varthabharthi


ಸಂಪಾದಕೀಯ

ರಾಜ್ಯವನ್ನಾಳುತ್ತಿರುವ ಅಶ್ಲೀಲ ಸಿಡಿ

ವಾರ್ತಾ ಭಾರತಿ : 8 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಅಶ್ಲೀಲ ಸಿಡಿಯ ಬಿಡುಗಡೆಯೊಂದಿಗೆ ಅಶ್ಲೀಲ ರಾಜಕೀಯ ಬೆಳವಣಿಗೆಗಳು ಮುಗಿಯುವ ಸೂಚನೆ ಕಾಣಿಸುತ್ತಿಲ್ಲ. ಯಾಕೆಂದರೆ, ವಿವಿಧ ನಾಯಕರಿಗೆ ಸಂಬಂಧಿಸಿದ 10ಕ್ಕೂ ಅಧಿಕ ಸಿಡಿಗಳಿವೆ ಎಂಬ ವದಂತಿಗಳು ಹರಡುತ್ತಿವೆ. ಈ ವದಂತಿಗೆ ಪುಷ್ಟಿ ಕೊಡುವಂತೆ ಸಚಿವರು ಸೇರಿದಂತೆ ಹಲವು ಶಾಸಕರು ಕೋರ್ಟಿನ ಮೊರೆ ಹೋಗಿದ್ದಾರೆ. ‘ಮಾಧ್ಯಮಗಳು ತಮ್ಮ ಕುರಿತಂತೆ ಯಾವುದೇ ಆಕ್ಷೇಪಾರ್ಹ ವರದಿಗಳನ್ನು ಪ್ರಕಟಿಸಬಾರದು’ ಎಂದು ಅವರು ಕೋರಿದ್ದಾರೆ. ಅವರ ಕೋರಿಕೆಯಂತೆ, ನ್ಯಾಯಾಲಯವು ಮಾ.31ರವರೆಗೆ ಆಕ್ಷೇಪಾರ್ಹ ವರದಿಗೆ ನಿರ್ಬಂಧ ಹೇರಿ ಮಧ್ಯಂತರ ಆದೇಶ ಹೊರಡಿಸಿದೆ. ಇಲ್ಲಿ ‘ಆಕ್ಷೇಪಾರ್ಹ ವರದಿ’ ಎಂದರೆ ಏನು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಒಂದು ವೇಳೆ ದುಷ್ಕರ್ಮಿಗಳು ಅವರ ಕುರಿತ ಅಶ್ಲೀಲ ಸಿಡಿಗಳನ್ನೇನಾದರೂ ಬಹಿರಂಗ ಪಡಿಸಿದರೆ ಅದನ್ನು ಟಿವಿ ಮಾಧ್ಯಮಗಳು ಯಾವ ಕಾರಣಕ್ಕೂ ಪ್ರಸಾರ ಮಾಡಬಾರದು ಎನ್ನುವುದು ಅವರ ಬೇಡಿಕೆಯಾಗಿದೆ. ಇದರಿಂದ ಒಂದಂತೂ ಸ್ಪಷ್ಟವಾಯಿತು.

ಅಶ್ಲೀಲ ಸಿಡಿಗಳು ಇವೆಯೋ, ಇಲ್ಲವೋ ಆನಂತರದ ಪ್ರಶ್ನೆ. ಮಾಡಬಾರದ, ನೋಡಬಾರದ ಕೆಲಸಗಳನ್ನು ಇಷ್ಟೂ ಶಾಸಕರು ಮಾಡಿದ್ದಾರೆ ಎನ್ನುವುದನ್ನು ಸ್ವತಃ ಒಪ್ಪಿಕೊಂಡಂತಾಗಿದೆ. ಅಂತಹ ಸಂದರ್ಭದಲ್ಲಿ ಕ್ಯಾಮರಾದ ಮೂಲಕ ಅದನ್ನು ಯಾರಾದರೂ ಚಿತ್ರೀಕರಣ ಮಾಡಿರುವ ಸಾಧ್ಯತೆಗಳಿರಬಹುದು ಎಂಬ ಭಯದಿಂದ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬೆರಳೆಣಿಕೆಯ ಶಾಸಕರಿಗೆ, ತಮ್ಮ ಅಶ್ಲೀಲ ನಡತೆಯನ್ನು ಚಿತ್ರೀಕರಿಸಿರುವ ಸಿಡಿ ಇರುವ ಬಗ್ಗೆ ಮಾಹಿತಿಗಳಿವೆ. ಜೊತೆಗೆ ಒಂದೆರಡು ಶಾಸಕರಾದರೂ, ಆ ಸಿಡಿಯ ಮೂಲಕ ಬ್ಲಾಕ್‌ಮೇಲ್‌ಗೆ ಒಳಗಾಗಿದ್ದಾರೆ ಮತ್ತು ಒಳಗಾಗುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ವರದಿ ಪ್ರಸಾರ ಆಗದೇ ಇರುವುದರಿಂದ ಶಾಸಕರ ಸಮಸ್ಯೆಗಳು ಪರಿಹಾರವಾಗುತ್ತದೆಯೇ? ಎನ್ನುವ ಪ್ರಶ್ನೆ ಎದುರಾಗುತ್ತದೆ. ನಿಜಕ್ಕೂ ಶಾಸಕರಿಗೆ ಸಮಸ್ಯೆಯಾಗುತ್ತಿರುವವರು ಯಾರು? ಬಿಡುಗಡೆ ಮಾಡಿದ ಸಿಡಿಯ ವಿವರಗಳನ್ನು ಪ್ರಕಟಿಸುವ ಮಾಧ್ಯಮಗಳೋ? ಅಥವಾ ಅವರ ಅಶ್ಲೀಲ ಕೃತ್ಯಗಳನ್ನು ಚಿತ್ರೀಕರಿಸಿ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ದುಷ್ಕರ್ಮಿಗಳೋ? ಈ ಶಾಸಕರು ಮೊದಲು ದೂರು ಸಲ್ಲಿಸಬೇಕಾಗಿರುವುದು ಯಾರ ವಿರುದ್ಧ? ಮಾಧ್ಯಮಗಳು ಈ ಸಿಡಿಯನ್ನು ಪ್ರಸಾರ ಮಾಡುವುದಿಲ್ಲ ಎಂದೇ ಇಟ್ಟುಕೊಳ್ಳೋಣ.

ಆದರೂ, ಆ ಸಿಡಿಯಲ್ಲಿರುವ ದೃಶ್ಯಗಳು ಪ್ರಸಾರವಾಗಲು ಹತ್ತು ಹಲವು ದಾರಿಗಳಿವೆ. ಇದು ಸಾಮಾಜಿಕ ಮಾಧ್ಯಮಗಳ ಪ್ರಾಬಲ್ಯದ ಕಾಲ. ಇದನ್ನು ವಿಶ್ವದ ಎಲ್ಲೋ ನಿಂತು ಬಳಸಬಹುದು. ಹೀಗಿರುವಾಗ, ಕೋರ್ಟ್ ವಿಧಿಸಿರುವ ನಿರ್ಬಂಧ ಶಾಸಕರಿಗೆ ಯಾವ ರೀತಿಯಲ್ಲೂ ಸಹಾಯ ಮಾಡಲಾರದು. ಮೊತ್ತ ಮೊದಲು, ‘ತಮ್ಮ ಅಶ್ಲೀಲ ಸಿಡಿಗಳು ಪ್ರಸಾರವಾಗಬಹುದು’ ಎನ್ನುವ ಭೀತಿಗೆ ಇರುವ ಕಾರಣಗಳನ್ನು ಅವರು ಹೇಳಬೇಕಾಗಿದೆ. ಅಂದರೆ, ಯಾರಾದರೂ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಯೇ? ಹಾಗೆ ಬ್ಲಾಕ್‌ಮೇಲ್ ಮಾಡುವವರ ಮಾಹಿತಿಗಳೇನಾದರೂ ಇದ್ದರೆ ಅದನ್ನು ಪೊಲೀಸರಿಗೆ ತಿಳಿಸಿ, ಅವರನ್ನು ಬಂಧಿಸುವುದಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಬೇಕು. ಬ್ಲಾಕ್‌ಮೇಲರ್‌ಗಳಿಗೆ ಹೆದರಿ, ಅವರ ಹೆಸರುಗಳನ್ನು ಮುಚ್ಚಿಟ್ಟರೆ, ಭವಿಷ್ಯದಲ್ಲಿ ಸಚಿವರಿಗೆ ಮಾತ್ರವಲ್ಲ, ಈ ನಾಡಿಗೇ ಅಪಾಯವಿದೆ.

ಜಾರಕಿಹೊಳಿಯವರ ಸಿಡಿ ಬಿಡುಗಡೆಯಾದುದರಿಂದ ಹಲವು ರೀತಿಯಲ್ಲಿ ಸರಕಾರಕ್ಕೆ, ನಾಡಿಗೆ ಉಪಕಾರವಾಯಿತು. ಇಲ್ಲಿ ಸಿಡಿ ಜಾರಕಿಹೊಳಿಯವರ ರಾಜೀನಾಮೆಗೆ ಕಾರಣವಾಯಿತು ನಿಜ. ಆದರೆ ಇದೇ ಸಂದರ್ಭದಲ್ಲಿ ಈ ಸಿಡಿಯನ್ನು ಮುಂದಿಟ್ಟುಕೊಂಡು ದುಷ್ಕರ್ಮಿಗಳು ಜಾರಕಿಹೊಳಿಯವರ ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದರೆ ಸರಕಾರಕ್ಕೂ, ರಾಜ್ಯಕ್ಕೂ ದೊಡ್ಡ ಹಾನಿಯಾಗಿ ಬಿಡುತ್ತಿತ್ತು. ಇಂದು ಜಾರಕಿಹೊಳಿಯವರ ರಾಜೀನಾಮೆಯಿಂದಾಗಿ ಅಂತಹ ದೊಡ್ಡ ಅಪಾಯವೊಂದು ತಪ್ಪಿದೆ. ಇದೀಗ ತಮ್ಮ ಕುರಿತಂತೆ ಸಿಡಿಯಿದೆ ಎಂದು ಭೀತಿ ಪಡುತ್ತಿರುವ ಎಲ್ಲಾ ಶಾಸಕರು, ಈ ಸರಕಾರಕ್ಕೆ ಮಾತ್ರವಲ್ಲ, ನಾಡಿಗೇ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ.

ಒಂದು ವೇಳೆ ಇವರ ಸಿಡಿ ಬಿಡುಗಡೆಯಾಗಿ ಬಿಟ್ಟರೆ ಸಮಸ್ಯೆಯೊಂದು ಅಲ್ಲಿಗೇ ಪರಿಹಾರವಾಗುತ್ತದೆ. ಬಿಡುಗಡೆಯಾಗದೇ ಇದ್ದರೆ, ದುಷ್ಕರ್ಮಿಗಳು ಆ ಸಿಡಿಯನ್ನು ಮುಂದಿಟ್ಟುಕೊಂಡು ಇವರ ಅಧಿಕಾರವನ್ನು ತಮಗೆ ಪೂರಕವಾಗಿ ಬಳಸುತ್ತಲೇ ಇರುತ್ತಾರೆ. ಆದುದರಿಂದ, ಸರಕಾರಕ್ಕೆ ಮತ್ತು ನಾಡಿಗೆ ಆ ಸಿಡಿಗಳು ಬಿಡುಗಡೆಯಾಗದಿದ್ದರೆ ಅಪಾಯವೇ ಹೊರತು, ಬಿಡುಗಡೆಯಾಗುವುದರಿಂದ ಅಲ್ಲ. ಆದುದರಿಂದ, ಸಿಡಿ ಬಿಡುಗಡೆಯಾಗುವುದೇ ಒಳ್ಳೆಯದು. ಬ್ಲಾಕ್‌ಮೇಲ್‌ಗೆ ಒಳಗಾಗುತ್ತಿರುವ ಶಾಸಕರು, ಸಚಿವರು ಈ ನಿಟ್ಟಿನಲ್ಲಿ ನಾಡಿನ ಹಿತಾಸಕ್ತಿಯ ದೃಷ್ಟಿಯಿಂದ, ದುಷ್ಕರ್ಮಿಗಳಿಗೆ ಹೆದರದೇ ಅವರ ಕುರಿತ ಮಾಹಿತಿಗಳನ್ನು ಪೊಲೀಸರಿಗೆ ನೀಡಿ, ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಬೇಕು. ಬ್ಲಾಕ್‌ಮೇಲ್ ಮಾಡುತ್ತಿರುವ ದುಷ್ಕರ್ಮಿಗಳನ್ನು ಬಂಧಿಸಬೇಕು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇಂತಹ ಬ್ಲಾಕ್‌ಮೇಲ್ ಮಾಡುವ ಸಾಹಸಕ್ಕೆ ಯಾರೂ ಮುಂದಾಗದ ರೀತಿಯಲ್ಲಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

ಒಟ್ಟಿನಲ್ಲಿ ಅಶ್ಲೀಲ ಸಿಡಿಗಳು ರಾಜ್ಯ ಸರಕಾರದ ವಿಶ್ವಾಸಾರ್ಹತೆಯನ್ನು ಸಂಪೂರ್ಣ ನೀರು ಪಾಲಾಗಿಸಿವೆ. ಸರಕಾರ ಜನರ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತಿದೆಯೋ, ಅನಾಮಧೇಯ ಸಿಡಿಗಳ ನಿಯಂತ್ರಣದಲ್ಲಿದೆಯೋ ಎಂಬ ಅನುಮಾನ ಜನರನ್ನು ಕಾಡುತ್ತಿದೆ. ಅಷ್ಟೇ ಅಲ್ಲ, ಈ ಸಿಡಿಗಳು ಭವಿಷ್ಯದಲ್ಲಿ ಇನ್ನಷ್ಟು ತಲೆಗಳನ್ನು ಉರುಳಿಸಿದರೆ ಖಂಡಿತವಾಗಿಯೂ ಸರಕಾರ ಅಭದ್ರವಾಗಿ ಬಿಡಬಹುದು. ಯಡಿಯೂರಪ್ಪ ಅವರ ರಾಜಕೀಯ ನಿರ್ಗಮನಕ್ಕೂ ಇದು ಕಾರಣವಾಗಬಹುದು. ಆರೆಸ್ಸೆಸ್‌ನ ಹಿಡಿತ ರಾಜ್ಯ ಬಿಜೆಪಿಯ ಮೇಲೆ ಇನ್ನಷ್ಟು ಬಿಗಿಯಾಗಬಹುದು. ಯಾವ ಮಾರ್ಗದಲ್ಲಾದರೂ ಸರಿ, ಸರಕಾರ ರಚಿಸಿದರೆ ಆಯಿತು ಎನ್ನುವ ಯಡಿಯೂರಪ್ಪರ ರಾಜಕೀಯ ತಂತ್ರಗಾರಿಕೆ, ಇದೀಗ ಅವರಿಗೇ ತಿರುಗುಬಾಣವಾಗಿದೆ ಎಂದಷ್ಟೇ ಹೇಳಿ ಮುಗಿಸಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)