varthabharthi


ಅನುಗಾಲ

ಕ್ರಿಕೆಟ್ ರಾಜಕೀಯ

ವಾರ್ತಾ ಭಾರತಿ : 11 Mar, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕ್ರಿಕೆಟ್ ಒಂದು ಕ್ರೀಡೆ. ಗೆದ್ದರೆ ಬಹುಮಾನವಿದೆ. ಆದರೆ ಬಹುಮಾನವೇ ಮುಖ್ಯವಾದಾಗ ಮನರಂಜನೆಯಾಗಲೀ, ಜನಹಿತವಾಗಲೀ ಹಿಂದೆ ಸರಿಯುತ್ತದೆ. ಐದು ದಿನಗಳ ಪಂದ್ಯ ಹೀಗೆ ಮೊಟಕಾದಾಗ ಪ್ರಾಯೋಜಕರಿಗೆ ನಷ್ಟವಾದರೆ ಯಾರು ಹೊಣೆ? ಆಟಗಾರರು ಯಥಾವತ್ತು ಹಣ ಬಾಚಿಕೊಳ್ಳುತ್ತಾರೆ. ಅವರೂ ದಿನಗೂಲಿಗಳಾದರೆ ಪ್ರಾಯಃ ಐದು ದಿನವೂ ಆಡಬಹುದಾದ ಪಿಚ್ ನಿರ್ಮಾಣವಾಗಬಹುದೇನೋ? ಆಟಗಾರರ ಸಾಮರ್ಥ್ಯಕ್ಕಿಂತ ಪಿಚ್‌ನ ಸಾಮರ್ಥ್ಯವೇ ಹೆಸರು ಮಾಡಿತು.


ಭಾಷೆಯ ವಿನ್ಯಾಸ ಮತ್ತು ನಿರೂಪಣೆಯನ್ನು ಗಮನಿಸಿದರೆ ರಾಜಕೀಯ, ರಾಜಕಾರಣ, ರಾಜನೀತಿ- ಇವೆಲ್ಲ ಸಾಮ್ಯತೆಯನ್ನು ಹೊಂದಿಯೂ ಅಲ್ಪಸ್ವಲ್ಪಮತ್ತು ಸಾಂದರ್ಭಿಕ ವ್ಯತ್ಯಾಸಗಳನ್ನು ಹೊಂದಿರುವ ಪದಗಳು. ಇಂಗ್ಲಿಷಿನಲ್ಲಿ ನಾವು ಪಾಲಿಟಿಕ್ಸ್, ಪೊಲಿಟಿಕಲ್ ಸೈನ್ಸ್ ಮುಂತಾದ ಪದಗಳನ್ನು ಬಳಸಿದಾಗಲೂ ರೂಢೀಗತ ಬಳಕೆಯಲ್ಲಿ ಅವು ಬಹಳ ಭಿನ್ನ ಅರ್ಥಗಳನ್ನು ಹೊಂದಿರುವುದಿಲ್ಲ. ರಾಜಕೀಯ ಅಂದರೆ ರಾಷ್ಟ್ರ ಇಲ್ಲವೇ ರಾಜ್ಯದ ರಾಜನೀತಿಗೆ ಸಂಬಂಧಿಸಿದ, ಇಲ್ಲವೇ ಸರಕಾರದ ರೀತಿನೀತಿಗಳ ಚೌಕಟ್ಟು ಎಂದು ಭಾವಿಸಬಹುದು. ಇವು ಇಂದು ನಿನ್ನೆಯದಲ್ಲ. ಭಾಷೆ ಬಳಕೆಗೆ ಬಂದಾಗಿನಿಂದ ಇವು ಆಳುವವರ ಮತ್ತು ಆಳಿಸಿಕೊಳ್ಳುವವರ ಅರ್ಥಕೋಶದಲ್ಲಿ ಹುದುಗಿರುವ ವಿಚಾರಗಳು. ಆದರೆ ಮನುಷ್ಯರ ವಿಲಕ್ಷಣ ಮತ್ತು ವಿಕ್ಷಿಪ್ತ ನಡವಳಿಕೆಯಿಂದಾಗಿ ಇವು ಸಹಜ ಮತ್ತು ಕೃತ್ರಿಮ, ಸಾತ್ವಿಕ ಮತ್ತು ಕುಟಿಲ ನಡವಳಿಕೆಯ ಲಕ್ಷಣಗಳನ್ನು ಹೇಳುತ್ತವೆ. ಇದರಿಂದಾಗಿ ಬದುಕಿನ ಯಾವುದೇ ಕ್ಷೇತ್ರದಲ್ಲಾದರೂ ರಾಜಕೀಯ ಮಾಡುವುದು/ನಡೆಸುವುದು ಎಂದರೆ ಹೇಗಾದರೂ ಅಧಿಕಾರದಲ್ಲಿ ಉಳಿಯುವುದು ಅಥವಾ ಮೇಲ್ಮೆಯನ್ನು ಸಾಧಿಸುವುದು ಎಂದು ಅರ್ಥ. ಹಾದಿ ಮತ್ತು ಗುರಿ ಇವೆರಡೂ ಸರಿಯಾಗಿರಬೇಕೆಂದು ಗಾಂಧಿ ಬಯಸಿದರೂ ಅವು ಹೊಟ್ಟೆಪಾಡಿನ ಮಡಿಕೆಯಲ್ಲಿ ಬೇಯುವುದಿಲ್ಲವೆಂಬುದನ್ನು ಆಧುನಿಕ ಜಗತ್ತು, ಸಮಾಜ ತೋರಿಸಿಕೊಟ್ಟಿದೆ. ಪ್ರಾಯಃ ಎಲ್ಲ ಶಾಸ್ತ್ರಗಳೂ ಆದರ್ಶವನ್ನು ಬೋಧಿಸಿ ಅವು ಹೇಗೆ ವಾಸ್ತವದಲ್ಲಿ ವಿಫಲವಾಗುತ್ತವೆಂಬುದನ್ನು ಹೇಳಿವೆ.

ಕ್ರಿಕೆಟ್ ಬಗ್ಗೆ ಇಷ್ಟೊಂದು ವೇದಾಂತ ಯಾಕೆಂದು ಅನ್ನಿಸಿದರೂ ಗಂಭೀರವಾಗಿ ಯಾವುದೇ ವಿಚಾರವನ್ನು ಮನ್ನಿಸಬೇಕಾದರೂ ಅದರ ಬೇರುಗಳು ನಮ್ಮ ದೃಷ್ಟಿಯಲ್ಲಿರಬೇಕು. ರಾಜಕೀಯವೆಂಬ ಪದ ಇಂದು ಸಾಹಿತ್ಯ, ಕಲೆ, ಧರ್ಮ, ವಿಜ್ಞಾನ ಈ ಎಲ್ಲ ಮಗ್ಗುಲುಗಳಲ್ಲೂ ಪ್ರತ್ಯಕ್ಷವಾಗಿವೆ ಮಾತ್ರವಲ್ಲ, ಪ್ರಭಾವಶಾಲಿಯಾಗಿವೆ. ಸಾಹಿತಿಯೊಬ್ಬ ರಾಜಕೀಯ ಮಾಡಿ ಮೇಲೆ ಬಂದ ಎಂಬ ಪದವನ್ನು ಎಗ್ಗಿಲ್ಲದೆ ಬಳಸುತ್ತೇವೆ. ಇದು ಇತರ ಕ್ಷೇತ್ರಗಳಿಗೂ ಸರಿಯೇ.

ಸದ್ಯ ಕ್ರಿಕೆಟ್ ರಾಜಕೀಯವನ್ನಷ್ಟೇ ಕೈಗೆತ್ತಿಕೊಂಡಿದ್ದೇನೆ: ಇತ್ತೀಚೆಗೆ ಭಾರತ-ಇಂಗ್ಲೆಂಡ್ ನಡುವಣ ನಾಲ್ಕು ಟೆಸ್ಟ್‌ಗಳ ಸರಣಿಯ ಮೊದಲೆರಡು ಪಂದ್ಯಗಳು ಚೆನ್ನೈಯಲ್ಲಿ ನಡೆದವು. ಉಭಯ ತಂಡಗಳೂ ಸಮಾನ ಬಲ ತೋರಿದವು. ಕ್ರಿಕೆಟ್ ಎಂಬ ಪಂದ್ಯ ಗೆದ್ದಿತು. ಮೂರನೇ ಮತ್ತು ನಾಲ್ಕನೇ ಪಂದ್ಯಗಳು ಗುಜರಾತಿನ ಅಹಮದಾಬಾದಿನ ಮೊಟೆರಾ ಮೈದಾನದ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರಿಡಾಂಗಣದಲ್ಲಿ ನಡೆದವು. ಈ ಕ್ರೀಡಾಂಗಣವು ಸುಸಜ್ಜಿತವಾಗಿ ನಿರ್ಮಾಣವಾಗಿತ್ತು. ಈ ಹೊಸ ಕ್ರೀಡಾಂಗಣವನ್ನು ದೇಶದ ರಾಷ್ಟ್ರಪತಿ ಉದ್ಘಾಟಿಸಿದರು. ಆದರೆ ಹಿಂದಿನ ದಿನದವರೆಗೂ ಗುಟ್ಟಾಗಿರಿಸಿ ಈ ಕ್ರೀಡಾಂಗಣವನ್ನು ‘ನರೇಂದ್ರ ಮೋದಿ ಕ್ರೀಡಾಂಗಣ’ವೆಂದು ಮರುನಾಮಕರಣ ಮಾಡಲಾಯಿತು. ಪಟೇಲರ ಹೆಸರು ಅಳಿಯಿತು-ಕನಿಷ್ಠ ದಾಖಲೆಗಳಲ್ಲಾದರೂ. ದೇಶದ ಐಕ್ಯತೆಯನ್ನು ಸಾರಿದ ಪಟೇಲರಿಗೆ ಭವ್ಯಮೂರ್ತಿಯನ್ನು ಸ್ಥಾಪಿಸಿದ ಸರಕಾರವು ಪರೋಕ್ಷವಾಗಿ ಮೂರ್ತಿಭಂಜನೆಯನ್ನು ಮಾಡಿತು.

ದೇಶದ ನಾಯಕರೊಬ್ಬರ ಹೆಸರನ್ನಿಡುವುದು ಹೊಸತೇನೂ ಅಲ್ಲ. ಗಾಂಧಿ, ನೆಹರೂ ಮತ್ತಿತರ ಅನೇಕ ನಾಯಕರ ಹೆಸರುಗಳು ದೇಶದ ಬಹುತೇಕ ಸಾರ್ವಜನಿಕ ವಲಯದ ಮತ್ತು ಕೆಲವೊಮ್ಮ್ಮೆ ಖಾಸಗಿ ಸಂಸ್ಥೆಗಳಿಗೂ ಇಟ್ಟ ನಿದರ್ಶನಗಳು ಬೇಕಷ್ಟಿವೆ. ದೇಶದ ಗುಲಾಮಗಿರಿಯನ್ನು ಸಂಕೇತಿಸುವ ಹೆಸರುಗಳನ್ನು ಬದಲಾಯಿಸಿ ಭಾರತೀಯವಾದ ಹೆಸರನ್ನಿಟ್ಟದ್ದೂ ಇದೆ. 1932ರಲ್ಲಿ ಬ್ರಿಟಿಷರು ಸ್ಥಾಪಿಸಿದ ವಿಲ್ಲಿಂಗ್ಡನ್ ಆಸ್ಪತ್ರೆಗೆ ಸ್ವತಂತ್ರ ಭಾರತದಲ್ಲಿ ರಾಮಮನೋಹರ ಲೋಹಿಯಾ ಆಸ್ಪತ್ರೆಯೆಂದು ನಾಮಕರಣ ಮಾಡಲಾಯಿತು. ವಿಶೇಷವೆಂದರೆ 1970ರಲ್ಲಿ ಈ ನಾಮಕರಣವಾದಾಗ ಇಂದಿರಾ ಗಾಂಧಿ ಸರಕಾರ ಆಡಳಿತದಲ್ಲಿತ್ತು. ಲೋಹಿಯಾ ಹೇಳಿಕೇಳಿ ಸಮಾಜವಾದಿ. ನೆಹರೂ ಯುಗದಿಂದಲೇ ಕಾಂಗ್ರೆಸಿನೊಂದಿಗೆ ಮಾತ್ರವಲ್ಲ, ನೆಹರೂ ಅವರೊಂದಿಗೇ ನೇರ ಭಿನ್ನಾಭಿಪ್ರಾಯವನ್ನು ಹೊಂದಿದ್ದವರು. ಆದರೆ ಇವ್ಯಾವುದೂ ಅವರ ಹೆಸರನ್ನಿಡಲು ಅಡ್ಡಿಯಾಗಲಿಲ್ಲ. ಪ್ರಜಾಪ್ರಭುತ್ವವು ಗೆದ್ದಿತು. ಇಂತಹ ಅನೇಕ ಮರುನಾಮಕರಣಗಳಾಗಿವೆ. ಅವ್ಯಾವುದೂ ವ್ಯಕ್ತಿಗತವಾಗಲೀ ಸೇಡಿನ ಕ್ರಮವಾಗಲೀ, ಸಮಾಜದ ಸ್ವಾಸ್ಥವನ್ನು ಕೆಡಿಸುವಂಥದ್ದಾಗಲೀ ಆಗಿರಲಿಲ್ಲ. ಇನ್ನು ಕೆಲವು ಬಾರಿ ಹೆಸರು ಬದಲಾದರೂ ಬಳಕೆ ಬದಲಾಗುವುದಿಲ್ಲ. ‘ಬರೋಡಾ’ ‘ವಡೋದ್ರಾ’ ಆದರೂ ‘ಬ್ಯಾಂಕ್ ಆಫ್ ಬರೋಡಾ’ ಹಾಗೆಯೇ ಉಳಿದಿದೆ. ‘ಅಲಹಾಬಾದ್’ ಮತೀಯ ಕಾರಣಕ್ಕಾಗಿ ‘ಪ್ರಯಾಗರಾಜ್’ ಆದರೂ ಅಲ್ಲಿನ ಉಚ್ಚನ್ಯಾಯಾಲಯಗಳು ಮಾತ್ರವಲ್ಲ ಜನರೂ ಹಳೆಯ ಹೆಸರನ್ನು ಮುಂದುವರಿಸಿದ್ದಾರೆ. ಹೀಗೆ ರಾಜಕೀಯವನ್ನೂ ಮೀರಿ ಸದಾಚಾರ ನೆಲೆನಿಲ್ಲುತ್ತದೆ.

ಇರಲಿ. ರಾಜಕೀಯದ ಪ್ರಶ್ನೆ ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆಬೇರೆ ರೀತಿಯಲ್ಲಿ ಪ್ರವೇಶಿಸಿದೆ. (ಎಲ್ಲ ಕ್ರೀಡೆಗಳಲ್ಲೂ ಇವೆ. ಆದರೆ ಅವು ಕ್ರಿಕೆಟ್‌ನಂತೆ ಬಟಾಬಯಲಾಗಿಲ್ಲ. ಒಳಾಂಗಣದಲ್ಲೇ ಇವೆ!) ಅಹಮದಾಬಾದಿನ ಹೊಸ ಕ್ರೀಡಾಂಗಣದ ಎರಡು ತುದಿಗಳಿಗೆ ಅದಾನಿ ಮತ್ತು ರಿಲಯನ್ಸ್ ಎಂದು ಮೊದಲೇ ಹೆಸರಿಟ್ಟಿದ್ದರಂತೆ. ಈಗ ಅದು ಹೊಸ ರಾಜಕೀಯದ ಅರ್ಥ ಮತ್ತು ವ್ಯಾಖ್ಯೆಯನ್ನು ಪಡೆದುಕೊಂಡಿತು. ಗುಜರಾತಿನಲ್ಲಿ ಮೋದಿ-ಅಮಿತ್ ಶಾ ಅವರದ್ದೇ ಕಳೆದ ಎರಡು ದಶಕಗಳಿಂದ ಕಾರುಬಾರು. ಕಾಂಗ್ರೆಸಿನ ವಂಶಪಾರಂಪರ್ಯ ಆಡಳಿತದ ವಿರುದ್ಧ ಜನಾಭಿಪ್ರಾಯ ರೂಪಿಸಿ ಭಾಜಪವನ್ನು ಅಧಿಕಾರಕ್ಕೆ ತರುವಲ್ಲಿ ಈ ಇಬ್ಬರ ಶ್ರಮ ಅಪಾರ. ಆದರೆ ಅಧಿಕಾರಕ್ಕೆ ಬಂದ ತರುಣದಲ್ಲೇ ಅಮಿತ್ ಶಾ ಅವರ ಮಗ ಸಂಜಯ್

‌ಗಾಂಧಿಯಂತಲ್ಲದಿದ್ದರೂ ಯಥಾಶಕ್ತಿ ಅಕ್ರಮ ಹಿರಣ್ಯವನ್ನು ಸಂಪಾದಿಸಿದ್ದು ಲೋಕವಿದಿತ. ಇಷ್ಟೇ ಅಲ್ಲ, ಕ್ರಿಕೆಟ್‌ನಲ್ಲಿ ಹೆಸರೇ ಇಲ್ಲದ ಜೈ ಶಾ ಶ್ರೀಮಂತ ಹಾಗೂ ವಿಶ್ವ ಕ್ರಿಕೆಟಿನಲ್ಲೇ ಭಾರೀ ಪ್ರಭಾವಶಾಲಿ ಸಂಸ್ಥೆಯಾದ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾದದ್ದು ನಭೂತೋ ರಾಜಕೀಯ. ಈ ಏಣಿಮೆಟ್ಟಲುಗಳು ಏರುತ್ತಲೇ ಹೋಗಿ ಈಗ ಆತ ಏಶ್ಯದ ಕ್ರಿಕೆಟ್ ಮಂಡಳಿಯ ಅಧ್ಯಕ್ಷನಾಗಿದ್ದಾರೆ. ಇಂತಹ ಕ್ರಿಕೆಟ್ ಕುತೂಹಲಗಳು ಕಾಂಗ್ರೆಸಿಗರನ್ನು ನಾಚಿಸುವಂತಿವೆ. ಮುಂದಿನ ದಿನಗಳಲ್ಲಿ ಆತ ಭಾರತದ ಕ್ರಿಕೆಟ್ ತಂಡಕ್ಕೆ ‘ಆಡದಿರುವ’ (ನಾನ್‌ಪ್ಲೇಯಿಂಗ್) ನಾಯಕನಾದರೆ ಹುಬ್ಬೇರಿಸುವ ಅಗತ್ಯವಿಲ್ಲ.

ಇಷ್ಟೇ ಆಗಿದ್ದರೆ ಏನೂ ಅನ್ನಿಸುತ್ತಲಿರಲಿಲ್ಲ. ಈ ಪಂದ್ಯಗಳು ತಮ್ಮಷ್ಟಕ್ಕೆ ಮುಂದುವರಿಯುತ್ತಿದ್ದುವೇನೋ? ನಮ್ಮ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಆತ್ಮನಿರ್ಭರವಾಗಿ ತನಗಿಷ್ಟಬಂದಂತೆ ಪಿಚ್‌ಗಳನ್ನು ರೂಪಿಸಿತು. ಕ್ಯುರೇಟರ್ ಎಂಬ ಕಟ್ಟಪ್ಪಗಳು ಶಿರಸಾವಹಿಸಿ ನಡೆಸಿದ ಈ ಕಾಯಕದಿಂದಾಗಿ ಭಾರತ ಮೂರನೇ ಪಂದ್ಯವನ್ನು ಕ್ಷಣಾರ್ಧದಲ್ಲಿ ಗೆದ್ದಿತು. ನಮ್ಮ ಸ್ಪಿನ್ನರುಗಳು ತಮ್ಮ ಬತ್ತಳಿಕೆ ತುಂಬ ಬಾಣಗಳನ್ನು ತುಂಬಿಸಿಕೊಂಡರೆ ವೇಗಿಗಳು ಹತಾಶ ಸ್ಥಿತಿಯನ್ನು ತೋರಿಸಿಕೊಳ್ಳದೆ ಚಪ್ಪಾಳೆ ತಟ್ಟಿದರು. ನಾಲ್ಕನೆಯ ಪಂದ್ಯವೂ ಇದೇ ಹಾದಿಯಲ್ಲಿ ಮುಂದುವರಿಯಿತು. ಕೊನೆಗೂ ಭಾರತವು 3-1 ಅಂತರದಿಂದ ಗೆದ್ದಿತು. ಕ್ರಿಕೆಟ್ ಸೋತಿತು.

ಈ ಬಗ್ಗೆ ಮಾಧ್ಯಮಗಳು ಚಕಾರವೆತ್ತದೆ ಹರ್ಷಿಸಿದವು. ಆದರೆ ಜನರು ಮಿಶ್ರಪ್ರತಿಕ್ರಿಯೆ ನೀಡಿದರು. ನಮ್ಮ ಕ್ರಿಕೆಟಿಗರು ಇದನ್ನು ತಾತ್ವಿಕವಾಗಿ ಮತ್ತು ಸೈದ್ಧಾಂತಿಕವಾಗಿಯೆಂಬಂತೆ ಚರ್ಚಿಸಿದರು. ಪ್ರತೀ ರಾಷ್ಟ್ರಕ್ಕೂ ತನಗೆ ಬೇಕಾದ ಪಿಚ್‌ಗಳನ್ನು ಸಿದ್ಧಪಡಿಸುವ ಸ್ವಾತಂತ್ರ್ಯವಿದೆ. ಮಾತ್ರವಲ್ಲ, ಅದು ಕ್ರೀಡಾಮನೋಭಾವಕ್ಕೆ ವಿರುದ್ಧವಾಗಿಲ್ಲವೆಂದು ಪ್ರತಿಪಾದಿಸಿದರು. ರವಿಶಾಸ್ತ್ರಿ ಎಂಬ ಸದಾ ಕ್ರಿಕೆಟ್ ಮಂಡಳಿಯ ಸೇವಕ ಹೊರದೇಶಗಳಲ್ಲಿ ವೇಗದ ಬೌಲರುಗಳಿಗೆ ಬೇಕಾದಂತೆ ಪಿಚ್ ಸಿದ್ಧಪಡಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ಆದರೆ ಐದು ದಿನಗಳಲ್ಲಿ 2 ಪಂದ್ಯಗಳನ್ನು ಮುಗಿಸುವ ಈ ವಿಚಿತ್ರಕೆ ನಮಿಸುವಲ್ಲಿ ಪಿಚ್ ಹೇಗಿದ್ದರೂ ಅದು ಎರಡು ತಂಡಗಳಲ್ಲಿ ಒಂದನ್ನು ಮಾತ್ರವಲ್ಲ, ಕ್ರಿಕೆಟನ್ನೇ ಸೋಲಿಸಿತು. ಕ್ರಿಕೆಟ್ ಒಂದು ಕ್ರೀಡೆ. ಗೆದ್ದರೆ ಬಹುಮಾನವಿದೆ. ಆದರೆ ಬಹುಮಾನವೇ ಮುಖ್ಯವಾದಾಗ ಮನರಂಜನೆಯಾಗಲೀ, ಜನಹಿತವಾಗಲೀ ಹಿಂದೆ ಸರಿಯುತ್ತದೆ. ಐದು ದಿನಗಳ ಪಂದ್ಯ ಹೀಗೆ ಮೊಟಕಾದಾಗ ಪ್ರಾಯೋಜಕರಿಗೆ ನಷ್ಟವಾದರೆ ಯಾರು ಹೊಣೆ? ಆಟಗಾರರು ಯಥಾವತ್ತು ಹಣ ಬಾಚಿಕೊಳ್ಳುತ್ತಾರೆ. ಅವರೂ ದಿನಗೂಲಿಗಳಾದರೆ ಪ್ರಾಯಃ ಐದು ದಿನವೂ ಆಡಬಹುದಾದ ಪಿಚ್ ನಿರ್ಮಾಣವಾಗಬಹುದೇನೋ? ಆಟಗಾರರ ಸಾಮರ್ಥ್ಯಕ್ಕಿಂತ ಪಿಚ್‌ನ ಸಾಮರ್ಥ್ಯವೇ ಹೆಸರು ಮಾಡಿತು.

1960-70ರ ದಶಕಗಳಲ್ಲಿ ಕ್ರಿಕೆಟ್ ಆಟಗಾರರು ದಿನವೊಂದಕ್ಕೆ 200 ರೂಪಾಯಿಗಳನ್ನು ಪಡೆಯುತ್ತಿದ್ದ ಕಾಲದಲ್ಲಿ ನಾಲ್ಕೇ ದಿನಗಳಿಗೆ ಪಂದ್ಯ ಮುಗಿದಾಗ ಅವರ ಸಂಬಳದಲ್ಲೂ ಒಂದು ದಿನದ ಸಂಬಳವನ್ನು ಕಡಿತಗೊಳಿಸಲಾಗುತ್ತಿತ್ತು ಎಂದು ಬಿಷನ್‌ಸಿಂಗ್ ಬೇಡಿ ನೆನಪು ಮಾಡಿಕೊಂಡಿದ್ದಾರೆ. ಭಾರತದ ಸ್ಪಿನ್ ದಾಳಿಗೆ ಇಂಗ್ಲೆಂಡ್ ದಾಂಡಿಗರು ತರಗೆಲೆಗಳಂತೆ ಹಾರಿಹೋದರು. ನಮ್ಮವರು ಆಡಿದರಲ್ಲ ಎಂಬ ತರ್ಕವನ್ನು ಕೆಲವರು ಹೂಡಿದರು. ನಾವು ಮೊದಲ ಓವರಿನಿಂದಲೇ ಸ್ಪಿನ್ನರುಗಳನ್ನು ಬೌಲ್ ಮಾಡಿಸಲು ಪ್ರೇರಣೆಯಾದ ಅಂಶ ಅವರ ಸಾಮರ್ಥ್ಯವಲ್ಲ; ಪಿಚ್‌ನ ಲಕ್ಷಣ. ಪಿಚ್ ಹೀಗೇ ಇರುತ್ತದೆಯಾದರೆ ಭಾರತವಂತೂ 11 ಸ್ಪಿನ್ನರುಗಳನ್ನೇ ಆಡಿಸಬಹುದೇನೋ? ಫಲಿತಾಂಶದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದೆ. ಮಾಜಿ ಕ್ರಿಕೆಟಿಗ ಯುವರಾಜ್‌ಸಿಂಗ್ ಇಂತಹ ಪಿಚ್ ಇರುತ್ತಿದ್ದರೆ ಅನಿಲ್‌ ಕುಂಬ್ಳೆ 1,000, ಹರಭಜನ್‌ಸಿಂಗ್ 800 ವಿಕೆಟ್‌ಗಳನ್ನು ಪಡೆಯುತ್ತಿದ್ದರು ಎಂದು ತನ್ನ ಕಳವಳವನ್ನು ತೋಡಿಕೊಂಡರು. ಅದು ಕ್ರೀಡಾಸ್ಫೂರ್ತಿ.

ವೆಸ್ಟ್ ಇಂಡೀಸಿನ ಜಗದ್ವಿಖ್ಯಾತ ಆಟಗಾರ ವಿವಿಯನ್ ರಿಚರ್ಡ್ಸ್ ಈ ಟೀಕೆಗಳನ್ನು ಅಲ್ಲಗಳೆದು ಸ್ಪಿನ್ ದಾಳಿಯನ್ನು ಎದುರಿಸುವತ್ತ ಇಂಗ್ಲೆಂಡಿನ ಆಟಗಾರರು ಸಿದ್ಧವಾಗಬೇಕೆಂದು ತಿಳಿಹೇಳಿದರು. ಆದರೆ ಇದೇ ಆಟಗಾರ 1990ರ ದಶಕದಲ್ಲಿ ನರೇಂದ್ರ ಹಿರ್ವಾನಿ ವಿಂಡೀಸಿನ ಎದುರು ಒಂದು ಪಂದ್ಯದಲ್ಲಿ 16 ವಿಕೆಟ್ ಕಬಳಿಸಿದಾಗ ‘‘ನೀವು ನಮ್ಮಲ್ಲಿಗೆ ಬನ್ನಿ. ನಮ್ಮ ದಾಳಿ ಹೇಗಿರುತ್ತದೆಂದು ತೋರಿಸಿಕೊಡುತ್ತೇವೆ’’ ಎಂದು ಹೇಳಿದ್ದನ್ನು ಮರೆತಿದ್ದರು. ಇನ್ನೊಬ್ಬರ ಕಾಯಿಲೆಗೆ ಔಷಧಿ ಮಾಡುವುದು ಸುಲಭ. ತನಗೇ ಹಸಿವಾದಾಗ ವೇದಾಂತ ಸಲ್ಲುವುದಿಲ್ಲ.

 ಸಹಜವಾದ ಮತ್ತು ಸಮತೋಲದ ಪ್ರತಿಕ್ರಿಯೆಯನ್ನು ನೀಡಿದ್ದು ಪಾಕಿಸ್ಥಾನದ ಮಾಜಿ ನಾಯಕ ಮತ್ತು ವಿಶ್ವವಿಖ್ಯಾತ ಆಟಗಾರ ಇನ್‌ಝಿಮಾಮುಲ್ ‌ಹಕ್. ಈತ ಈ ಸೋಲು-ಗೆಲುವು, ಸ್ಪಿನ್ ಇತ್ಯಾದಿಗಳಿಗೆ ಪ್ರತಿಕ್ರಿಯೆ ನೀಡುತ್ತ ಇಂಗ್ಲೆಂಡಿನ ನಾಯಕ ಜೋ ರೂಟ್ (ಈತ ಬೌಲರನಲ್ಲ) 8 ಓಟಗಳಿಗೆ 5 ವಿಕೆಟ್ ಪಡೆಯುತ್ತಾನಾದರೆ ಅ ಪಿಚ್ ಹೇಗಿದ್ದೀತು ಎಂದು ನಕ್ಕರು. ಆ ಮಾತಿನಲ್ಲಿ ಎಲ್ಲವೂ ಅಡಗಿತ್ತು.

ಎರಡು ಕಾರಣಗಳಿಗಾಗಿ ಭಾರತಕ್ಕೆ ಈ ಗೆಲುವು ಅನಿವಾರ್ಯವಾಗಿತ್ತು: ಇವು ಸ್ವಾರ್ಥ ಮತ್ತು ಪರಾರ್ಥದ ಕಕ್ಷೆಯಲ್ಲಿವೆ. ಈ ಸರಣಿಯನ್ನು ಗೆದ್ದರೆ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಆಯ್ಕೆಯಾಗಿ ಮುಂದಿನ ತಿಂಗಳು ಇಂಗ್ಲೆಂಡಿನ ಸೌಥಾಂಪ್ಟನ್ ಮೈದಾನದಲ್ಲಿ ನ್ಯೂಝಿಲ್ಯಾಂಡನ್ನು ಎದುರಿಸಲು ಅರ್ಹವಾಗುವುದು. ಇದು ಭಾರೀ ಹಣದ ಹೊಳೆಯನ್ನು ಹರಿಸುವ ಸುತ್ತು. ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದಾಗಲೇ ಈ ಒತ್ತಡವನ್ನು ಭಾರತ ತಂಡ ಅನುಭವಿಸಿತ್ತು. ಅದನ್ನು ಬಗೆಹರಿಸಲು ಕ್ಯುರೇಟರ್ ಬ್ರಹ್ಮಸೃಷ್ಟಿ ನಡೆಯಿತು. ಎರಡನೆಯದು ಮೋದಿ ಹೇಳುವ ಆತ್ಮನಿರ್ಭರತೆ. ಅವರ ಹೆಸರಿನ ಕ್ರೀಡಾಂಗಣದಲ್ಲಿ ಭಾರತ ಸೋಲುವುದಿಲ್ಲ ಎಂಬ ಭವಿಷ್ಯವನ್ನು ಅವರ ಅನುಯಾಯಿಗಳು ಎಲ್ಲಕಡೆ ಸಾರಿದ್ದರು. ಈ ದೊಡ್ಡಸ್ತಿಕೆಯನ್ನು ಕಳೆದುಕೊಳ್ಳುವುದು ಹೇಗೆ? ಉತ್ತರ ಕೊರಿಯಾದಂತಹ ಕೆಲವೆಡೆ ಸರ್ವಾಧಿಕಾರಿಗಳ ಆಡಳಿತದಲ್ಲಿ ಸೋತವರನ್ನು ಸದ್ದಿಲ್ಲದೆ ನೇಣು ಹಾಕುತ್ತಾರಂತೆ. ಹಾಗಾಗಬಾರದಲ್ಲ! ಹೀಗಾಗಿ ಈ ಎರಡೂ ಮೂಲಿಕೆಗಳು ಸೇರಿ -ನಮ್ಮ ವೇಗಿಗಳಿಗೆ ವಿಕೆಟ್ ಸಿಕ್ಕದಿದ್ದರೂ ಪರವಾಗಿಲ್ಲ- ಸ್ಪಿನ್ನರುಗಳಿಗೆ ಗೆಲುವಾಗುವ ಔಷಧಿ ಸಿದ್ಧವಾಯಿತು.

ಇಂದಿನ ಅಧುನಿಕ ಜಗತ್ತಿನಲ್ಲಿ ಗೆಲುವನ್ನು ಸಾಧಿಸಲು ಯಾವ ಮಂತ್ರ- ತಂತ್ರಕ್ಕೂ ಜನ ಸಿದ್ಧವಾಗಿದ್ದಾರೆ. ಮಾನ್ಯತೆ, ಪ್ರಶಸ್ತಿ ಮತ್ತು ಹಣ ಇವುಗಳನ್ನು ಪಡೆಯಲು ಭೂಗತ ಜಗತ್ತಿನ ಎಲ್ಲ ಆಟಗಳನ್ನು ಭೂಮಿಯ ಮೇಲಣ ಎಲ್ಲಾ ಕ್ಷೇತ್ರಗಳಲ್ಲಿ ಆಡಬಹುದು. ಮಕ್ಕಳ ಕತೆಯೊಂದಿದೆ: ಕುತಂತ್ರಿ ನರಿಯೂ ನೇರ ಕೊಕ್ಕಿನ ಕೊಕ್ಕರೆಯೂ ನೆರೆಕರೆಯವರು. ಆದರೆ ಅವರವರ ಆಟ, (ಕು)ತಂತ್ರ ಅವರವರಿಗೆ. ನರಿ ಕೊಕ್ಕರೆಯನ್ನು ತನ್ನಲ್ಲಿಗೆ ಊಟಕ್ಕೆ ಕರೆಯಿತು. ಕೊಕ್ಕರೆಗೆ ಮಟ್ಟಸವಾದ ತಟ್ಟೆಯಲ್ಲಿ ಪಾಯಸವನ್ನು ನೀಡಿತು ಪಾಪ, ಕೊಕ್ಕರೆ ತನ್ನ ಕೊಕ್ಕಿನಿಂದ ಅದನ್ನು ತಿನ್ನಲಾಗದೆ ಉಪವಾಸ ಮರಳಿತು. ಇದಕ್ಕೆ ಪ್ರತಿಯಾಗಿ ಕೊಕ್ಕರೆ ನರಿಯನ್ನು ಊಟಕ್ಕೆ ಕರೆದು ಅದಕ್ಕೆ ಪಾಯಸವನ್ನು ಹೂಜಿಯಲ್ಲಿ ನೀಡಿ ಸೇಡು ತೀರಿಸಿಕೊಂಡಿತೆಂಬ ನೀತಿಕತೆ. ಎಲ್ಲ ಕ್ರಿಕೆಟ್ ಮಂಡಳಿಗಳೂ ಇದೇ ರಾಜನೀತಿಯನ್ನು ಅನುಸರಿಸಿದರೆ ಉರುಳು ಮೂರೇ ಉರುಳು- ಕ್ರೀಡಾಭಿಮಾನಿಗಳಿಗೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)