ಅಂತಾರಾಷ್ಟ್ರೀಯ
ಸಿಂಗಾಪುರ: ಮೃತ ಭಾರತೀಯ ಕಾರ್ಮಿಕನ ಕುಟುಂಬಕ್ಕೆ 1.13 ಕೋಟಿ ಸಂಗ್ರಹ

ಸಿಂಗಾಪುರ,ಫೆ.28: ಇಲ್ಲಿನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಭಾರತೀಯ ಕಾರ್ಮಿಕನೊಬ್ಬನ ಕುಟುಂಬಕ್ಕೆ ಆನ್ಲೈನ್ ಚಾರಿಟಿ ಸಂಸ್ಥೆಯೊಂದು 1,53,903 (ಅಂದಾಜು 1,13,79,347 ರೂ.)ಅಮೆರಿಕನ್ ಡಾಲರ್ ಹಣವನ್ನು ಸಂಗ್ರಹಿಸಿದೆ.
ರವಿವಾರ ಮಧ್ಯಾಹ್ನದವರೆಗೆ ಮೃತ ಭಾರತೀಯ 38 ವರ್ಷ ವಯಸ್ಸಿನ ಮಾರಿಮುತ್ತು ಅವರ ಕುಟುಂಬಕ್ಕೆ 2,141 ಮಂದಿ ದೇಣಿಗೆ ನೀಡಿದ್ದಾರೆಂದು ಏಶ್ಯದ ಪ್ರಮುಖ ಆನ್ಲೈನ್ ನಿಧಿಸಂಗ್ರಹ ವೇದಿಕೆಯಾದ ಗಿವ್.ಏಶ್ಯಾ ತಿಳಿಸಿದೆ.
ಅಗ್ನಿ ಸುರಕ್ಷಾ ವ್ಯವಸ್ಥೆಯ ಉಪಕರಣಗಳನ್ನು ಉತ್ಪಾದಿಸುವ ಸ್ಟಾರ್ಸ್ ಎಂಜಿನಿಯರಿಂಗ್ನಲ್ಲಿ ಮಾರಿಮುತ್ತು ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಂಭೀರ ಸುಟ್ಟಗಾಯಗಳಿಂದಾಗಿ ಸಾವನ್ನಪ್ಪಿದ್ದರು.
ಮಾರಿಮುತ್ತು ಅವರ ಪತ್ನಿ ಸುನೀತಾ ಕಳೆದ ವರ್ಷದ ಏಪ್ರಿಲ್ನಲ್ಲಿ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದರು. 2019ರ ಆಗಸ್ಟ್ನಲ್ಲಿ ಮಾರಿಮುತ್ತು ಭಾರತದಲ್ಲಿರುವ ತನ್ನ ಮನೆಗೆ ಆಗಮಿಸಿದ್ದು, ಆನಂತರ ಅವರು ವಾಪಸಾಗಿರಲಿಲ್ಲ. ಹೀಗಾಗಿ ಅವರಿಗೆ ತನ್ನ 10 ತಿಂಗಳು ಪ್ರಾಯದ ಮಗುವಿನ ಮುಖವನ್ನು ನೋಡಲು ಕೂಡಾ ಸಾಧ್ಯವಾಗಿರಲಿಲ್ಲ,
ಸ್ಫೋಟದಿಂದಾಗಿ ಕಾರ್ಖಾನೆಯಲ್ಲಿದ್ದ ಇನ್ನೂ ಐವರು ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆಯೆಂದು ತಿಳಿದುಬಂದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ