varthabharthi


ನಿಮ್ಮ ಅಂಕಣ

ಎರಡು ಪ್ರಸ್ತಾವಗಳು

ವಾರ್ತಾ ಭಾರತಿ : 4 Mar, 2021
ಎಂ. ಪಿ. ನಥಾನೇಲ್ ಸಿಆರ್‌ಪಿಎಫ್‌ನ (ನಿವೃತ್ತ) ಪೊಲೀಸ್ ಮಹಾನಿರ್ದೇಶಕ

ಜನವರಿ 23ರಂದು ಕೋಲ್ಕತಾದಲ್ಲಿ ರೋಡ್ ಶೋ ಒಂದರಲ್ಲಿ ಭಾರತಕ್ಕೆ ಒಂದೇ ರಾಜಧಾನಿ ಯಾಕೆ? ಬದಲಾಗಿ ನಾಲ್ಕು ರಾಜಧಾನಿಗಳಿರಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಾದ ಸುದೀಪ್ ಬಂದೋಪಾಧ್ಯಾಯರಿಗೆ ಸಂಸತ್ತಿನಲ್ಲಿ ಈ ವಿಷಯವನ್ನೆತ್ತುವಂತೆ ಅವರು ಸೂಚಿಸಿದರು. ಸರದಿ ಪ್ರಕಾರ, ನಾಲ್ಕು ರಾಜಧಾನಿಗಳಲ್ಲಿ ಪ್ರತಿಯೊಂದು ರಾಜಧಾನಿಯಲ್ಲಿಯೂ ಸಂಸತ್ ಅಧಿವೇಶನಗಳು ನಡೆಯಬೇಕೆಂಬುದು ಮಮತಾ ಬ್ಯಾನರ್ಜಿ ಅವರ ಅಭಿಪ್ರಾಯ. ಅವರಿಗೆ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಇದೆಯಾದರೂ ತನ್ನ ಪ್ರಸ್ತಾವದ ಸಾಧ್ಯಾಸಾಧ್ಯತೆಗಳ ಬಗ್ಗೆ ಹೆಚ್ಚು ಯೋಚಿಸಿರುವಂತೆ ಕಾಣುವುದಿಲ್ಲ.

ನಾಲ್ಕು ರಾಜಧಾನಿಗಳೆಂದರೆ ಇತರ ಮೂರು ಕಡೆಗಳಲ್ಲಿಯೂ ಸಂಸತ್ ಕಟ್ಟಡಗಳ ನಿರ್ಮಾಣ ಹಾಗೂ ಎಲ್ಲ ಸಂಸದರಿಗೆ ಮತ್ತು ಸಂಸತ್ತಿನ ಎಲ್ಲ ಸಿಬ್ಬಂದಿಗೆ ವಸತಿ ಕಟ್ಟಡಗಳ ನಿರ್ಮಾಣ ಇವೆಲ್ಲ ಬಲು ದುಬಾರಿ. ಅಲ್ಲದೆ ಅಧಿವೇಶನಗಳು ನಡೆಯುವಾಗ ಮಾತ್ರ ಎಲ್ಲರೂ ಆಯಾ ರಾಜಧಾನಿಗಳಿಗೆ ಬಂದು ಉಳಿದುಕೊಳ್ಳುತ್ತಾರೆ. ಪ್ರತಿ ಅಧಿವೇಶನದ ಬಳಿಕ ಈ ಎಲ್ಲಾ ಕಟ್ಟಡಗಳು, ವಸತಿ ಗೃಹಗಳು ತಿಂಗಳುಗಟ್ಟಲೆ ಖಾಲಿ ಬಿದ್ದಿರುತ್ತವೆ. ಅಲ್ಲದೆ ಈ ಎಲ್ಲ ಸಂಸದರು ಮತ್ತು ಅವರ ಸಿಬ್ಬಂದಿ ಇಲ್ಲಿಗೆ ಆಗಾಗ ಬಂದು ಹೋಗುವ ವಿಮಾನ ಪ್ರಯಾಣದ ವೆಚ್ಚ, ಸಂಸದರಿಗೆ ಭದ್ರತೆ ಒದಗಿಸಬೇಕಾದ ಆಯಾ ರಾಜ್ಯ ಪೋಲಿಸರ ಮೇಲೆ ಬೀಳುವ ಹೊರೆ ಇವೆಲ್ಲ ದೊಡ್ಡ ಖರ್ಚಿನ ಬಾಬತ್ತು ಅಲ್ಲದೆ ಬೇರೇನೂ ಅಲ್ಲ.

1911ರ ಡಿಸೆಂಬರ್‌ನಲ್ಲಿ ಐದನೆಯ ಜಾರ್ಜ್ ದೊರೆ ದಿಲ್ಲಿಯನ್ನು ಭಾರತದ ಹೊಸ ರಾಜಧಾನಿಯೆಂದು ಘೋಷಿಸುವವರೆಗೆ ಕಲ್ಕತ್ತಾ (ಈಗ ಕೋಲ್ಕತಾ) ಈ ದೇಶದ ರಾಜಧಾನಿಯಾಗಿತ್ತು. 1927ರಲ್ಲಿ ಪಾರ್ಲಿಮೆಂಟ್ ಹೌಸ್ ನಿರ್ಮಾಣಗೊಂಡಿತು. ಈಗ ರಾಷ್ಟ್ರಪತಿ ಭವನವಾಗಿರುವ ವೈಸ್ ರಾಯ್‌ರವರ ಭವ್ಯ ನಿವಾಸ ಹಾಗೂ ಸರಕಾರಿ ಕಟ್ಟಡಗಳನ್ನು 1931ರಲ್ಲಿ ಉದ್ಘಾಟಿಸಲಾಯಿತು. ಅಂದಿನ ಬೇಸಿಗೆ ರಾಜಧಾನಿ ಶಿಮ್ಲಾಕ್ಕೆ ಸಮೀಪವೆಂಬ ಕಾರಣಕ್ಕಾಗಿಯೇ ದಿಲ್ಲಿಯನ್ನು ಆಯ್ಕೆ ಮಾಡಿಕೊಂಡಿರಬಹುದು. ಆದರೆ ಇಂದು ಒಂದು ರಾಜ್ಯದ ರಾಜಧಾನಿಯನ್ನು ಇನ್ನೊಂದೆಡೆಗೆ ಸ್ಥಳಾಂತರಿಸುವುದೇ ಭಾರೀ ವೆಚ್ಚದ ಕ್ರಮವಾಗುತ್ತದೆ. 1980ರ ದಶಕದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯವರು ರಾಜ್ಯದ ಕೇಂದ್ರ ಭಾಗದಲ್ಲಿದ್ದ ತಿರುಚನಾಪಳ್ಳಿಯನ್ನು ರಾಜ್ಯದ ರಾಜಧಾನಿಯಾಗಿ ಮಾಡುವ ಯೋಚನೆ ಮಾಡಿದ್ದರು. ಆದರೆ ಅದರಿಂದಾಗಿ ರಾಜ್ಯದ ಖಜಾನೆಗೆ ಬೀಳುವ ಭಾರೀ ಹೊರೆಯ ಬಗ್ಗೆ ಸ್ಪಷ್ಟವಾದಾಗ ಆ ಪ್ರಸ್ತಾವವನ್ನು ಕೈಬಿಡಬೇಕಾಯಿತು. ಆದ್ದರಿಂದ ಇತರ ಮೂರು ರಾಜ್ಯಗಳಲ್ಲಿ ರಾಜಧಾನಿಗಳನ್ನು ಹೊಂದುವ ಪ್ರಸ್ತಾವ ನಮ್ಮ ದೇಶಕ್ಕೆ ಖಂಡಿತವಾಗಿಯೂ ಹೊರಲಾಗದ ಹೊರೆಯಾಗಿದೆ.

2021ರ ಜನವರಿಯಲ್ಲಿ ಐದು ದಕ್ಷಿಣ ರಾಜ್ಯಗಳ ಬಾರ್ ಕೌನ್ಸಿಲ್‌ಗಳು ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್‌ನ ಪೀಠವೊಂದು ಸ್ಥಾಪಿಸಬೇಕೆಂದು ಕೇಂದ್ರ ಸರಕಾರವನ್ನು ಕೇಳಿಕೊಂಡವು. ಇದು ಬಹಳ ಸಮಯದಿಂದ ಇರುವ ಬೇಡಿಕೆ. ಇದು ದೇಶದಲ್ಲಿ ನಾಲ್ಕು ರಾಜಧಾನಿಗಳನ್ನು ಸ್ಥಾಪಿಸಬೇಕೆನ್ನುವ ಪ್ರಸ್ತಾವದಂತಲ್ಲ ವಾದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಯಾಕೆಂದರೆ ದಕ್ಷಿಣದ ರಾಜ್ಯಗಳ ಹಾಗೂ ದಿಲ್ಲಿಯ ನಡುವೆ ಬಹಳ ದೀರ್ಘವಾದ ದೂರವಿದೆ. ತಮ್ಮ ಊರಿನಿಂದ ದೂರದ ದಿಲ್ಲಿಗೆ ಹೋಗಿ ವಕೀಲರನ್ನು ಗೊತ್ತು ಮಾಡಿ ಸುಪ್ರೀಂಕೋರ್ಟ್ ನಲ್ಲಿ ತಮ್ಮ ಮೊಕದ್ದಮೆಯನ್ನು ಮುಂದುವರಿಸುವುದು, ಅಲ್ಲಿಯ ವಕೀಲರಿಗೆ ದೊಡ್ಡ ಮೊತ್ತದ ಶುಲ್ಕಗಳನ್ನು ನೀಡುವುದು ಬೆರಳೆಣಿಕೆಯ ಮಂದಿಗಷ್ಟೇ ಸಾಧ್ಯ.

ಸುಪ್ರೀಂಕೋರ್ಟ್‌ನ ಹೊರೆಯನ್ನು ತಗ್ಗಿಸಲು ಪ್ರತಿಯೊಂದು ಕೋರ್ಟ್ ಆಫ್ ಅಪೀಲ್‌ನಲ್ಲಿಯೂ ಹದಿನೈದು ಮಂದಿ ನ್ಯಾಯಾಧೀಶರಿರುವ ನಾಲ್ಕು ಪೀಠಗಳನ್ನು ದೇಶದ ನಾಲ್ಕು ಕಡೆಗಳಲ್ಲಿ ಸ್ಥಾಪಿಸಬಹುದೆಂದು ಕಳೆದ ವರ್ಷ ಆನ್‌ಲೈನ್ ಗೋಷ್ಠಿಯೊಂದರಲ್ಲಿ ಮಾತಾಡುತ್ತಾ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಸೂಚಿಸಿದ್ದರು. ಈ ಪೀಠಗಳನ್ನು ಸ್ಥಾಪಿಸಬೇಕಾದರೆ ಸಂವಿಧಾನಕ್ಕೆ ಒಂದು ತಿದ್ದುಪಡಿ ತರಬೇಕಾಗುತ್ತದೆ. ದಕ್ಷಿಣ ಭಾರತದಲ್ಲಿ ಒಂದು ಪೀಠವನ್ನು ಸ್ಥಾಪಿಸಬೇಕು ಎನ್ನುವುದು ಜನತೆಯ ಬೇಡಿಕೆಯಾಗಿದ್ದರೂ ಕೂಡ ದಕ್ಷಿಣ ಭಾರತದ ಬಾರ್ ಕೌನ್ಸಿಲ್‌ಗಳು ಅಲ್ಲಲ್ಲಿ ಪ್ರತ್ಯೇಕ ಅಪಲೇಟ್ ಪೀಠಗಳನ್ನು ಸ್ಥಾಪಿಸುವ ವಿಷಯಗಳನ್ನು ಕೈಗೆತ್ತಿಕೊಳ್ಳಬಹುದು. ಇಂತಹ ಒಂದು ವ್ಯವಸ್ಥೆಯಿಂದ ಸುಪ್ರೀಂಕೋರ್ಟ್ ಸಾಂವಿಧಾನಿಕ ವಿಷಯಗಳನ್ನು ಕೈಗೆತ್ತಿಕೊಳ್ಳುವುದು ಸಾಧ್ಯವಾಗುತ್ತದೆ. ದೇಶದ ಹಲವಾರು ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೊಕದ್ದಮೆಗಳ ಸಂಖ್ಯೆ ವೇಗವಾಗಿ ಏರುತ್ತಿರುವಾಗ ಈ ಸಮಸ್ಯೆಗೆ ಒಂದು ಪರಿಹಾರ ಕಂಡು ಹಿಡಿಯುವುದು ತೀರಾ ಅವಶ್ಯಕವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸುಲಭವಾಗಿ ನ್ಯಾಯ ಲಭ್ಯವಾಗಬೇಕಾದ್ದು ಅವನ ಹಕ್ಕು. ಈ ಹಕ್ಕನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಕೃಪೆ: TheHindu

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)