಸಿದೆ. ಇವೆಲ್ಲದರ ನಡುವೆ, ಪತಂಜಲಿ ಸಂಸ್ಥೆಯ ಕೊರೋನಿಲ್ ಔಷಧಿಯನ್ನು ಇತ್ತೀಚೆಗೆ ಕೇಂದ್ರ ಸಚಿವರಾದ ಡಾ. ಹರ್ಷವರ್ಧನ್ ಹಾಗೂ ನಿತಿನ್ ಗಡ್ಕರಿ ಅವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಕಳೆದ ವರ್ಷ ರಾಮ್‌ದೇವ್ ಅವರು ತನ್ನ ಪತಂಜಲಿಸಂಸ್ಥೆಯು ಬಹಳಷ್ಟು ಸಂಶೋಧನೆ ಹಾಗೂ ಪರೀಕ್ಷೆ ಬಳಿಕ ಕೋವಿಡ್-19ಕ್ಕೆೆ ಔಷಧಿಯನ್ನು ಕಂಡುಹಿಡಿದಿರುವುದಾಗಿ ಘೋಷಿಸಿದ್ದರು. ಆದರೆ ಆಯುಷ್ ಸಚಿವಾಲಯವು ಜೂನ್ 21ರಂದು, ಅದನ್ನು ಕೊರೋನ ಔಷಧಿಯೆಂದು ಘೋಷಿಸುವುದಕ್ಕೆ ರಾಮ್‌ದೇವ್ ಅವರಿಗೆ ಅನುಮತಿಯನ್ನು ನಿರಾಕರಿಸಿತ್ತು. ಅಷ್ಟೇ ಅಲ್ಲ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಇದೊಂದು ತಮಾಷೆಯ ವಿಷಯವಾಗಿ ಚರ್ಚೆಗೊಳಗಾಗಿತ್ತು. ರಾಮ್‌ದೇವ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬೆದರಿಕೆಯನ್ನೂ ಒಡ್ಡಲಾಗಿತ್ತು. ಇಂತಹ ವಿವಾದಾತ್ಮಕ ಔಷಧಿಯೊಂದು ಮತ್ತೆ ಬೇರೆಯೇ ವೇಷದಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದೆ. ಅದೂ ಕೇಂದ್ರ ಸಚಿವರ ಸಹಕಾರದಲ್ಲಿ. ರಾಮ್‌ದೇವ್ ಓರ್ವ ಸ್ವಯಂಘೋಷಿತ ವೈದ್ಯ. ಧರ್ಮವನ್ನು ಬಳಸಿಕೊಂಡು ಅವರು ಪತಂಜಲಿ ಸಂಸ್ಥೆಯನ್ನು ಕಟ್ಟಿದರು. ಅವರ ಹಲವು ಉತ್ಪಾದನೆಗಳ ಬಗ್ಗೆ ಈಗಾಗಲೇ ವ್ಯಾಪಕ ಟೀಕೆಗಳು ಕೇಳಿ ಬಂದಿವೆ. ಪತಂಜಲಿಯ ಕುರಿತಂತೆ ಮೊದಲಿನ ನಂಬಿಕೆ ಜನರಲ್ಲಿ ಉಳಿದಿಲ್ಲ. ಇಂತಹ ಹೊತ್ತಿನಲ್ಲಿ, ಕೊರೋನಕ್ಕೆ ಸಂಬಂಧಿಸಿದ ಔಷಧಿಯೊಂದನ್ನು ಅವರು ಸರಕಾರದ ಸಹಕಾರದೊಂದಿಗೆ ಮಾರುಕಟ್ಟೆಗೆ ಇಳಿಸಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ.

ಒಂದೆಡೆ ಇಡೀ ಜಗತ್ತೇ ಮನುಕುಲಕ್ಕೆ ಶಾಪವಾಗಿ ಪರಿಣಮಿಸಿರುವ ಕೊರೋನ ವಿರುದ್ಧ ಹೋರಾಡುತ್ತಿದ್ದರೆ, ವಿಜ್ಞಾನಿಗಳು ಈ ಮಾರಣಾಂತಿಕ ರೋಗಕ್ಕೆ ಸಮರ್ಥ ಔಷಧಿ ಕಂಡುಹಿಡಿಯಲು ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಈ ಸಂಕಷ್ಟಕಾರಿ ಸನ್ನಿವೇಶದಲ್ಲಿ ತನ್ನ ಉತ್ಪನ್ನವು ಕೊರೋನವನ್ನು ಗುಣಪಡಿಸ ಬಲ್ಲದೆಂಬಂತಹ ವಿವೇಕಹೀನ, ಆಧಾರರಹಿತ ಅಥವಾ ಹುಸಿ ಘೋಷಣೆಗಳನ್ನು ಯಾವುದೇ ಸಂಸ್ಥೆ ಮಾಡಿದ್ದಲ್ಲಿ ಅದನ್ನು ಕಡೆಗಣಿಸುವುದು ಕೂಡಾ ಕ್ರಿಮಿನಲ್ ಅಪರಾಧವಾಗಲಿದೆ. ವಿಪರ್ಯಾಸವೆಂದರೆ, ಕೋವಿಡ್-19 ಸೋಂಕಿಗೆ ಕೊರೋನಿಲ್ ಔಷಧಿಯಲ್ಲ ಎಂಬ ಒಂದೇ ಒಂದು ಪದವನ್ನು ಕೂಡಾ ಕೇಂದ್ರ ಆರೋಗ್ಯ ಸಚಿವರು ಈವರೆಗೆ ನೀಡಿಲ್ಲ. ಇದರ ಜೊತೆಗೆ ಕೋವಿಡ್-19 ಸೋಂಕಿಗೆ ಕೊರೋನಿಲ್ ಔಷಧಿಯೆಂಬ ರಾಮ್‌ದೇವ್ ಅವರ ಪೊಳ್ಳುತನದ ಘೋಷಣೆಗೆ ಧ್ವನಿಗೂಡಿಸಲು ಕೆಲವು ಮಾಧ್ಯಮಗಳೂ ಪೈಪೋಟಿಗಿಳಿದಿವೆ. ಕೊರೋನಿಲ್‌ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ದೊರೆತಿದೆಯೆಂದು ಕೆಲವು ಮಾಧ್ಯಮಗಳು ಸತ್ಯಾಸತ್ಯತೆ ಪರಿಶೀಲಿಸದೆಯೇ ವರದಿ ಮಾಡಿವೆ.

ರಾಮ್‌ದೇವ್ ಅವರ ಹುಸಿ ಘೋಷಣೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ತಿರಸ್ಕರಿಸುತ್ತಾ ಬಂದಿರುವಾಗ, ಏಕಾಏಕಿ ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಿಲ್‌ಗೆ ಪ್ರಮಾಣಪತ್ರವನ್ನು ಯಾಕೆ ನೀಡಿತೆಂಬುದು ಅನೇಕ ಮಂದಿ ಅಚ್ಚರಿಪಟ್ಟಿದ್ದರು. ಈ ಹಿಂದೆ ಸುಳ್ಳು ಸುದ್ದಿಯನ್ನು ಹರಡಲು ಕೆಲವು ಕೇಸರಿ ಮಾಧ್ಯಮಗಳು ನಾಸಾದ ಹೆಸರನ್ನು ಬಳಸಿಕೊಂಡಂತೆ, ಕೊರೋನಿಲ್ ವಿಷಯದಲ್ಲಿ ಇದೀಗ ವಿಶ್ವ ಆರೋಗ್ಯ ಸಂಸ್ಥೆಯನ್ನು ಬಳಸಿಕೊಳ್ಳಲಾಗಿದೆ. 2005ರಲ್ಲಿ ಬಾಲಿಯಾ ಜಿಲ್ಲೆಯ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಯೋಜಿಸಿದ ಅಂತರ್‌ರಾಷ್ಟ್ರೀಯ ವಿಜ್ಞಾನಿ ಅನ್ವೇಷಣೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆಂಬ ಮಾಧ್ಯಮಗಳ ಪ್ರಚಾರವನ್ನು ನಂಬಿ, ಉತ್ತರಪ್ರದೇಶದ ವಿಧಾನಸಭೆಯು ಆತನನ್ನು ಅಭಿನಂದಿಸಿತ್ತು. ಅಷ್ಟೇ ಏಕೆ, ಡ್ರೋನ್ ವಿಜ್ಞಾನಿಯೆಂದು ಹೇಳಿಕೊಂಡ ಪ್ರತಾಪ್ ಎಂಬ ತರುಣ ಮಾಧ್ಯಮಗಳನ್ನು ಬಳಸಿ ಜನರನ್ನು ವಂಚಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು. ಪತಂಜಲಿಯ ಕೊರೋನಿಲ್ ವಿಷಯದಲ್ಲಿಯೂ ಹೀಗೇ ಆಗಿದೆ. ಆದರೆ ಪತಂಜಲಿಯ ಸಂಶೋಧನೆಗೆ ತಾನು ಯಾವುದೇ ಪ್ರಮಾಣಪತ್ರವನ್ನು ನೀಡಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಇದೀಗ ಸ್ಪಷ್ಟಪಡಿಸಿದೆ.

ಕೋವಿಡ್-19 ಔಷಧಿಯೆಂದು ಹೇಳಿಕೊಂಡಿರುವ ಕೊರೋನಿಲ್‌ನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತೀಯ ವೈದ್ಯಕೀಯ ಅಸೋಸಿಯೇಶನ್ (ಐಎಂಎ) ಸಚಿವ ಡಾ. ಹರ್ಷವರ್ಧನ್ ಅವರಿಂದ ವಿವರಣೆ ಕೇಳಿದೆ. ಕೋವಿಡ್-19ಕ್ಕೆ ಔಷಧಿಯೆಂಬುದಾಗಿ ಯಾವುದೇ ಪ್ರಮಾಣಪತ್ರ ಪಡೆದಿರದ ಹಾಗೂ ವೈಜ್ಞಾನಿಕವಲ್ಲದ ಕೊರೋನಿಲ್ ಉತ್ಪನ್ನವನ್ನು ಸ್ವತಃ ವೈದ್ಯರೂ ಆಗಿರುವಂತಹ ಸಚಿವರೊಬ್ಬರು ಉತ್ತೇಜಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸುವಂತಹ ದಿಟ್ಟತನವನ್ನು ಐಎಂಎ ಪ್ರದರ್ಶಿಸಿರುವುದು ಸ್ವಾಗತಾರ್ಹ. ದೇಶದ ಆರೋಗ್ಯ ಸಚಿವರಾಗಿ, ತಾವು ಅವೈಜ್ಞಾನಿಕ ಉತ್ಪನ್ನವನ್ನು ದೇಶದ ಜನತೆಗೆ ಮಾರುವುದನ್ನು ಹೇಗೆ ಸಮರ್ಥಿಸುವಿರಿ ಎಂಬುದಾಗಿ ಅದು ಪ್ರಶ್ನಿಸಿತ್ತು. ಕೋವಿಡ್-19 ನಿರೋಧಕ ಉತ್ಪನ್ನವೆಂದು ಹೇಳಿಕೊಂಡಿರುವ ಕೊರೋನಿಲ್‌ನ ಕ್ಲಿನಿಕಲ್‌ಟ್ರಯಲ್‌ನ ವಿವರಗಳನ್ನು ನೀಡುವಂತೆಯೂ ಅದು ಸಚಿವರಿಂದ ಸ್ಪಷ್ಟನೆ ಕೇಳಿತ್ತು.ಸಚಿವರು ಭಾರತೀಯ ವೈದ್ಯಕೀಯ ಮಂಡಳಿಯ ಸಂಹಿತೆಗೆ ಅವಮಾನವುಂಟು ಮಾಡಿರುವುದಕ್ಕಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೂ ಪತ್ರ ಬರೆಯುವುದಾಗಿ ಅದು ಪತ್ರದಲ್ಲಿ ತಿಳಿಸಿತ್ತು.

 ಸರಕಾರದ ಈ ನಡೆ, ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದಿರುವ ಭಾರತದ ಕೋವ್ಯಾಕ್ಸಿನ್ ಲಸಿಕೆಯ ಕುರಿತಂತೆಯೂ ಜನರು ಅನುಮಾನ ಪಡುವಂತೆ ಮಾಡಿದೆ. ಪತಂಜಲಿಯ ಉತ್ಪನ್ನಗಳು ವೈದ್ಯಕೀಯ ನಿಯಮಗಳು ಹಾಗೂ ನೀತಿಶಾಸ್ತ್ರಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಸರಕಾರವು ತಕ್ಷಣ ತನಿಖೆಗೆ ಆಜ್ಞಾಪಿಸಬೇಕಾಗಿದೆ. ಸಚಿವರಾದ ಡಾ. ಹರ್ಷವರ್ಧನ್ ಹಾಗೂ ನಿತಿನ್‌ಗಡ್ಕರಿ ಅವರು ತಾವು ಕೊರೋನಿಲ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರ ಬಗ್ಗೆ ದೇಶಕ್ಕೆ ಉತ್ತರಿಸಬೇಕಾಗಿದೆ ಹಾಗೂ ಭವಿಷ್ಯದಲ್ಲಿ ಇಂತಹ ಅನೀತಿಯುತವಾದ ನಡವಳಿಕೆಗಳಿಂದ ದೂರ ಸರಿಯಬೇಕಾಗಿದೆ.ಕೋವಿಡ್ ಸಂದರ್ಭವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಲು ಮುಂದಾಗಿರುವ ಪತಂಜಲಿ ಸಂಸ್ಥೆಯನ್ನೇ ನಿಷೇಧಿಸಬೇಕಾದ ಸಂದರ್ಭ ಇದೀಗ ಬಂದಿದೆ. ಜೊತೆಗೆ, ಜನರು ದಾರಿತಪ್ಪಿಸುವಂತಹ ಪತಂಜಲಿಯನ್ನು ಪ್ರೋತ್ಸಾಹಿಸುತ್ತಿರುವ ಮಾಧ್ಯಮಗಳು ತಮ್ಮ ನಡವಳಿಕೆಯ ಬಗ್ಗೆ ವಿವರಣೆಯನ್ನು ನೀಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)