varthabharthi


ಬೆಂಗಳೂರು

ಹಿರಿಯ ಕವಿ, ಸಾಹಿತಿ ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ ಇನ್ನಿಲ್ಲ

ವಾರ್ತಾ ಭಾರತಿ : 6 Mar, 2021

ಬೆಂಗಳೂರು, ಮಾ. 6: ಕನ್ನಡದ ಖ್ಯಾತ ಲೇಖಕ, ಕವಿ ಎನ್ನೆಸೆಲ್ ಎಂದೇ ಹೆಸರಾಗಿದ್ದ ಎನ್.ಎಸ್.ಲಕ್ಷ್ಮೀನಾರಾಯಣ ಭಟ್(85) ಅವರು ಶನಿವಾರ ಬೆಳಗಿನ ಜಾವ 4:45ರ ಸುಮಾರಿಗೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಬನಶಂಕರಿಯ ತಮ್ಮ ನಿವಾಸದಲ್ಲಿ ಬೆಳಗಿನಜಾವ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಪತ್ನಿ ಜ್ಯೋತಿ, ಪುತ್ರ ಚೈತ್ರ, ಪುತ್ರಿ ಕ್ಷಮಾ ಸೇರಿದಂತೆ ಅಪಾರ ಸಂಖ್ಯೆ ಸ್ನೇಹಿತರು, ಒಡನಾಡಿಗಳು ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ.

1936 ಅ.29ರಂದು ಶಿವಮೊಗ್ಗದಲ್ಲಿ ಶಿವರಾಮ ಭಟ್ಟ ಹಾಗೂ ಮೂಕಾಂಬಿಕೆ ದಂಪತಿ ಪುತ್ರರಾದ ಜನಿಸಿದ ಲಕ್ಷ್ಮೀನಾರಾಯಣ ಭಟ್ ಅವರು, ಎಂ.ಎ. ಪದವಿ ಪಡೆದ ಬಳಿಕ ಭಾಷಾ ಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ಅನಂತರ ಕಾಲೇಜಿನಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.

ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ ಹೊಂದಿದ್ದ ಎನ್ನೆಸೆಲ್, ತೀನಂಶ್ರೀ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು. 1965ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ, ಅಧ್ಯಾಪಕ, ರೀಡರ್, ಪ್ರಾಧ್ಯಾಪಕ, ನಿರ್ದೇಶಕ, 1990ರಲ್ಲಿ ಆರ್ಟ್ ಫ್ಯಾಕಲ್ಟಿ ಡೀನ್ ಆದರು. ಅಲ್ಲದೆ, ಮೈಸೂರು ವಿಶ್ವ ವಿದ್ಯಾನಿಲಯದ ಆಧುನಿಕ ಕನ್ನಡ ಕಾವ್ಯ ಕುರಿತು ಪ್ರಬಂಧ ಮಂಡಿಸಿ ಪಿಎಚ್‍ಡಿ ಪದವಿ ಪಡೆದುಕೊಂಡಿದ್ದರು.

ಶಿಶುಸಾಹಿತ್ಯ ಅವರಿಗೆ ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ಶಿಶು ಸಾಹಿತ್ಯಕ್ಕಾಗಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ. ಅನುವಾದಗಳಲ್ಲಿ ಮೃಚ್ಛಕಟಿಕ, ಇಸ್ಪೀಟ್ ರಾಜ್ಯ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದು, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯ ಕವಿತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ತಮ್ಮದೆ ಆದ ಛಾಪು ಮೂಡಿಸಿರುವ ಲಕ್ಷ್ಮೀನಾರಾಯಣ ಭಟ್ ಅವರು, ತಮ್ಮ ಭಾವಗೀತೆಗಳ ಹಲವು ಧ್ವನಿ ಸುರಳಿಗಳನ್ನು ಹೊರತಂದು ಜನಸಾಮಾನ್ಯರ ಮನರಂಜನೆ ಒದಗಿಸಿದ್ದಾರೆ. ಅಲ್ಲದೆ, ಎಲ್ಲರಿಗೂ ಸಲ್ಲುವ ಕವಿ ಎಂದೇ ಖ್ಯಾತರಾಗಿದ್ದ ಭಟ್ಟರ ನಿಧನದಿಂದ ಕನ್ನಡ ಕಾವ್ಯ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಬೆಳಗ್ಗೆ 10:30ರ ವರೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಆ ಬಳಿಕ ಬನಶಂಕರಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಸಿಎಂ ಸೇರಿ ಗಣ್ಯರ ಸಂತಾಪ: ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು, ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳ ರಚನೆ ಮುಂತಾದ ಹಲವರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ ವ್ಯಾಪಕ ಮನ್ನಣೆ ಪಡೆದಿದ್ದಾರೆ. ಅವರ ಜನಪ್ರಿಯ ಭಾವಗೀತೆಗಳಿಂದ ಕನ್ನಡಿಗರ ಮನೆ ಮಾತಾಗಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರದ ತಾರೆಯೊಂದು ಕಳಚಿದಂತಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)