varthabharthi


ರಾಷ್ಟ್ರೀಯ

"ಯುವಕರನ್ನು ಇನ್ನೊಂದು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಲು ಪ್ರಚೋದಿಸುತ್ತಿದ್ದಾರೆ"

ತಮಿಳುನಾಡಿನಲ್ಲಿ ರಾಹುಲ್‌ ಗಾಂಧಿ ಪ್ರಚಾರವನ್ನು ನಿಲ್ಲಿಸಿ: ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ಬಿಜೆಪಿ

ವಾರ್ತಾ ಭಾರತಿ : 6 Mar, 2021

ಚೆನ್ನೈ: ಎಪ್ರಿಲ್ 6ರಂದು ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಾಗಿ ಪ್ರಚಾರ ಕಾರ್ಯದಲ್ಲಿ ತೊಡಗುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನಿರ್ಬಂಧ ಹೇರಬೇಕೆಂದು ತಮಿಳುನಾಡು ಬಿಜೆಪಿ ಘಟಕ ಚುನಾವಣಾ ಆಯೋಗವನ್ನು  ಆಗ್ರಹಿಸಿದೆ.

"ಯುವಜನತೆಯನ್ನು ಇನ್ನೊಂದು ಸ್ವಾತಂತ್ರ್ಯ ಹೋರಾಟದಲ್ಲಿ  ತೊಡಗಲು ಪ್ರಚೋದಿಸುತ್ತಿರುವುದಕ್ಕೆ ರಾಹುಲ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಬೇಕು" ಎಂದೂ ಬಿಜೆಪಿ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ರಾಹುಲ್ ಗಾಂಧಿ ಮಾರ್ಚ್ 1ರಂದು ಕನ್ಯಾಕುಮಾರಿ ಜಿಲ್ಲೆಯ ಮುಲಗುಮೂಡು  ಎಂಬಲ್ಲಿನ ಸಂತ ಜೋಸೆಫ್ ಮೆಟ್ರಿಕ್ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಭೇಟಿ ನೀಡಿದ್ದು ಶಾಲಾ ಆವರಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಕ್ಕೆ ಸಮನಾಗಿತ್ತು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ವಿ. ಬಾಲಚಂದ್ರನ್ ಆರೋಪಿಸಿದ್ದಾರೆ.

ರಾಹುಲ್ ಅವರು ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡುವುದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಆದುದರಿಂದ ಅವರ ಪ್ರಚಾರ ಕಾರ್ಯಕ್ಕೆ ನಿಷೇಧ ಹೇರಬೇಕು ಎಂದು ಬಾಲಚಂದ್ರನ್ ಅವರು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಸತ್ಯಬ್ರತ ಸಾಹೂ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.

"ಭಾರತಕ್ಕೆ ಈಗ ಇನ್ನೊಂದು ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ ಎಂದು ರಾಹುಲ್ ಹೇಳಿರುವುದು  ಐಪಿಸಿಯ ಸೆಕ್ಷನ್ 124ಎ (ದೇಶದ್ರೋಹ) ಹಾಗೂ ಸೆಕ್ಷನ್ 109 ಅನ್ವಯ ಅಪರಾಧವಾಗುತ್ತದೆ" ಎಂದು ಅವರು ಆರೋಪಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)