varthabharthi


ರಾಷ್ಟ್ರೀಯ

ಮೋದಿ ಸ್ಟೇಡಿಯಂ ಕುರಿತು ಟ್ವೀಟ್ ಮಾಡಿದ ಕ್ರಿಕೆಟಿಗ: 'ಸ್ಪೈಡರ್ ಮ್ಯಾನ್' ನಟನನ್ನು ಗುರಿಮಾಡಿದ ಟ್ರೋಲ್ ಗಳು!

ವಾರ್ತಾ ಭಾರತಿ : 26 Feb, 2021

ಸಾಂದರ್ಭಿಕ ಚಿತ್ರ (Twitter/@quackzonqueen)

ಹೊಸದಿಲ್ಲಿ: ಫೆಬ್ರವರಿ 24ರಂದು ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆದ ಹಾಗೂ ಮೊಟೇರ ಸ್ಟೇಡಿಯಂ ಎಂದೂ ಕರೆಯಲ್ಪಡುತ್ತಿದ್ದ ಗುಜರಾತ್‍ನ ಸರ್ದಾರ್ ಪಟೇಲ್ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣಗೊಳಿಸಿರುವುದು ಭಾರೀ ಸುದ್ದಿಗೆ ಗ್ರಾಸವಾಗಿರುವಂತೆಯೇ ಖ್ಯಾತ ಇತಿಹಾಸಕಾರ ಹಾಗೂ ಕ್ರಿಕೆಟಿಗ ಟಾಮ್ ಹಾಲ್ಲೆಂಡ್ ಕೂಡ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. "ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ತಮ್ಮ ಹೆಸರನ್ನೇ ಇರಿಸಿದ ಮೋದಿಯ ನಮ್ರತೆಯ ದೊಡ್ಡ ಅಭಿಮಾನಿ ನಾನು,'' ಎಂದು ಅವರು ಬರೆದಿದ್ದರು.

ಆದರೆ ಇತಿಹಾಸಕಾರ ಹಾಗೂ ಕ್ರಿಕೆಟಿಗ ಟಾಮ್ ಹಾಲ್ಲೆಂಡ್ ಅವರನ್ನು ಸ್ಪೈಡರ್ ಮ್ಯಾನ್ ಖ್ಯಾತಿಯ ನಟ ಟಾಮ್ ಹಾಲ್ಲೆಂಡ್ ಎಂದು ತಪ್ಪಾಗಿ ತಿಳಿದ ಹಲವು ಟ್ವಿಟ್ಟರಿಗರು ಸ್ಪೈಡರ್ ಮ್ಯಾನ್ ಬಹಿಷ್ಕರಿಸಲು ಕರೆ ನೀಡಿದ್ದಾರೆ.  ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ  'ಟೂಲ್ ಕಿಟ್' ವಿವಾದದ 'ದೇಶವಿರೋಧಿ ಷಡ್ಯಂತ್ರ'  ಹಾಗೂ ಹಲವಾರು ಇತರ ದ್ವೇಷಕಾರಕ ವಿಚಾರಗಳಿಗೆ 'ಸ್ಪೈಡರ್ ಮ್ಯಾನ್' ಆಹಾರವಾಗಿದ್ದ.

"ಸ್ಪೈಡರ್ ಮ್ಯಾನ್ ಏಕೆ ಸ್ಟೇಡಿಯಂ ಬಗ್ಗೆ ಪ್ರತಿಕ್ರಿಯಿಸಿದ್ದಾನೆ,'' ಎಂದು ಒಬ್ಬರು ಟ್ವೀಟ್ ಮಾಡಿದ್ದರೆ  ಇನ್ನೊಬ್ಬರು "ನಾನು ಮತ್ತೊಮ್ಮೆ ಸ್ಪೈಡರ್ ಮ್ಯಾನ್ ಚಿತ್ರ ನೋಡುವುದಿಲ್ಲ. ಕೆಲವೊಂದು ತ್ಯಾಗಗಳನ್ನು ಮಾಡಬೇಕು-ದೇಶ ಮೊದಲು, ಸಿನೆಮಾ ನಂತರ,'' ಎಂದು ಬರೆದಿದ್ದಾರೆ.

"ಇದು ನಮ್ಮ ಆಂತರಿಕ ವಿಚಾರ,'' ಎಂದು ಒಬ್ಬ ಟ್ವಿಟ್ಟರಿಗ ಟ್ವೀಟ್ ಮಾಡಿದ್ದರೆ ಈ ನಡುವೆ ಒಬ್ಬರು ಟಾಮ್ ಹಾಲ್ಲೆಂಡ್ ಅವರನ್ನು ಶ್ಲಾಘಿಸಿ "ಇದೇ ಕಾರಣಕ್ಕೆ ಅವರು ನನ್ನ ಅಚ್ಚುಮೆಚ್ಚಿನ ಸ್ಪೈಡರ್ ಮ್ಯಾನ್'' ಎಂದು ಬರೆದಿದ್ದಾರೆ. ಅಚ್ಚರಿಯೆಂದರೆ ಯಾರಿಗೆ ಕೂಡ  ಟ್ವೀಟ್ ಮಾಡಿದವರು ಸ್ಪೈಡರ್ ಮ್ಯಾನ್ ನಟನಲ್ಲ ಬದಲು ಕ್ರಿಕೆಟಿಗ ಹಾಗೂ ಇತಿಹಾಸಕಾರ ಟಾಮ್ ಹಾಲ್ಲೆಂಡ್ ಎಂದು ತಿಳಿದಿರಲಿಲ್ಲ.

ಇನ್ನೊಂದೆಡೆ ಅಸಲಿಯಾಗಿ ಟ್ವೀಟ್ ಮಾಡಿದವರು ಯಾರು ಎಂದು ತಿಳಿದವರು ವ್ಯಂಗ್ಯವಾಗಿ "ಸ್ಪೈಡರ್ ಮ್ಯಾನ್ ಜೆಎನ್‍ಯುವಿನವರೇ?'' ಎಂದು ಪ್ರಶ್ನಿಸಿದ್ದಾರೆ. "ಸರಕಾರ ಸ್ಪೈಡರ್ ಮ್ಯಾನ್‍ನನ್ನು ನಿಷೇಧಿಸುವ ತನಕ ಕಾಯಿರಿ. ಆದರೆ ಆತ ನಿಜವಾಗಿಯೂ ಸ್ಪೈಡರ್ ಮ್ಯಾನ್ ಅಲ್ಲ ಎಂದು  ಹೇಳಿದರೆ ಹಾಗೆ ಹೇಳಿದವರನ್ನೂ ಅವರು ನಿಷೇಧಿಸುತ್ತಾರೆ,'' ಎಂದು ಇನ್ನೊಬ್ಬರು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)