varthabharthi


ಸಂಪಾದಕೀಯ

ಮಾನವ ಹಕ್ಕು ಉಲ್ಲಂಘನೆ ಆಂತರಿಕ ವಿಷಯವಲ್ಲ

ವಾರ್ತಾ ಭಾರತಿ : 2 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮಾನವ ಹಕ್ಕುಗಳು ಜಗತ್ತಿನಲ್ಲಿ ಎಲ್ಲೇ ಉಲ್ಲಂಘನೆಯಾಗಲಿ ಅದರ ಬಗ್ಗೆ ಸಹಜವಾಗಿ ಜಾಗತಿಕವಾಗಿ ಆತಂಕ ಉಂಟಾಗುತ್ತದೆ. ಈಗ ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಹೆಚ್ಚುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳ ಬಗ್ಗೆ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಆತಂಕವನ್ನು ವ್ಯಕ್ತಪಡಿಸಿದೆ. ಇದು ನಮ್ಮ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಕೋಪಕ್ಕೆ ಕಾರಣವಾಗಿದೆ. ಭಾರತದಲ್ಲಿ ಇತ್ತೀಚಿನ ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ದಾಳಿಗಳ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಕಳೆದ ವಾರ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬಗ್ಗೆ ತಕರಾರು ತೆಗೆದ ವಿದೇಶಾಂಗ ಸಚಿವರು ‘‘ಭಾರತದ ಸಾರ್ವಭೌಮತ್ವ ಮತ್ತು ಆಂತರಿಕ ವಿಷಯಗಳಲ್ಲಿ ಬಾಹ್ಯ ಹಸ್ತಕ್ಷೇಪ ಬೇಡ’’ ಎಂದು ಹೇಳಿದ್ದಾರೆ. ಸಚಿವರ ಈ ಹೇಳಿಕೆಯ ಬಗ್ಗೆ ಮಾನವ ಹಕ್ಕುಗಳ ಪರ ಸಂಘಟನೆಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿವೆ.

 ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಅದರಲ್ಲೂ ನಿರ್ದಿಷ್ಟವಾಗಿ ಏಳು ವರ್ಷಗಳಿಂದ ಸಮಾಜದ ಅವಕಾಶ ವಂಚಿತ ಜನ ಸಮುದಾಯಗಳ ನಿರ್ದಿಷ್ಟವಾಗಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳು ಹಾಗೂ ಅದರ ಬಗ್ಗೆ ಅಧಿಕಾರದಲ್ಲಿರುವವರ ಜಾಣ ಮೌನ, ಕೆಲ ಬಾರಿ ಮೌನ ಸಮ್ಮತಿ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಅಪಖ್ಯಾತಿಗೀಡುಮಾಡಿರುವುದು ಸುಳ್ಳಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ 370 ವಿಧಿ ರದ್ದತಿ ನಂತರ ಅಲ್ಪಸಂಖ್ಯಾತರಲ್ಲಿ ಉಂಟಾಗಿರುವ ಆತಂಕ ಕೂಡ ಸಹಜವಾಗಿ ಜಗತ್ತಿನ ಗಮನ ಸೆಳೆದಿದೆ.

ಒಂದೆಡೆ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮೇಲೆ ಉತ್ತರ ಪ್ರದೇಶಗಳಂತಹ ರಾಜ್ಯಗಳಲ್ಲಿ ಮಾತ್ರವಲ್ಲ, ಬಹುತೇಕ ಕಡೆ ನಡೆಯುತ್ತಿರುವ ದಾಳಿಗಳು ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ನೀತಿ ಧೋರಣೆಗಳನ್ನು ವಿರೋಧಿಸುತ್ತಿರುವ ಲೇಖಕರು, ಚಿಂತಕರು ಮತ್ತು ಕಲಾವಿದರ ಮೇಲೆ ಪ್ರಭುತ್ವ ನಡೆಸಿರುವ ದಮನ ಸತ್ರಗಳು, ಆರೋಪಪಟ್ಟಿ ಸಲ್ಲಿಸದೆ ವರವರರಾವ್, ಆನಂದ್ ತೇಲ್ತುಂಬ್ಡೆ, ಸುಧಾ ಭಾರದ್ವಾಜ್ ಸೇರಿದಂತೆ ಹೆಸರಾಂತ ಬುದ್ಧಿಜೀವಿಗಳನ್ನು ಕಳೆದ ಎರಡು ವರ್ಷಗಳಿಂದ ಸೆರೆಮನೆಗೆ ಹಾಕಿದ್ದು, ರಾಜಕೀಯ ಭಿನ್ನಮತ ಹೊಂದಿದವರನ್ನು ಹಣಿಯಲು ಬ್ರಿಟಿಷ್ ಕಾಲದ ‘ದೇಶ ದ್ರೋಹ’ದ ಕಾನೂನನ್ನು ಬಳಸಿಕೊಳ್ಳುತ್ತಿರುವುದು ಇವೆಲ್ಲ ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲದೆ ಬೇರೇನೂ ಅಲ್ಲ. ಕಂಡದ್ದನ್ನಾಡಿದರೆ ವಿದೇಶಾಂಗ ಸಚಿವರು ಅಥವಾ ಸರಕಾರ ಆಕ್ಷೇಪಿಸಬೇಕಾಗಿಲ್ಲ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಣಾಳಿಕೆ ಪ್ರಕಾರ ಯಾವುದೇ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿ ಅದು ಆ ದೇಶದ ಆಂತರಿಕ ವಿಷಯವಲ್ಲ. ಭಾರತ ಕೂಡ ಬೇರೆ ದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಅನೇಕ ಬಾರಿ ಆಕ್ಷೇಪ ವ್ಯಕ್ತಪಡಿಸಿಲ್ಲವೇ? ನಮ್ಮ ಮನೆಯಲ್ಲಿ ಯಾರನ್ನಾದರೂ ಹೊಡೆದು ಸಾಯಿಸುತ್ತೇವೆ ಯಾರೂ ಕೇಳಬಾರದು ಎಂಬಂತಿದೆ ಜೈಶಂಕರ್ ಅವರ ವಾದ.

‘‘ಭಯೋತ್ಪಾದಕತೆ ಈಗ ಜಗತ್ತು ಎದುರಿಸುತ್ತಿರುವ ಅತ್ಯಂತ ದೊಡ್ಡ ಅಪಾಯ, ಅದು ಮನುಷ್ಯನ ಜೀವಿಸುವ ಹಕ್ಕನ್ನೇ ಕಿತ್ತುಕೊಳ್ಳುತ್ತದೆ’’ ಎಂದು ವಿದೇಶಾಂಗ ಸಚಿವರು ಹೇಳಿದ್ದು ಸರಿಯಾಗಿದೆ. ಅದೇ ರೀತಿ ಯಾವುದೇ ದೇಶದಲ್ಲಿ ತುಳಿತಕ್ಕೊಳಗಾದ ಸಮುದಾಯಗಳ ಮೇಲೆ ಅಥವಾ ನಿರ್ದಿಷ್ಟವಾಗಿ ಒಂದು ಧಾರ್ಮಿಕ ನಿಷ್ಠೆ ಹೊಂದಿರುವವರ ಆಹಾರ ಪದ್ಧತಿಯನ್ನು ಪ್ರಶ್ನಿಸುವುದು, ಅವರ ಅವಕಾಶಗಳನ್ನು ಕಿತ್ತುಕೊಳ್ಳುವುದು, ನಿರ್ದಿಷ್ಟ ಸಮುದಾಯದ ಜನರನ್ನು ಗುರಿಯಾಗಿರಿಸಿಕೊಂಡು ಹಲ್ಲೆ ಮಾಡಿ ಕೊಂದು ಹಾಕುವುದು ಕೂಡ ಭಯೋತ್ಪಾದಕತೆಗೆ ಸಮಾನವಾದ ಅಪರಾಧವಾಗಿದೆ. 2002ರಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಗುಜರಾತ್ ಹತ್ಯಾಕಾಂಡ, ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ನಡೆದ ದಲಿತ ತಾಯಿ, ಮಕ್ಕಳ ನರಮೇಧ ಕೂಡ ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲದೆ ಬೇರೇನೂ ಅಲ್ಲ. ನಮ್ಮ ಸರಕಾರ ಉಕ್ಕಿನ ಹಸ್ತದಿಂದ ಇಂತಹ ದೌರ್ಜನ್ಯಗಳನ್ನು ಮಟ್ಟ ಹಾಕಿದ್ದರೆ ಇದು ಜಾಗತಿಕ ವಿಷಯವಾಗುತ್ತಿರಲಿಲ್ಲ.

ಹೀಗೆ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಬೇಡವೆಂದು ಹೇಳುತ್ತ ಹೋದರೆ ದಕ್ಷಿಣ ಆಫ್ರಿಕಾದ ವರ್ಣ ಭೇದ ನೀತಿಯನ್ನು ಮತ್ತು ಫೆಲೆಸ್ತೀನ್ ಜನರ ಮೇಲೆ ಇಸ್ರೇಲ್ ನಡೆಸುತ್ತಾ ಬಂದ ಕ್ರೂರ ದೌರ್ಜನ್ಯವನ್ನು ಭಾರತ ಈ ಹಿಂದೆ ಖಂಡಿಸಿರುವುದು ಕೂಡ ತಪ್ಪೆಂದು ಹೇಳಬೇಕಾಗುತ್ತದೆ. ನಿಜ ಭಾರತದ ಬಹುತ್ವ ಜಗತ್ತಿನಲ್ಲೇ ಹೆಸರಾಗಿದೆ. ಸಾವಿರಾರು ಸಮುದಾಯಗಳ ಜನ ಒಟ್ಟಾಗಿ ಬಾಳುತ್ತಿರುವುದು ಹೆಮ್ಮೆಯ ಸಂಗತಿ. ಈ ಹೆಮ್ಮೆ ಸುರಕ್ಷಿತವಾಗಿ ಇರಬೇಕಾದರೆ ಭಾರತದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಗಳು ನಿಲ್ಲಬೇಕು. ಸರಕಾರ ಅಂತಹ ದಾಳಿಗಳಾಗದಂತೆ ನೋಡಿಕೊಳ್ಳಬೇಕು. ಆಗ ಜಾಗತಿಕ ಮಟ್ಟದಲ್ಲಿ ದೇಶದ ಘನತೆ ಮತ್ತು ಗೌರವ ಹೆಚ್ಚಾಗುತ್ತದೆ.

ಭಾರತವನ್ನು ವಿಶ್ವಗುರು ಮಾಡುವುದಾಗಿ ಈಗ ಅಧಿಕಾರದಲ್ಲಿರುವವರು ಹಾಗೂ ಅವರ ಮಾರ್ಗದರ್ಶಕರಾದ ನಾಗಪುರದ ಗುರುಗಳು ಆಗಾಗ ಹೇಳುತ್ತಿರುತ್ತಾರೆ. ಆದರೆ ಭಾರತವೆಂದರೆ ಬರೀ ಕಲ್ಲು, ಮಣ್ಣಲ್ಲ. ಈ ನೆಲದಲ್ಲಿ ಹುಟ್ಟಿ ಬದುಕು ಕಟ್ಟಿಕೊಂಡಿರುವ ಎಲ್ಲ ಸಮುದಾಯಗಳ ಜನರು ಸೇರಿ ಭಾರತವಾಗಿದೆ. ಈ ಮಣ್ಣಿನ ಮಕ್ಕಳು ನೆಮ್ಮದಿಯಿಂದಿದ್ದರೆ ಅದೇ ದೇಶದ ಪ್ರತಿಷ್ಠೆ. ಇಂತಹ ಭಾರತವೇ ಜಗತ್ತಿಗೆ ಮಾದರಿ. ಇಂತಹ ಭಾರತ ನಮ್ಮ ಕನಸಾಗಬೇಕು. ಆಗ ಮಾತ್ರ ಅದಕ್ಕೆ ವಿಶ್ವಗುರುವಿನ ಗೌರವ ಪ್ರಾಪ್ತವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)