varthabharthi


ಕರಾವಳಿ

‘ಕರಾವಳಿ ಅಭಿವೃದ್ಧಿ ಪ್ರಾಧಿಕಾರ’ ಮೇಲ್ದರ್ಜೆಗೇರಿಸಲು ಚಿಂತನೆ: ಸಚಿವ ನಾರಾಯಣ ಗೌಡ

ವಾರ್ತಾ ಭಾರತಿ : 26 Feb, 2021

ಮಂಗಳೂರು, ಫೆ.26: ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರ್ನಾಟಕ ಅಭಿವೃದ್ಧಿ ಮಂಡಳಿಯಾಗಿ ರೂಪಿಸಲು ಸರಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಯೋಜನೆ, ಸಾಂಖ್ಯಿಕ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಹೇಳಿದ್ದಾರೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ವಿವಿಧೆಡೆ 2 ಕೋ.ರೂ. ವೆಚ್ಚದ 20 ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ನಗರ ಖಾಸಗಿ ಹೊಟೇಲ್‌ನಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೂಲಕ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಮೂಲಕ ಪ್ರಾಧಿಕಾರಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ರಾಜ್ಯದಲ್ಲಿ ಎರಡೂವರೆ ಕೋಟಿ ಯುವ ಜನರಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಕ್ರೀಡೆಗೆ ಬೇಕಾದ ಎಲ್ಲ ಸೌಲಭ್ಯಗಳಿದ್ದರೂ ತರಬೇತುದಾರರ ಕೊರತೆ ಇದೆ. ಕ್ರೀಡಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸಲಾಗುವುದು ಎಂದು ನಾರಾಯಣ ಗೌಡ ನುಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಕ್ರೀಡೆಯಲ್ಲಿ ಕರಾವಳಿಯ ಸಾಕಷ್ಟು ಮಂದಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಂತಹವರ ನೌಕರಿಗೆ ಸರಕಾರ ಸೂಕ್ತ ಯೋಜನೆ ಜಾರಿಗೆ ತರಬೇಕು. ಕ್ಯಾಬಿನೆಟ್ ಹಂತದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳ ಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಪ್ರಾಧಿಕಾರದಿಂದ 4 ಕೋ.ರೂ. ಮೊತ್ತದ ಕಾಮಗಾರಿ ನಡೆದಿದೆ. ಮತ್ತೆ 2 ಕೋ.ರೂ.ಗಳ ಕಾಮಗಾರಿ ನಡೆಯಲಿದೆ. ಸ್ಮಾರ್ಟ್‌ಸಿಟಿಯಡಿಯಲ್ಲಿ ಮಂಗಳಾ ಕ್ರೀಡಾಂಗಣ ಅಭಿವೃದ್ಧಿಗೆ 10 ಕೋ,ರೂ., ಸೋಟ್ಸ್ ಕಾಂಪ್ಲೆಕ್ ನಿರ್ಮಾಣಕ್ಕೆ 25 ಕೋ.ರೂ., ವಾಲಿಬಾಲ್ ಸ್ಟೇಡಿಯಂಗೆ 10 ಕೋ.ರೂ. ಅನುದಾನ ಮಂಜೂರಾಗಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ ಅತ್ರಾಡಿ-ವಿಮಾನ ನಿಲ್ದಾಣ ರಸ್ತೆ ಅಭಿವೃದ್ಧಿಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮಂಗಳೂರು-ಕಾರವಾರ ಮೀನುಗಾರಿಕಾ ರಸ್ತೆ ಅಭಿವೃದ್ಧಿಗೆ 780 ಕೋ.ರೂ., ಗಳ ಡಿಪಿಆರ್ ತಯಾರಿಸಿ ಸಲ್ಲಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ 46 ಮೀನು ಮಾರುಕಟ್ಟೆ, ಕಾಲು ಸಂಕಗಳನ್ನು ನಿರ್ಮಿಸಲಾಗಿದೆ. ಒಟ್ಟು 834 ಕೋ.ರೂ.ಗಳಲ್ಲಿ 166 ಕಾಮಗಾರಿ ಪೈಕಿ 69 ಕಾಮಗಾರಿ ಪೂರ್ತಿಯಾಗಿದೆ. 97 ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಹೊಸ ಕಾಮಗಾರಿಗೆ 100 ಕೋ.ರೂ. ಅನುದಾನ ಪ್ರಸ್ತಾಪಿಸಲಾಗಿದೆ. ಅದರಲ್ಲಿ ಮೆರೈನ್ ಡ್ರೈವ್, ಒಣಮೀನು ಸಂಸ್ಕರಣಾ ಘಟಕ, ರಾಷ್ಟ್ರೀಯ ಹೆದ್ದಾರಿ ಬಳಿ ಪಿಂಕ್ ಪೆಪ್ಪರ್ ಬೆಳೆಸುವುದು, ಕಾಪು ದೀಪಸ್ತಂಭ ಅಭಿವೃದ್ಧಿ, ಸೈನೇಜ್ ಬೋರ್ಡ್, ಬಹು ಮಹಡಿಗಳ ಕಾರ್ ಪಾರ್ಕಿಂಗ್ ಸೌಲಭ್ಯ ಇತ್ಯಾದಿ ಕಾಮಗಾರಿ ಪ್ರಸ್ತಾಪಿಸಲಾಗಿದೆ ಎಂದರು.

ಕೈಗಾರಿಕೆಗಳ ಕಲುಷಿತ ತ್ಯಾಜ್ಯ ನೀರಿನಿಂದ ಸಮುದ್ರ ಉತ್ಪನ್ನಗಳಿಗೆ ಆಗುವ ತೊಂದರೆ ನಿವಾರಣೆಗೆ ಯೋಜನೆ ರೂಪಿಸುವುದು, ಡಿಜಿಟಲ್ ನಾಮಲಕ ಅನಾವರಣ, ಪ್ರಧಾನಿ ಮತ್ಸಸಂಪದ ಯೋಜನೆಯಡಿ ವಿವಿಧ ಯೋಜನೆ ರೂಪಿಸುವುದು, ಲಾನುಭವಿಗಳ ಆಯ್ಕೆ, ಆತ್ಮ ನಿರ್ಭರ್ ಯೋಜನೆಯಡಿ ನೂತನ ಆವಿಷ್ಕಾರ, ಪಿಪಿಪಿ ಯೋಜನೆಯಡಿ ಕಾರ್ಯಕ್ರಮ, ಕಾರ್ಪೊರೇಟ್ ಕಂಪನಿಗಳ ಸಿಎಸ್‌ಆರ್ ನಿಯಡಿ ಸಾಮಾಜಿಕ ಅಭಿವದ್ಧಿ ಯೋಜನೆ ಕೈಗೆತ್ತಿಕೊಳ್ಳುವುದು, ಬಹು ಅಂತಸ್ತುಗಳ ಕಾರ್ ಪಾರ್ಕಿಂಗ್ ಅನುಷ್ಠಾನದ ಗುರಿ ಹೊಂದಲಾಗಿದೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

ಕಾರ್ಯಕ್ರಮದಲ್ಲಿ ತರಬೇತುಗೊಂಡ ಎಸ್ಸಿ-ಎಸ್ಟಿ ಕ್ರೀಡಾಪಟುಗಳಿಗೆ ಹಾಗೂ ಇತರೆ ಕ್ರೀಡಾ ಪಟುಗಳಿಗೆ ಕ್ರೀಡಾಪರಿಕರ ಕಿಟ್ ವಿತರಿಸಲಾಯಿತು. 

ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮೇಯರ್ ದಿವಾಕರ್ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ರಾಜ್ಯ ಮೀನು ಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಇಲೆಕ್ಟ್ರಿಕಲ್ಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಯುವಜನ ಸಬಲೀಕರಣ ಇಲಾಖೆಯ ನಿರ್ದೇಶಕ ಚಂದ್ರಶೇಖರಯ್ಯ, ಇಲಾಖೆಯ ಜಿಲ್ಲಾ ಅಧಿಕಾರಿ ಪ್ರದೀಪ್ ಡಿಸೋಜಾ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)