varthabharthi


ಅಂತಾರಾಷ್ಟ್ರೀಯ

ಕ್ಯಾಪಿಟಲ್ ಪೊಲೀಸ್ ಉಸ್ತುವಾರಿ ಮುಖ್ಯಸ್ಥೆ

'ಟ್ರಂಪ್ ಬೆಂಬಲಿಗರು ಸಂಸತ್ ಕಟ್ಟಡ ಸ್ಫೋಟಿಸಲು, ಸಂಸದರನ್ನು ಕೊಲ್ಲಬಯಸಿದ್ದಾರೆ'

ವಾರ್ತಾ ಭಾರತಿ : 26 Feb, 2021

ವಾಶಿಂಗ್ಟನ್, ಫೆ. 26: ಅಮೆರಿಕದ ಸಂಸತ್ ಕಟ್ಟಡವನ್ನು ಸ್ಫೋಟಿಸಲು ಹಾಗೂ ಸಂಸದರನ್ನು ಕೊಲ್ಲಲು ತಾವು ಬಯಸಿದ್ದೇವೆ ಎಂಬ ಸೂಚನೆಯನ್ನು ಕಟ್ಟಡದ ಮೇಲೆ ಕಳೆದ ತಿಂಗಳು ದಾಳಿ ನಡೆಸಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನೀಡಿದ್ದಾರೆ ಎಂದು ಕ್ಯಾಪಿಟಲ್ ಪೊಲೀಸ್‌ನ ಉಸ್ತುವಾರಿ ಮುಖ್ಯಸ್ಥೆ ಯೋಗಾನಂದ ಪಿಟ್‌ಮನ್ ಗುರುವಾರ ಹೇಳಿದ್ದಾರೆ.

ಅಧ್ಯಕ್ಷ ಜೋ ಬೈಡನ್ ಸಂಸತ್‌ನಲ್ಲಿ ಭಾಷಣ ಮಾಡುವ ವೇಳೆ ಈ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಸಂಸದರಿಗೆ ನೀಡಿದ ಮಾಹಿತಿಯಲ್ಲಿ ಅವರು ತಿಳಿಸಿದರು. ಕಟ್ಟಡದ ಸುತ್ತಲೂ ಹೆಚ್ಚಿನ ಪಹರೆ ಏರ್ಪಡಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

‘‘ಸ್ಟೇಟ್ ಆಫ್ ದ ಯೂನಿಯನ್ ಭಾಷಣದ ವೇಳೆ, ಸಂಸತ್ ಭವನವನ್ನು ಸ್ಫೋಟಿಸಲು ಹಾಗೂ ಎಷ್ಟು ಸಾಧ್ಯವೋ ಅಷ್ಟು ಸಂಸದರನ್ನು ಕೊಲ್ಲಲು ಬಯಸಿದ್ದೇವೆ ಎಂಬ ಇಂಗಿತವನ್ನು ಜನವರಿ 6ರಂದು ದಾಳಿ ನಡೆಸಿರುವ ದಾಂಧಲೆಕೋರ ಗುಂಪುಗಳು ವ್ಯಕ್ತಪಡಿಸಿವೆ’’ ಎಂದು ಹೌಸ್ ಅಪ್ರೋಪ್ರಿಯೇಶನ್ಸ್ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಯೋಗಾನಂದ ಹೇಳಿದರು.

ಬೈಡನ್ ಸಂಸತ್ತನ್ನು ಉದ್ದೇಶಿಸಿ ಮಾಡುವ ಸ್ಟೇಟ್ ಆಫ್ ದ ಯೂನಿಯನ್ ಭಾಷಣದ ದಿನಾಂಕ ನಿಗದಿಯಾಗಿಲ್ಲ. ಸಾಮಾನ್ಯವಾಗಿ ಅದು ಪ್ರತಿ ವರ್ಷದ ಆದಿ ಭಾಗದಲ್ಲಿ ನಡೆಯುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)