varthabharthi


ಸಂಪಾದಕೀಯ

ಚುನಾವಣಾ ನೀತಿ ಸಂಹಿತೆಯ ಅಣಕ!

ವಾರ್ತಾ ಭಾರತಿ : 4 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣವೊಂದರಲ್ಲಿ ಚುನಾವಣಾ ಆಯೋಗ ತಕ್ಷಣ ಸ್ಪಂದಿಸಿದ ಅಪರೂಪದ ಮಾಹಿತಿಯೊಂದು ಮಾಧ್ಯಮಗಳಿಗೆ ದೊರಕಿದೆ. ಬುಧವಾರ ತೃಣಮೂಲ ಕಾಂಗ್ರೆಸ್ ನಿಯೋಗವೊಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿ, ‘ವಿವಿಧ ಕೇಂದ್ರ ಯೋಜನೆಗಳ ಬಗ್ಗೆ ಜನರಿಗೆ ವಿವರ ತಿಳಿಸುವ ಹೋರ್ಡಿಂಗ್‌ಗಳಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಛಾಪಿಸುವುದನ್ನು ತಡೆಯಬೇಕು. ಕೋವಿಡ್ ವ್ಯಾಕ್ಸಿನ್ ಪ್ರಮಾಣ ಪತ್ರಗಳಲ್ಲಿ ಪ್ರಧಾನಿಮೋದಿಯವರ ಭಾವಚಿತ್ರಗಳನ್ನು ಬಳಸುವುದು ಚುನಾವಣಾ ಆಯೋಗದ ನೀತಿಸಂಹಿತೆಗಳನ್ನು ಉಲ್ಲಂಘಿಸುತ್ತದೆ. ಇವುಗಳನ್ನೂ ತಡೆಯಬೇಕು’ ಎಂದು ಒತ್ತಾಯಿಸಿತ್ತು.

ಈ ಮನವಿಗೆ ಆಯೋಗ ಅದೆಷ್ಟು ವೇಗವಾಗಿ ಸ್ಪಂದಿಸಿತು ಎಂದರೆ, ಮರುದಿನವೇ ಎಲ್ಲಾ ಪೆಟ್ರೋಲ್ ಪಂಪ್ ವಿತರಕರು ಮತ್ತು ಏಜೆನ್ಸಿಗಳಿಗೆ ಚುನಾವಣಾ ಆಯೋಗ ನೋಟಿಸೊಂದನ್ನು ನೀಡಿತು. ‘‘ನರೇಂದ್ರ ಮೋದಿಯವರ ಭಾವಚಿತ್ರಹೊಂದಿರುವ ಕೇಂದ್ರ ಸರಕಾರದ ಯೋಜನೆಗಳ ಜಾಹೀರಾತುಗಳನ್ನು 72 ಗಂಟೆಗಳ ಒಳಗಾಗಿ ಆವರಣದಿಂದ ತೆರವುಗೊಳಿಸಬೇಕು’’ ಎಂಬ ಆದೇಶ ಆ ನೋಟಿಸ್‌ನಲ್ಲಿತ್ತು. ಆದರೆ ಇಂತಹ ಆದೇಶಗಳು ಕೋವ್ಯಾಕ್ಸಿನ್, ಜನೌಷಧಿ ಕೇಂದ್ರಗಳಿಗೆ ಹೋಗಿರುವ ಕುರಿತಂತೆ ಯಾವುದೇ ಮಾಹಿತಿಯಲ್ಲ. ಬರೇ ಪೆಟ್ರೋಲ್ ಪಂಪ್ ವಿತರಕರಿಗೆ ಮತ್ತು ಏಜೆನ್ಸಿಗಳಿಗಷ್ಟೇ ಚುನಾವಣಾ ಆಯೋಗ ತುರ್ತಾಗಿ ಆದೇಶವನ್ನು ಯಾಕೆ ನೀಡಿತು? ಎನ್ನುವ ಪ್ರಶ್ನೆ ಇದೀಗ ಚರ್ಚೆಯಲ್ಲಿದೆ.

ಆದರೆ ತಮ್ಮ ವಾಹನಗಳಿಗೆ ದುಬಾರಿ ದರ ತೆತ್ತು ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಉತ್ತರ ಸ್ಪಷ್ಟವಿದೆ. ಹಲವು ವರ್ಷಗಳಿಂದ ದೇಶಾದ್ಯಂತ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಪ್ರಧಾನಿ ಮೋದಿಯವರ ಬೃಹತ್ ಭಾವಚಿತ್ರವನ್ನು ನೇತಾಡಿಸಲಾಗಿದೆ. ಯಾವ ಕಾರಣಕ್ಕಾಗಿ ಆ ಭಾವಚಿತ್ರವನ್ನು ನೇತಾಡಿಸಲಾಗಿದೆ ಎನ್ನುವುದರ ಕುರಿತಂತೆ ಯಾರಿಗೂ ಸ್ಪಷ್ಟವಿದ್ದಿರಲಿಲ್ಲ. ಆದರೆ ಇತ್ತೀಚೆಗೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಆ ಭಾವಚಿತ್ರ, ಪ್ರಧಾನಿ ಮೋದಿಯವರನ್ನು ಅಣಕಿಸತೊಡಗಿತು. ಈಗಾಗಲೇ ಘೋಷಿಸಿರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪೆಟ್ರೋಲ್ ಬೆಲೆಯೇರಿಕೆ ನಿರ್ಣಾಯಕವಾಗಲಿದೆ. ಕೇಂದ್ರ ಸರಕಾರದ ಹಸ್ತಕ್ಷೇಪದಿಂದಲೇ ಇಂದು ಪೆಟ್ರೋಲ್‌ಗಾಗಿ ಜನರು ಹೆಚ್ಚುವರಿ ಬೆಲೆಯನ್ನು ತೆರಬೇಕಾಗಿದೆ.

ಈ ಹಿಂದೆ, ಅಂತರ್‌ರಾಷ್ಟ್ರೀಯ ಬೆಲೆಯ ಏರಿಳಿತಕ್ಕೆ ಅನುಗುಣವಾಗಿ ಪೆಟ್ರೋಲ್ ಬೆಲೆಗಳಲ್ಲಿ ಏರಿಳಿತವಾಗುತ್ತಿತ್ತು. ಆದರೆ ಕಳೆದ ವರ್ಷ ಅಂತರ್‌ರಾಷ್ಟ್ರೀಯ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾದಾಗ, ಕೇಂದ್ರ ಸರಕಾರ ಏಕಾಏಕಿ ಮಧ್ಯ ಪ್ರವೇಶಿಸಿ ಅಬಕಾರಿ ಸುಂಕವನ್ನು ವಿಧಿಸಿತು. ಆ ಬಳಿಕ ನಿಧಾನಕ್ಕೆ ಅಂತರ್‌ರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಾದರೂ, ಈ ಸುಂಕವನ್ನು ಹಿಂದೆಗೆಯಲು ಸರಕಾರ ಮನ ಮಾಡುತ್ತಿಲ್ಲ. ಪೆಟ್ರೋಲ್ ಬೆಲೆ ಏರಿಕೆ, ದೇಶದಲ್ಲಿ ಇತರೆಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ. ಇಂತಹ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಪೆಟ್ರೋಲ್ ಪಂಪ್‌ನ ಆವರಣದಲ್ಲಿರುವ ಹೋರ್ಡಿಂಗ್‌ನಲ್ಲಿ ಕೈ ಮುಗಿದು ನಗುತ್ತಾ ನಿಂತಿರುವುದು ಮತದಾರರನ್ನು ವ್ಯಂಗ್ಯ ಮಾಡುವಂತಿದೆ. ಇದೀಗ ಆ ಭಾವಚಿತ್ರಕ್ಕೆ ಗ್ರಾಹಕರು ಪ್ರತಿಯಾಗಿ ಕೈ ಮುಗಿದು, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಪ್ರಧಾನಿಯ ಮುಖ ಉಳಿಸುವುದಕ್ಕಾಗಿಯೇ ಚುನಾವಣಾ ಆಯೋಗ ಆತುರಾತುರದಲ್ಲಿ, ಈ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಲು ಆದೇಶ ನೀಡಿದಂತಿದೆ.

ಒಂದು ವೇಳೆ, ಚುನಾವಣಾ ಆಯೋಗಕ್ಕೆ ನಿಜಕ್ಕೂ ನೀತಿ ಸಂಹಿತೆಯ ಮೇಲೆ ಕಾಳಜಿಯಿದೆ ಎಂದಾಗಿದ್ದರೆ, ಪೆಟ್ರೋಲ್ ಪಂಪ್‌ಗಳಲ್ಲಿ ಮಾತ್ರವಲ್ಲ, ಚುನಾವಣೆ ನಡೆಯುವ ರಾಜ್ಯಗಳ ಗಲ್ಲಿ ಗಲ್ಲಿಗಳಲ್ಲಿರುವ ಮೋದಿಯ ಭಾವಚಿತ್ರಗಳನ್ನು ಕಿತ್ತು ಹಾಕಲು ಆದೇಶ ನೀಡಬೇಕಾಗಿತ್ತು. ಇಷ್ಟಕ್ಕೂ ಪ್ರಧಾನಿಯಾಗಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಮೋದಿಯ ಭಾವಚಿತ್ರವನ್ನು ಹಾಕಲಾಗಿದೆ. ಈ ಯೋಜನೆಗಳಲ್ಲಿ ಸರಕಾರದ ಪಾತ್ರ ಏನೇನೂ ಇಲ್ಲ. ಹಲವು ಯೋಜನೆಗಳು ತನ್ನ ಗುರಿಯನ್ನು ಸಾಧಿಸಲು ವಿಫಲವಾಗಿವೆ. ಹೀಗಿದ್ದರೂ, ಇವೆಲ್ಲವೂ ಪ್ರಧಾನಿ ಮೋದಿಯ ಸಾಧನೆ ಎಂಬಂತೆ ಕೋಟ್ಯಂತರ ರೂ. ವೆಚ್ಚ ಮಾಡಿ, ಅವುಗಳ ಜಾಹೀರಾತುಗಳನ್ನು ಪ್ರಧಾನಿ ಮೋದಿಯವರ ಭಾವಚಿತ್ರಗಳೊಂದಿಗೆ ಸ್ಥಾಪಿಸಲಾಗಿವೆ.

ಚುನಾವಣೆಯ ಸಂದರ್ಭದಲ್ಲಿ ಇದು ಮತದಾರರ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಿದ್ದೂ ಆಯೋಗ ಇವುಗಳ ವಿರುದ್ಧ ವೌನವಾಗಿದೆ. ಈ ದೇಶದ ನ್ಯಾಯ ವ್ಯವಸ್ಥೆ ಪ್ರಭುತ್ವದ ಜೊತೆಗೆ ಕೈ ಜೋಡಿಸಿರುವ ಆರೋಪಗಳಿರುವಂತೆಯೇ, ಚುನಾವಣಾ ಆಯೋಗವೂ ಮೋದಿ ನೇತೃತ್ವದ ಸರಕಾರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳನ್ನು ಪ್ರಚಾರ ಮಾಡುವುದಕ್ಕಾಗಿಯೇ ನಮೋ ಟಿವಿಯೊಂದು ಅಸ್ತಿತ್ವಕ್ಕೆ ಬಂದಿತ್ತು. ಈ ಕುರಿತಂತೆ ನ್ಯಾಯಾಲಯ, ಚುನಾವಣಾ ಆಯೋಗ ಕಣ್ಣಿದ್ದೂ ಕುರುಡನಂತೆ ನಟಿಸಿತ್ತು. ಹೀಗಿರುವಾಗ, ಪೆಟ್ರೋಲ್ ಪಂಪ್‌ನಲ್ಲಿರುವ ಪ್ರಧಾನಿಯ ಭಾವಚಿತ್ರ ‘ನೀತಿ ಸಂಹಿತೆಯ ಉಲ್ಲಂಘನೆಯಾಗಿ’ ಚುನಾವಣಾ ಆಯೋಗಕ್ಕೆ ಕಂಡಿರುವುದು, ಅವುಗಳನ್ನು ಕಿತ್ತು ಹಾಕಲು ತುರ್ತು ಆದೇಶ ನೀಡಿರುವುದು ಪ್ರಧಾನಿಯನ್ನು ರಕ್ಷಿಸುವ ಕ್ರಮದ ಒಂದು ಭಾಗವಾಗಿದೆ ಎಂದು ಅನುಮಾನಿಸುವುದರಲ್ಲಿ ತಪ್ಪೇನಿದೆ?

ಕಳೆದ ಹತ್ತು ವರ್ಷಗಳಿಂದ ನೀತಿ ಸಂಹಿತೆ ಇರುವುದೇ ಉಲ್ಲಂಘಿಸುವುದಕ್ಕೆ ಎಂದು ಪಕ್ಷಗಳು ಭಾವಿಸಿದಂತಿವೆ. ಹಾಗೆಯೇ, ನೀತಿ ಸಂಹಿತೆ ಉಲ್ಲಂಘಿಸುವುದು ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ಜನ್ಮ ಸಿದ್ಧ ಹಕ್ಕು ಎಂದು ಆಯೋಗವೂ ಭಾವಿಸಿದಂತಿದೆ. ವಿರೋಧ ಪಕ್ಷಗಳು ಒಟ್ಟಾಗಿ ಇವಿಎಂ ವಿರುದ್ಧ ತಕರಾರು ಎತ್ತಿದಾಗ ಆ ಬಗ್ಗೆ ಯಾವುದೇ ಗಂಭೀರವಾದ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗದೆ, ಆರೋಪಗೈದವರನ್ನೇ ‘ದೇಶದ್ರೋಹಿ’ಗಳೆಂದು ಬಿಂಬಿಸುವ ಪ್ರಯತ್ನ ಚುನಾವಣಾ ಆಯುಕ್ತರಿಂದಲೇ ನಡೆಯಿತು. ಒಕ್ಕೂಟ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ, ‘ಒಂದು ದೇಶ ಒಂದು ಚುನಾವಣೆ’ಯಂತಹ ಕೂಗಿನ ಜೊತೆಗೆ ಆಯೋಗವೂ ಧ್ವನಿ ಸೇರಿಸಿದೆ. ಭಾರತದ ಪ್ರಜಾಸತ್ತೆ ನಿಂತಿರುವುದೇ ಪಾರದರ್ಶಕವಾದ ಚುನಾವಣೆಯ ತಳಹದಿಯ ಮೇಲೆ. ಈ ನಿಟ್ಟಿನಲ್ಲಿ ಮೊದಲು ಚುನಾವಣಾ ಆಯೋಗ ತನ್ನ ಬೆನ್ನುಮೂಳೆಯನ್ನು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ. ಚುನಾವಣಾ ಆಯೋಗಕ್ಕೆ ಘನತೆ ತಂದುಕೊಟ್ಟ ಶೇಷನ್‌ರಂತಹ ಮುಖ್ಯ ಚುನಾವಣಾ ಆಯುಕ್ತರನ್ನು ಮಾದರಿಯಾಗಿಟ್ಟುಕೊಂಡು ಕರ್ತವ್ಯ ನಿರ್ವಹಿಸಿದರೆ ಮಾತ್ರ ಈ ದೇಶದ ಪ್ರಜಾಪ್ರಭುತ್ವ ಉಳಿದೀತು, ಬೆಳೆದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)