varthabharthi


ರಾಷ್ಟ್ರೀಯ

ಅನಿಶ್ಚಿತತೆಯಲ್ಲೇ ಉಳಿದಿರುವ ಭಾರತದ ಆರ್ಥಿಕ ಸ್ಥಿತಿಗತಿ: ಮೂಡೀಸ್ ವರದಿ

ವಾರ್ತಾ ಭಾರತಿ : 25 Feb, 2021

ಹೊಸದಿಲ್ಲಿ, ಫೆ.25: ಭಾರತದ ಹಣಕಾಸಿನ ಪರಿಸ್ಥಿತಿ 2021ರ ಆರ್ಥಿಕ ವರ್ಷದಲ್ಲೂ ಅನಿಶ್ಚಿತತೆಯಲ್ಲಿಯೇ ಮುಂದುವರಿಯಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ನ ವರದಿ ಹೇಳಿದೆ.

2021ರ ಸಾಲಿನಲ್ಲಿ ಎದುರಾಗಿರುವ ಆರ್ಥಿಕ ಸವಾಲುಗಳು ಹಾಗೂ ಆದಾಯ ವೃದ್ಧಿಸುವ ಉಪಕ್ರಮಗಳನ್ನು ಜಾರಿಗೊಳಿಸುವಲ್ಲಿ ಸರಕಾರದ ಈ ಹಿಂದಿನ ದಾಖಲೆಯನ್ನು ಗಮನಿಸಿದರೆ, ಭಾರತದ ಆರ್ಥಿಕ ಬಲವರ್ಧನೆಯ ನಿರೀಕ್ಷೆ ಅನಿಶ್ಚಿತತೆಯಲ್ಲಿಯೇ ಮುಂದುವರಿಯಲಿದೆ ಎಂದು ಮೂಡೀಸ್ ವರದಿ ಅಭಿಪ್ರಾಯಪಟ್ಟಿದೆ.

2021ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಆದಾಯ ಉತ್ಪತ್ತಿ ಮತ್ತು 2022ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಜಿಡಿಪಿ ಪ್ರಗತಿಯಿಂದ ಕೇಂದ್ರ ಸರಕಾರದ 2021 ಮತ್ತು 2022ರ ಆರ್ಥಿಕ ವರ್ಷದ ಹಣಕಾಸಿನ ಕೊರತೆಯು ಅಂದಾಜು ಮಾಡಿದ್ದಕ್ಕಿಂತ ಕಡಿಮೆ ಇರಲಿದೆ. ಆದರೂ, ವ್ಯಾಪಕ ವಿತ್ತೀಯ ಕೊರತೆ, ಮಧ್ಯಮಾವಧಿಯಲ್ಲಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ (ವಾಸ್ತವ ಮತ್ತು ಒಟ್ಟಾರೆ ) ಪ್ರಮಾಣದ ಜಿಡಿಪಿ ಪ್ರಗತಿಯು ಸಾಲದ ಹೊರೆ ಇಳಿಸುವ ಸರಕಾರದ ಸಾಮರ್ಥ್ಯವನ್ನು ನಿರ್ಬಂಧಿಸಲಿದೆ ಎಂದು ಮೂಡೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ, 2022ರ ಮಾರ್ಚ್ 31ಕ್ಕೆ ಅಂತ್ಯವಾಗುವ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿಯಲ್ಲಿ ಗಮನಾರ್ಹ ಚೇತರಿಕೆಯಾಗುವ ನಿರೀಕ್ಷೆಯಿದೆ ಎಂದು ಮೂಡೀಸ್‌ನ ಭಾರತೀಯ ಅಂಗಸಂಸ್ಥೆ ಐಸಿಆರ್‌ಎ ಹೇಳಿದೆ. ಕೇಂದ್ರ ಸರಕಾರದ ಖರ್ಚುವೆಚ್ಚ ಹೆಚ್ಚಿರುವುದರ ಜೊತೆಗೆ ಉಪಭೋಗ(ಬಳಕೆ) ವಲಯವೂ ಚೇತರಿಸಿಕೊಂಡಿರುವುದು ಇದಕ್ಕೆ ಕಾರಣ . ದೇಶದಲ್ಲಿ 2021ರ ತೃತೀಯ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ವ್ಯಾಪಕಗೊಂಡಿರುವುದು ಮತ್ತು ಚೇತರಿಸಿಕೊಂಡಿರುವುದು ಇತ್ತೀಚಿಗಿನ ಆರ್ಥಿಕ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಒಟ್ಟಾರೆಯಾಗಿ 2022ರ ವಿತ್ತೀಯ ವರ್ಷದಲ್ಲಿ ವಾಸ್ತವ ಮತ್ತು ಸಾಂಕೇತಿಕ (ನಾಮಿನಲ್) ಜಿಡಿಪಿಯ ಪ್ರಮಾಣ ಕ್ರಮವಾಗಿ 10.5ಶೇ. ಮತ್ತು 14.5ಶೇ. ಆಗಿರಲಿದೆ ಎಂದು ಐಸಿಆರ್‌ಎ ಅಂದಾಜಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)