varthabharthi


ರಾಷ್ಟ್ರೀಯ

ಡಿಜಿಟಲ್ ಮಾಧ್ಯಮ, ಒಟಿಟಿ ಪ್ಲಾಟ್‍ಫಾರ್ಮ್‍ಗಳನ್ನು ನಿಯಂತ್ರಿಸಲು ಹೊಸ ನಿಯಮಗಳೊಂದಿಗೆ ಸರಕಾರ ಸಜ್ಜು

ವಾರ್ತಾ ಭಾರತಿ : 25 Feb, 2021

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಫೆ.25: ಈವರೆಗೆ ಯಾವುದೇ ನಿಯಂತ್ರಣದಲ್ಲಿರದ ಡಿಜಿಟಲ್ ಮಾಧ್ಯಮಗಳಿಗೆ ಮೂಗುದಾರ ತೊಡಿಸಲು ಸಜ್ಜಾಗಿರುವ ಕೇಂದ್ರ ಸರಕಾರವು ಗುರುವಾರ ಸಾಮಾಜಿಕ ಮಾಧ್ಯಮಗಳು ಮತ್ತು ಓವರ್‌ ದಿ ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಿಗಾಗಿ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ಆಕ್ಷೇಪಾರ್ಹ ಅಥವಾ ಅವಮಾನಕರವೆಂದು ಕಂಡು ಬಂದ,ಪ್ರಚೋದನಕಾರಿ ಅಥವಾ ಕುಚೇಷ್ಟೆಯ ಸಂದೇಶಗಳ ಮೂಲವನ್ನು ಬಹಿರಂಗಗೊಳಿಸುವುದನ್ನು ಸಾಮಾಜಿಕ ಮಾಧ್ಯಮಗಳಿಗೆ ಅನಿವಾರ್ಯವಾಗಿಸುವುದು ಸೇರಿದಂತೆ ಟಿವಿ ವಾಹಿನಿಗಳಿಗಾಗಿ ಇರುವಂತೆ ಮೂರು ಸ್ತರಗಳ ವ್ಯವಸ್ಥೆಯ ಮಾದರಿಯಲ್ಲಿ ಈ ನಿಯಮಾವಳಿಗಳನ್ನು ರೂಪಿಸಲಾಗಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದರು.

ಈ ಮಾರ್ಗಸೂಚಿಯು ಸುದ್ದಿ ಜಾಲತಾಣಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ನೀತಿ ಸಂಹಿತೆ ಮತ್ತು ಮೂರು ಸ್ತರಗಳ ಕುಂದುಕೊರತೆ ನಿವಾರಣೆ ವ್ಯವಸ್ಥೆಯನ್ನೊಳಗೊಂಡ ಸಮಾನ ಪೈಪೋಟಿಗೆ ಅವಕಾಶಗಳನ್ನು ಒಳಗೊಂಡ ಮೃದು ನಿಲುವಿನ ಪ್ರಗತಿಪರ ಸಾಂಸ್ಥಿಕ ವ್ಯವಸ್ಥೆಯಾಗಿದೆ ಎಂದು ಬಣ್ಣಿಸಿದ ಪ್ರಸಾದ,ಈ ನಿಯಮಗಳು ಸಾಮಾಜಿಕ ಮಾಧ್ಯಮಗಳ ಬಳಕೆದಾರರಿಗೆ ಅಧಿಕಾರವನ್ನು ನೀಡುತ್ತವೆ ಎಂದು ಹೇಳಿದರು.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು,2021 ಇದೇ ಮೊದಲ ಬಾರಿಗೆ ಡಿಜಿಟಲ್ ಸುದ್ದಿ ಸಂಸ್ಥೆಗಳು,ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಒಟಿಟಿ ಸ್ಟ್ರೀಮಿಂಗ್ ಸೇವೆಗಳನ್ನು ಸರಕಾರವು ಹೇಗೆ ನಿಯಂತ್ರಿಸಲಿದೆ ಎನ್ನುವುದನ್ನು ವಿಷದಪಡಿಸಿದೆ.

ಹಲವಾರು ಸಚಿವಾಲಯಗಳನ್ನೊಳಗೊಂಡ ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆಯನ್ನುಂಟು ಮಾಡುವ ಹಾಗೂ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನೊಡ್ಡುವ ವಿಷಯಗಳನ್ನು ನಿಷೇಧಿಸುವ ನೀತಿ ಸಂಹಿತೆಯನ್ನು ಈ ನಿಯಮಗಳು ಒಳಗೊಂಡಿವೆ.

ನಿಯಮಗಳಲ್ಲಿ ಏನೇನಿವೆ?

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಭಾರತದಲ್ಲಿ ವಾಸವಿರುವ ಪಾಲನಾ ಅಧಿಕಾರಿಗಳನ್ನು ನೇಮಿಸಬೇಕು. ಅವು ಯಾವುದೇ ಕಂಟೆಂಟ್ ಅಥವಾ ವಿಷಯವನ್ನು ತಮ್ಮ ವೇದಿಕೆಯಿಂದ ತೆಗೆದುಹಾಕಿದರೆ ಅದನ್ನು ಬಳಕೆದಾರರಿಗೆ ತಿಳಿಸಬೇಕು,ಅವರ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಕ್ಕೆ ಕಾರಣಗಳನ್ನು ನೀಡಬೇಕು ಮತ್ತು ಅವರ ಅಹವಾಲುಗಳನ್ನು ಆಲಿಸಬೇಕು.

ನಿಗಾ ವ್ಯವಸ್ಥೆಯು ರಕ್ಷಣಾ,ವಿದೇಶಾಂಗ ವ್ಯವಹಾರಗಳು,ಗೃಹ,ವಾರ್ತಾ ಮತ್ತು ಪ್ರಸಾರ,ಕಾನೂನು,ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳು ಸದಸ್ಯರಾಗಿರುವ ಸಮಿತಿಯನ್ನು ಒಳಗೊಂಡಿರುತ್ತದೆ. ಅದು ಬಯಸಿದರೆ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆಯನ್ನು ನಡೆಸಲು ಅಧಿಕಾರವನ್ನು ಹೊಂದಿರುತ್ತದೆ.

ಜಂಟಿ ಕಾರ್ಯದರ್ಶಿ ಅಥವಾ ಮೇಲಿನ ದರ್ಜೆಯ ಅಧಿಕಾರಿಯನ್ನು ಕಂಟೆಂಟ್‌ಗಳನ್ನು ಬ್ಲಾಕ್ ಮಾಡುವಂತೆ ನಿರ್ದೇಶಿಸುವ ಅಧಿಕಾರವನ್ನು ಹೊಂದಿರುವ ಸಕ್ಷಮ ಪ್ರಾಧಿಕಾರಿಯನ್ನಾಗಿ ಸರಕಾರವು ನಿಯೋಜಿಸಲಿದೆ. ಕಂಟೆಂಟ್ ಕಾನೂನನ್ನು ಉಲ್ಲಂಘಿಸಿದೆ ಎಂದು ಮೇಲ್ಮನವಿ ಪ್ರಾಧಿಕಾರವು ಅಭಿಪ್ರಾಯಪಟ್ಟರೆ ಬ್ಲಾಕಿಂಗ್ ಆದೇಶಗಳನ್ನು ಹೊರಡಿಸುವುದಕ್ಕಾಗಿ ಅಂತಹ ಕಂಟೆಂಟ್‌ನ್ನು ಸರಕಾರಿ ನಿಯಂತ್ರಿತ ಸಮಿತಿಗೆ ಸಲ್ಲಿಸಲು ಅದು ಅಧಿಕಾರವನ್ನು ಹೊಂದಿರುತ್ತದೆ.

ಒಟಿಟಿ ಪ್ಲಾಟ್‌ಫಾರ್ಮ್‌ಗಳು ತಾವು ಪ್ರಸಾರ ಮಾಡುವ ಕಂಟೆಂಟ್‌ಗಳನ್ನು ವಯಸ್ಸು,ಲಿಂಗ,ಹಿಂಸೆ ಮತ್ತು ನಗ್ನತೆಯ ಆಧಾರದಲ್ಲಿ ಯಾರು ವೀಕ್ಷಿಸಬಹುದು ಎನ್ನುವುದನ್ನು ಸ್ವಯಂ ವರ್ಗೀಕರಿಸಬೇಕು. 13 ವರ್ಷಕ್ಕಿಂತ ಮೇಲ್ಪಟ್ಟವರು,16 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಯಸ್ಕರ ವೀಕ್ಷಣೆಗೆ ಎಂದು ಪ್ರತ್ಯೇಕವಾಗಿ ಸೂಚಿಸಬೇಕು. ಮಕ್ಕಳು ತಮಗೆ ಸೂಕ್ತವಲ್ಲದ ಕಂಟೆಂಟ್‌ಗಳನ್ನು ವೀಕ್ಷಿಸದಂತೆ ನೋಡಿಕೊಳ್ಳುವ ವ್ಯವಸ್ಥೆಯು ಅಸ್ತಿತ್ವದಲ್ಲಿರಬೇಕು. ದೂರುಗಳನ್ನು ಸ್ವೀಕರಿಸಲು,ಹಿಂಬರಹ ನೀಡಲು ಮತ್ತು ಒಂದು ತಿಂಗಳಲ್ಲಿ ಅವುಗಳನ್ನು ಇತ್ಯರ್ಥಗೊಳಿಸಲು ಕುಂದುಕೊರತೆ ಅಧಿಕಾರಿಗಳನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ನೇಮಿಸಬೇಕು.

ನೀತಿ ಸಂಹಿತೆಯ ಅನುಷ್ಠಾನಕ್ಕಾಗಿ ಸ್ವಯಂ ನಿಯಂತ್ರಣ,ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ ಮತ್ತು ಸರಕಾರದ ಮೇಲ್ವಿಚಾರಣೆ ಇವುಗಳನ್ನೊಂಡ ಮೂರು ಸ್ತರಗಳ ವ್ಯವಸ್ಥೆಯಿರಲಿದೆ.

ಟೀಕೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಸರಕಾರವು ಸ್ವಾಗತಿಸುತ್ತದೆ,ಆದರೆ ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಕುರಿತು ತಮ್ಮ ದೂರುಗಳನ್ನು ದಾಖಲಿಸಲು ಬಳಕೆದಾರರು ವೇದಿಕೆಯೊಂದನ್ನು ಹೊಂದಿರುವುದು ಅಗತ್ಯವಾಗಿದೆ. ಕುಂದುಕೊರತೆ ಅಧಿಕಾರಿಗಳು 24 ಗಂಟೆಗಳಲ್ಲಿ ಇಂತಹ ದೂರುಗಳನ್ನು ದಾಖಲಿಸಿಕೊಳ್ಳಬೇಕು ಮತ್ತು 15 ದಿನಗಳಲ್ಲಿ ಇತ್ಯರ್ಥಗೊಳಿಸಬೇಕು.

ರವಿಶಂಕರ ಪ್ರಸಾದ್,ಕೇಂದ್ರ ಸಚಿವರು

ಆಕ್ಷೇಪಾರ್ಹವಾದ ಮತ್ತು ಮಾನಹಾನಿಕರವಾದ,ಪ್ರಚೋದನಾತ್ಮಕ ಅಥವಾ ಕಿಡಿಗೇಡಿತನದ ಸಂದೇಶಗಳನ್ನು ಮೊದಲು ಯಾರು ಪೋಸ್ಟ್ ಮಾಡಿದ್ದರು ಎನ್ನುವುದನ್ನು ಸಾಮಾಜಿಕ ಮಾಧ್ಯಮಗಳು ಬಹಿರಂಗಗೊಳಿಸಬೇಕು. ದೇಶದ ಸಾರ್ವಭೌಮತೆ,ಸಮಗ್ರತೆ, ರಾಷ್ಟ್ರೀಯ ಭದ್ರತೆ,ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡುವ ಅಥವಾ ಸ್ಪಷ್ಟ ಲೈಂಗಿಕತೆಯ ಯಾವುದೇ ಪೋಸ್ಟ್‌ಗಳನ್ನು ಮೊದಲು ಆರಂಭಿಸಿದವರು ಯಾರು ಎನ್ನುವುದನ್ನು ನೀವು (ಸಾಮಾಜಿಕ ಮಾಧ್ಯಮಗಳು) ಬಹಿರಂಗಗೊಳಿಸಲೇಬೇಕು. ಇಂತಹ ಕಂಟೆಂಟ್ ಗಳನ್ನು ಪ್ರಸಾರ ಮಾಡುವವರಿಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆಯನ್ನು ವಿಧಿಸಲಾಗುತ್ತದೆ.

ರವಿಶಂಕರ ಪ್ರಸಾದ್: ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ

ಡಿಜಿಟಲ್ ಸುದ್ದಿ ಮಾಧ್ಯಮಗಳು ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ)ಯ ನಿಯಮಗಳನ್ನು ಪಾಲಿಸಬೇಕು. ಹೊಸ ಸುದ್ದಿ ಜಾಲತಾಣಗಳ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು.

ಮಾನಹಾನಿಕರ,ಅಶ್ಲೀಲ,ಜನಾಂಗೀಯವಾದಿ,ಅಪ್ರಾಪ್ತ ವಯಸ್ಕರಿಗೆ ಹಾನಿಕರ,ಭಾರತದ ಏಕತೆ,ಸಮಗ್ರತೆ,ರಕ್ಷಣೆ,ಭದ್ರತೆ ಅಥವಾ ಸಾರ್ವಭೌಮತೆ ಮತ್ತು ಇತರ ದೇಶಗಳೊಂದಿಗೆ ಅದರ ಬಾಂಧವ್ಯಗಳಿಗೆ ಬೆದರಿಕೆಯೊಡ್ಡುವ ಸಾಮಾಜಿಕ ಮಾಧ್ಯಮಗಳಲ್ಲಿಯ ಕಂಟೆಂಟ್‌ಗಳನ್ನು ನಿಯಮಗಳು ನಿಷೇಧಿಸುತ್ತವೆ. ನೋಟಿಸ್ ನೀಡಿದ ಅಥವಾ ನ್ಯಾಯಾಲಯದ ಆದೇಶದ 36 ಗಂಟೆಗಳಲ್ಲಿ ಅವಮಾನಕಾರಿ ಅಥವಾ ಕಾನೂನುಬಾಹಿರ ಕಂಟೆಂಟ್‌ಗಳನ್ನು ತೆಗೆದುಹಾಕಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)