varthabharthi


ರಾಷ್ಟ್ರೀಯ

ಗೂಢಚರ್ಯೆ ಆರೋಪ: ಗುಜರಾತ್ ಮೂಲದ ಐಎಸ್‍ಐ ಏಜಂಟ್ ವಿರುದ್ಧ ಎನ್‍ಐಎ ಚಾರ್ಜ್ ಶೀಟ್

ವಾರ್ತಾ ಭಾರತಿ : 26 Feb, 2021

ಹೊಸದಿಲ್ಲಿ: ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್‍ಐಗೆ ಕೆಲಸ ಮಾಡುತ್ತಿದ್ದನೆಂದು ಆರೋಪಿಸಲಾದ ಗುಜರಾತ್ ಮೂಲದ ಭಾರತೀಯ ಏಜಂಟ್ ಒಬ್ಬನ ವಿರುದ್ಧ ಪೂರಕ ಚಾರ್ಜ್ ಶೀಟ್ ಅನ್ನು ರಾಷ್ಟ್ರೀಯ ತನಿಖಾ ಏಜನ್ಸಿ ಇಂದು ಸಲ್ಲಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಆರೋಪಿ ರಜಕಭಾಯಿ ಕುಂಭಾರ್ ಗುಜರಾತ್‍ನ ಪಶ್ಚಿಮ ಕಚ್ಛ್ ಜಿಲ್ಲೆಯವನಾಗಿದ್ದು ಆತನ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‍ಗಳು ಹಾಗೂ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ಪಾಕಿಸ್ತಾನದ ಐಎಸ್‍ಐ ಮಂದಿಗೆ ಭಾರತದ ಪ್ರಮುಖ ಸ್ಥಳಗಳ ಕುರಿತ ಸೂಕ್ಷ್ಮ ಮಾಹಿತಿ, ಫೋಟೋ ಹಾಗೂ ವೀಡಿಯೋಗಳನ್ನು ಕಳುಹಿಸಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಚಂದೋಲಿ ಜಿಲ್ಲೆಯ ಮುಹಮ್ಮದ್ ರಶೀದ್ ಎಂಬಾತನನ್ನು ಕಳೆದ ವರ್ಷದ ಜನವರಿಯಲ್ಲಿ ಲಕ್ನೋದಲ್ಲಿ ಬಂಧಿಸಿದ ನಂತರದ ಬೆಳವಣಿಗೆಯಲ್ಲಿ ರಜಕಭಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಎನ್‍ಐಎ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಮೊದಲು ರಶೀದ್ ವಿರುದ್ಧ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿದ್ದ ಎನ್‍ಐಎ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ರಜಕಭಾಯಿಯನ್ನು ಬಂಧಿಸಿತ್ತು. ಆತ ಈ ಹಿಂದೆ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದನೆಂದು ಹೇಳಲಾಗಿದ್ದು, ಎರಡನೇ ಭೇಟಿ ನೀಡಿ ವಾಪಸಾಗುತ್ತಿದ್ದಾಗ ಐಎಸ್‍ಐನ ಹಮೀದ್ ಎಂಬಾತನ ಪರಿಚಯವಾಗಿ ಆತ ಷಡ್ಯಂತ್ರದಲ್ಲಿ ಪಾಲ್ಗೊಂಡಿದ್ದ ಹಾಗೂ ಪಾಕ್ ಐಎಸ್‍ಐ ಮಂದಿಗೆ ರವಾನಿಸಿದ್ದ ಮಾಹಿತಿಗಾಗಿ  ರಶೀದ್‍ಗೆ ರಜಕಭಾಯಿಯೇ ಹಣ ವರ್ಗಾವಣೆಗೊಳಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)