varthabharthi


ಕರಾವಳಿ

ಬೈರಾಡಿ ಕೆರೆ ಕಾಮಗಾರಿಗೆ ಶಿಲಾನ್ಯಾಸ

ಗೋವಾ ಮಾದರಿಯಲ್ಲಿ ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ: ಸಚಿವ ಸಿ.ಪಿ.ಯೋಗೇಶ್ವರ್

ವಾರ್ತಾ ಭಾರತಿ : 26 Feb, 2021

ಮಂಗಳೂರು, ಫೆ.26: ಮಂಗಳೂರಿನಲ್ಲಿ ರೈಲು ಮಾರ್ಗ, ಜಲಮಾರ್ಗ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಗೋವಾ ಯಾವ ರೀತಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಸರು ಗಳಿಸಿದೆ ಅದೇ ರೀತಿ ಮಂಗಳೂರಿನ ಅಭಿವೃದ್ಧಿಗೂ ಸರಕಾರ ಬದ್ಧ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಶುಕ್ರವಾರ ನಡೆದ ಬೈರಾಡಿ ಕೆರೆ ಕಾಮಗಾರಿಯ ಶಿಲಾನ್ಯಾಸ ಮತ್ತು ಗ್ರೀನ್ ಟೈಗರ್ಸ್ ಮಂಗಳೂರು ಸಹಯೋಗದೊಂದಿಗೆ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ‌ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಸಮಗ್ರ ರೂಪುರೇಷೆ ತಯಾರಿಸಲಾಗುವುದು ಎಂದು ಸಚಿವರು ಹೇಳಿದರು.

ಬೈರಾಡಿ ಕೆರೆ ಅಭಿವೃದ್ಧಿಯತ್ತ ಸಾಗುತ್ತಿದೆ. ಕೆರೆ ಜೀವಂತವಾಗಿದ್ದರೆ ಸುತ್ತಮುತ್ತಲಿನ ಪರಿಸರ ಲವಲವಿಕೆಯಿಂದ ಇರುತ್ತದೆ. ಈ ಕೆರೆಯ ಅಭಿವೃದ್ಧಿ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಯೋಗೀಶ್ ಭಟ್ ಶಾಸಕರಾಗಿದ್ದಾಗ ‌ಬೈರಾಡಿ ಕೆರೆಯ ಮೊದಲನೇ ಹಂತದ ಅಭಿವೃದ್ಧಿ ಕಾರ್ಯ ಆರಂಭಗೊಂಡಿತ್ತು. ಕೆರೆ ಅಭಿವೃದ್ಧಿಯ ರೂಪುರೇಷೆ ಮುಡಾದಿಂದ ಆರಂಭವಾಗಿದೆ. ಟೆಂಪಲ್ ಟೂರಿಸಂಗೆ ಜಿಲ್ಲೆಯಲ್ಲಿ ಉತ್ತಮ ಅವಕಾಶ ಇದ್ದು, ಪ್ರವಾಸೋದ್ಯಮದಲ್ಲಿ ಮಂಗಳೂರು ಮಾದರಿ ನಗರವನ್ನಾಗಿ ಮಾಡುತ್ತೇವೆ ಎಂದರು.

ಮಂಗಳೂರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರಾದ ನಿತಿನ್ ಕುಮಾರ್, ಸಂತೋಷ್ ರೈ ಬೋಳಿಯಾರ್, ಮನಪಾ ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಮುಡಾ ಆಯುಕ್ತ ದಿನೇಶ್, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ರೂಪಶ್ರೀ ಪೂಜಾರಿ, ಹೇಮಲತಾ, ಪೂರ್ಣಿಮಾ, ಸಂದೀಪ್ ಗರೋಡಿ, ಭರತ್, ಶೋಭಾ, ಪ್ರಮುಖರಾದ ರಮೇಶ್ ಕಂಡೆಟ್ಟು, ವಾಸುದೇವ ರಾವ್, ಮಧವ ಉಳ್ಳಾಲ್, ಗುಜ್ಜರಕೆರೆ ಅಭಿವೃದ್ಧಿ ಸಮಿತಿ ‌ಅಧ್ಯಕ್ಷ ಅಣ್ಣಯ್ಯ ಕುಲಾಲ್ ಸೇರಿದಂತೆ ಮತ್ತಿತರರು ಇದ್ದರು.

ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು.


5 ವರ್ಷದಲ್ಲಿ 30 ಕೆರೆಗಳ ಅಭಿವೃದ್ಧಿಗೆ ಪಣ
ಮುಂದಿನ ಐದು ವರ್ಷಗಳಲ್ಲಿ‌ ಮಂಗಳೂರು ನಗರದ 30 ಕೆರೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೊಂದಿದೆ. ತಾನು ಶಾಸಕನಾದ ಬಳಿಕ ಈಗಾಗಲೇ ನಗರದ 12 ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಮಂಗಳೂರಿನ ಕುದ್ರುಗಳ ಅಭಿವೃದ್ಧಿಯ ಬಗ್ಗೆ ಪ್ರವಾಸೋದ್ಯಮ ಸಚಿವರು ಉತ್ಸುಕರಾಗಿದ್ದಾರೆ. ಅದೇರೀತಿ ಬೆಂಗ್ರೆ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ, ಸಿ.ಆರ್.ಝಡ್ ಕಾನೂನು ಚರ್ಚೆ ಬಗ್ಗೆಯೂ ಸಚಿವರು ಉತ್ಸುಕರಾಗಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.


ಒಂದು ಕೋಟಿ ರೂ.ನಲ್ಲಿ ಕೆರೆ ಅಭಿವೃದ್ಧಿ
ಬೈರಾಡಿ ಕೆರೆಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 2.50 ಎಕರೆ ಪ್ರದೇಶದಲ್ಲಿ ಕೆರೆ ಇದ್ದು 1.3  ಎಕರೆ ಪ್ರದೇಶ ನೀರಿನ ಜಾಗ ಇದೆ. ಇದೀಗ ಉದ್ಯಾನವನ, ಇಂಟರ್ಲಾಕ್ ಅಳವಡಿಕೆ, ವಾಕಿಂಗ್ ಟ್ರ್ಯಾಕ್, ಮಕ್ಕಳ ಅಟದ ಪ್ರದೇಶ, ಕೆರೆಯ ಹೂಳು ತೆಗೆಯುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)