varthabharthi


ರಾಷ್ಟ್ರೀಯ

"ನವಿಲಿಗೆ ಆಹಾರ ತಿನ್ನಿಸುವುದು ಮತ್ತು ಲಸಿಕೆ ತೆಗೆದುಕೊಳ್ಳುವುದು ಒಂದೇ ರೀತಿ ಅಲ್ಲ"

ಅಸ್ಸಾಂನ ಶಾಲು, ಕೇರಳ, ಪುದುಚೇರಿಯ ನರ್ಸ್‌ ಗಳು: ಮೋದಿ ಲಸಿಕೆ ಹಾಕಿಸಿಕೊಂಡಿದ್ದು ಚುನಾವಣಾ ಸ್ಟಂಟ್‌‌ ಎಂದ ಕಾಂಗ್ರೆಸ್

ವಾರ್ತಾ ಭಾರತಿ : 1 Mar, 2021

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತನ್ನ ಮೊದಲ ಕೋವಿಡ್-19 ಲಸಿಕೆ ಸ್ವೀಕಾರದ ವೇಳೆ ಚುನಾವಣೆಗೆ ಸಜ್ಜಾಗಿರುವ ರಾಜ್ಯಗಳನ್ನು ಸಾದ್ಯವಾದಷ್ಟು ಮಟ್ಟಿಗೆ ಬಿಂಬಿಸುವ ಮೂಲಕ ರಾಜಕೀಯ ಸ್ಟಂಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ.

ಸುದ್ದಿಸಂಸ್ಥೆ ಎ ಎನ್ ಐನೊಂದಿಗೆ ಮಾತನಾಡಿದ ಚೌಧುರಿ, ಪ್ರಧಾನಿಯವರ ಲಸಿಕೆ ಸ್ವೀಕಾರದ ದೃಶ್ಯಗಳಲ್ಲಿ ಅಸ್ಸಾಂನ ಗಮ್ಚಾ(ಸಾಂಪ್ರದಾಯಿಕ ಶಾಲು)ಇತ್ತು. ಅವರಿಗೆ ಲಸಿಕೆ ನೀಡಿದ ದಾದಿಯರು ಕೇರಳ ಹಾಗೂ ಪುದುಚೇರಿಯವರು. ಕಾಕತಾಳೀಯವೆಂಬಂತೆ ಈ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಯಲಿಕ್ಕಿದೆ. ಅವರು ರಿಷಿ ಅರಬಿಂದೋ ಫೋಟೊ ಹಾಗೂ ಗೀತಾಂಜಲಿಯನ್ನು ಸಹ ತೆಗೆದುಕೊಂಡು ಹೋಗಿದ್ದರೆ, 5 ರಾಜ್ಯಗಳಾಗುತ್ತಿತ್ತು ಎಂದರು.

ಅಧೀರ್ ರಂಜನ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್  ಚೌಹಾಣ್ ಅವರು, ಅವರ ಹೇಳಿಕೆಯು ಲಸಿಕೆಯ ಕುರಿತಂತೆ ಕೊಳಕು ರಾಜಕೀಯವಾಗಿದೆ ಎಂದರು.

ಲಸಿಕೆ ಕುರಿತು ರಾಜಕೀಯ ಮಾಡುವವರು ನರೇಂದ್ರ ಮೋದಿಯವರ ಮೇಲೆ ಆರೋಪ ಹೊರಿಸುವುದಲ್ಲದೆ ದೇಶದ ಜನರ ಆರೋಗ್ಯದೊಂದಿಗೆ ಆಟವಾಡುತ್ತಿದ್ದಾರೆ. ಅಂತಹ ಜನರನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ ಎಂದರು.

ರಂಜನ್ ಚೌಧರಿ ಮಾತ್ರವಲ್ಲ ಟಿಎಂಸಿ ಸಂಸದ ಸಂತನು ಸೇನ್ ಕೂಡ ಲಸಿಕೆ ಸ್ವೀಕರಿಸುವಾಗ ಪ್ರಧಾನಮಂತ್ರಿ ಮಾಸ್ಕ್ ಧರಿಸದೇ ಇರುವುದನ್ನು ಬೆಟ್ಟು ಮಾಡಿದ್ದಾರೆ.

“ನರೇಂದ್ರ ಮೋದೀಜಿ ಕೋವಿಡ್-19 ಲಸಿಕೆ ಪಡೆದಿದ್ದಾರೆ. ಪ್ರಚಾರವು ವೈದ್ಯಕೀಯ ವಿಜ್ಞಾನವನ್ನು ಸೋಲಿಸುತ್ತದೆ. ಪ್ರೊಟ್ರೊಕಾಲ್(ಶಿಷ್ಟಾಚಾರ)ಕ್ಕಿಂತ ಫೋಟೊಗ್ರಾಫಿಯು ಹೆಚ್ಚು ಪ್ರಮುಖವಾಗಿದೆ. ಮಾಸ್ಕ್ ಹೊಸತಾಗಿ ಬೆಳೆದ ಗಡ್ಡವನ್ನು ಕಾಣದಂತೆ ಮಾಡುತ್ತದೆ. ನವಿಲಿಗೆ ಆಹಾರ ತಿನ್ನಿಸುವುದು ಹಾಗೂ ಲಸಿಕೆ ಪಡೆಯುವುದು… ಒಂದೇ ಅಲ್ಲ. ಭಾರತವನ್ನು ದೇವರೇ ಕಾಪಾಡಬೇಕು'' ಎಂದು ಟ್ವೀಟಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)