varthabharthi


ನಿಮ್ಮ ಅಂಕಣ

ನಾಟಕ ವಿಮರ್ಶೆ

ವರ್ತಮಾನದ ರಾಜಕೀಯ ತಲ್ಲಣಗಳ ಕುರಿತು ಚಿಂತನೆಗೆ ಹಚ್ಚುವ ‘ದಾಳ’

ವಾರ್ತಾ ಭಾರತಿ : 7 Mar, 2021
ಆರ್. ವೆಂಕಟರಾಜು, ರಂಗನಟ, ಬೆಂಗಳೂರು

ಕನ್ನಡದ ಹಿರಿಯ ಲೇಖಕರು, ಪುಸ್ತಕ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಎಸ್. ಜಿ. ಸಿದ್ದರಾಮಯ್ಯ ಅವರ ‘ದಾಳ’ ನಾಟಕವನ್ನು ಪ್ರಯೋಗ ಮಂಟಪ ಬೆಂಗಳೂರು, ತಂಡದ ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ (ಫೆಬ್ರವರಿ 22)ಯಶಸ್ವಿಯಾಗಿ ಪ್ರದರ್ಶಿಸಿದರು. ಈ ನಾಟಕದ ನಿರ್ದೇಶಕರು ವೆಂಕಟೇಶ್ ಜೋಶಿ. ಉತ್ತರ ಕರ್ನಾಟಕದ ಹಿನ್ನೆಲೆಯ ಪರಿಸರದಿಂದ ಬೆಂಗಳೂರಿಗೆ ಬಂದು ನೆಲೆನಿಂತ ಜೋಶಿಯವರ ರಂಗ ಅನುಭವದ ಬೀಸು ದೊಡ್ಡದು. ಕಾಲೇಜಿನ ನಾಟಕಗಳು, ವಿದ್ಯಾರ್ಥಿ ರಂಗ ತರಬೇತಿ ಶಿಬಿರ, ಮೊದಲಾದವುಗಳು ಇವರ ಸಂಗೀತ ಮತ್ತು ನಿರ್ದೇಶನವನ್ನು ಹೆಚ್ಚಾಗಿ ದುಡಿಸಿಕೊಂಡಿದೆ. ಇವರ ಅನುಭವದ ವೂಸೆಯಿಂದ ಕಟ್ಟಿಕೊಟ್ಟ ನಾಟಕ ‘ದಾಳ’. ಈ ನಾಟಕವು ಪುರಾಣದ ಎಳೆಗಳಿಂದ ಬಿಡಿಸಿ ವರ್ತಮಾನದ ರಾಜಕೀಯ ತಲ್ಲಣಗಳ ಕುರಿತು ಚಿಂತನೆಗೆ ಹಚ್ಚುತ್ತದೆ.

ಪಾಂಡವ-ಕೌರವರು ಹುಟ್ಟಿ ಬೆಳೆಯುತ್ತಿದ್ದಂತೆ ಅವರೊಂದಿಗೆ ದಾಯಾದಿ ಮತ್ಸರದ ವಿಷ ಬೀಜವು ಮೊಳಕೆಯೊಡೆದು ಹೆಮ್ಮರವಾದ ಬಗೆಯನ್ನು ನಾಟಕವು ವಿಶ್ಲೇಷಣೆ ನಡೆಸುತ್ತಾ ಹೋಗುತ್ತದೆ. ಮಹಾಭಾರತದಲ್ಲಾದ ಕರ್ಣನ ಅವಮಾನ, ಜಾತಿನಿಂದನೆ, ದುರ್ಯೋಧನನ ಸ್ನೇಹನಿಷ್ಠೆ ತನ್ನ ಅನುಪಸ್ಥಿತಿಯಲ್ಲೂ ಅಂಗರಾಜ ಕರ್ಣನೊಡನೆ ಭಾನುಮತಿಯ ಚದುರಂಗದಾಟದಲ್ಲಿ ದಾಳಗಳು ಉರುಳಿದಾಗ ಸೋತ ಭಾನುಮತಿಯ ಮುತ್ತಿನಮಾಲೆ ಕಸಿಯಲು ಪ್ರಯತ್ನಿಸುವಾಗ ಮುತ್ತಿನ ಮಾಲೆ ಹರಿದು ಮಣಿಗಳು ಚೆಲ್ಲಾಪಿಲ್ಲಿಯಾಗುತ್ತದೆ. ಈ ಸಂದರ್ಭಕ್ಕೆ ಬರುವ ಸುಯೋಧನ ಕೊಂಚವೂ ಅನುಮಾನ ತಾಳದೆ, ಮಣಿಗಳನ್ನು ಆಯ್ದು ಕೊಡುವ ಪ್ರಸಂಗ ಸೇರಿದಂತೆ ಮಹಾಭಾರತದಲ್ಲಿ ವರ್ಣಿತವಾಗಿರುವ ಪರಿಭ್ರಮಣ ಪ್ರಸಂಗಗಳ ಜೊತೆಗೆ ಜಾಗತೀಕರಣ, ಬ್ರಿಟಿಷರ ಒಡೆದಾಡುವ ಕುಟಿಲ ನೀತಿ, ಆಧುನಿಕ ಶಕುನಿಯ ರೂಪದಲ್ಲಿ ಮೈದಾಳಿವೆ.

ಶಿಷ್ಟ ಸಂಭಾಷಣೆಯ ನಡುವೆಯೂ, ಗ್ರಾಮ್ಯ ಸೊಗಡಿನ ಮಾತುಗಳನ್ನು ಎಸ್.ಜಿ.ಎಸ್. ಬರೆದಿದ್ದಾರೆ. ವನವಾಸ, ಅಜ್ಞಾತವಾಸ, ನಂತರ ಸಂಭವಿಸಿದ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ವಿಜಯಿಗಳಾದರು. ಯುದ್ಧದ ಪಾಪಪ್ರಜ್ಞೆಯಲ್ಲಿ ನರಳಿ ವರ್ತಮಾನದ ಕ್ರೌರ್ಯ ಅಸ್ತ್ರ ತ್ಯಾಗ ಮಾಡುವ ಆಶಯದೊಂದಿಗೆ ನಾಟಕ ಸಮಾಪ್ತಿಯಾಗುತ್ತದೆ. ನಾಟಕದ ಅಂತರಂಗ ಸಂಗೀತ. ಎಲ್ಲೂ ಏಕತಾನತೆಗೆ ಅವಕಾಶ ನೀಡದೆ ಲವಲವಿಕೆಯಿಂದ ಸಾಗುವಲ್ಲಿ ನಾಟಕ ಯಶಸ್ವಿಯಾಗಿದೆ. ಪಾತ್ರದಾರಿಗಳೆಲ್ಲರ ಅಭಿನಯ ಚೆನ್ನಾಗಿತ್ತು. ವಿಶೇಷವಾಗಿ ನಟಿ ರಾಜೇಶ್ವರಿ, ಕರ್ಣ, ಕೃಷ್ಣ, ಅಕರಾಳ, ವಿಕರಾಳ...ಪಾತ್ರಗಳು ಚೆನ್ನಾಗಿ ಮೂಡಿಬಂದಿವೆ. ಗುಂಪುಗಳು ನಾಟಕದ ಜೊತೆಗೆ ಇನ್ನೂ ಚೆನ್ನಾಗಿ ಮಿಳಿತವಾಗಬೇಕು! ಬೆಳಕು (ಎ.ಕೆ. ಕೃಷ್ಣಯ್ಯ) ಪೂರಕವಾಗಿದೆ. ಕರ್ಣನ ಉಡುಪು ಜನರ ಕಲ್ಪನೆಗೆ ಅನುಗುಣವಿಲ್ಲ!. ಇನ್ನುಳಿದಂತೆ ವಸ್ತ್ರವಿನ್ಯಾಸ (ಆರ್ಟ್ ದೇವು),ಮೇಕಪ್ (ಮೋಹನ್), ನೃತ್ಯ ಸಂಯೋಜನೆ(ರಾಧಾಕೃಷ್ಣ ಉರಾಳ) ಮತ್ತು ಪ್ರಯೋಗ ಮಂಟಪ ತಂಡದ ಕಲಾವಿದರು ಅಭಿನಂದನಾರ್ಹರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)