varthabharthi


ರಾಷ್ಟ್ರೀಯ

ಪಶ್ಚಿಮಬಂಗಾಳದಲ್ಲಿ 8 ಹಂತಗಳ ಚುನಾವಣೆ: ಇದು ಬಿಜೆಪಿಯ ಸಂಚು ಎಂದ ಮಮತಾ ಬ್ಯಾನರ್ಜಿ

ವಾರ್ತಾ ಭಾರತಿ : 26 Feb, 2021

ಕೋಲ್ಕತಾ: ಕೇಂದ್ರ ಚುನಾವಣಾ ಆಯೋಗವು 4 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ಶುಕ್ರವಾರ ದಿನಾಂಕವನ್ನು ಪ್ರಕಟಿಸಿದ ಬೆನ್ನಿಗೇ ಪ್ರತಿಕ್ರಿಯೆ ನೀಡಿದ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ 8 ಹಂತದ ಮತದಾನವು ಕೇಂದ್ರ ದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಸಂಚಿನ ಒಂದು ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಲಹೆಯ ಮೇರೆಗೆ ಬಂಗಾಳ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಾಗಿದೆಯೇ? ಎಂದು ಪ್ರಶ್ನಿಸಿದರು.

ಬಂಗಾಳದಲ್ಲಿ ಮಾ.27ರಂದು ಚುನಾವಣೆ ಆರಂಭವಾಗಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗುವ ಮೊದಲು ದಾಖಲೆ 33 ದಿನಗಳ ಕಾಲ 8 ಹಂತಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಈ ಬಾರಿಯ ಚುನಾವಣೆಯು ಮೊದಲ ಬಾರಿ ಸುದೀರ್ಘ ಅವಧಿ ನಡೆಯಲಿದ್ದು, 2016ರಲ್ಲಿ ಎಪ್ರಿಲ್-ಮೇ ನಲ್ಲಿ ಒಂದೇ ವಾರದಲ್ಲಿ ಚುನಾವಣೆ ಮುಗಿದಿತ್ತು.

ರಾಜ್ಯದಲ್ಲಿ 2016ರ ರಾಜ್ಯ ಚುನಾವಣೆ ಹಾಗೂ 2019ರ ಸಾರ್ವತ್ರಿಕ ಚುನಾವಣೆಯು 7 ಹಂತಗಳಲ್ಲಿ ನಡೆದಿತ್ತು. ಹಿಂಸಾಚಾರದ ಭೀತಿಯಿಂದಾಗಿ ಹೆಚ್ಚು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತರಾದ ಸುನೀಲ್ ಅರೋರ ಸುದ್ದಿಗಾರರಿಗೆ ತಿಳಿಸಿದರು.

ಮತದಾನದ ವೇಳಾಪಟ್ಟಿ ರಚನೆಗೆ ಬಿಜೆಪಿ ನಿರ್ದೇಶನ ನೀಡುತ್ತಿದೆ ಎಂದು ಆರೋಪಿಸಿದ ಮಮತಾ, ಬಹುತೇಕ ಒಂದೇ ಸಂಖ್ಯೆ ಇರುವ ಇತರ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಿಗದಿಯಾಗಿದೆ ಎಂದು ಬೆಟ್ಟು ಮಾಡಿದರು.

ನಾನು ಬಿಜೆಪಿ ಪಕ್ಷದ ಮೂಲಗಳಿಂದ ತಿಳಿದುಕೊಂಡೆ. ಅವರ ಸಲಹೆಗಳು ಹಾಗೂ ನಿಮ್ಮ ದಿನಾಂಕ ಎರಡರಲ್ಲೂ ಸಾಮ್ಯತೆ ಇದೆ.  ಎಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದೆಯೋ ಅಲ್ಲಿ ಹಲವು ಸುತ್ತಿನ ಚುನಾವಣೆ ನಿಗದಿಯಾಗಿದೆ. ಇದು ಮೋದಿ ಹಾಗೂ ಶಾ ಸಲಹೆಯ ಮೇರೆಗೆ ನಡೆದಿದೆಯೇ? ಅಸ್ಸಾಂ ಚುನಾವಣೆ ಮುಗಿದ ಬಳಿಕ ಅವರು ಇಲ್ಲಿಗೆ ಬಂದು ಪ್ರಚಾರ ಮಾಡುತ್ತಾರೆ. ನಿಮ್ಮ ಪಿತೂರಿಗೆ ನಾವು ಹೆದರುವುದಿಲ್ಲ. ನಾನು ಬಂಗಾಳದ ಪುತ್ರಿ. ಬಿಜೆಪಿಗಿಂತ ನನಗೆ ರಾಜ್ಯದ ಬಗ್ಗೆ ಚೆನ್ನಾಗಿ ಗೊತ್ತಿದೆ. ನಾವು ಎಲ್ಲ 8 ಹಂತಗಳ ಚುನಾವಣೆ ಗೆಲ್ಲುತ್ತೇವೆ. ನಿಮ್ಮ ಪಿತೂರಿಯನ್ನು ಸೋಲಿಸುತ್ತೇವೆ. ಈ ಅವಮಾನಕ್ಕೆ ಬಂಗಾಳದ ಜನತೆಯೇ ಉತ್ತರ ನೀಡುತ್ತಾರೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)