varthabharthi


ಅನುಗಾಲ

ಕಾರಂತರ ಕಾದಂಬರಿ: ‘ಕನ್ಯಾಬಲಿ’

ವಾರ್ತಾ ಭಾರತಿ : 4 Mar, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

‘ಕನ್ಯಾಬಲಿ’ ಬರೀ ಬಾಲವಿಧವೆಯ ಕತೆಯಲ್ಲವೆಂಬುದು ಓದಿನಲ್ಲಿ ಗೋಚರಿಸುತ್ತದೆ. ವ್ಯವಸ್ಥೆಗೆ ಮುಖಾಮುಖಿಯಾಗಿಯೇ ಬದುಕಬೇಕಾದವರು ಸಮಾಜಕ್ಕೆ, ಕಾಲಕ್ಕೆ, ಜಗತ್ತಿಗೆ ಕೊಡುವ ಆಶಾದಾಯಕ, ಸ್ವಾಭಿಮಾನದ ಸಂದೇಶ ಇದರಲ್ಲಿದೆ. ಇದು ವೇಶ್ಯಾವೃತ್ತಿಯ ಸಮಸ್ಯೆಯನ್ನು ಕುರಿತ ಕಾದಂಬರಿಯೇ? ಅಲ್ಲ. ಆ ಕಾಲದಲ್ಲಿ ಅಥವಾ ಅದರ ಆನಂತರ ಬಂದ ಅನಕೃ, ತರಾಸು, ತ್ರಿವೇಣಿ, ಎಂ. ಕೆ. ಇಂದಿರಾ ಅವರ ಕೆಲವು ಕಾದಂಬರಿಗಳು ವೇಶ್ಯಾವೃತ್ತಿಯ ಸಮಸ್ಯೆಯನ್ನು ಚಿತ್ರಿಸಿದ್ದವು. ಆದರೆ ಕಾರಂತರು ಅದನ್ನು ಕೇಂದ್ರವಾಗಿಸದೆ ಹೆಣ್ಣಿನ ಶೋಷಣೆಯ, ವ್ಯವಸ್ಥೆಯ ಭಯಾನಕತೆಯ, ಚಿತ್ರವನ್ನು ನಿರುಮ್ಮಳವಾಗಿ ಕಟ್ಟಿಕೊಟ್ಟರು.


ಕನ್ನಡ ವಿಮರ್ಶೆಯನ್ನು ಗಮನಿಸಿದರೆ ಕಾರಂತರ ಬೆಟ್ಟದ ಜೀವ, ಮರಳಿ ಮಣ್ಣಿಗೆ, ಚೋಮನ ದುಡಿ, ಅಳಿದ ಮೇಲೆ, ಸರಸಮ್ಮನ ಸಮಾಧಿ, ಮೂಕಜ್ಜಿಯ ಕನಸುಗಳು, ಮೈಮನಗಳ ಸುಳಿಯಲ್ಲಿ- ಇಂತಹ ಕೆಲವು ಕಾದಂಬರಿಗಳ ಕುರಿತು ಬಂದಷ್ಟು ವಿಮರ್ಶೆಗಳು ಇತರ ಕೃತಿಗಳ ಬಗ್ಗೆ ಬಂದಿಲ್ಲ. ಒಂದೊಂದು ಭಾಗವನ್ನು ಸ್ಪರ್ಶಿಸಿ (ಅಂಧಕ ಗಜ ನ್ಯಾಯದಂತೆ) ಇದು/ಇವರು ಕಾರಂತರು ಎಂದು ಪ್ರದರ್ಶಿಸುವುದು ದರ್ಶನವಾಗಲಾರದು. ಅವರ ಅಖಂಡತೆ ಯಾವೊಂದು ಸಾಹಿತ್ಯ ಕೃತಿಯಿಂದಲೂ ಪ್ರತ್ಯೇಕವಾಗಿ ಪ್ರತಿಫಲನವಾಗಲು ಸಾಧ್ಯವಿಲ್ಲ. ಆದ್ದರಿಂದ ಅವರ ಒಂದೊಂದು ಕೃತಿಗಳ ಕುರಿತೂ ಅಧ್ಯಯನವಾಗಬೇಕು. ಯಾವುದು ಮುಖ್ಯ, ಯಾವುದು ಅಮುಖ್ಯ ಎಂಬುದು ಆನಂತರದ ವಿಚಾರ. ಎಲ್ಲವೂ ಒಂದೇ ತೆರನಾಗಿ ಇರಲಾರದು. ಮುಖದೊಳಗಣ ಹಲ್ಲುಗಳು ಒಂದೇ ಗಾತ್ರವಿರದಿದ್ದಾಗಲೂ ಸ್ವರೂಪ ದರ್ಶನಕ್ಕೆ ಅವುಗಳ ಪ್ರತ್ಯೇಕ ಹಾಗೂ ಒಟ್ಟಂದದ ಮಹತ್ವವನ್ನು ಹೇಳಬೇಕಾಗಿಲ್ಲ. ಕಾಲಾಂತರದಲ್ಲಿ ಕೆಲವು ಕೃತಿಗಳು ಕಳೆದುಹೋಗಲೂ ಸಾಕು. ಮೊದಲು ಕಾರಂತ ದರ್ಶನವಾಗಲಿ.

ವಿಶ್ಲೇಷಣೆಗೆ ಅಷ್ಟೊಂದು ಚರ್ಚಿತವಾಗದ, ಕಾರಂತರ ಆರಂಭದ ಕಾದಂಬರಿಗಳಲ್ಲೊಂದು 1929-30ರಲ್ಲಿ ಪ್ರಕಟವಾದ ‘ಕನ್ಯಾಬಲಿ’. ಅದನ್ನು ಅವರು ತಮ್ಮದೇ ಸಂಪಾದನೆಯ ವಸಂತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದರು. ಆನಂತರ 1932ರಿಂದ ಅನೇಕ ಮುದ್ರಣಗಳನ್ನು ಕಂಡಿದೆ. ಕನ್ಯಾಬಲಿ ಸೂಳೆಯ ಸಂಸಾರ ಎಂಬ ಶೀರ್ಷಿಕೆಯನ್ನು ಹೊಂದಿತ್ತಂತೆ. ಪ್ರಕಾಶಕರು ಆ ಶೀರ್ಷಿಕೆಯನ್ನು ಆಕ್ಷೇಪಿಸಿದ್ದರಿಂದ ಅದು ಬದಲಾಗಿ ಕನ್ಯಾಬಲಿಯಾಯಿತು. ಅವರ ಕೆಲವೇ ಕಿರು ಕಾದಂಬರಿಗಳಲ್ಲಿ ಇದೂ ಒಂದು. ಇದಕ್ಕೆ ಮೊದಲು ಕಾರಂತರು ‘ವಿಚಿತ್ರಕೂಟ’, ಒಂದು ಆಂಗ್ಲ ಕತೆಯನ್ನನುಸರಿಸಿ ಬರೆದ ‘ಭೂತ’ ಎಂಬ ಪತ್ತೇದಾರಿ, ‘ನಿರ್ಭಾಗ್ಯ ಜನ್ಮ’ ಎಂಬ ಈಗ ಪೂರ್ಣ ಪಾಠ ಲಭ್ಯವಿಲ್ಲದ ಸಾಮಾಜಿಕ, ‘ದೇವದೂತರು’ ಎಂಬ ವಿಡಂಬನಾತ್ಮಕ, ಕಾದಂಬರಿಗಳನ್ನು ಬರೆದಿದ್ದರೂ ಗಂಭೀರವಾಗಿ ಮತ್ತು ಮಹತ್ವಪೂರ್ಣವಾಗಿ ಬದುಕನ್ನು ಕಂಡ ಕಾದಂಬರಿಗಳಲ್ಲಿ ‘ಕನ್ಯಾಬಲಿ’ ಮೊದಲನೆಯದು. ಇಲ್ಲಿಂದ ಮುಂದೆ ಕಾರಂತರು ಬರೆದ ಎಲ್ಲ ಕಾದಂಬರಿಗಳೂ ಮಹತ್ವದ್ದೇ ಆಗಿವೆ. ಯಾವುದು ಹೆಚ್ಚು ಯಾವುದು ಕಡಿಮೆ ಎಂಬುದು ವಿಮರ್ಶಕನ, ಓದುಗನ ಆಸಕ್ತಿಯನ್ನು ಹೊಂದಿರುತ್ತದೆಯೇ ವಿನಾ ಯಾವುದೇ ಕೃತಿಯ ಮಹತ್ವವನ್ನು ಅಲ್ಲಗಳೆಯಲಾಗದು. ಆದ್ದರಿಂದ ಒಂದರ್ಥದಲ್ಲಿ ಅವರ ಯಾವುದೇ ಒಂದು ಕಾದಂಬರಿಯನ್ನು ಅವರ ಇತರ ಅಥವಾ ಇತರರ ಕಾದಂಬರಿಗಳೊಂದಿಗೆ ಹೋಲಿಸಲಾಗದು.

ಸ್ಥೂಲವಾಗಿ ಹೇಳುವುದಾದರೆ ಇದು ಮಾಲತಿ ಎಂಬ ಬಾಲವಿಧವೆಯ ಕತೆ. ಅಣ್ಣ ಮಹೇಶನ ಮದುವೆಯ ದಿನ ವಿವಾಹಿತರ ವೈಭೋಗವನ್ನು ಕಂಡು ತೊಳಲುವ ಸನ್ನಿವೇಶದೊಂದಿಗೆ ಕತೆ ಅರಂಭ. ಆಕೆಯ ದುಸ್ಥಿತಿ, ಕೌಟುಂಬಿಕ ವ್ಯವಸ್ಥೆ ಹೇಗಿದೆಯೆಂದರೆ ಆಕೆ ತನ್ನ ಓರಗೆಯ ಎಲ್ಲ ಹೆಣ್ಣುಮಕ್ಕಳಂತೆ ಕುಂಕುಮ ಹಾಕುವಂತಿಲ್ಲ, ಹೂ ಮುಡಿಯುವಂತಿಲ್ಲ, ಜರತಾರಿ ಸೀರೆ ಸುತ್ತುವಂತಿಲ್ಲ. ವೈಧವ್ಯ ಆಕೆಯನ್ನು ದೈಹಿಕ, ಮಾನಸಿಕ, ಬೌದ್ಧಿಕ ಸುಖಗಳಿಂದ ವಂಚಿಸಿದೆ ಮಾತ್ರವಲ್ಲ, ಅನರ್ಹಗೊಳಿಸಿದೆ. ಹೆತ್ತವರೇ ಆಕೆಯನ್ನು ಸೆರೆಯಾಳುಗಳಂತೆ ಕಾಣುತ್ತಾರೆ. ಆದರೆ ಆಕೆ ಒಬ್ಬಂಟಿಯಾಗಿ ಶೃಂಗರಿಸಿಕೊಂಡು ಸುಖದ ಭ್ರಮೆಯಲ್ಲಿರುತ್ತಾಳೆ. ಆಕೆಗೆ ಪ್ರೀತಿಯ ಕಣ್ಣಾಗುವವರು ಆಕೆಯ ಅಣ್ಣ ಮಹೇಶ ಮತ್ತು ಅತ್ತಿಗೆ ತಾರಾ. ಈ ನಡುವೆ ಭ್ರಮಾಧೀನಳಾಗಿ ನೀರಿಗೆ ಬೀಳುತ್ತಿದ್ದ ಆಕೆಯನ್ನು ಪ್ರಫುಲ್ಲನೆಂಬ ಸ್ಥಳೀಯ ಯುವಕನು ರಕ್ಷಿಸುತ್ತಾನೆ. ತನ್ನ ಪತಿಯೆಂಬ ವಿಭ್ರಮೆಗೊಳಗಾಗಿ ಆಕೆ ಅನುಭಾವಿಕವಾಗಿ ಎಂಬಂತೆ ಆತನಲ್ಲಿ ಆಸಕ್ತಳಾಗುತ್ತಾಳೆ. ಆಕೆಗೆ ಆತ ಬದುಕಿನ ಆಸೆ ಹುಟ್ಟಿಸುತ್ತಾನೆ. ಅವರ ಸ್ನೇಹ ಬೆಳೆಯುತ್ತದೆ. ಇದನ್ನು ಆಕೆಯ ತಂದೆ ಮಧುಕರನು ನಿಷ್ಕರುಣೆಯಿಂದ ತಡೆಯುತ್ತಾನೆ. ಅವಮಾನವನ್ನು ತಡೆಯದ ಪ್ರಫುಲ್ಲ ದೂರವಾಗುತ್ತಾನೆ. ಮಾಲತಿಯ ಹೆಣ್ತನದ ಆತ್ಮಾಭಿಮಾನವು ಸೆಟೆದು ನಿಲ್ಲುತ್ತದೆ. ತಾನು ಪ್ರಫುಲ್ಲನೊಂದಿಗೆ ಮದುವೆಯಾಗಲು ನಿರ್ಧರಿಸುತ್ತಾಳೆ. ಆಕೆಯ ತಾಯಿ ಶಾರದೆ ಆಕೆಯನ್ನು ಬೆಂಬಲಿಸದೆ ವಿಧವಾಧರ್ಮವನ್ನು ಉಪದೇಶಿಸುತ್ತಾಳೆ. ತಂದೆ ಆಕೆಯ ಕೇಶಮುಂಡನಕ್ಕೆ ಏರ್ಪಾಡು ಮಾಡುತ್ತಾನೆ. ಆಕೆ ಒಪ್ಪದೆ ಪ್ರತಿಭಟಿಸುತ್ತಾಳೆ. ಈ ಸಂದರ್ಭದಲ್ಲಿ ಕೊನೆಗಾಲದಲ್ಲಿದ್ದ ಆಕೆಯ ತಾಯಿ ಆಕೆ ಪ್ರಫುಲ್ಲನನ್ನು ಮದುವೆಯಾಗುವುದಕ್ಕೆ ಸಮ್ಮತಿಸುತ್ತಾಳೆ. ಅಣ್ಣ ಮತ್ತು ಅತ್ತಿಗೆ ಬೆಂಬಲಿಸಿದರೂ ಪ್ರಫುಲ್ಲನು ಮಾತ್ರ ಸಮಾಜಕ್ಕೆ ಅಂಜಿ ಆಕೆಯನ್ನು ಮದುವೆಯಾಗಲು ಹಿಂಜರಿದು ಆಕೆಯ ಉತ್ಸಾಹಕ್ಕೆ ತಣ್ಣೀರೆರಚುತ್ತಾನೆ. ಆಕೆ ಅತಂತ್ರಳಾಗುತ್ತಾಳೆ. ಬುದ್ಧನಂತೆ ಮನೆ ತೊರೆದು ಹೋಗುತ್ತಾಳೆ. ಹಸಿವಿನಿಂದ ಕಂಗೆಟ್ಟ ಆಕೆ ತನ್ನ ದೇಹವನ್ನು ಅನಿವಾರ್ಯವಾಗಿ ಕಾಮುಕ ಸಿರಿವಂತನೊಬ್ಬನಿಗೆ ಒಪ್ಪಿಸುತ್ತಾಳೆ. ಇಲ್ಲಿಂದ ಆಕೆಯ ವೇಶ್ಯಾವೃತ್ತಿ ಆರಂಭವಾಗುತ್ತದೆ. ಆಕೆಯ ಸ್ಥಿತಿ ಅರಿತ ಪ್ರಫುಲ್ಲನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮುಂದೆ ಆಕೆಯು ಬೇರೆಬೇರೆ ಕಡೆ ವೇಶ್ಯಾವೃತ್ತಿಯಲ್ಲಿ ಮುಂದುವರಿದು ವೀರೇಶನೆಂಬ ಅವಿವಾಹಿತ ನವನಾಯಕನನ್ನು ಸೇರುತ್ತಾಳೆ. ವೀರೇಶನಿಗೆ ಮದುವೆಯಾಗುವ ಅನಿವಾರ್ಯತೆ ಬಂದಾಗ ಅದನ್ನೂ ಬೆಂಬಲಿಸುತ್ತಾಳೆ. ಆದರೆ ಆತನಿಂದ ಬದುಕು ಮತ್ತು ರಮೇಶ ಎಂಬ ಮಗುವನ್ನು ಪಡೆದರೂ ಸಾರ್ವಜನಿಕವಾಗಿ ಆತ ತನ್ನನ್ನು ಒಪ್ಪಿಕೊಳ್ಳುವುದಿಲ್ಲವೆಂದು ಗೊತ್ತಾದಾಗ ಆತನನ್ನು ತೊರೆಯುತ್ತಾಳೆ. ಮತ್ತೆ ಭಿಕಾರಿಯಾಗಿ ಹೊಟ್ಟೆಪಾಡಿಗಾಗಿ ಕಸಬಿಗಿಳಿದಾಗ ಮಧುಕರನೇ ಆಕೆಯಲ್ಲಿಗೆ ಬಂದು ಗುರುತಾಗದೆ ಆಕೆಯನ್ನು ಬಯಸಿದಾಗ ಆಕೆ ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

 ‘ಕನ್ಯಾಬಲಿ’ ಬರೀ ಬಾಲವಿಧವೆಯ ಕತೆಯಲ್ಲವೆಂಬುದು ಓದಿನಲ್ಲಿ ಗೋಚರಿಸುತ್ತದೆ. ವ್ಯವಸ್ಥೆಗೆ ಮುಖಾಮುಖಿಯಾಗಿಯೇ ಬದುಕಬೇಕಾದವರು ಸಮಾಜಕ್ಕೆ, ಕಾಲಕ್ಕೆ, ಜಗತ್ತಿಗೆ ಕೊಡುವ ಆಶಾದಾಯಕ, ಸ್ವಾಭಿಮಾನದ ಸಂದೇಶ ಇದರಲ್ಲಿದೆ. ಇದು ವೇಶ್ಯಾವೃತ್ತಿಯ ಸಮಸ್ಯೆಯನ್ನು ಕುರಿತ ಕಾದಂಬರಿಯೇ? ಅಲ್ಲ. ಆ ಕಾಲದಲ್ಲಿ ಅಥವಾ ಅದರ ಆನಂತರ ಬಂದ ಅನಕೃ, ತರಾಸು, ತ್ರಿವೇಣಿ, ಎಂ. ಕೆ. ಇಂದಿರಾ ಅವರ ಕೆಲವು ಕಾದಂಬರಿಗಳು ವೇಶ್ಯಾವೃತ್ತಿಯ ಸಮಸ್ಯೆಯನ್ನು ಚಿತ್ರಿಸಿದ್ದವು. ಆದರೆ ಕಾರಂತರು ಅದನ್ನು ಕೇಂದ್ರವಾಗಿಸದೆ ಹೆಣ್ಣಿನ ಶೋಷಣೆಯ, ವ್ಯವಸ್ಥೆಯ ಭಯಾನಕತೆಯ ಚಿತ್ರವನ್ನು ನಿರುಮ್ಮಳವಾಗಿ ಕಟ್ಟಿಕೊಟ್ಟರು. ರತಿಲಾಲಸೆಯಿಂದ ಮಾಲತಿ ಸೂಳೆಯಾಗುವುದಲ್ಲ. ಹಸಿವು, ಬಡತನ, ಅಭಿಮಾನದ ಬದುಕಿನ ಹಪಹಪಿಕೆ ಅವಳನ್ನು ಸೂಳೆಯಾಗಿಸುತ್ತದೆ. ಇಲ್ಲಿ ಕೃತಿಯು ಪ್ರಶ್ನಿಸುವುದು ವ್ಯವಸ್ಥೆಯ ಕೃತಕ ಆಡಂಬರಗಳನ್ನು; ಕ್ರೌರ್ಯಗಳನ್ನು. ವೇಶ್ಯಾವೃತ್ತಿ ಅನಿವಾರ್ಯವಾಗುವುದು ಕಾಮುಕತೆಯಿಂದಲ್ಲ; ಬಯಕೆ ಬಿನ್ನಾಣಗಳಿಂದಲ್ಲ; ಬದಲಿಗೆ ಹೊಟ್ಟೆಪಾಡಿನ ತುರ್ತಿನಿಂದ. ಆಕೆ ಪ್ರಫುಲ್ಲನನ್ನು ಧಿಕ್ಕರಿಸಿದ ಕಾರಣವೇ ವೀರೇಶನನ್ನು ಧಿಕ್ಕರಿಸುವುದಕ್ಕೂ ಹೇತು. ಬದುಕೆಂದರೆ ಜೀವದಲ್ಲಿರುವುದು ಮತ್ತು ಜೀವನ ನಡೆಸುವುದಷ್ಟೇ ಅಲ್ಲ, ಅದನ್ನು ಮೀರಿದ ಸಂವೇದನೆಗಳ ಹಂತವೆಂಬುದನ್ನು ಇಲ್ಲಿನ ಕತೆ ಬಿಂಬಿಸುತ್ತದೆ.

ಫ್ರೆಂಚ್ ಕಾದಂಬರಿ ‘ಲೇ ಮಿಸರೇಬಲ್ಸ್’ನಲ್ಲಿ ಹಸಿವೆ ತಾಳಲಾಗದೆ ಬ್ರೆಡ್ಡನ್ನು ಕದ್ದು ಜೈಲು ಸೇರುವ ದಾರುಣ ಚಿತ್ರವಿದೆ. ಕನ್ಯಾಬಲಿಯ ಚಿತ್ರ ಇದಕ್ಕಿಂತಲೂ ತೀವ್ರತರದ್ದು. ಆದರೆ ಹೊಟ್ಟೆಯು ಕೇಳುವುದೇ? ಅದಕ್ಕದರ ಕಪ್ಪವು ಸಲ್ಲಲೇ ಬೇಕು. ಹೆಣ್ಣಾದವಳು ಹಸಿವೆ ತಾಳಲಾರದೆ ದೇಹವನ್ನು ಒತ್ತೆಯಿಟ್ಟರೂ ಅದು ನೀಡುವ ಸಂದೇಶವು ಇತ್ಯಾತ್ಮಕವಾದದ್ದು; ಸಮಾಜದ ಹೆಣ್ಣುಗಳಿಗೆ ಧೈರ್ಯತುಂಬುವಂತಹದ್ದು. ಮಾಲತಿಯ ದೃಷ್ಟಿಕೋನ ಹೀಗಿದೆ: ‘‘ಪ್ರಫುಲ್ಲನಂತಹ ಭೀರುಗಳು! ಪ್ರೇಮವಿದೆ, ಒಡನಾಟ ಬೇಕೆಂಬ ಆಸೆಯಿದೆ- ಆದರೆ ಸಮಾಜದ ಮುಂದೆ ಬಹಿರಂಗವಾಗಿ ವರ್ತಿಸುವ ಜೀವವಿಲ್ಲ. ಸತ್ಯವೆಂದು ತೋಚಿದಂತೆ ವರ್ತಿಸುವ ಎದೆಯಿಲ್ಲ. ಇಂತಹವರಿಗಾಗಿ ಬಾಳ್ವೆ ಹಿಡಿಯುವುದು ತನ್ನ ಕರ್ತವ್ಯವೆಂದು ಅವಳು ತಿಳಿಯಳು.’’ ‘‘ಇಡೀ ಹಿಂದೂ ಸಮಾಜದ ಮೇಲೆ ಅವಳು ತನ್ನ ಸಿಟ್ಟನ್ನು ಕಾರುತ್ತಿರುವಳು.’’ ‘‘ಮಹೇಶನು ಅವಳ ಸಲುವಾಗಿ ಬೇಕಷ್ಟು ಕಣ್ಣೀರನ್ನು ಸುರಿಯಬಲ್ಲನು; ಆದರೆ ಅವಳೊಡನೆ ಎದೆಗೊಟ್ಟು ನಿಲ್ಲುವ ಸಾಹಸವಿಲ್ಲ, ಒಮ್ಮೆ ಅವನು ನಿಂತರೂ ಮದುವಣಿಗನು ನಿಲ್ಲಬೇಕಲ್ಲ!’’ ‘‘ಈಗವಳು ಬದುಕಿರುವುದಾದರೆ ಅದು ಒಂದೇ ಆಸೆಗೆ- ತನ್ನನ್ನು ಕಂಡಾದರೂ ಹಿರಿಯರು ತಮ್ಮ ಬಾಲ ವಿಧವಾ ಕನ್ಯೆಯರ ಮೇಲೆ ಕನಿಕರ ತೋರಲಿ-ಎಂಬುದರ ಸಲುವಾಗಿ.’’ ರಾಮಾಯಣದ ಸೀತಾವಿಯೋಗದ ಭಾಗವನ್ನು ಆಕೆ ಓದುವ ಸಂದರ್ಭದಲ್ಲಿ: ‘ಸೀತಾ ವನವಾಸವನ್ನು ಅವಳು ಓದುತ್ತಿರುವಳು. ಅರ್ಧವನ್ನು ಸಹ ಅವಳಿಗೆ ಓದುವುದಕ್ಕಾಗಲಿಲ್ಲ. ‘‘ಶ್ರೀರಾಮಚಂದ್ರನು ಇಂತಹ ಮೂರ್ಖನಾದರೆ ಅವನ ಹೆಸರನ್ನು ಸಹ ನಾನು ಎತ್ತುವಂತಿಲ್ಲ’’ ಎಂದು ಆ ಪುಸ್ತಕವನ್ನೆಸೆದುಬಿಟ್ಟಳು.

ಸೀತೆಗಾಗಿ, ದೀರ್ಘಕಾಲ ದಣಿದು, ಯುದ್ಧ ಮಾಡಿ, ಅವಳು ಪವಿತ್ರಳೆಂದು ತಿಳಿದ ಬಳಿಕವೂ ಅಗಸನೊಬ್ಬನ ಮಾತಿಗಾಗಿ ಅವಳನ್ನು ಪರಿತ್ಯಾಗ ಮಾಡುವುದೆಂದರೆ...? ಸೀತೆಯು ಅವನ ಪಾಲಿಗೆ ದಾಸಿಗಿಂತಲೂ ಕಡಿಮೆಯಾದಳು. ಕಳ್ಳನಿಗೂ ನ್ಯಾಯ ಸಿಗುತ್ತಿದ್ದ ಆ ಕಾಲದಲ್ಲಿ, ಮದುವೆಯಾದ ಹೆಂಡತಿ ಸೀತಾದೇವಿಯನ್ನು ನ್ಯಾಯಪಕ್ಷಪಾತಿ ರಾಮಚಂದ್ರನು ಕಾಡಿಗೆ ಕಳುಹಿಸುವುದೆಂದರೆ..? ಹೀಗೆಲ್ಲಾ ಯೋಚನೆಗಳು ಅವಳಿಗೆ ಬಂದುವು. ಅಷ್ಟಕ್ಕೆ ತಾರೆಯು ಅಲ್ಲಿಗೆ ಬಂದಳು. ಬಂದವಳೊಡನೆ ‘‘ತಾರಾ, ಈ ರಾಮನೆಂಥಾ ಮೂರ್ಖನೇ? ಅಗಸನ ಮಾತನ್ನು ಕೇಳಿ ಹೆಂಡತಿಯನ್ನು ಮನೆಯಿಂದ ಹೊರಕ್ಕೆ ಅಟ್ಟಿದನಂತೆ, ರಾಮಚಂದ್ರನೇ ವನವಾಸ ಕಾಲದಲ್ಲಿ ಶೂರ್ಪನಖಿಯೊಂದಿಗೆ ಅನ್ಯಥಃ ವರ್ತಿಸಿದನೆಂದು ಇನ್ನೊಬ್ಬ ಅಗಸನು ದೂರು ಕೊಟ್ಟಿದ್ದರೆ ಸೀತೆಯೇನು ಮಾಡಬೇಕಿತ್ತು?’’ ಎಂದಳು.’ ಸಾಮಾಜಿಕ ಸಮಾನತೆಗೆ ಕಾರಂತರು ನೀಡುವ ನಿದರ್ಶನ ಇದು: ‘ನೀರನ್ನು ಕೊಡುವಾಗ ತಾನು ಶೂದ್ರನೆಂಬ ಕಲ್ಪನೆಯು ಅವನಿಗೂ ಬರಲಿಲ್ಲ. ತಾನು ಬ್ರಾಹ್ಮಣಿ ಎಂಬ ತಿಳಿವು ಇವಳಿಗೂ ಆಗಲಿಲ್ಲ.’ ಮಾಲತಿಯ ಕುರಿತು ಬರುವ ದೃಷ್ಟಿ ಹೀಗಿದೆ: ‘ಅವಳ ಮೈಯ ಪಾವಿತ್ರ್ಯವು ಧ್ವಂಸವಾಗಿದೆ. ಮನದ ಪಾವಿತ್ರ್ಯವಷ್ಟೆ ಉಳಿದಿದೆ.’ ‘ಅವಳೇ ಹೇಳುವಂತೆ ಶ್ವಾನದ ಬಾಳ್ವೆಯನ್ನಾದರೂ ಬಾಳುವೆ; ದಾನದ ಬಾಳ್ವೆ ಬೇಡ.’

ಆಕೆಯ ದಿಟ್ಟ ಅಭಿಪ್ರಾಯವನ್ನು ತಿರಸ್ಕರಿಸಲಾಗದೆ ಮಹೇಶ ಅಗಲುವ ಸನ್ನಿವೇಶ: ‘ಈಜು ಬಾರದಿದ್ದವನು ಮುಣುಗುತ್ತಿರುವ ತನ್ನ ಗೆಳೆಯನನ್ನು ದಂಡೆಯ ಮೇಲಿಂದಲೇ ನೋಡುವಂತೆ,..’ ಕಾರಂತರಿಗೆ ಕಥನಶೈಲಿ ಮುಖ್ಯವಲ್ಲ. ಆ ಕಾಲದಲ್ಲಿ ಸಹಜವಾಗಿದ್ದ ಬಂಗಾಳಿ ಕತೆ-ಕಾದಂಬರಿಗಳ ಪ್ರಭಾವ ಅವರ ಮೇಲಿದ್ದರೆ ಅಚ್ಚರಿಯಿಲ್ಲ. ಉದಾಹರಣೆಗೆ ಪಾತ್ರಗಳ ಹೆಸರು (ಮಾಲತಿ, ಮಧುಕರ, ಪ್ರಫುಲ್ಲ, ಶರದಿನಿ) ಬಂಗಾಳಿ ಕಾದಂಬರಿಗಳನ್ನು ಹೋಲುತ್ತದೆ. ನಿರೂಪಣಾ ಶೈಲಿಯು ಆಗಿನ ಎಲ್ಲ (ಮುಖ್ಯವಾಗಿ ಗಳಗನಾಥ, ವೆಂಕಟಾಚಾರ್ಯ, ಗುಲ್ವಾಡಿ) ಕನ್ನಡ ಕಾದಂಬರಿಕಾರರಂತೆೆಯೇ ಇದೆ: ‘ನಾವೀಗ ಮಾಲತಿಯನ್ನೆಲ್ಲಿ ಬಿಟ್ಟೆವು?’ ‘ಅದಾವ ಪುಣ್ಯಕ್ಷೇತ್ರಕ್ಕೆ ಬಂದು ಸೇರುವಳೋ ನಿರೀಕ್ಷಿಸುವ.’ ‘ಮದುವೆಗೆ ಮಹೇಶನೂ ಬಂದಿದ್ದನೆಂಬುದು ವಾಚಕರಿಗೆ ಇಷ್ಟರಲ್ಲಿಯೇ ತಿಳಿದಿರಬಹುದು.’ ‘ಇನ್ನಾದರೂ ಮಾಲತಿಯ ಪಾಪವು ತೊಳೆಯಿತೋ ಎಂದು ಜನರು ಕೇಳಬಹುದು.’ (ಇಲ್ಲಿ ತೊಳೆಯಿತೋ ಎಂಬ ಪದದ ಬಳಕೆ ಉಲ್ಲೇಖಾರ್ಹ. ಸಾಮಾನ್ಯರಾಗಿರುತ್ತಿದ್ದರೆ ‘ಕಳೆಯಿತೋ’ ಎಂದು ಬಳಸುತ್ತಿದ್ದರು. ಕಾರಂತರಿಗೆ ಈ ಸೂಕ್ಷ್ಮವೂ ಮುಖ್ಯವೇ.)

ಕಾದಂಬರಿ ಆಗ ಲೋಕಪ್ರಿಯ ಮಾಧ್ಯಮವಾಗಿತ್ತು. ಕಾರಂತರ ವಯಸ್ಸು ಆಗಿನ್ನೂ 30 ವರ್ಷಗಳನ್ನೂ ತಲುಪಿರಲಿಲ್ಲ. ಆಗಲೇ ಅವರ ಕೃತಿಗಳು ಲೋಕಪ್ರಿಯವಾಗಿದ್ದವು. ಅವರದ್ದು ವಿಮರ್ಶೆಯನ್ನನುಸರಿಸಿ ಬರೆದಂತಹ ಕೃತಿಯಲ್ಲ. ಅವರ ಕೈಯಲ್ಲೊಂದು ಕತೆಯಿದ್ದರೆ ಅದನ್ನವರು ನೇರ ಹೇಳಬಲ್ಲರು. ಅವರದ್ದು ಕುತೂಹಲಕರವಲ್ಲದ ಕಥನ ವಿಸ್ತಾರ. ಅವರು ಯಾವುದನ್ನೂ ಅತಿರಂಜಿತಗೊಳಿಸುತ್ತಿರಲಿಲ್ಲ. ಜನರು ಯಾವ ಬೌದ್ಧಿಕ ಸೋಗೂ ಇಲ್ಲದೆ ಅವರನ್ನೋದುತ್ತಿದ್ದರು. ಹಾಗೆ ನೋಡಿದರೆ ಇತ್ತೀಚೆಗಿನ ದಶಕಗಳಲ್ಲಿ ವಿಮರ್ಶಕರು ಮತ್ತು ಪಂಡಿತರೇ ಅವರನ್ನು ಓದುಗರಿಂದ ದೂರ ಮಾಡಿರಬಹುದು ಅನ್ನಿಸುತ್ತದೆ. ವಿಮರ್ಶೆ ಕೆಲವೊಮ್ಮೆ ಎಳನೀರನ್ನು ‘ಸ್ಟ್ರಾ’ ಮೂಲಕ ಕುಡಿಯುವ ವಿಧಾನವನ್ನು ಹೇಳುತ್ತದೆ.

ಕಾರಂತರು ಎಲ್ಲೂ ತಾನು ಹೆಣ್ಣಿನ ಆತ್ಮಾಭಿಮಾನದ ಕುರಿತು ಬರೆದಿದ್ದೇನೆಂದು ಹೇಳುವುದಿಲ್ಲ. ಕೃತಿಯೇ ಅದನ್ನು ಹೇಳಬೇಕು. ಈಚೆಗಿನ ಕೃತಿಗಳಲ್ಲಿ ಇಂತಹ ಘೋಷಣೆಗಳಿರುವುದನ್ನು ಕಾಣಬಹುದು. ಒಂದೆರಡು ಸದ್ಯದ ಉದಾಹರಣೆಗಳೆಂದರೆ: ಶ್ರೀಧರ ಬಳಗಾರರ ‘ಮೃಗಶಿರ’, ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’. ಕಾರಂತರು ನೇರ ಲಿಫ್ಟಿನಲ್ಲಿ ಏರಿ ಮೇರುಸಾಹಿತಿಯಾದವರಲ್ಲ. ಅವರು ಒಂದೊಂದೇ ಮೆಟ್ಟಲುಗಳನ್ನೇರಿ ನಾನೇರುವೆತ್ತರಕೆ ನೀನೇರಬಲ್ಲೆಯಾ ಎಂದು ಧೀಮಂತ ವ್ಯಕ್ತಿತ್ವವನ್ನು ಪ್ರದರ್ಶಿಸಿದವರು. ಆದ್ದರಿಂದ ಈ ಆರೋಹಣದ ಮೊದಲ ಕೆಲವು ಮೆಟ್ಟಲುಗಳಲ್ಲೊಂದಾದ ‘ಕನ್ಯಾಬಲಿ’ ಚಿಕ್ಕ ಗಾತ್ರದಲ್ಲೂ ಮಹತ್ವದ ಕೃತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)