varthabharthi


ಕರಾವಳಿ

ಕೆಂಜಾರು ಗೋಶಾಲೆ ತೆರವು ಪ್ರಕರಣ

ದೇವರನ್ನು ಬೀದಿಪಾಲು ಮಾಡಿದ ಬಿಜೆಪಿ: ಕವಿತಾ ಸನಿಲ್ ಆರೋಪ

ವಾರ್ತಾ ಭಾರತಿ : 6 Mar, 2021

ಮಂಗಳೂರು, ಮಾ.6: ಮುಕ್ಕೋಟಿ ದೇವರುಗಳು ವಾಸ ಮಾಡುವ ದನಕರುಗಳನ್ನು ಕೆಂಜಾರಿನಲ್ಲಿನ ಗೋಶಾಲೆಯ ಅತಿಕ್ರಮಣ ತೆರವು ಮಾಡುವ ನೆಪದಲ್ಲಿ ಬಿಜೆಪಿಯವರು ಬೀದಿಪಾಲು ಮಾಡಿದ್ದಾರೆ ಎಂದು ಮಾಜಿ ಮೇಯರ್ ಕವಿತಾ ಸನಿಲ್ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಜಾರಿನಲ್ಲಿ ಗೋಶಾಲೆಯಲ್ಲಿದ್ದ ದನಕರುಗಳು ಇಂದು ಬೀದಿಪಾಲಾಗಿದ್ದರೂ ಚುನಾವಣೆ ಸಂದರ್ಭದಲ್ಲಿ ಗೋವುಗಳ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯ ಸಂಸದ, ಶಾಸಕರು ಮೌನವಾಗಿದ್ದು, ಆ ಮೂಕ ಪ್ರಾಣಿಗಳ ರೋದನ ಕೇಳುವವರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವಸ್ಥಾನದ ಜೀರ್ಣೋದ್ಧಾರ ಮಾಡುವಾಗ ಅಥವಾ, ಹೆದ್ದಾರಿ ಸಮೀಪದ ದೇವಸ್ಥಾನ, ಗುಡಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲೂ ದೇವರನ್ನು ಬಾಲಾಲಯದಲ್ಲಿ ವ್ಯವಸ್ಥಿತವಾಗಿ ಇರಿಸಿ ಕ್ರಮ ವಹಿಸಲಾಗುತ್ತದೆ. ಆದರೆ ದೇವರೇ ನೆಲೆಸಿರುವ ದನಕರುಗಳನ್ನು ಮಾತ್ರ ಗೋವುಗಳ ಬಗ್ಗೆ ಮಾತನಾಡುವವರ ಆಡಳಿತವಿದ್ದರೂ ಬೀದಿಪಾಲು ಮಾಡಿ ಅವುಗಳಿಗೆ ಆಶ್ರಯವಿಲ್ಲದಂತೆ ಮಾಡಲಾಗಿದೆ. ಯಾರದ್ದೋ ಮೇಲಿನ ಕ್ರೋಧವನ್ನು ಮೂಕ ಪ್ರಾಣಿಗಳ ಮೇಲೆ ತೀರಿಸಲಾಗಿದೆ. ಇದರ ಶಾಪ ಬಿಜೆಪಿಗರಿಗೆ ತಟ್ಟದಿರದು ಎಂದು ಕವಿತಾ ಸನಿಲ್ ಹೇಳಿದರು.

ಕೋಸ್ಟ್‌ಗಾರ್ಡ್ ತರಬೇತಿ ಕೇಂದ್ರ ಸ್ಥಾಪನೆಗೆ ಯಾವುದೇ ಆಕ್ಷೇಪವಿಲ್ಲ. ಸರಕಾರಿ ಜಾಗ ಅತಿಕ್ರಮಣವಾಗಿದ್ದರೆ ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕಿತ್ತು. ದನಕರುಗಳನ್ನು ಯಾವುದಾದರೂ ಗೋಶಾಲೆಗಳಿಗೆ ಸ್ಥಳಾಂತರಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಟ್ಟಡ ತೆರವುಗೊಳಿಸಬಹುದಿತ್ತು. ಅದು ಬಿಟ್ಟು ಮೂಕ ಪ್ರಾಣಿಗಳನ್ನು ಬೀದಿಗೆ ಹಾಕುವವರು ನಕಲಿ ಗೋಪ್ರೇಮಿಗಳಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದ ಕವಿತಾ ಸನಿಲ್, ಕಾಂಗ್ರೆಸ್ ಆಡಳಿತದಲ್ಲಿದ್ದು, ಈ ರೀತಿ ಮಾಡಿದ್ದರೆ ಈಗಾಗಲೇ ಜಿಲ್ಲೆ ಹೊತ್ತಿ ಉರಿಯುವಂತೆ ಈ ನಕಲಿ ಗೋಪ್ರೇಮಿಗಳು ಮಾಡುತ್ತಿದ್ದರು ಎಂದು ತೀಕ್ಷ್ಣವಾಗಿ ನುಡಿದರು.

ಹಿರಿಯರಾದ ಪ್ರಭಾಕರ ಭಟ್‌ರವರ ಮೇಲೆ ನನಗೆ ಗೌರವವಿದೆ. ಆದರೆ ಕೆಂಜಾರಿನ ಈ ಗೋವುಗಳ ವಿಚಾರದಲ್ಲಿ ಅವರು, ಅಲ್ಲಿ ಗೋಶಾಲೆಯೇ ಇರಲಿಲ್ಲ. ಅದು ನಾಲ್ಕು ದನಗಳ ಹಟ್ಟಿ ಎಂದು ಹೇಳಿರುವ ಆಡಿಯೋ ಕೇಳಿ ನೋವಾಯಿತು. ಹಿಂದುತ್ವ, ಗೋವುಗಳ ಬಗ್ಗೆ ಮಾತನಾಡುವವರೇ ಇಂತಹ ಮಾತುಗಳನ್ನು ಹೇಳುತ್ತಾರೆಂದರೆ ಏನರ್ಥ ಎಂದವರು ಪ್ರಶ್ನಿಸಿದರು.

ಆ ಗೋಶಾಲೆಗೆ ಸಚಿವರು, ಶಾಸಕರು ಭೇಟಿ ನೀಡಿ ಗೋಪೂಜೆಯನ್ನೂ ನೆರವೇರಿಸಿದ್ದಾರೆ ಎಂದು ಹಳೆ ಫೋಟೋ ಪ್ರತಿಯನ್ನು ತೋರಿಸಿ ಮಾತನಾಡಿದ ಕವಿತಾ ಸನಿಲ್, ಈಗ ಕಳೆದೆರಡು ದಿನಗಳಿಂದ ಬೀದಿಯಲ್ಲಿ ಅಡ್ಡಾಡುತ್ತಿರುವ ಗೋವುಗಳನ್ನು ನೋಡಲು ಯಾರೊಬ್ಬರೂ ಯಾಕೆ ಭೇಟಿಯಾಗಿಲ್ಲ. ಅವುಗಳಿಗೆ ಪರ್ಯಾಯ ವ್ಯವಸ್ಥೆ ಯಾಕೆ ಕಲ್ಪಿಸಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿಗರು ಯಾವತ್ತಿಗೂ ಗೋ ಭಕ್ತರು. ನಾವು ನಮ್ಮ ಮನೆಯಲ್ಲಿಯೂ ಗೋವುಗಳನ್ನು ಪ್ರೀತಿಯಿಂದ ಸಾಕಿ ಸಲಹುವ ಜತೆಗೆ ಪೂಜೆಯನ್ನೂ ಮಾಡುತ್ತೇವೆ. ಪ್ರಕರಣದಲ್ಲೂ ಕಾಂಗ್ರೆಸ್ ಆಡಳಿತವಿದ್ದಿದ್ದರೆ ಗೋವುಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅತಿಕ್ರಮಣ ತೆರವು ಮಾಡುತ್ತಿತ್ತು ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ದೀಪಕ್ ಪೂಜಾರಿ, ನೀರಜ್ ಪಾಲ್, ಪುರುಷೋತ್ತಮ ಚಿತ್ರಾಪುರ, ರಜನೀಶ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)