varthabharthi


ಸಂಪಾದಕೀಯ

ಮದ್ಯ ಸೇವನೆಗೆ ಭದ್ರತೆ; ಆಹಾರಕ್ಕೆ ಅಭದ್ರತೆ

ವಾರ್ತಾ ಭಾರತಿ : 3 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಅಧಿಕ ಪ್ರಮಾಣದ ಮಾಂಸ ಉತ್ಪಾದನೆ ಹಾಗೂ ಸೇವನೆಯಿಂದ ಆಹಾರದ ಉತ್ಪಾದನೆಯ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಹಲವಾರು ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಉದಾಹರಣೆಗೆ ‘ಅತ್ಯಾಧುನಿಕ ವ್ಯವಸ್ಥೆಯಡಿ ಒಂದು ಕೆ.ಜಿ. ಬೀಫ್ ಉತ್ಪಾದಿಸಲು ಏಳು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದ ಧಾನ್ಯವನ್ನು ಬಳಸ ಬೇಕಾಗುತ್ತದೆ. ಇದು ನಮ್ಮ ಆಹಾರ ವ್ಯವಸ್ಥೆಯ ಮೇಲೆ ಗಂಭೀರ ದುಷ್ಪರಿಣಾಮವನ್ನುಂಟು ಮಾಡಿದೆ’ ಎಂಬ ವಾದಗಳನ್ನು ಕೆಲವರು ಮುಂದಿಡುತ್ತಾರೆ. ಆದರೆ ಮಾಂಸಾಹಾರಕ್ಕಾಗಿಯೇ ಯಾರೂ ಗೋವುಗಳನ್ನು ಸಾಕುವುದಿಲ್ಲ ಎಂಬ ವಾಸ್ತವವನ್ನು ಮರೆಯುತ್ತಾರೆ. ಹೈನೋದ್ಯಮದಲ್ಲಿ ಅನುಪಯುಕ್ತವಾದ ಗೋವುಗಳನ್ನಷ್ಟೇ ಮಾಂಸಾಹಾರಿಗಳು ಬಳಸುತ್ತಾರೆ. ಒಂದು ವೇಳೆ ಅವುಗಳನ್ನು ಮಾಂಸಾಹಾರಿಗಳು ಬಳಸದೇ ಇದ್ದಾಗಷ್ಟೇ, ಆ ದನಗಳಿಗಾಗಿ ಅನಗತ್ಯವಾಗಿ ಹೆಚ್ಚು ಪ್ರಮಾಣದ ಧಾನ್ಯಗಳನ್ನು ಬಳಸಬೇಕಾಗುತ್ತದೆ. ಅದೇನೇ ಇರಲಿ, ಈ ಪರಿಸರ ಕಾಳಜಿ ಕೇವಲ ಗೋವಿಗಷ್ಟೇ ಸೀಮಿತವಾಗಿರುವ ವಿಚಿತ್ರವನ್ನೂ ನಾವು ಗಮನಿಸಬೇಕಾಗಿದೆ. ಹೆಚ್ಚುತ್ತಿರುವ ಮದ್ಯ ಸೇವನೆಯು ಆಹಾರದ ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿರುವ ಬಗ್ಗೆ ಇದೇ ಸಂದರ್ಭದಲ್ಲಿ ಸಮಾಜ ವೌನವಾಗಿದೆ.

ಮದ್ಯ ಸೇವನೆಯು ಅಧಿಕವಾಗುತ್ತಿರುವಂತೆಯೇ, ಹೆಚ್ಚು ಹೆಚ್ಚು ಫಲವತ್ತಾದ ಕೃಷಿ ಜಮೀನುಗಳನ್ನು ಮದ್ಯ ಕೈಗಾರಿಕೆಗೆ ಬೇಕಾದ ವಿವಿಧ ಕಚ್ಚಾವಸ್ತುಗಳನ್ನು ಬೆಳೆಸಲು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ವೈವಿಧ್ಯಮಯ ಆಹಾರ ಬೆಳೆಗಳನ್ನು ಬೆಳೆಯುವವರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮದ್ಯದ ಕೈಗಾರಿಕೆಗೆ ಪೂರೈಕೆ ಮಾಡುತ್ತಾರೆ. ಹೀಗಾಗಿ ಆಹಾರದ ಉತ್ಪಾದನೆಯಿಂದ ಬಹಳಷ್ಟು ಪ್ರಮಾಣದ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಲಾಭದ ವಿಷಯಕ್ಕೆ ಬರುವುದಾದರೆ ಮದ್ಯವು ಸರಕಾರಕ್ಕೆ ಅತ್ಯಧಿಕ ಹಣವನ್ನು ತಂದುಕೊಡುವ ಉದ್ಯಮವಾಗಿದೆ. ಹೀಗಾಗಿ ಮದ್ಯ ಕೈಗಾರಿಕೆಯ ಅಗತ್ಯಗಳನ್ನು ಈಡೇರಿಸಲು ಕೃಷಿ ಭೂಮಿಯನ್ನು ಬಳಸಿಕೊಳ್ಳುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಚೀನಾದಂತಹ ರಾಷ್ಟ್ರಗಳಲ್ಲಿ ಮದ್ಯದ ಸೇವನೆ ಹಾಗೂ ಉತ್ಪಾದನೆಯು ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಗೆ ಬಳಸಲಾಗುತ್ತಿದ್ದ ಗಣನೀಯ ಪ್ರಮಾಣದ ಫಲವತ್ತಾದ ಜಮೀನನ್ನು ಮದ್ಯದ ಕೈಗಾರಿಕೆಗೆ ಬೇಕಾಗುವಂತಹ ಕಚ್ಚಾವಸ್ತುಗಳನ್ನು ಒದಗಿಸುವಂತಹ ಬೆಳೆಗಳ ಉತ್ಪಾದನೆಗೆ ತಿರುಗಿಸಲಾಗುತ್ತಿದೆ. ಕೆಲವು ಪರ್ವತಪ್ರದೇಶಗಳಲ್ಲಿ ಆ್ಯಪಲ್ ಹಾಗೂ ಪ್ಲಮ್ಸ್‌ನಂತಹ ಅತ್ಯಧಿಕ ಪೌಷ್ಟಿಕಾಂಶವಿರುವ ಹಣ್ಣುಹಂಪಲುಗಳನ್ನು ಮದ್ಯದ ಸಂಸ್ಕರಣೆಗಾಗಿ ಮದ್ಯದ ಉದ್ಯಮಗಳು ನೇರವಾಗಿ ಖರೀದಿಸುತ್ತಿರುವ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ. ಅಧಿಕ ಪ್ರಮಾಣದ ಆ್ಯಪಲ್‌ಗಳ ಉತ್ಪಾದನೆಗೆ ಹೆಸರಾಗಿರುವ ಹಿಮಾಚಲದಂತಹ ಪರ್ವತಪ್ರದೇಶಗಳ ಬಡಮಕ್ಕಳಿಗೆ ಸೇವಿಸಲು ಆ್ಯಪಲ್ ಸಿಗುವುದೇ ಅಪರೂಪ. ಆದರೆ ಈ ಆ್ಯಪಲ್‌ಗಳನ್ನು ಅತ್ಯಂತ ದುಬಾರಿಯಾದ ವೈನ್‌ಗಳ ತಯಾರಿಗೆ ಬಳಸಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಕೆಲವೊಮ್ಮೆ ಸರಕಾರಿ ಗೋದಾಮುಗಳಲ್ಲಿ ಗುಣಮಟ್ಟ ಕಳೆದುಕೊಂಡಂತಹ ದವಸಧಾನ್ಯಗಳನ್ನು, ಕೆಲವು ಭ್ರಷ್ಟ ಅಧಿಕಾರಿಗಳು ಮದ್ಯ ಉದ್ಯಮಕ್ಕೆ ಅತ್ಯಂತ ಅಗ್ಗದ ದರದಲ್ಲಿ ಮಾರಾಟ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಅಷ್ಟೇ ಅಲ್ಲ ಮದ್ಯದ ಉದ್ಯಮಕ್ಕೆ ಮಾರುವುದಕ್ಕಾಗಿಯೇ ಅವರು ಗೋದಾಮುಗಳಲ್ಲಿ ಧಾನ್ಯಗಳನ್ನು ಕೊಳೆಯಲು ಬಿಡುತ್ತಾರೆ ಎಂಬ ಆರೋಪಗಳೂ ಬಲವಾಗಿ ಕೇಳಿ ಬರುತ್ತಿವೆ. ಇದರಿಂದಾಗಿ ದೇಶದಲ್ಲಿ ಆಹಾರದ ಕೊರತೆಯೆದುರಿಸುತ್ತಿರುವ ಕೋಟ್ಯಂತರ ಮಂದಿ ಆಹಾರದ ಲಭ್ಯತೆಯಿಂದ ವಂಚಿತರಾಗುತ್ತಾರೆ.

ಹಲವಾರು ಬಡಕುಟುಂಬಗಳಲ್ಲಿ ಮದ್ಯದ ಸೇವನೆಯು ಹೆಚ್ಚುತ್ತಿರುವುದು ಆ ಕುಟುಂಬಗಳ ಆಹಾರದ ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಇಂತಹ ಬಡಕುಟುಂಬಗಳ ಪುರುಷರು ತಮ್ಮ ದುಡಿಮೆಯ ಹಣದ ಹೆಚ್ಚಿನ ಪಾಲನ್ನು ಮದ್ಯ ಸೇವನೆಗಾಗಿ ಖರ್ಚು ಮಾಡುತ್ತಿರುವುದರಿಂದ ಅವರ ಹೆಂಡತಿ, ಮಕ್ಕಳು ಆಹಾರ ಮತ್ತು ಪೌಷ್ಟಿಕತೆಯಿಲ್ಲದೆ ನರಳುತ್ತಿದ್ದಾರೆ. ಹೀಗೆ ಮದ್ಯ ಸೇವನೆಯು ದೇಶದ ಲಕ್ಷಾಂತರ ಬಡಕುಟುಂಬಗಳ ಆಹಾರ ಮತ್ತು ಪೌಷ್ಟಿಕತೆಯ ಮೇಲೆ ಪ್ರತಿಕೂಲವಾದ ಪರಿಣಾಮವನ್ನು ಬೀರಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

ಅನೇಕ ಪ್ರದೇಶಗಳಲ್ಲಿ ಕೃಷಿಗಾಗಿ ಮೀಸಲಿಟ್ಟ ನೀರನ್ನು ಮದ್ಯದ ಉತ್ಪಾದನೆಗಾಗಿ ತಿರುಗಿಸಲಾಗಿದೆ. ಕುಡಿಯಲು ಮತ್ತು ಆಹಾರ ಬೆಳೆಗಳ ನೀರಾವರಿಗೆ ನೀರಿನ ಸಾಕಷ್ಟು ಕೊರತೆಯಿದ್ದರೂ ಮದ್ಯದ ಉದ್ಯಮಗಳಿಗೆ ಮಾತ್ರ ಅಬಾಧಿತವಾಗಿ ನೀರು ಪೂರೈಕೆಯಾಗುತ್ತಿದೆ. ನೀರಿನ ಭಾರೀ ಕೊರತೆಯಿರುವ ಬರಪೀಡಿತ ಪ್ರದೇಶಗಳಿಂದಲೂ ಮದ್ಯದ ಕೈಗಾರಿಕೆಗಳು ನೀರನ್ನು ಬಳಸಿಕೊಳ್ಳುತ್ತಿರುವುದು ಆಘಾತಕಾರಿಯಾಗಿದೆ.ನೀರಿನ ಗಂಭೀರ ಕೊರತೆಯನ್ನು ಎದುರಿಸುತ್ತಿರುವ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಕಬ್ಬಿನ ಕೃಷಿ ಹಾಗೂ ಮದ್ಯದ ಉತ್ಪಾದನೆಗಾಗಿ ಯಥೇಚ್ಛವಾಗಿ ನೀರು ಪೂರೈಕೆ ಮಾಡಲಾಗುತ್ತಿರುವುದರಿಂದ ಅಲ್ಲಿನ ಜಲಾಶಯಗಳು ಬತ್ತಿ ಹೋಗುತ್ತಿವೆ. ಔರಂಗಾಬಾದ್‌ನಲ್ಲಿ ಸುಮಾರು 200 ಮದ್ಯದ ಡಿಸ್ಟಿಲರಿಗಳಿದ್ದು ಅವು ವ್ಯಾಪಕ ಪ್ರಮಾಣದ ನೀರನ್ನು ಬಳಸಿಕೊಳ್ಳುತ್ತಿವೆ ಎಂದು ಇಂಡಿಯಾ ಟುಡೇ ಪತ್ರಿಕೆಯು ಇತ್ತೀಚೆಗೆ ವರದಿ ಮಾಡಿದೆ.ಇತರ ಕೆಲವು ಪ್ರದೇಶಗಳಲ್ಲಿ ವೈನ್ ಉತ್ಪಾದನೆಯಲ್ಲಿ ತ್ವರಿತವಾದ ಹೆಚ್ಚಳವುಂಟಾಗಿರುವುದರಿಂದಾಗಿ ನೀರಿನ ಬರ ತಲೆದೋರತೊಡಗಿದೆ. ವೈನ್‌ಗೆ ಕಚ್ಚಾವಸ್ತುವಾಗಿ ಬಳಸುವ ದ್ರಾಕ್ಷಿಯ ಉತ್ಪಾದನೆಗಾಗಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಆ ಪ್ರದೇಶಗಳು ನೀರಿನ ಬರದ ದವಡೆಗೆ ಸಿಲುಕುವ ದಿನಗಳು ದೂರವಿಲ್ಲ. ಕೇವಲ ಒಂದು ಲೀಟರ್ ವೈನ್ ಉತ್ಪಾದನೆಗಾಗಿ ಸುಮಾರು 960 ಲೀಟರ್ ನೀರು ಬೇಕಾಗುವುದೆಂದು ಪ್ರತಿಷ್ಠಿತ ವಾಣಿಜ್ಯ ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿದೆ.

ಮದ್ಯದ ಕೈಗಾರಿಕೆಗಳಿಂದಾಗಿ ಪಂಜಾಬ್ ಮತ್ತಿತರ ರಾಜ್ಯಗಳ ಹಲವಾರು ಪ್ರದೇಶಗಳ ನದಿಗಳು ಮಾಲಿನ್ಯ ಪೀಡಿತವಾಗಿವೆ. ಡಿಸ್ಟಿಲರಿಗಳು ತ್ಯಾಜ್ಯಗಳನ್ನು ನದಿಗಳಿಗೆ ವಿಸರ್ಜಿಸುತ್ತಿರುವುದರಿಂದ ದುರ್ನಾತವನ್ನು ಹರಡುತ್ತಿವೆ, ಜೊತೆಗೆ ನದಿಗಳ ನೀರನ್ನು ಕುಡಿಯಲು ಮತ್ತು ಕೃಷಿಗೂ ಅಯೋಗ್ಯವನ್ನಾಗಿ ಮಾಡಿವೆ. ಇದರಿಂದಾಗಿ ಒಂದು ಕಾಲದಲ್ಲಿ ಕೃಷಿ ಸಮೃದ್ಧ ಪ್ರದೇಶಗಳು ಈಗ ಪಾಳುಬೀಳತೊಡಗಿವೆ. ಇತ್ತೀಚಿನ ವರ್ಷಗಳಲ್ಲಿ ಮದ್ಯ ಸೇವನೆಯ ಪ್ರಮಾಣದಲ್ಲಿ ಹೆಚ್ಚಳವಾಗಿರುವ ದೇಶಗಳ ಸಾಲಿನಲ್ಲಿ ಭಾರತವು ಅಗ್ರ ಸ್ಥಾನದಲ್ಲಿದೆ. 2005 ಹಾಗೂ 2016ರ ನಡುವೆ ಭಾರತದಲ್ಲಿ ಅಲ್ಕೋಹಾಲ್ ಸೇವನೆಯ ಪ್ರಮಾಣವು ಎರಡು ಪಟ್ಟು ಹೆಚ್ಚಾಗಿದೆ. ಈ ಪ್ರವೃತ್ತಿಯು ಇದೇ ರೀತಿ ಮುಂದುವರಿದಲ್ಲಿ 2005 ಹಾಗೂ 2025ರ ನಡುವಿನ 20 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಮದ್ಯ ಸೇವನೆಯ ಪ್ರಮಾಣವು ಮೂರರಿಂದ 4 ಪಟ್ಟು ಹೆಚ್ಚಾದಂತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ವಿಪರ್ಯಾಸವೆಂದರೆ, ಲಾಕ್‌ಡೌನ್‌ನ ಬಳಿಕ ಎಲ್ಲ ಉದ್ಯಮಗಳು ನಷ್ಟದ ಕಡೆಗೇ ಮುಖಮಾಡಿದ್ದರೂ, ಮದ್ಯ ವ್ಯಾಪಾರಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಜನರು ಆರ್ಥಿಕ ಸಂಕಷ್ಟದಲ್ಲಿರುವಾಗ ಮದ್ಯ ಮಾರಾಟ ಹೆಚ್ಚಿಸಲು ಸರಕಾರ ಅಬಕಾರಿ ಇಲಾಖೆಗೆ ಒತ್ತಡ ಹಾಕುತ್ತಿದೆ. ಈ ವರೆಗೆ ಮದ್ಯದ ದುಶ್ಚಟವು ಜನರ ಆರೋಗ್ಯ ಹಾಗೂ ಸಾಮಾಜಿಕ ಸ್ಥಿತಿಗತಿಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತಿರುವ ಬಗೆಗಷ್ಟೇ ಚರ್ಚಿಸಲಾಗುತ್ತಿತ್ತು. ಇದೀಗ ಆಹಾರ ಹಾಗೂ ಜಲ ಸಂಪನ್ಮೂಲದ ಮೇಲೂ ಮದ್ಯಸೇವನೆಯು ಪ್ರತಿಕೂಲ ಪರಿಣಾಮವನ್ನು ಬೀರುತ್ತಿರುವುದನ್ನು ಸರಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)