varthabharthi


ಸಂಪಾದಕೀಯ

ದೇಶಕ್ಕೆ ಹೊಸ ದಿಕ್ಕು ನೀಡಿದ ನೂರು ದಿನಗಳು....

ವಾರ್ತಾ ಭಾರತಿ : 9 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ತುರ್ತು ಪರಿಸ್ಥಿತಿ ಕಾಲಘಟ್ಟವನ್ನು ಹೊರತು ಪಡಿಸಿ, ಪ್ರಭುತ್ವದ ವಿರುದ್ಧ ಒಂದು ಬೃಹತ್ ಜನ ಚಳವಳಿ ನಡೆದಿದ್ದರೆ ಅದು ರೈತ ಚಳವಳಿಯೇ ಇರಬೇಕು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಜೆಪಿ ನೇತೃತ್ವದ ಹೋರಾಟಕ್ಕೂ ಈ ರೈತ ಚಳವಳಿಗೂ ವ್ಯತ್ಯಾಸವಿದೆ. ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ರಾಜಕಾರಣಿಗಳ ನೇತೃತ್ವದಲ್ಲಿ ನಡೆದಿರುವುದು ಮತ್ತು ಈ ದೇಶದ ಕ್ರೀಮಿಲೇಯರ್‌ನಲ್ಲಿದ್ದ ಪತ್ರಕರ್ತರು, ರಾಜಕಾರಣಿಗಳೇ ಇಲ್ಲಿ ಮುಂಚೂಣಿಯಲ್ಲಿದ್ದರು. ಶ್ರೀಸಾಮಾನ್ಯರ ನೇರ ಭಾಗೀದಾರಿಕೆ ಆ ಹೋರಾಟದಲ್ಲಿದ್ದಿರಲಿಲ್ಲ.

ಹೋರಾಟಗಾರರ ಉದ್ದೇಶ ನೇರವಾಗಿ ಸರಕಾರವನ್ನು ಬದಲಿಸುವುದೇ ಆಗಿತ್ತು. ಆದರೆ ಅಘೋಷಿತ ತುರ್ತುಪರಿಸ್ಥಿತಿಯ ವಿರುದ್ಧ ಈಗ ನಡೆಯುತ್ತಿರುವ ಚಳವಳಿಯ ಬೇರು ಈ ಮಣ್ಣಿನ ಆಳದಲ್ಲಿದೆ. ತಮ್ಮ ಬದುಕುವ ಹಕ್ಕಿಗಾಗಿ ರೈತರೇ ರೂಪಿಸಿ, ಮುನ್ನಡೆಸುತ್ತಿರುವ ಚಳವಳಿ ಇದಾಗಿದೆ. ಪ್ರಜಾಪ್ರಭುತ್ವದ ಮುಖವಾಡದಲ್ಲಿ ಸರ್ವಾಧಿಕಾರಿ ಆಡಳಿತ ಸಂವಿಧಾನವನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಿರುವಾಗ, ಅದನ್ನು ನೋಡಿ ವಿದ್ಯಾವಂತರು, ಮಾಧ್ಯಮಗಳು ವೌನವಾಗಿರುವಾಗ, ಈ ದೇಶಕ್ಕೆ ಹೊಸ ದಿಕ್ಕನ್ನು ನೀಡುವುದಕ್ಕೇನೋ ಎಂಬಂತೆ ರೈತ ಚಳವಳಿ ದೇಶಾದ್ಯಂತ ಹರಡಿತು. ಅವರ ಪ್ರತಿಭಟನೆ ಇದೀಗ ನೂರು ದಿನವನ್ನು ದಾಟಿದೆ. ತಾನು ನಡೆದದ್ದೇ ದಾರಿ ಎಂಬಂತೆ ಮುನ್ನಡೆಯುತ್ತಿರುವ ಸರ್ವಾಧಿಕಾರಿ ಮನಸ್ಥಿತಿಯ ಸರಕಾರವೊಂದಕ್ಕೆ ಈ ಪ್ರತಿಭಟನೆ ಸಣ್ಣದೊಂದು ಮೂಗುದಾರ ಹಾಕಿದೆ.

ಸಂಯುಕ್ತ ಕಿಸಾನ್ ಮೋರ್ಚಾದ ನಾಯಕತ್ವದಡಿ (ದೇಶದಾದ್ಯಂತ 500ಕ್ಕೂ ಅಧಿಕ ರೈತ ಸಂಘಗಳ ಒಕ್ಕೂಟ), ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಸಹಯೋಗದೊಂದಿಗೆ (ಎಐಕೆಎಸ್‌ಸಿಸಿ) ನವೆಂಬರ್ ಅಂತ್ಯದ ವೇಳೆ ಸಾವಿರಾರು ಟ್ರಾಕ್ಟರ್‌ಗಳೊಂದಿಗೆ ಪಂಜಾಬ್‌ನ ರೈತರು ದಿಲ್ಲಿಯ ಗಡಿಭಾಗಕ್ಕೆ ಆಗಮಿಸಿದರು. ಸಿಂಘು, ಟಿಕ್ರಿ ಮತ್ತು ಘಾಝಿಪುರ ಗಡಿಭಾಗದಲ್ಲಿ ಚಳಿಗಾಲದ ಅವಧಿಯಲ್ಲಿ ಟೆಂಟ್ ಹೂಡಿ ನೆಲೆಸಿದರು. ತಮ್ಮ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೇ ಹೋಗದ ಸರಕಾರಕ್ಕೆ ಮತ್ತು ದೇಶದ ನಗರಗಳಲ್ಲಿರುವ ಮಧ್ಯಮ ವರ್ಗದ ಅಧಿಕಾರಿ ವರ್ಗದವರಿಗೆ ತಮ್ಮ ಬೇಡಿಕೆ ಮತ್ತು ಆಗ್ರಹಗಳ ಬಗ್ಗೆ ಮನದಟ್ಟು ಮಾಡಿಸಲು ಪ್ರಜಾತಾಂತ್ರಿಕ ರೂಪದಲ್ಲಿ ರಸ್ತೆ ತಡೆ ಮತ್ತು ರೈಲು ತಡೆ ನಡೆಸಿದರು. ಆದರೆ ಸರಕಾರ ತನ್ನ ಜನವಿರೋಧಿ ನೀತಿಯನ್ನು ಮುಂದುವರಿಸಿತಲ್ಲದೆ ರೈತರ ಆಗ್ರಹ ಅಥವಾ ಅಹವಾಲನ್ನು ನಿಕೃಷ್ಟವಾಗಿ ನೋಡಿತು. ‘ಕೃಷಿ ಕಾಯ್ದೆಯ ಬಗ್ಗೆ ತಮ್ಮೆಂದಿಗೆ ಸರಕಾರ ಚರ್ಚೆ ನಡೆಸಿಲ್ಲ, ತಮ್ಮ ಸಲಹೆಯನ್ನೂ ಕೇಳಿಲ್ಲ’ ಎಂಬುದು ರೈತರ ದೂರಾಗಿದೆ. ಬಲಪಂಥೀಯ ಸಂಘಟನೆಗಳು ಮತ್ತು ಕೈಗೊಂಬೆ ಮಾಧ್ಯಮಗಳ ಮೂಲಕ ಸರಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸಿತು.

ಅಪಪ್ರಚಾರ ಹಬ್ಬಿಸಿ, ಬಲಪ್ರಯೋಗಿಸಿ, ರೈತರನ್ನು ಬಂಧಿಸುವ ಮೂಲಕ ಚಳವಳಿಯನ್ನು ಪ್ರತಿಬಂಧಿಸುವ ಯತ್ನ ನಡೆಸಿದೆ. ಜೊತೆಗೆ ಪಂಜಾಬ್‌ನಲ್ಲಿ ಆರ್ಥಿಕ ಮತ್ತು ಸಾರಿಗೆ ತಡೆಯ ಮೂಲಕವೂ ಪ್ರಯತ್ನ ನಡೆಸಿತು. ಆದರೆ ಇವೆಲ್ಲವೂ ರೈತರ ದೃಢ ಮನೋಭಾವದ ಎದುರು ನಿಷ್ಪಲವಾಯಿತು. ರೈತ ಮಹಿಳೆಯರು ಮತ್ತು ಹಿರಿಯ ರೈತರೂ ಚಳವಳಿಯಲ್ಲಿ ಪಾಲ್ಗೊಂಡಿದ್ದಷ್ಟೇ ಅಲ್ಲ, ನೇತೃತ್ವವನ್ನೂ ವಹಿಸಿದರು. ಕಳೆದ ಕೆಲ ತಿಂಗಳಿನಿಂದ ರೈತರ ಚಳವಳಿ ದೇಶದ ಉದ್ದಗಲಕ್ಕೂ ಹಬ್ಬಿದೆ. ಕೃಷಿ ಕಾಯ್ದೆಯ ರದ್ದತಿ, ವಿದ್ಯುಶ್ಛಕ್ತಿ ತಿದ್ದುಪಡಿ ಕಾಯ್ದೆಯ ರದ್ದತಿ , ಎಲ್ಲಾ ಬೆಳೆಗಳಿಗೂ ಕಾನೂನಿನ ಖಾತರಿ ಇರುವ ಕನಿಷ್ಠ ಬೆಂಬಲ ಬೆಲೆ, ಡೀಸೆಲ್ ಬೆಲೆ ಇಳಿಕೆ, ಸ್ವಾಮಿನಾಥನ್ ಸಮಿತಿ ವರದಿಯ ಅನುಷ್ಠಾನ ಈ ಬೇಡಿಕೆಗಳನ್ನು ಮುಂದಿರಿಸಿ ರೈತರ ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿದೆ. ರೈತರೊಂದಿಗೆ ಹಲವು ಸಭೆ ನಡೆಸಿದ ಬಳಿಕವೂ ಸರಕಾರ ರೈತರ ಬೇಡಿಕೆಗಳನ್ನು ನಿರಾಕರಿಸುತ್ತಿದೆ. ಕಳೆದ ಎರಡು ತಿಂಗಳಿನಲ್ಲಿ ರೈತರ ಪ್ರತಿಭಟನೆ ಉತ್ತರಪ್ರದೇಶ, ಉತ್ತರಾಖಂಡ, ಹರ್ಯಾಣ ಮತ್ತು ರಾಜಸ್ಥಾನಕ್ಕೂ ವಿಸ್ತರಿಸಿದೆ. ಹಲವು ರ್ಯಾಲಿಗಳು, ರೈತರ ಮಹಾಪಂಚಾಯತ್‌ಗಳು ನಡೆದಿದ್ದು ಇದರಲ್ಲಿ ಮಹಿಳೆಯರ ಸಹಿತ ಲಕ್ಷಾಂತರ ಜನತೆ ಪಾಲ್ಗೊಂಡಿದ್ದಾರೆ. ಈಗ ರೈತರು ದಿಲ್ಲಿಯತ್ತ ಸಾಗುವ ಪ್ರಮುಖ ರಸ್ತೆಗಳಲ್ಲಿ ತಡೆ ನಡೆಸಿದ್ದು, ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಕೃಷಿ ಕಾಯ್ದೆಗಳ ತಿದ್ದುಪಡಿಗೆ ಸಿದ್ಧ ಎಂದು ಕೇಂದ್ರ ಸರಕಾರ ಹೇಳಿದೆಯಾದರೂ, ಕೃಷಿ ಕಾಯ್ದೆಗಳನ್ನು ಸಂಪೂರ್ಣ ಹಿಂಪಡೆಯುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸಿವೆೆ. ಇದು ಕೇಂದ್ರದ ರೈತ ವಿರೋಧಿ ಕೃಷಿ ನೀತಿಯನ್ನು ವಿರೋಧಿಸುವುದಕ್ಕಾಗಿ ಹುಟ್ಟಿದ ಚಳವಳಿಯಾದರೂ, ದೇಶಾದ್ಯಂತ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಬೀರಿದೆ. ಸಿಎಎ ಕಾಯ್ದೆಯ ಮೂಲಕ ಇಡೀ ದೇಶವನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಸರಕಾರ ಯತ್ನಿಸಿತು. ಆದರೆ ದೇಶದ ಜಾತ್ಯತೀತ ಶಕ್ತಿಗಳು ಅದಕ್ಕೆ ಅವಕಾಶ ನೀಡಲಿಲ್ಲ. ಇದೀಗ ರೈತರ ಚಳವಳಿ, ಕೋಮು ಗಾಯಗಳನ್ನು ಒಣಗಿಸಿ ಎಲ್ಲ ಜಾತಿ, ಧರ್ಮದ ಜನರನ್ನು ಒಂದಾಗುವಂತೆ ಮಾಡಿದೆ. ಅಷ್ಟೇ ಅಲ್ಲ, ಸರಕಾರದ ಎಲ್ಲ ಬಗೆಯ ಜನವಿರೋಧಿ ನೀತಿಗಳನ್ನು ಪ್ರತಿಭಟಿಸುವುದಕ್ಕೆ ಇತರರಿಗೂ ಧೈರ್ಯ ನೀಡಿದೆ.

ಜೊತೆಗೆ, ಪ್ರತಿಭಟನೆಯಿಂದಾಗಿ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದು ಜಾಗಜ್ಜಾಹೀರಾಯಿತು. ರೈತರ ಹೋರಾಟ ಭಾರತದ ಹೋರಾಟ ಪರಂಪರೆಯ ಹಿರಿಮೆಯನ್ನು ಜಾಗತಿಕವಾಗಿ ಹೆಚ್ಚಿಸಿತು. ಅಹಿಂಸಾ ಪ್ರತಿಭಟನೆ, ಸತ್ಯಾಗ್ರಹಕ್ಕೆ ಈ ದೇಶದಲ್ಲಿ ಇನ್ನೂ ಭವಿಷ್ಯವಿದೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿತು. ನೂರು ದಿನಗಳಲ್ಲಿ ಸುಮಾರು 248 ರೈತರು ಮೃತಪಟ್ಟಿದ್ದಾರೆ. ಇದರಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ರೈತರು ಯಾವುದೇ ಹಿಂಸಾಚಾರಕ್ಕೆ ಇಳಿದಿಲ್ಲ. ದಿಲ್ಲಿಯ ರಸ್ತೆಗಳಲ್ಲಿ ಸರಿಯಾದ ವಸತಿಯಿಲ್ಲದೆ, ಅನ್ನಾಹಾರವಿಲ್ಲದೆಯೂ ಸಹನೆಯಿಂದ, ತಾಳ್ಮೆಯಿಂದ ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದಾರೆ. ಇವರ ಸಹನೆ, ತಾಳ್ಮೆಯ ಅಸ್ತ್ರದ ಮುಂದೆ ಪ್ರಭುತ್ವದ ಲಾಠಿ ಅಸಹಾಯಕವಾಗಿದೆ.

 ರೈತರು ಈ ಹೋರಾಟದಲ್ಲಿ ಗೆದ್ದರೆ ಇಡೀ ಭಾರತವೇ ಗೆದ್ದಂತೆ. ಈಗಾಗಲೇ ಸರಕಾರ ಕೈಗೆತ್ತಿಕೊಂಡಿರುವ ಇನ್ನಷ್ಟು ಜನವಿರೋಧಿ ನೀತಿಗಳ ವಿರುದ್ಧ ಒಂದಾಗಿ ಪ್ರತಿಭಟಿಸುವುದಕ್ಕೆ ಈ ಗೆಲುವು ಸ್ಫೂರ್ತಿಯಾಗಲಿದೆ. ಒಟ್ಟಿನಲ್ಲಿ ಸರ್ವಾಧಿಕಾರ ಸೋತು ಸಂವಿಧಾನ ಗೆಲ್ಲುವುದು ಇಂದಿನ ಅಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)