varthabharthi


ಕ್ರೀಡೆ

ಈ ವಿಚಾರದಲ್ಲೂ ಧೋನಿಯ ದಾಖಲೆ ಸರಿಗಟ್ಟಿದ ದಿಲ್ಲಿ ಆಟಗಾರ

ಭಾರತದ ನಾಯಕನಾಗಿ ಹೆಚ್ಚು ಶೂನ್ಯ ಸಂಪಾದಿಸಿದ ವಿರಾಟ್ ಕೊಹ್ಲಿ

ವಾರ್ತಾ ಭಾರತಿ : 5 Mar, 2021

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನವಾಗಿರುವ ಶುಕ್ರವಾರ ಭಾರತದ ನಾಯಕ ವಿರಾಟ್ ಕೊಹ್ಲಿ 8 ಎಸೆತಗಳನ್ನು ಎದುರಿಸಿದ್ದರೂ ರನ್ ಖಾತೆ ತೆರೆಯಲಾಗದೆ ಪೆವಿಲಿಯನ್‍ಗೆ ವಾಪಸಾದರು. ಈ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕನಾಗಿ 8ನೇ ಬಾರಿ ಶೂನ್ಯ ಸಂಪಾದಿಸಿ ಅಪಖ್ಯಾತಿಗೆ ಒಳಗಾದರು. ಇದರೊಂದಿಗೆ ಮಾಜಿ ನಾಯಕ ಎಂಎಸ್ ಧೋನಿಯ ಅನಗತ್ಯ ದಾಖಲೆ(8)ಯನ್ನು ಸರಿಗಟ್ಟಿದರು.

32ರ ಹರೆಯದ ಕೊಹ್ಲಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್  ಅವರ ಎಸೆತವನ್ನು ಕೆಣಕಲು ಹೋಗಿ ವಿಕೆಟ್ ಕೀಪರ್ ಬೆನ್ ಫೋಕ್ಸ್ ಗೆ ಕ್ಯಾಚ್ ನೀಡಿದರು. ಚೇತೇಶ್ವರ ಪೂಜಾರ ಔಟಾದ ಬೆನ್ನಿಗೆ ಕೊಹ್ಲಿ ಪೆವಿಲಿಯನ್‍ಗೆ ವಾಪಸಾದರು.

ಭಾರತದ ನಾಯಕನಾಗಿ ಕೊಹ್ಲಿ 8ನೇ ಬಾರಿ ಶೂನ್ಯಕ್ಕೆ ಔಟಾದರು. ಈ ಮೂಲಕ ತನ್ನ ಮಾಜಿ ನಾಯಕ ಧೋನಿಯ 'ಅನ್‍ವಾಂಟೆಂಡ್ ರೆಕಾರ್ಡ್' ಅನ್ನು ಸರಿಗಟ್ಟಿದರು. ಭಾರತದ ನಾಯಕರಾಗಿ ಕೊಹ್ಲಿ ಹಾಗೂ ಧೋನಿ ಅತ್ಯಂತ ಹೆಚ್ಚು ಶೂನ್ಯ ಸುತ್ತಿದ್ದಾರೆ.

ಕೊಹ್ಲಿ ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ ಎರಡನೇ ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲೇ ಎರಡು ಬಾರಿ ಕೊಹ್ಲಿ ಸೊನ್ನೆಗೆ ಔಟಾಗಿದ್ದರು. 2014ರಲ್ಲಿ ಪ್ಲಂಕೆಟ್ ಹಾಗೂ ಆ್ಯಂಡರ್ಸನ್ ಅವರು ಕೊಹ್ಲಿ ರನ್ ಖಾತೆ ತೆರೆಯದಂತೆ ನೋಡಿಕೊಂಡಿದ್ದರು. ಈಗ ನಡೆಯುತ್ತಿರುವ ಸರಣಿಯಲ್ಲಿ ಮೊಯಿನ್ ಅಲಿ ಹಾಗೂ ಬೆನ್ ಸ್ಟೋಕ್ಸ್ ಈ ಸಾಹಸ ತೋರಿದ್ದರು.

ಬೆನ್ ಸ್ಟೋಕ್ಸ್ ಟೆಸ್ಟ್  ಕ್ರಿಕೆಟ್ ನಲ್ಲಿ 5 ಬಾರಿ ಕೊಹ್ಲಿ ಅವರನ್ನು ಔಟ್ ಮಾಡಿದ್ದಾರೆ. ದ.ಆಫ್ರಿಕಾದ ಟೆಸ್ಟ್ ನಾಯಕ ಡೀನ್ ಎಲ್ಗರ್ ಹಾಗೂ ಚೇತೇಶ್ವರ ಪೂಜಾರರನ್ನು 4 ಬಾರಿ ಸ್ಟೋಕ್ಸ್ ಔಟ್ ಮಾಡಿದ್ದರು.

ಬೆನ್ ಸ್ಟೋಕ್ಸ್ ಹಾಗೂ ವಿರಾಟ್ ಕೊಹ್ಲಿ ಕೊನೆಯ ಟೆಸ್ಟ್ ನ ಮೊದಲ ದಿನವಾಗಿರುವ ಗುರುವಾರ ಮಾತಿನ ಚಕಮಕಿ ನಡೆಸಿದ್ದರು. ಕೊಹ್ಲಿ ಭಾರತವನ್ನು ಅತ್ಯಂತ ಹೆಚ್ಚು ಪಂದ್ಯಗಳಲ್ಲಿ(60)  ಮುನ್ನಡೆಸುವ ಮೂಲಕ ಎಂಎಸ್ ಧೋನಿಯ ದಾಖಲೆ ಸರಿಗಟ್ಟಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)