varthabharthi


ಸಂಪಾದಕೀಯ

ಖಾಲಿ ಹುದ್ದೆಗಳ ಭರ್ತಿ ಯಾವಾಗ?

ವಾರ್ತಾ ಭಾರತಿ : 12 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕಳೆದ ವರ್ಷ ಅಪ್ಪಳಿಸಿದ ಕೊರೋನ ವೈರಾಣುವಿನ ಪರಿಣಾಮವಾಗಿ ರಾಜ್ಯದಲ್ಲಿ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ ಸಾವಿರಾರು ಮಂದಿ ನಿರುದ್ಯೋಗದ ದವಡೆಗೆ ಸಿಲುಕಿದ್ದಾರೆ.ಒಂದೆಡೆ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆ, ಇನ್ನೊಂದೆಡೆ ದುಡಿಯುವ ಕೈಗಳಿಗೆ ಕೆಲಸವಿಲ್ಲ, ಮಗದೊಂದೆಡೆ ಖಾಲಿ ಉಳಿದ ಸರಕಾರಿ ಹುದ್ದೆಗಳು... ಹೀಗಾಗಿ ಜನಸಾಮಾನ್ಯರ ಬದುಕು ಅಸಹನೀಯವಾಗಿದೆ. ಅಸಂಘಟಿತ ವಲಯದ ಕಾರ್ಮಿಕರ ಸಮಸ್ಯೆಗಳು ಒತ್ತಟ್ಟಿಗಿರಲಿ ಸಂಘಟಿತ ವಲಯಗಳಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ 2.6 ಲಕ್ಷ ಖಾಲಿ ಹುದ್ದೆಗಳಿವೆ. ಇವುಗಳನ್ನು ಭರ್ತಿ ಮಾಡಲು ಸರಕಾರ ಆಸಕ್ತಿ ತೋರಿಸುತ್ತಿಲ್ಲ. ಈ ಹುದ್ದೆಗಳನ್ನು ತುಂಬಿದರೆ ವಯೋಮಿತಿ ಮೀರುತ್ತಿರುವ ಯುವ ಅಭ್ಯರ್ಥಿಗಳ ಆತಂಕ ನಿವಾರಣೆಯಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲೂ ಉದ್ಯೋಗ ಸೃಷ್ಟಿಯ ಬಗ್ಗೆ ನಿರ್ದಿಷ್ಟವಾಗಿ ಯಾವ ಯೋಜನೆಗಳೂ ಕಂಡು ಬರುತ್ತಿಲ್ಲ. ಹೀಗಾಗಿ 2.46 ಲಕ್ಷ ಕೋಟಿ ರೂ. ವಾರ್ಷಿಕ ಆಯವ್ಯಯ ಪತ್ರ ಮಂಡಿಸಿದರೂ ಪ್ರಯೋಜನ ಇಲ್ಲದಂತಾಗಿದೆ.

ಬಜೆಟ್‌ನಲ್ಲಿ ಮಠ, ಮಾನ್ಯಗಳಿಗೆ ಅನುದಾನ ಒದಗಿಸುವ ಹೊಸ ಸಂಪ್ರದಾಯಕ್ಕೆ ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಚಾಲನೆ ನೀಡಿದ್ದರು. ಈ ಬಾರಿ ಅವುಗಳಲ್ಲದೆ ಜಾತಿವಾರು ನಿಗಮ, ಮಂಡಳಿಗಳಿಗೆ ಧಾರಾಳವಾಗಿ ಅನುದಾನ ಒದಗಿಸಿದ್ದಾರೆ. ಅದರಲ್ಲೂ ಎಲ್ಲರಿಗೂ ಸಮಾನವಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ, ವೀರಶೈವ/ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮಕ್ಕೆ ತಲಾ 500 ಕೋಟಿ ರೂಪಾಯಿ, ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಐವತ್ತು ಕೋಟಿ ರೂಪಾಯಿ, ಶ್ರವಣ ಬೆಳಗೊಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಹೀಗೆ ಮುಂಗಡ ಪತ್ರದಲ್ಲಿ ಹಂಚಿಕೆ ಮಾಡಲಾಗಿದೆ. ಆಸ್ಪತ್ರೆಗಳಿಗಿಂತ ಕಾರಾಗೃಹಗಳ ಸಾಮರ್ಥ್ಯ ಹೆಚ್ಚಳಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಅಂದರೆ ಎಂಟು ಕಾರಾಗೃಹಗಳ ಸಾಮರ್ಥ್ಯ ಹೆಚ್ಚಳಕ್ಕೆ 40 ಕೋಟಿ ರೂಪಾಯಿ ಒದಗಿಸಲಾಗಿದೆ. ಆದರೆ ಅಭಿವೃದ್ಧಿ ಯೋಜನೆ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಉದ್ಯೋಗ ಸೃಷ್ಟಿಯಾಗದೆ ಆರ್ಥಿಕ ವ್ಯವಸ್ಥೆ ಚೇತರಿಕೆ ಸಾಧ್ಯವಿಲ್ಲ. ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯ ಸರಕಾರದ ಮುಖ್ಯವಾದ 28 ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳು 3,74,163. ಈ ಪೈಕಿ ಭರ್ತಿಯಾಗಿರುವುದು 2,32,967. ಖಾಲಿ ಉಳಿದ ಹುದ್ದೆಗಳು 1,41,196. ಇವುಗಳಲ್ಲದೆ ಇತರ ಹಲವಾರು ಇಲಾಖೆಗಳಲ್ಲಿ ನಿವೃತ್ತಿ ಹೊಂದಿದವರ ಹುದ್ದೆಗಳನ್ನು ತುಂಬುತ್ತಲೇ ಇಲ್ಲ. ಇಂತಹ ಖಾಲಿ ಹುದ್ದೆಗಳ ಸಂಖ್ಯೆ 2.6 ಲಕ್ಷ ಇದೆ. ಕಳೆದ ಎರಡು ವರ್ಷಗಳಿಂದ ಸರಕಾರದ ಹುದ್ದೆಗಳಿಗೆ ನೇಮಕಾತಿ ನಡೆದೇ ಇಲ್ಲ. ಈ ಮಧ್ಯೆ ಕೋವಿಡ್ ಬಂದು ಮತ್ತೊಂದು ವರ್ಷವೂ ನೇಮಕ ಮಾಡಿಕೊಳ್ಳಲಿಲ್ಲ. ಸರಕಾರದ ಇಲಾಖೆಗಳಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಉಳಿದರೆ ಇದರಿಂದಾಗಿ ದೈನಂದಿನ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬುದನ್ನು ಅಧಿಕಾರದಲ್ಲಿದ್ದವರು ಗಮನಿಸಬೇಕು.

 ಆರ್ಥಿಕ ಹಿಂಜರಿತ ಹಾಗೂ ಕೊರೋನ ಪರಿಣಾಮವಾಗಿ ಕೆಲಸವಿಲ್ಲದೆ ಜನ ಬೀದಿಗೆ ಬಿದ್ದಿರುವಾಗ ಸರಕಾರ ಜನರ ನೆರವಿಗೆ ಬರಬೇಕಾಗುತ್ತದೆ. ತುರ್ತಾಗಿ ಜನರ ದೈನಂದಿನ ಬದುಕಿನೊಂದಿಗೆ ಸಂಪರ್ಕ ಹೊಂದಿರುವ ಆರೋಗ್ಯ, ಶಿಕ್ಷಣ ಮತ್ತು ಗೃಹ ಇಲಾಖೆಯಲ್ಲಿನ ಖಾಲಿ ಉಳಿದ ಹುದ್ದೆಗಳನ್ನಾದರೂ ಸರಕಾರ ಭರ್ತಿ ಮಾಡಿಕೊಳ್ಳಬೇಕು. ಉದ್ಯೋಗ ಇಲ್ಲದವರಿಗೆ ಆದ್ಯತೆಯ ಮೇಲೆ ಉದ್ಯೋಗ ಒದಗಿಸಿದರೆ ಅವರನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಗಳು ಎರಡು ಹೊತ್ತು ಊಟ ಮಾಡಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಆದರೆ ಖಾಲಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರಕಾರ ಆಸಕ್ತಿಯನ್ನೇ ತೋರಿಸುತ್ತಿಲ್ಲ. ಉದಾಹರಣೆಗೆ ಲೋಕೋಪಯೋಗಿ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೆಂಗಳೂರು ಮೆಟ್ರೋ ರೈಲು ನಿಗಮ ಹಾಗೂ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಮುಂತಾದ ಇಲಾಖೆಗಳಲ್ಲಿ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಕೆಪಿಎಸ್‌ಸಿಯ ನಾನಾ ಇಲಾಖೆಗಳ ನೇರ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಸರಕಾರ ರದ್ದುಗೊಳಿಸಿದೆ. ಇಷ್ಟೇ ಅಲ್ಲದೆ ಆರ್ಥಿಕ ಬಿಕ್ಕಟ್ಟಿನ ನೆಪ ಮುಂದೆ ಮಾಡಿ ಮುಂದಿನ ಎರಡು ವರ್ಷಗಳ ಕಾಲ ನೇಮಕಾತಿ ಅಧಿಸೂಚನೆ ಹೊರಡಿಸುವುದನ್ನು ನಿಷೇಧಿಸಲಾಗಿದೆ. ರಾಜ್ಯ ಸರಕಾರದ ಈ ನೀತಿ ಆರ್ಥಿಕ ಪುನಶ್ಚೇತನಕ್ಕೆ ಪೂರಕವಾಗಿಲ್ಲ. ಉಳಿದ ಅನುದಾನಗಳನ್ನು ಸ್ಥಗಿತ ಗೊಳಿಸಿ ಖಾಲಿ ಉಳಿದ ಹುದ್ದೆಗಳ ಭರ್ತಿಗೆ ಸರಕಾರ ಆದ್ಯತೆ ನೀಡಬೇಕಾಗಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಈಗ ಒಂದೇ ಪಕ್ಷದ ಸರಕಾರವಿದೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯಾಗದಿರುವುದಕ್ಕೆ ಹಣಕಾಸಿನ ತೊಂದರೆ ಒಂದೇ ಕಾರಣವಾಗಬಾರದು.ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಪಾಲಿನ ಹಣವನ್ನು ಕೇಳಲು ರಾಜ್ಯ ಸರಕಾರ ಹಿಂದೆ ಮುಂದೆ ನೋಡಬಾರದು. ಅನುತ್ಪಾದಕ ವೆಚ್ಚಗಳನ್ನು ಕಡಿತಗೊಳಿಸಿ ನಿರುದ್ಯೋಗ ನಿವಾರಣೆಗೆ ಒತ್ತು ನೀಡಬೇಕಾಗಿದೆ.

ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವವರ ಸಮಸ್ಯೆ ಒಂದೆಡೆಯಾದರೆ ಇನ್ನೊಂದೆಡೆ ಸರಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸರಿಯಾಗಿ ಸಂಬಳ ಪಾವತಿಯಾಗುತ್ತಿಲ್ಲ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಶ್ವವಿದ್ಯಾನಿಲಯಗಳ ಉಪನ್ಯಾಸಕರಿಗೂ, ಅತಿಥಿ ಉಪನ್ಯಾಸಕರಿಗೂ ಹಾಗೂ ಇತರ ಸಿಬ್ಬಂದಿಗೂ ಐದಾರು ತಿಂಗಳ ಸಂಬಳವನ್ನು ಬಾಕಿ ಉಳಿಸಿಕೊಳ್ಳಲಾಗಿದೆ ಎಂಬ ದೂರುಗಳಿವೆ. ಖಾಲಿ ಉಳಿದ ಸರಕಾರಿ ಹುದ್ದೆಗಳ ಭರ್ತಿ ಹಾಗೂ ಈಗಾಗಲೇ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರ ಸಂಬಳ ಬಾಕಿ ಪಾವತಿಗೆ ಸರಕಾರ ಮೊದಲ ಆದ್ಯತೆ ನೀಡಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)