varthabharthi


ಅನುಗಾಲ

ದುರ್ಬಳಕೆಯಾಗುತ್ತಿರುವ ದೇಶದ್ರೋಹ ಕಾನೂನು

ವಾರ್ತಾ ಭಾರತಿ : 25 Feb, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ದೇಶದ್ರೋಹದ ಅಪವಾದದ ಶಿಲುಬೆ ಗಂಡಾಂತರಕಾರಿಯೆಂದು ಈಗಾಗಲೇ ಸಾಬೀತಾಗಿದೆ. ಪೊಲೀಸ್ ಮತ್ತಿತರ ಇಲಾಖೆಗಳು ಇಂತಹ ಕ್ಷಣಕ್ಕೆ ಹಾತೊರೆಯುತ್ತಿವೆ. ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಕ್ಷಿಪ್ರನ್ಯಾಯ ಕೊಡಲು ವಿಫಲವಾಗಿವೆ. ಎಲ್ಲಿಯವರೆಗೆ ಸರಕಾರಿ ಅಧಿಕಾರಿಗಳು ಮನುಷ್ಯರಂತೆ ವರ್ತಿಸುವುದಿಲ್ಲವೋ, ಎಲ್ಲಿಯ ವರೆಗೆ ಸಮಾಜ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸರಕಾರ ಈ ಕಾಯ್ದೆಯನ್ನು ದುರ್ಬಳಕೆಮಾಡುವುದನ್ನು ತಡೆಯುವ ಯಾವ ಸಾಧ್ಯತೆಯೂ ಇಲ್ಲ.


ಭಾರತೀಯ ದಂಡ ಸಂಹಿತೆಯ 124-ಎ ಕಲಮು ಇಂದು ದೇಶದೆಲ್ಲೆಡೆ ಪರಿಚಯ ಮಾತ್ರವಲ್ಲ, ಪ್ರಚಾರವೂ ಆಗಿದೆ. ಚರಿತ್ರೆಯಲ್ಲಷ್ಟೇ ಉಲ್ಲೇಖಿತವಾಗುತ್ತಿದ್ದ ‘ದೇಶದ್ರೋಹ’ವೆಂಬ ಬ್ರಿಟಿಷ್ ಶಿಶು ಈಗ ಶುದ್ಧ ಭಾರತೀಯವಾಗಿದೆ. ಅಪರೂಪಕ್ಕೆ ಪರಿಚಯವಾಗುತ್ತಿದ್ದ ಮತ್ತು ಅಷ್ಟಾಗಿ ಪ್ರಚಾರವಾಗದಿದ್ದ ದೇಶದ್ರೋಹದ ಕಾನೂನು ಈಗ ಭಾರತದಲ್ಲಿ ದೈನಂದಿನ ಮನೆಮಾತಾಗಿದೆ. ಏನು ಈ ದೇಶದ್ರೋಹ? ಇದರ ಇತಿಹಾಸ ಮತ್ತು ಸದ್ಯದ ಸ್ಥಿತಿಗತಿಯೇನು?

ರಾಜಸತ್ತೆಯ ಕಾಲದಲ್ಲಿ ವಿಶ್ವದೆಲ್ಲೆಡೆ ತನ್ನ ಪೀಠವನ್ನು ಭದ್ರಗೊಳಿಸಲು ಸ್ಪರ್ಧಿಗಳನ್ನು ಮಟ್ಟಹಾಕಲು ಬಹುತೇಕ ಎಲ್ಲ ಅರಸರೂ ದೇಶದ್ರೋಹವೆಂಬ ತತ್ವವನ್ನು ಹುಡುಕಿಕೊಂಡಿದ್ದರು. ತೀರಾ ಕರುಣಾಳುಗಳಾದ ಸಿಂಹಾಸನಾಧೀಶರು ಗಡೀಪಾರಿನಂತಹ ವಿಧಾನವನ್ನು ಬಳಸಿದ್ದರೆ, ಕ್ರೂರಿಗಳು ಮರಣದಂಡನೆಯಂತಹ ದಾಳವನ್ನು ಪ್ರಯೋಗಿಸುತ್ತಿದ್ದರು. ಪ್ರಶ್ನೆ ಮಾಡುವುದನ್ನು, ಪ್ರತಿಭಟನೆಯನ್ನು ತಡೆಯಲು ಇದೊಂದು ಮಾರಕ ಔಷಧವಾದದ್ದೂ ಇದೆ. ಆದರೆ ದೇಶಗಳು ಪ್ರಜಾಪ್ರಭುತ್ವಕ್ಕೋ ಜನರ ಆಡಳಿತದ ಇನ್ಯಾವುದೇ ವಿಧಾನಕ್ಕೋ ಒಲಿದಾಗ ಇಂತಹ ರಾಜರೇ ಮರಣದಂಡನೆಗೆ ಗುರಿಯಾದದ್ದು ರಶ್ಯ, ಫ್ರಾನ್ಸ್ ಮುಂತಾದ ದೇಶಗಳ ಕ್ರಾಂತಿ ಚರಿತ್ರೆಯಲ್ಲಿ ಕಂಡುಬಂದಿದೆ. ‘ಸಿಪಾಯಿ ದಂಗೆ’ಯೆಂದು ಬ್ರಿಟಿಷರು ಹೆಸರಿಸಿದ 1857ರ ಭಾರತದ ಮೊದಲ ಸ್ವಾತಂತ್ರ್ಯ ಚಳವಳಿಯ ಆನಂತರದಲ್ಲಿ ಬ್ರಿಟಿಷರು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದರು. ಮೊಗಲ್ ಚಕ್ರವರ್ತಿ ಬಹದ್ದೂರ್ ಶಾ ಝಫರ್‌ನನ್ನು ಶಾಶ್ವತ ಸೆರೆಗೆ ತಳ್ಳಲಾಯಿತು. ಆಗ ನಡೆಯುತ್ತಿದ್ದ ದಂಡನೆಗೆ ದೇಶದ್ರೋಹದ ಆಪಾದನೆಯ ಆಥವಾ ಶಾಸನದ ಅಗತ್ಯವಿರಲಿಲ್ಲ. ಬ್ರಿಟಿಷರು ಹೇಳಿದ್ದೇ ಕಾನೂನು. ಇದಾದ ಮೇಲೆ 1860ರಲ್ಲಿ ಭಾರತೀಯ ದಂಡ ಸಂಹಿತೆಯನ್ನು ಜಾರಿಗೊಳಿಸಿದಾಗ ಅದರಲ್ಲಿ ಈಗಿರುವ ದೇಶದ್ರೋಹದ ಕಲಮು ಸೇರಿರಲಿಲ್ಲ. ಆದರೆ 1870ರಲ್ಲಿ ಬ್ರಿಟಿಷ್ ಸರಕಾರವು ಈ ದೇಶದ್ರೋಹವೆಂಬ ಶಿಕ್ಷಾರ್ಹ ಅಪರಾಧವನ್ನು ಸೇರಿಸಿತು.

ಬಹುತೇಕ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವುದೇ ಇದರ ಉದ್ದೇಶವೆಂಬಂತೆ ಇದು ಜಾರಿಯಾಯಿತು. ಇದನ್ನು ಯೋಚಿಸಿ ಯೋಜಿಸಿದವನು ಲಾರ್ಡ್‌ಮೆಕಾಲೆ. ಭಾರತೀಯರ ಚಿಂತನಾ ವಿಧಾನವನ್ನೇ ಬದಲಾಯಿಸಲು ಶಿಕ್ಷಣವೇ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಅವನು ಹಾಕಿದ ಕುಟಿಲ ಯೋಜನೆಗಳಲ್ಲಿ ಇದೂ ಒಂದು. ತಾರತಮ್ಯ ಧೋರಣೆಯ ಆಗಿನ ನ್ಯಾಯಪದ್ಧತಿಯಲ್ಲಿ ಕ್ರಿಮಿನಲ್ ಕಾನೂನು ಸಹಜವಾಗಿಯೇ ಆಳುವವರಿಗೆ ಅನುಕೂಲಕರವಾಗಿದ್ದಿತು. ಮುಂದೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಾಲಗಂಗಾಧರ ತಿಲಕ್, ಗಾಂಧಿ ಮುಂತಾದ ಧುರೀಣರು ದೇಶದ್ರೋಹದ ಆಪಾದನೆಯ ಮೇಲೆ ಸೆರೆವಾಸ ಅನುಭವಿಸಿದರು. ಪ್ರಾಯಃ ಈ ನಾಯಕರು ಪಡೆದಿದ್ದ ಜನಪ್ರಿಯತೆ ಮತ್ತು ಹೊಂದಿದ್ದ ವರ್ಚಸ್ಸು ಸೆರೆವಾಸಕ್ಕಿಂತ ಹೆಚ್ಚಿನ ದಾರುಣ ಶಿಕ್ಷೆ ಅವರ ಮೇಲೆ ಹೇರದಂತೆ ಕಾಪಾಡಿತು. ಸ್ವಾತಂತ್ರ್ಯಾನಂತರ ಈ ಕಾನೂನನ್ನು ಕಾಯ್ದೆ ಪುಸ್ತಕದಿಂದ ತೆಗೆಯದೇ ಇದ್ದದ್ದು ಭಾರತೀಯರ ದುರಾದೃಷ್ಟವೋ ನಾಯಕರ ದೂರದೃಷ್ಟಿಯ ಅಭಾವವೋ ಗೊತ್ತಾಗುವುದಿಲ್ಲ. ಮೊದಲ ಪ್ರಧಾನಿ ಪಂಡಿತ್ ನೆಹರೂ ಅವರು ಈ ಕಾಯ್ದೆ ಸಂವಿಧಾನದ ಆಶಯಗಳಿಗೆ ವಿರೋಧವಾಗಿದೆ ಎಂಬ ತಮ್ಮ ವೈಯಕ್ತಿಕ ನಿಲುವನ್ನು ಹೇಳಿದರಾದರೂ ಇದನ್ನು ಕೈಬಿಡಲಿಲ್ಲ.

ಆನಂತರದ ದಶಕಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಕಾನೂನಿನ ಮಿತಿಯ ವ್ಯಾಖ್ಯೆಯನ್ನು ಹೇಳಿತಾದರೂ ಸಂವಿಧಾನ ವಿರೋಧಿಯೆಂದು ಘೋಷಿಸಲೇ ಇಲ್ಲ. ಬದಲಾಗಿ 1962ರಲ್ಲಿ ಕೇದಾರನಾಥ್ ್ಡ ಬಿಹಾರ ಸರಕಾರ ಪ್ರಕರಣದಲ್ಲಿ ಇದು ಅಸಂವಿಧಾನಿಕವಲ್ಲವೆಂದು ಘೋಷಿಸಿದೆ. ನ್ಯಾಯಾಲಯ ನಿಂದನೆಯಂತೆ ಇದು ಬ್ರಿಟಿಷ್ ಆಡಳಿತದ ಕ್ರೌರ್ಯದ ಪಳೆಯುಳಿಕೆಯಾಗಿ ನಮ್ಮ ನೆಲದಲ್ಲಿ ಭದ್ರವಾಗಿ ನೆಲೆಯೂರಿದೆ. ಮೆಕಾಲೆಯ ಮಕ್ಕಳೇ ಈ ದೇಶವನ್ನು ಇನ್ನೂ ಆಳುತ್ತಾರೇನೋ ಎಂದು ಸಂಶಯ ಬರುತ್ತಿದೆ. ಭಾರತೀಯ ದಂಡ ಸಂಹಿತೆಯ 124-ಎ ಕಲಮು ದೇಶದ್ರೋಹವನ್ನು ನಿರೂಪಿಸಿದೆ: ಇದು ಕಾಯ್ದೆಯ (121ನೇ ಕಲಮಿನಿಂದ 130ನೇ ಕಲಮಿನ ವರೆಗೆ) 6ನೇ ಅಧ್ಯಾಯವಾದ ರಾಷ್ಟ್ರದ ವಿರುದ್ಧದ ಅಪರಾಧಗಳ ಒಂದು ಭಾಗವಾಗಿದೆ. ಇದನ್ನು 121ನೇ ಕಲಮಿನಿಂದಲೇ ಬೆಳೆಸಿದ್ದನ್ನು ಗಮನಿಸಬಹುದು. 121ನೇ ಕಲಮು ಭಾರತ ಸರಕಾರದ ವಿರುದ್ಧ ಯುದ್ಧವನ್ನು ಹೂಡುವುದು ಅಥವಾ ಅಂತಹ ಪ್ರಯತ್ನದಲ್ಲಿ ತೊಡಗುವುದು ಅಥವಾ ಅದಕ್ಕೆ ಕುಮ್ಮಕ್ಕು ಕೊಡುವುದು ಮತ್ತಿತರ ವಿಚಾರಗಳನ್ನು ಹೇಳುತ್ತದೆ. ಇದಕ್ಕೆ ಮರಣದಂಡನೆ ಅಥವಾ ಜೀವಾವಧಿಯ ಶಿಕ್ಷೆಯಿದೆ. 121-ಎ ಇದಕ್ಕೆ ಸಂಬಂಧಿಸಿದ ಸಂಚನ್ನು ಅಪರಾಧವಾಗಿ ಹೇಳಿದರೆ, 122ನೇ ಕಲಮು ಈ ಉದ್ದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದನ್ನು ಅಪರಾಧವೆಂದು ಪರಿಗಣಿಸಿದೆ; 123: ಇದೇ ಉದ್ದೇಶಕ್ಕೆ ಸಿದ್ಧವಾದ ಸಂಚನ್ನು ಗೊತ್ತಿದ್ದೂ ಗೋಪ್ಯವಾಗಿಡುವುದನ್ನು ಅಪರಾಧವಾಗಿಸಿದೆ. ಈ ಮೂರೂ ಕಲಮುಗಳ ಅಪರಾಧಗಳಿಗೆ 10 ವರ್ಷಗಳವರೆಗಿನ ಸೆರೆವಾಸಕ್ಕೆ ಅವಕಾಶವಿದೆ. 124: ರಾಷ್ಟ್ರಪತಿ, ರಾಜ್ಯಪಾಲ ಮುಂತಾದವರ ಮೇಲೆ ಹಲ್ಲೆ ಮಾಡಿ ಅವರ ಸಾಂವಿಧಾನಿಕ ಕಾರ್ಯಗಳನ್ನು ತಡೆಯುವುದನ್ನು ಅಪರಾಧವಾಗಿಸಿ ಏಳು ವರ್ಷಗಳವರೆಗಿನ ಸೆರೆವಾಸವನ್ನು ನಿಯಮಿಸಿದೆ.

ಇವಕ್ಕೆಲ್ಲ ಕಲಶವಿಟ್ಟಂತೆ 124-ಎ ಕಲಮು ದೇಶದ್ರೋಹವೆಂಬ ಅಪರಾಧವನ್ನು ಸೃಷ್ಟಿಸಿದೆ. ದೇಶದ್ರೋಹವು ಅಪರಾಧವೇ ಸರಿ. ಆದರೆ ಯಾವುದು ದೇಶದ್ರೋಹ ಎಂಬುದನ್ನು ಕಾಯ್ದೆಯು ನಿರೂಪಿಸಿದ ರೀತಿ ಗೊಂದಲಕ್ಕೆ ಮತ್ತು ಅಧಿಕಾರದ ದುರ್ಬಳಕೆಗೆ ಕಾರಣವಾಗಿದೆ. ಇದರಲ್ಲಿ ‘‘ಯಾರೇ ಆಗಲಿ, ಮೌಖಿಕ ಅಥವಾ ಲಿಖಿತ ಪದಗಳಿಂದ ಅಥವಾ ಸಂಜ್ಞೆಯಿಂದ ಅಥವಾ ಇತರ ದೃಶ್ಯ ಸನ್ನೆಗಳಿಂದ ಅಥವಾ ಇತರ ರೀತಿಯಿಂದ, ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿಸಲ್ಪಟ್ಟ ಸರಕಾರದ ವಿರುದ್ಧ ದ್ವೇಷ ಅಥವಾ ನಿಂದನೆಯನ್ನು ಅಥವಾ ಅಸಮಾಧಾನವನ್ನು ಪ್ರಚೋದಿಸಿದರೆ ಅಥವಾ ಈ ಚಟುವಟಿಕೆಗಳನ್ನು ಪ್ರಯತ್ನಿಸಿದರೆ, ಆತನು ಜೀವಾವಧಿ ಸೆರೆವಾಸ ಮತ್ತು ದಂಡಕ್ಕೆ ಪಾತ್ರನಾಗುವನು ಅಥವಾ ಮೂರು ವರ್ಷಗಳವರೆಗೆ ಸೆರೆವಾಸ ಮತ್ತು ದಂಡಕ್ಕೆ ಪಾತ್ರನಾಗುವನು’’ ಎಂದಿದೆ.

ಇದರ ಮೂರು ವಿವರಣೆಗಳು ಹೀಗಿವೆ: 1. ‘ಅಸಮಾಧಾನ’ವು ಅಗೌರವ ಮತ್ತು ದ್ವೇಷದ ಭಾವನೆಗಳನ್ನೊಳಗೊಂಡಿದೆ.

2. ಸರಕಾರದ ಕ್ರಮಗಳ ಕುರಿತು ದ್ವೇಷ ಅಥವಾ ನಿಂದನೆಯನ್ನು ಅಥವಾ ಅಸಮಾಧಾನವನ್ನು ಪ್ರಚೋದಿಸದೆ ಅಥವಾ ಈ ಚಟುವಟಿಕೆಗಳನ್ನು ಪ್ರಯತ್ನಿಸದೆ ಅತೃಪ್ತಿಯನ್ನಷ್ಟೇ ವ್ಯಕ್ತಪಡಿಸುವ ಟೀಕೆಗಳು ಈ ಕಲಮಿನಡಿ ಅಪರಾಧವಾಗುವುದಿಲ್ಲ.

3. ಸರಕಾರದ ಆಡಳಿತಾತ್ಮಕ ಅಥವಾ ಇತರ ಕ್ರಮಗಳ ಟೀಕೆಗಳು ದ್ವೇಷ ಅಥವಾ ನಿಂದನೆಯನ್ನು ಅಥವಾ ಅಸಮಾಧಾನವನ್ನು ಪ್ರಚೋದಿಸದೆ ಅಥವಾ ಈ ಚಟುವಟಿಕೆಗಳನ್ನು ಪ್ರಯತ್ನಿಸದೆ ಅತೃಪ್ತಿಯನ್ನಷ್ಟೇ ವ್ಯಕ್ತಪಡಿಸಿದರೆ ಅವು ಈ ಕಲಮಿನಡಿ ಅಪರಾಧವಾಗುವುದಿಲ್ಲ(ಸೂಕ್ಷ್ಮವಾಗಿ ಗಮನಿಸಿದರೆ 2 ಮತ್ತು 3ನೇ ವಿವರಣೆಗಳಲ್ಲಿ ಬಹಳಷ್ಟು ವ್ಯತ್ಯಾಸಗಳೇನಿಲ್ಲ.). ಮುಂದೆ 125ರಿಂದ 130ರ ವರೆಗಿನ ಕಲಮುಗಳು- ಭಾರತ ಸರಕಾರದ ಜೊತೆಗೆ ಏಶ್ಯದ ಶಕ್ತಿಗಳೊಂದಿಗೆ ಯುದ್ಧ ಸಾರುವ (125), ಹಾಗೆಯೇ ಭಾರತ ಸರಕಾರದ ಮಿತ್ರ ದೇಶಗಳೊಂದಿಗೆ ಯುದ್ಧ ಸಾರುವ (126), ಈ ಕಲಮುಗಳಲ್ಲಿನ ಆಸ್ತಿಗಳನ್ನು ಖರೀದಿಸುವ (127), ಸರಕಾರಿ ನೌಕರನು ಯುದ್ಧಖೈದಿಗೆ ಪರಾರಿಯಾಗಲು ಅನುಕೂಲ ಕಲ್ಪಿಸುವ (128), ಅದೇ ಉದ್ದೇಶದಲ್ಲಿ ನಿರ್ಲಕ್ಷ್ಯ ತೋರುವ (129), ಆಶ್ರಯ ನೀಡುವ (130) ಅಪರಾಧಗಳಿಗೆ ಸಂಬಂಧಿಸಿದೆ. ಇವು ಸ್ವತಂತ್ರ ಭಾರತಕ್ಕೆ ಅಷ್ಟಾಗಿ ಅನ್ವಯಿಸದು. ಇವು ಬ್ರಿಟಿಷರ ಹೊರೆಯನ್ನು ನಾವಿನ್ನೂ ಇಳಿಸಿಲ್ಲವೆಂದು ಮಾತ್ರ ತೋರಿಸುತ್ತವೆ.

153-ಎ ಮತ್ತು 153-ಬಿ ಕಲಮುಗಳು ಭಾಷೆ, ಧರ್ಮ, ಜನಾಂಗ, ವಾಸ ಅಥವಾ ಸಾಮಾಜಿಕ ಹಿತಕ್ಕೆ ಹಾಗೂ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ಅಪರಾಧವಾಗಿಸಿವೆ.

ದೇಶದ್ರೋಹದ ವ್ಯಾಖ್ಯೆಯು ಮೌಖಿಕ, ಲಿಖಿತ, ಸಂಜ್ಞೆ, ಸನ್ನೆ ಇತ್ಯಾದಿ ಲಕ್ಷಣಗಳನ್ನು ಸೇರಿಸಿದೆಯಾದರೂ ಯಾವುದೇ ಕ್ರಿಯೆಯು ತನ್ನಷ್ಟಕ್ಕೆ ಅಪರಾಧವಾಗಲು ಸಾಧ್ಯವಿಲ್ಲ. ಕನಸಿನಲ್ಲೋ, ಮುಸುಕಿನೊಳಗೋ ಅಥವಾ ಬಹಿರಂಗ ಭಾಷಣದಲ್ಲೋ ಯಾರಾದರೂ ಈ ಸರಕಾರವನ್ನು ಕಿತ್ತೊಗೆಯುತ್ತೇನೆ/ವೆ ಎಂದು ಹೇಳಿದಾಕ್ಷಣ ಅದು ದೇಶದ್ರೋಹವಾಗುವುದಿಲ್ಲ. ಭಾರತ-ಪಾಕಿಸ್ತಾನಗಳ ನಡುವಣ ಕ್ರಿಕೆಟ್ ಪಂದ್ಯದಲ್ಲಿ ಯಾವನೇ ಭಾರತೀಯ ಪಾಕನ್ನು ಬೆಂಬಲಿಸಿದರೆ ಅದು ದೇಶದ್ರೋಹವಾಗುವುದಿಲ್ಲ(ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಇಂತಹ ಸಂದರ್ಭವೊಂದರಲ್ಲಿ ಪಾಕ್ ಪರವಾಗಿ ಉದ್ಗಾರ ಹಾಕಿದ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣವನ್ನು ಹಾಕಿದ್ದರು!). ಕರಪಾವತಿಯನ್ನು ಮಾಡದಿರಲು ಕರೆ ನೀಡಿದರೆ ಅದು ದೇಶದ್ರೋಹವಾಗುವುದಿಲ್ಲ. ವ್ಯಕ್ತಿ-ವ್ಯಕ್ತಿಗಳ ನಡುವಣ ದ್ವೇಷಪೂರಿತ ಮಾತುಗಳು, ಪ್ರಕಟನೆಗಳು ಇತರ ಕಲಮುಗಳಲ್ಲಿ ಅಪರಾಧವಾದರೂ ಅವು ದೇಶದ್ರೋಹವಾಗುವುದಿಲ್ಲ. 2000ನೇ ವರ್ಷದಲ್ಲಿ ಬಿಂದ್ರನ್‌ವಾಲೆಯ ಭಾಷಣಗಳನ್ನು ಕೇಳುತ್ತಿದ್ದ ಆಪಾದನೆಯ ಮೇಲೆ ಶಿಕ್ಷೆಗೊಳಗಾದ ಬಲಬೀರ್ ಸಿಂಗ್ ್ಡ ಉತ್ತರ ಪ್ರದೇಶ ಸರಕಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಅದು ದೇಶದ್ರೋಹವಾಗುವುದಿಲ್ಲವೆಂದು ಘೋಷಿಸಿತು ಮತ್ತು ಆರೋಪಿಯನ್ನು ನಿರ್ದೋಷಿಯೆಂದು ಸಾರಿ ಶಿಕ್ಷೆಯನ್ನು ರದ್ದುಗೊಳಿಸಿ ಬಿಡುಗಡೆಗೊಳಿಸಿತು. ಕಾಯ್ದೆಯು ಎಲ್ಲಿ ತಪ್ಪೆಸಗಿದೆಯೆಂದು ಗಮನಿಸಿದರೆ ಅಲ್ಲಿ ದೇಶದ ಬದಲು ಚುನಾಯಿತ ಸರಕಾರವನ್ನೇ ದೇಶವೆಂದು ಪರಿಗಣಿಸಿದ ಹಾಗಿದೆ. ದೇಶ ಬೇರೆ; ಸರಕಾರ ಬೇರೆ.

ಅಧಿಕಾರಸ್ಥರು ತಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ತಮ್ಮ ಒಲವು-ನಿಲುವುಗಳಿಗೆ ಅಸಮ್ಮತಿಯನ್ನು ತೋರಿಸುವ ಯಾವನನ್ನೇ ಆಗಲಿ ದೇಶದ್ರೋಹಿಯೆಂದು ಬಿಂಬಿಸುವುದಿದೆ. ಇದು ಮಾತಿನಲ್ಲೋ ಪ್ರಚಾರದಲ್ಲೋ ಆದರೆ ಅಡ್ಡಿಯಿಲ್ಲ. ಆದರೆ ತಮ್ಮ ಅಧಿಕಾರದಡಿ ಬರುವ ಪಡೆಗಳನ್ನು ಬಳಸಿಕೊಂಡು ಅಂತಹ ಪ್ರಕರಣಗಳನ್ನು ಸೃಷ್ಟಿಸುವ ಕಾರ್ಯಗಳನ್ನು ಮಾಡಿದರೆ ಸಂವಿಧಾನವಾಗಲೀ, ಪ್ರಜಾಪ್ರಭುತ್ವವಾಗಲೀ ಉಳಿಯದು. ನಮ್ಮ ಪೊಲೀಸ್, ಸಿಬಿಐ ಇತ್ಯಾದಿ ಸರಕಾರೀ ತನಿಖಾತಂಡಗಳು ಸರಕಾರ ಬಾಯಿತೆರೆಯುವ ಮೊದಲೇ ಜಿಗಿಯುವ ನಡತೆಯವು. ಅವುಗಳ ನಿಷ್ಠೆ ಕೆಲವು ಬಾರಿ ನಿಷ್ಠೆಗೆ ಹೆಸರಾದ ಪ್ರಾಣಿಗಳನ್ನೂ ನಾಚಿಸೀತು. ಆದರೂ ಅಧಿಕಾರಸ್ಥರ ಆಯುಧವಾದ ಈ ಮತ್ತು ಇಂತಹ ಪ್ರಕರಣಗಳು ಸದ್ಯ ಕೊನೆಗಾಣುವಂತಿಲ್ಲ. ಏಕೆಂದರೆ ಜನರನ್ನು ಹೆದರಿಸಲು ಇದಕ್ಕಿಂತ ದೊಡ್ಡ ಸಾಧನ ಬೇರೊಂದಿಲ್ಲ. ಆದ್ದರಿಂದ ಸರಕಾರಗಳು ಅನೇಕ ಬಾರಿ ಪೊಲೀಸ್ ಮತ್ತಿತರ ತನಿಖಾ ತಂಡಗಳ ಮೂಲಕ ದೇಶದ್ರೋಹದ ಆರೋಪಗಳನ್ನು ಹೇರುತ್ತಿವೆ. ಕಳೆದ ಕೆಲವು ವರ್ಷ/ತಿಂಗಳುಗಳಲ್ಲಿ ಅನೇಕರು ಇಂತಹ ಪ್ರಕರಣಗಳಲ್ಲಿ ದಸ್ತಗಿರಿಯಾಗಿದ್ದಾರೆ. ಅವರ ಪೈಕಿ ಕೆಲವರು ದೋಷಮುಕ್ತರಾಗಿದ್ದರೆ, ಇನ್ನು ಕೆಲವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಿಂದ ದಸ್ತಗಿರಿಯಾದ ದಿಶಾ ರವಿಯಿರಲಿ, ಜೆಎನ್‌ಯುವಿನ ವಿದ್ಯಾರ್ಥಿ ನಾಯಕರಿರಲಿ, ತಬ್ಲಿಗಿ ಜಮಾತ್‌ನ ದೇಶ ವಿದೇಶೀಯರಿರಲಿ, ಭೀಮಾಕೊರೆಗಾಂವ್‌ನ ವರವರರಾವ್, ಸುಧಾ ಭಾರದ್ವಾಜ್ ಮುಂತಾದ ಚಿಂತಕ ಪಡೆಯಿರಲಿ, ಉತ್ತರಪ್ರದೇಶದ ಅಸಂಖ್ಯ ಅಮಾಯಕರಿರಲಿ, ದೇಶದ್ರೋಹದ ಯಾವ ಲಕ್ಷಣಗಳಿಲ್ಲದಿದ್ದರೂ ಅವರು ಸೆರೆಮನೆಯ ಯಾತನೆಯನ್ನು ಅನುಭವಿಸುವಂತಾಗಿದೆ.

ಆದ್ದರಿಂದ ಇಂತಹ ಪ್ರಕರಣಗಳಲ್ಲಿ ಆರೋಪಗಳು ಎಷ್ಟರ ಮಟ್ಟಿಗೆ ಸತ್ಯ ಮತ್ತು ಸಹಜ ಎಂಬುದನ್ನು ನ್ಯಾಯಾಲಯಗಳು ಗಮನಿಸಬೇಕಾಗುತ್ತದೆ. ನಮ್ಮ ನ್ಯಾಯಾಲಯಗಳು ತೀವ್ರತರವಾದ ಆರೋಪಗಳನ್ನು ಯಾವಾಗಲೂ ಎಚ್ಚರಿಕೆಯಿಂದ ಗಮನಿಸಿವೆ. ಸರ್ವೋಚ್ಚ ನ್ಯಾಯಾಲಯವು ಇಂತಹ ಅಪರಾಧಗಳ ಪರಿಣಾಮಗಳನ್ನು ಅಳೆಯುತ್ತದೆ. ಆದರೂ ನಮ್ಮ ನ್ಯಾಯಾಂಗ ಪ್ರಕ್ರಿಯೆಯು ಆಮೆಯ ವೇಗದಲ್ಲಿ ನಡೆಯುವುದರಿಂದ ಅವು ನ್ಯಾಯ ನೀಡುವಾಗ ಅದು ನಿಷ್ಫಲವಾಗುವುದೂ ಇದೆ. ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿಲ್ಲದಂತಿದ್ದರೂ ಅವು ನಿರ್ದೋಷವನ್ನು ಘೋಷಿಸಬೇಕಾದರೆ ಅದು ಗಜಪ್ರಸವದಂತಿರುತ್ತದೆ. ದೀರ್ಘಕಾಲದ ಅಸೌಖ್ಯ, ವೃದ್ಧಾಪ್ಯ, ಬಡತನ ಇತ್ಯಾದಿಗಳಿದ್ದರೂ ನ್ಯಾಯಾಲಯಗಳು ನಿರ್ದಯವಾಗಿ ವರ್ತಿಸುವುದನ್ನು ಕಾಣುತ್ತೇವೆ. ಕೊನೆಗೂ ಅವು ಜಾಮೀನು ನೀಡಬೇಕಾದರೂ ಮೇಲುಬ್ಬಸಪಡುತ್ತವೆ. ವರವರರಾವ್ ಅವರಿಗೆ ಆರು ತಿಂಗಳ ಜಾಮೀನು ಸಿಕ್ಕಿದೆ; ದಿಶಾ ರವಿಗೆ ಜಾಮೀನು ಸಿಕ್ಕಿದೆ. ಉತ್ತರ ಪ್ರದೇಶದ ಪತ್ರಕರ್ತ ಪುನಿಯಾರಿಗೆ ಜಾಮೀನು ಸಿಕ್ಕಿದೆ. ಆದರೆ ಮುಂದಿನ ನಡವಳಿಕೆಗಳು ಜೀವಮಾನದ ಶಿಕ್ಷೆಯಂತಿರುತ್ತವೆ. ದಿಶಾ ರವಿ ಬೆಂಗಳೂರಿನವರು; ಆದರೆ ಈಗ ಪ್ರಕರಣ ದಿಲ್ಲಿ ನ್ಯಾಯಾಲಯದಲ್ಲಿರುವುದರಿಂದ ಆಕೆ ದಿಲ್ಲಿ ಬಿಟ್ಟುಬರುವ ಹಾಗಿಲ್ಲ. ಆಕೆಗೆ ಜೀವನಕ್ಕೆ ಆಶ್ರಯ, ಊಟ ಕೊಡುವವರ್ಯಾರು? ಕೊನೆಗೂ ಬಿಡುಗಡೆಯಾಯಿತೆನ್ನಿ; ಆಕೆ ಜೈಲಿನಲ್ಲಿ ಕಳೆದ ಕಾಲ, ಪಟ್ಟ ಯಾತನೆ, ಮಾಡಿದ ವೆಚ್ಚ, ಅವಮಾನ, ಚಿಂದಿಯಾದ ಬದುಕು- ಇವಕ್ಕೆಲ್ಲ ನ್ಯಾಯಾಲಯಗಳಾಗಲೀ, ಸರಕಾರವಾಗಲೀ ಪರಿಹಾರದ ಉತ್ತರದಾಯಿತ್ವವನ್ನು ಹೊಂದುವ ಲಕ್ಷಣಗಳಿಲ್ಲ.

ದೇಶದ್ರೋಹದ ಅಪವಾದದ ಶಿಲುಬೆ ಗಂಡಾಂತರಕಾರಿಯೆಂದು ಈಗಾಗಲೇ ಸಾಬೀತಾಗಿದೆ. ಪೊಲೀಸ್ ಮತ್ತಿತರ ಇಲಾಖೆಗಳು ಇಂತಹ ಕ್ಷಣಕ್ಕೆ ಹಾತೊರೆಯುತ್ತಿವೆ. ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಕ್ಷಿಪ್ರನ್ಯಾಯ ಕೊಡಲು ವಿಫಲವಾಗಿವೆ. ಎಲ್ಲಿಯವರೆಗೆ ಸರಕಾರಿ ಅಧಿಕಾರಿಗಳು ಮನುಷ್ಯರಂತೆ ವರ್ತಿಸುವುದಿಲ್ಲವೋ, ಎಲ್ಲಿಯವರೆಗೆ ಸಮಾಜ ಎಚ್ಚತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸರಕಾರ ಈ ಕಾಯ್ದೆಯನ್ನು ದುರ್ಬಳಕೆಮಾಡುವುದನ್ನು ತಡೆಯುವ ಯಾವ ಸಾಧ್ಯತೆಯೂ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)