varthabharthi


ಸಂಪಾದಕೀಯ

ಉಜ್ವಲಿಸುತ್ತಿರುವ ಖಾಲಿ ಸಿಲಿಂಡರ್

ವಾರ್ತಾ ಭಾರತಿ : 26 Feb, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ನಿನ್ನೆಯಷ್ಟೇ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ರಾಷ್ಟ್ರಪತಿಯವರು ಉದ್ಘಾಟಿಸಿದ್ದಾರೆ. ಈ ಕ್ರೀಡಾಂಗಣಕ್ಕೆ ಪಟೇಲ್ ಹೆಸರನ್ನು ಹಿಂದೆಗೆದು, ಮೋದಿಯ ಹೆಸರನ್ನು ಇಡಲಾಗಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಭಾರೀ ಚರ್ಚೆಗಳಾಗುತ್ತಿವೆ. ಈ ಚರ್ಚೆಗಳ ನಡುವೆ, ಗ್ಯಾಸ್ ಸಿಲಿಂಡರ್‌ಗೆ ಏಕಾಏಕಿ 25 ರೂಪಾಯಿ ಹೆಚ್ಚಳವಾದುದು ಸುದ್ದಿಯಾಗಲೇ ಇಲ್ಲ. ಈ ಕುರಿತ ಜನರ ಆಕ್ರೋಶ ವೈರಲ್ ಕೂಡ ಆಗಲಿಲ್ಲ. ಬುಧವಾರ ಉದ್ಘಾಟನೆಗೊಂಡ ಸ್ಟೇಡಿಯಂ ಜೊತೆಗೆ ಈ ದೇಶದ ಶೇಕಡ 75ರಷ್ಟು ಜನರಿಗೆ ಯಾವುದೇ ಸಂಬಂಧವಿಲ್ಲ. ಯಾಕೆಂದರೆ, ಈ ಸ್ಟೇಡಿಯಂನಲ್ಲಿ ಆಹಾರ ಪದಾರ್ಥಗಳನ್ನು ಬೆಳೆಯಲಾಗುವುದಿಲ್ಲ. ಇಲ್ಲಿ ಉತ್ಪಾದನೆಯಾಗುವ ರನ್‌ಗಳಿಂದ ಗಂಜಿ ಬೇಯಿಸುವುದಕ್ಕಾಗುವುದಿಲ್ಲ ಅಥವಾ ಗೊಬ್ಬರವಾಗಿ ಬಳಸಬಹುದೇ ಎಂದರೆ ಅದೂ ಸಾಧ್ಯವಿಲ್ಲ.

ಕ್ರಿಕೆಟ್ ಎನ್ನುವುದು ಇಂದಿನ ದಿನಗಳಲ್ಲಿ ಕ್ರೀಡೆಯಾಗಿ ಉಳಿದಿಲ್ಲ. ಅದೊಂದು ಬೃಹತ್ ದಂಧೆ. ಆಡುವವರು ಮತ್ತು ಆಡಿಸುವವರು ಈ ಮೂಲಕ ಕೋಟಿ ಕೋಟಿ ಬಾಚಿಕೊಳ್ಳುತ್ತಾರೆ. ಶೇ. 80ರಷ್ಟು ಜನರು ಅಪೌಷ್ಟಿಕತೆಯಿಂದ ನರಳುತ್ತಿರುವ ದೇಶವೊಂದು ಈ ಕ್ರಿಕೆಟ್ ಕ್ರೀಡಾಂಗಣದ ಮೂಲಕ ಏನನ್ನೂ ತನ್ನದಾಗಿಸಿಕೊಳ್ಳಲಾರದು. ಇಷ್ಟಕ್ಕೂ ಬಲಿಷ್ಠ ದೇಶಗಳಾಗಿರುವ ಅಮೆರಿಕ, ಚೀನಾದಂತಹ ದೇಶಗಳು ಕ್ರಿಕೆಟ್‌ಗೆ ಮಹತ್ವವನ್ನೇ ಕೊಟ್ಟಿಲ್ಲ. ಅಂತಹ ದೇಶಗಳು ಇತರ ಕ್ರೀಡೆಗಳನ್ನು ಪೋಷಿಸಿ ಒಲಿಂಪಿಕ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡು ವಿಶ್ವದ ಗಮನ ಸೆಳೆಯುತ್ತಿವೆ. ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ತತ್ತರಿಸಿ ಕೂತಿರುವ ಭಾರತ, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನ್ನು ಉದ್ಘಾಟಿಸುತ್ತದೆ ಎನ್ನುವುದೇ ಒಂದು ವಿಕಟ ವಿನೋದ. ಒಂದು ರೀತಿಯಲ್ಲಿ, ಅದಕ್ಕೆ ಪಟೇಲ್ ಹೆಸರನ್ನು ಅಳಿಸಿ ಮೋದಿಯವರ ಹೆಸರನ್ನೇ ಇಡುವುದು ಸೂಕ್ತ. ದೇಶ ಹಸಿವಿನಿಂದ ತತ್ತರಿಸಿ ಕೂತಿರುವ ಹೊತ್ತಿನಲ್ಲಿ ಒಬ್ಬ ಪ್ರಧಾನಿ, ಸ್ಟೇಡಿಯಂಗೆ ತಮ್ಮ ಹೆಸರನ್ನು ಮರುನಾಮಕರಣ ಮಾಡಿ ಸಂಭ್ರಮಿಸುತ್ತಾರೆ ಎನ್ನುವುದೇ ಭಾರತದಲ್ಲಿ ನಡೆಯುತ್ತಿರುವುದು ಏನು ಎನ್ನುವುದನ್ನು ಜಗತ್ತಿಗೆ ಸಾರಿ ಬಿಡುತ್ತದೆ.

ಗುರುವಾರ ಎಲ್‌ಪಿಜಿ (ಅಡುಗೆ ಅನಿಲ) ಸಿಲಿಂಡರ್ ದರದಲ್ಲಿ 25 ರೂ. ಏರಿಕೆಯಾಗಿದೆ. ಫೆಬ್ರವರಿ ತಿಂಗಳಲ್ಲೇ ಅಡುಗೆ ಅನಿಲದ ಸಿಲಿಂಡರ್‌ಗೆ 100 ರೂ. ಬೆಲೆಯೇರಿಕೆಯಾಗಿದೆ. ಮಾತು ಮಾತಿಗೆ ‘ಉಜ್ವಲ ಯೋಜನೆ’ಯಿಂದ ಬಡವರಿಗೆ ಸಿಲಿಂಡರ್ ತಲುಪಿಸಿದ್ದೇವೆ ಎಂದು ಹೇಳುವ ಸರಕಾರ, ಖಾಲಿ ಸಿಲಿಂಡರ್‌ನಿಂದ ಒಲೆ ಉರಿಯುವುದಿಲ್ಲ ಎನ್ನುವುದನ್ನು ಮರೆತು ಬಿಟ್ಟಿದೆ. ಯಾಕೆಂದರೆ ಈ ಬೆಲೆಯೇರಿಕೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪೂರೈಸುವ ಎಲ್‌ಪಿಜಿ ಸಿಲಿಂಡರ್‌ಗೂ ಅನ್ವಯವಾಗುತ್ತದೆ. ಉಜ್ವಲ ಯೋಜನೆಯೆನ್ನುವುದೇ ಒಂದು ದೊಡ್ಡ ಬೋಗಸ್ ಎನ್ನುವುದು ಈಗಾಗಲೇ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದೆ. ಇದರ ಜೊತೆ ಜೊತೆಗೆ ಸಬ್ಸಿಡಿದಾರರ ಸಬ್ಸಿಡಿಯನ್ನೂ ಕಿತ್ತುಕೊಂಡು ಸಿಲಿಂಡರ್‌ನ ಬೆಲೆಯನ್ನು ಏರಿಸಿ ಬಡವರ ಅಡುಗೆ ಮನೆಯಲ್ಲಿ ಒಲೆ ಉರಿಯದಂತೆ ಮಾಡಿದ್ದಾರೆ. ಈ ಸಂಭ್ರಮವನ್ನು ಆಚರಿಸುವುದಕ್ಕಾಗಿ ಪ್ರಧಾನಿಯವರು ತಮ್ಮ ಹೆಸರನ್ನು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಹಾಕಿಕೊಂಡಿದ್ದಾರೆ ಎಂದು ದೇಶ ಭಾವಿಸಬೇಕಾಗುತ್ತದೆ.

ಏರುತ್ತಿರುವ ಪೆಟ್ರೋಲ್,ಡೀಸೆಲ್ ಬೆಲೆ, ಹಲವು ಪಟ್ಟು ಹೆಚ್ಚಿರುವ ಸಿಲಿಂಡರ್ ಬೆಲೆ, ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತರಕಾರಿ, ದಿನಸಿ ಬೆಲೆ ಇವೆಲ್ಲವೂ ತನಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ಮೋದಿಯವರು ವರ್ತಿಸುತ್ತಿದ್ದಾರೆ. ಈ ದೇಶದ ಶೇ.10ರಷ್ಟು ಇರುವ ಜನರಿಗಾಗಿ ಒಂದು ಪ್ರತ್ಯೇಕ ಭಾರತವನ್ನು ಅವರು ಕಟ್ಟಲು ಹೊರಟಿದ್ದಾರೆ. ವಿಶ್ವದ ಅತಿ ದೊಡ್ಡ ಪ್ರತಿಮೆ, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ, ಬುಲೆಟ್ ಟ್ರೈನ್, ಶಿವಾಜಿಯ ಹೆಸರಲ್ಲಿ ಪಾರ್ಕ್, ಧರ್ಮದ ಹೆಸರಲ್ಲಿ ರಾಮಮಂದಿರ ಇವೆಲ್ಲವೂ ಆ ಹತ್ತು ಜನರ ಹಿತಾಸಕ್ತಿಯನ್ನೇ ಒಳಗೊಂಡಿವೆ. ದೇಶದಲ್ಲಿ ಅಪೌಷ್ಟಿಕತೆ ಶೇ. 80ನ್ನು ತಲುಪಿದೆ ಎಂದು ತಜ್ಞರು ಹೇಳುತ್ತಾರೆ. ಜನರಲ್ಲಿ ಇರಬೇಕಾಗಿರುವ ಪ್ರೊಟೀನ್ ಪ್ರಮಾಣ ವಿಪರೀತ ಇಳಿಕೆಯಾಗಿದೆ. ಇಂತಹ ಹೊತ್ತಿನಲ್ಲಿ ಹೈನೋದ್ಯಮ ನಡೆಸುತ್ತಿದ್ದ ರೈತರ ಕೈಗಳನ್ನು ಜಾನುವಾರು ಮಾರಾಟ ಕಾಯ್ದೆಯ ಮೂಲಕ ಕಟ್ಟಿ ಹಾಕಿದ್ದಾರೆ. ಭಾರತೀಯರು ಗೋಮಾಂಸವನ್ನು ಸೇವಿಸುವುದನ್ನು ತಡೆದು ಅದನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ.

ಒಂದೆಡೆ ಹೈನೋದ್ಯಮ ನಾಶವಾಗಿ ರೈತರು ಬೀದಿ ಪಾಲಾದರೆ, ಮಗದೊಂದೆಡೆ ಅತಿ ಅಗ್ಗದಲ್ಲಿ ಸಿಗುತ್ತಿರುವ ಮಾಂಸಾಹಾರವನ್ನು ಜನರಿಂದ ಕಿತ್ತುಕೊಳ್ಳುವ ವ್ಯಾಪಕ ಪ್ರಯತ್ನ ನಡೆಯುತ್ತಿದೆ. ಇವೆಲ್ಲದರ ನಡುವೆ ಏರುತ್ತಿರುವ ತೈಲ ಬೆಲೆ, ಜನರ ಬದುಕನ್ನು ನರಕ ಮಾಡುತ್ತಿದೆ. ಜನರ ಹಾಹಾಕಾರ ಸರಕಾರದ ಕಿವಿಗೆ ಬೀಳುತ್ತಲೇ ಇಲ್ಲ. ಪೆಟ್ರೋಲ್ ಬೆಲೆ ಇಳಿಸಿ ಎಂದರೆ ‘ಬೆಲೆಯೇರಿಕೆಗೆ ಯುಪಿಎ ಕಾರಣ’ ಎಂದು ಪ್ರಧಾನಿ ಕಾಗೆ ಹಾರಿಸುತ್ತಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾದಾಗ, ಸರಕಾರ ಮಧ್ಯ ಪ್ರವೇಶಿಸಿ ಅದಕ್ಕೆ ಅಬಕಾರಿ ಸುಂಕ ಹೇರಿಕೆ ಮಾಡಿರುವುದೇ ಇಂದಿನ ಸ್ಥಿತಿಗೆ ಕಾರಣ ಎನ್ನುವುದು ಗೊತ್ತಿದ್ದರೂ ಸುಂಕ ಇಳಿಕೆ ಮಾಡಲು ಸರಕಾರ ಸಿದ್ಧವಾಗಿಲ್ಲ. ಮಧ್ಯಮ ವರ್ಗದ ಜನರನ್ನು ಎದುರು ಹಾಕಿಕೊಳ್ಳಲು ಈವರೆಗೆ ಎಲ್ಲ ಪಕ್ಷಗಳು ಹೆದರುತ್ತಿದ್ದವು. ಆದರೆ ಪ್ರಥಮ ಬಾರಿಗೆ ಸರಕಾರವೊಂದು ಬಡ ಮತ್ತು ಮಧ್ಯಮ ವರ್ಗಕ್ಕೆ ವಿರುದ್ಧವಾದ ನೀತಿಗಳನ್ನು ಜಾರಿಗೆ ತರುತ್ತಾ ಅವರನ್ನು ಯಾಮಾರಿಸಲು ಹೊರಟಿದೆ.

ಆದರೆ ಇಡೀ ದೇಶ ಇದೀಗ ಮೋದಿಯ ಆರ್ಥಿಕ ನೀತಿಗಳ ವಿರುದ್ಧ ತಿರುಗಿ ನಿಂತಿದೆ. ವಿಶ್ವದ ಅತಿ ಎತ್ತರದ ಪ್ರತಿಮೆ, ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಪರ್ಯಾಯವಾಗಿ ಈ ದೇಶದಲ್ಲಿ ವಿಶ್ವದ ಅತಿ ದೊಡ್ಡ ರೈತರ ಪ್ರತಿಭಟನೆಯೊಂದು ಸುದೀರ್ಘ ಕಾಲದಿಂದ ನಡೆಯುತ್ತಿದೆ. ಭಾರತವನ್ನು ಇಂದು ವಿಶ್ವ ಅಳೆಯುತ್ತಿರುವುದು ಸ್ಟೇಡಿಯಂ ಮೂಲಕವಲ್ಲ, ಈ ಪ್ರತಿಭಟನೆಗಳ ಮೂಲಕ ಎನ್ನುವುದನ್ನು ಪ್ರಧಾನಿಯವರು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇದರ ಬೆನ್ನಿಗೇ ತೈಲ ಬೆಲೆಯೇರಿಕೆ ಮತ್ತು ಜಿಎಸ್‌ಟಿಯಿಂದ ಆಗಿರುವ ಅನ್ಯಾಯಕ್ಕಾಗಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಶುಕ್ರವಾರ ಭಾರತ್ ಬಂದ್ ಆಚರಿಸಲು ಮುಂದಾಗಿದೆ. ಈ ಪ್ರತಿಭಟನೆಗೆ ಸುಮಾರು 40,000 ವ್ಯಾಪಾರಿಗಳ ಸಂಘಟನೆಗಳು ತಮ್ಮ ಬೆಂಬಲವನ್ನು ಸೂಚಿಸಿವೆ. ಬಹುಶಃ ಇಂತಹದೊಂದು ಬೆಂಬಲ ಈ ಹಿಂದೆ ಎಂದೂ ವ್ಯಕ್ತವಾಗಿರಲಿಲ್ಲ. ಈ ನಿಟ್ಟಿನಲ್ಲಿ ಮೋದಿ ಸರಕಾರ ಇದನ್ನೂ ತನ್ನ ಸಾಧನೆಯಾಗಿಯೇ ಪರಿಗಣಿಸಿಕೊಳ್ಳಬೇಕು.

ದೇಶದ ಆರ್ಥಿಕತೆ ಈಗಾಗಲೇ ಲಾಕ್‌ಡೌನ್‌ನಿಂದ ಅಸ್ತವ್ಯಸ್ತವಾಗಿದೆ. ಇದರ ಬೆನ್ನಿಗೇ ವ್ಯಾಪಾರಿಗಳ ಈ ಮುಷ್ಕರು ದೇಶದ ಆರ್ಥಿಕತೆಗೆ ಇನ್ನಷ್ಟು ಗಾಯಗಳನ್ನು ಮಾಡಲಿದೆ. ಇದೇ ಸಂದರ್ಭದಲ್ಲಿ ಲಾರಿ ಮಾಲಕರು ಅನಿರ್ದಿಷ್ಟ ಕಾಲ ಸಾಗಾಟವನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನು ಒಡ್ಡಿದ್ದಾರೆ. ಅದೇನಾದರೂ ಸಂಭವಿಸಿದರೆ, ಮಾರುಕಟ್ಟೆಯಲ್ಲಿ ಮಾರುವುದಕ್ಕೆ ದಿನಸಿ, ತರಕಾರಿಗಳಿಲ್ಲದೆ ಅಂಗಡಿಗಳು ಶಾಶ್ವತವಾಗಿ ಮುಚ್ಚಬೇಕಾದೀತು. ಭ್ರಮೆಗಳನ್ನು ಬಿತ್ತಿ ಜನರನ್ನು ಬಹುಕಾಲ ಮೋಸ ಮಾಡಲು ಸಾಧ್ಯವಿಲ್ಲ. ಕ್ರಿಕೆಟ್ ಸ್ಟೇಡಿಯಂಗೆ ಮೋದಿ ಹೆಸರಿಟ್ಟಾಕ್ಷಣ ಮೋದಿಯವರು ಇತಿಹಾಸದಲ್ಲಿ ಶಾಶ್ವತರಾಗುವುದಿಲ್ಲ. ಬಡವರ ಸಂಕಟಗಳಿಗೆ, ದೇಶದ ತಳಸ್ತರದ ಜನರ ಏಳಿಗೆಗೆ ಮಿಡಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಮೋದಿಯವರಿಗೆ ಅವರ ಆತ್ಮೀಯರು ಇದನ್ನು ಇನ್ನಾದರೂ ತಿಳಿಸಿಕೊಡದೇ ಇದ್ದರೆ, ಈ ದೇಶವನ್ನು ಸರ್ವನಾಶಗೊಳಿಸಿದ ಹೆಗ್ಗಳಿಕೆಗಾಗಿಯೇ ಅವರ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗುವ ಅಪಾಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)