varthabharthi


ಸಂಪಾದಕೀಯ

ಲಾಕ್‌ಡೌನ್ ಹೆಸರಿನಲ್ಲಿ ಬ್ಲ್ಯಾಕ್‌ ಮೇಲ್ ಬೇಡ

ವಾರ್ತಾ ಭಾರತಿ : 12 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮಾಧ್ಯಮಗಳ ಮೂಲಕ ಮತ್ತೆ ಕೊರೋನ ಬಗ್ಗೆ ಆತಂಕವನ್ನು ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದು ಹಂತದಲ್ಲಿ, ಇಳಿಮುಖಗೊಂಡಿದ್ದ ಕೊರೋನವನ್ನು ಮತ್ತೆ ತಟ್ಟಿ ಎಚ್ಚರಿಸಲಾಗಿದೆ. ಕೊರೋನಾ ಸೋಂಕಿತರ ಅಂಕಿ ಅಂಶಗಳು ಮಗದೊಮ್ಮೆ ಮಾಧ್ಯಮಗಳ ಮುಖಪುಟಗಳಲ್ಲಿ ರಾರಾಜಿಸತೊಡಗಿವೆ. ಇದರ ಬೆನ್ನಿಗೇ ಸರಕಾರ ಜನರಿಗೆ ‘ಲಾಕ್‌ಡೌನ್’ ಬೆದರಿಕೆಯನ್ನ್ನೂ ಹಾಕುತ್ತಿದೆ. ಈಗಾಗಲೇ ದೇಶದ ಹಲವೆಡೆ ಒಂದು ವಾರಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಮಹಾರಾಷ್ಟ್ರಾದ್ಯಂತ ರಾತ್ರಿ ಕರ್ಫ್ಯೂವನ್ನು ವಿಧಿಸಲಾಗಿದೆ. ರಾಜ್ಯದಲ್ಲೂ ಲಾಕ್‌ಡೌನ್ ವದಂತಿಗಳನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಇದರಿಂದಾಗಿ ಶ್ರೀಸಾಮಾನ್ಯರು ಆತಂಕಿತರಾಗಿದ್ದಾರೆ. ವ್ಯಾಪಾರಿಗಳು, ವಲಸೆ ಕಾರ್ಮಿಕರು ಅಭದ್ರತೆಯಿಂದ ಬದುಕುವಂತಾಗಿದೆ. ಈ ಲಾಕ್‌ಡೌನ್ ವದಂತಿಗಳು ಮಾರುಕಟ್ಟೆಯಲ್ಲಿ ಬೆಲೆಯೇರಿಕೆಗೂ ಕಾರಣವಾಗುತ್ತಿದೆ.

ಲಾಕ್‌ಡೌನ್‌ನಿಂದಾಗಿ ಸರ್ವನಾಶವಾಗಿದ್ದ ತಮ್ಮ ಬದುಕನ್ನು ಇನ್ನೇನು ಮರುನಿರ್ಮಿಸಲು ಮುಂದಾಗಬೇಕು ಎನ್ನುವಷ್ಟರಲ್ಲಿ ಮತ್ತೆ ಲಾಕ್‌ಡೌನ್ ಬೆದರಿಕೆಗಳು ಜನರನ್ನು ಮುಂದಕ್ಕೆ ಹೆಜ್ಜೆಯಿಡದಂತೆ ಮಾಡಿದೆ. ದೇಶಾದ್ಯಂತ ಸುಮಾರು ಮೂರು ತಿಂಗಳ ಕಾಲ ಘೋಷಿಸಲ್ಪಟ್ಟ ಲಾಕ್‌ಡೌನ್‌ನಿಂದ ಕೋರೊನವನ್ನು ಅಳಿಸಲು ಸಾಧ್ಯವಾಗಿದೆಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಲಾಕ್‌ಡೌನ್ ಕಾಲದಲ್ಲೇ ಈ ಕೊರೋನ ತಾರಕರೂಪಕ್ಕೆ ತಲುಪಿತು. ಯಾವುದೇ ಪೂರ್ವಯೋಜನೆಯಿಲ್ಲದ ಲಾಕ್‌ಡೌನ್‌ನಿಂದಾಗಿಯೇ ದೇಶದಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿದವು. ಕ್ಷಯ, ಅಸ್ತಮಾ ಸಹಿತ ಇನ್ನಿತರ ರೋಗಗಳಿಂದ ನರಳುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವಿರಾರು ಮಂದಿ ಮೃತಪಟ್ಟರು. ಆದರೆ ಹೀಗೆ ಮೃತದರಾವರ ಅಂಕಿಅಂಶಗಳು ಸುದ್ದಿಯೇ ಆಗಲಿಲ್ಲ. ಹೀಗೆ ಸತ್ತವರಲ್ಲಿ ಕೊರೋನಾ ಪಾಸಿಟಿವ್ ಇದ್ದವರನ್ನೆಲ್ಲ ‘ಕೊರೋನಾಕ್ಕೆ ಬಲಿ’ ಎಂದು ಮಾಧ್ಯಮಗಳು ಷರಾ ಬರೆದವು. ನೇರವಾಗಿ ಕೊರೋನ ವೈರಸ್‌ಗೆ ಬಲಿಯಾದವರ ಸಂಖ್ಯೆ ಶೇ. 2ರಷ್ಟೂ ಇಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

ಹಲವು ರೋಗಗಳಿಂದ ಸತ್ತವರಲ್ಲಿ ಕೊರೋನ ವೈರಸ್ ಇದ್ದಿರಬಹುದು. ಆದರೆ ಅವರೆಲ್ಲರೂ ಕೊರೋನಾ ವೈರಸ್‌ನಿಂದಾಗಿ ಸತ್ತವರಲ್ಲ ಎನ್ನುವುದು ಈಗಾಗಲೇ ಬಹಿರಂಗವಾಗಿದೆ. ಕೊರೋನ ವೈರಸ್ ಮಾರಣಾಂತಿಕವಲ್ಲ, ಅದು ಅತಿ ಶೀಘ್ರವಾಗಿ ಹರಡುವ ವೈರಸ್ ಅಷ್ಟೇ ಎನ್ನುವುದನ್ನು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಯಾವುದೇ ಔಷಧಿಯನ್ನು ಕಂಡು ಹಿಡಿಯದೇ ಇದ್ದರೂ, ಯಾವುದೇ ಔಷಧಿ ಸೇವಿಸದೇ ಇದ್ದರೂ ಲಕ್ಷಾಂತರ ಕೊರೋನ ಸೋಂಕಿತರು ಈ ದೇಶದಲ್ಲಿ ಗುಣಮುಖರಾಗಿದ್ದಾರೆ. ಉಸಿರಾಟದ ಸಮಸ್ಯೆ ಇರುವವರಷ್ಟೇ ಈ ವೈರಸ್‌ನ ಕುರಿತಂತೆ ತುಸು ಆತಂಕ ಪಡಬೇಕು. ಆದರೆ ದುರದೃಷ್ಟಕ್ಕೆ, ಆಸ್ಪತ್ರೆಗಳು ಯಾವುದೇ ಕೊರೋನ ರೋಗ ಲಕ್ಷಣಗಳಿಲ್ಲದೆ ಇರುವವರನ್ನೂ ಪಾಸಿಟಿವ್ ಹೆಸರಲ್ಲಿ ಬಂಧಿಸಿ, ಕ್ವಾರಂಟೈನ್ ಮಾಡಿಸಿ ಅವರಿಂದ ಲಕ್ಷಗಟ್ಟಲೆ ಹಣವನ್ನು ದೋಚಿದವು. ಸತ್ತವರ ಮೃತದೇಹವನ್ನು ಕುಟುಂಬಕ್ಕೂ ನೀಡದೆ, ಗುಟ್ಟಾಗಿ, ನಿಗೂಢವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಒಂದು ವೇಳೆ, ಕೊರೋನ ಅಷ್ಟರಮಟ್ಟಿಗೆ ಮಾರಣಾಂತಿಕವೆಂದಾದರೆ, ಈ ದೇಶದ ಬೀದಿ ಬದಿಯಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿ ಹೆಣವಾಗಿ ಬೀಳಬೇಕಾಗಿತ್ತು. ಯಾಕೆಂದರೆ ಅವರಿಗೆ ಯಾವ ಆರೋಗ್ಯ ಭದ್ರತೆಯೂ ಇದ್ದಿರಲಿಲ್ಲ. ಕೊರೋನ ವೈರಸ್‌ನಿಂದ ಸಂತ್ರಸ್ತರಾದವರಲ್ಲಿ ಬಹುತೇಕ ಮೇಲ್‌ಮಧ್ಯಮ ವರ್ಗಕ್ಕೆ ಸೇರಿದ ಜನರು ಎನ್ನುವುದು ಗಮನಾರ್ಹ.

ಲಾಕ್‌ಡೌನ್‌ನಿಂದ ಕೊರೋನ ಇಳಿಮುಖವಾಯಿತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗೆ ನೋಡಿದರೆ, ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕವೇ ಕೊರೋನಾ ಇಳಿಮುಖವಾಗುತ್ತಾ ಬಂತು. ಅಷ್ಟರಲ್ಲಿ ಜನ ಸಾಮಾನ್ಯರ ಬದುಕು ಸರ್ವನಾಶವಾಗಿತ್ತು. ನೋಟು ನಿಷೇಧದಿಂದ ಮಕಾಡೆ ಮಲಗಿದ್ದ ಭಾರತದ ಆರ್ಥಿಕತೆಯ ಮೇಲೆ ಲಾಕ್‌ಡೌನ್ ಚಪ್ಪಡಿ ಕಲ್ಲನ್ನು ಹಾಕಿತು. ಲಾಕ್‌ಡೌನ್‌ನಿಂದಾದ ಅನಾಹುತದಿಂದ ದೇಶ ಇನ್ನೂ ಚೇತರಿಸಿಲ್ಲ. ಇಂದು ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಕ್ಷಯ ರೋಗ ವೃದ್ಧಿಯಾಗಿದೆ. ನಾವು ಆತಂಕ ಪಡಬೇಕಾದುದು ಕ್ಷಯದಂತಹ ಮಾರಕ ರೋಗಗಳ ಬಗ್ಗೆ. ಜೊತೆಗೆ ಅಪೌಷ್ಟಿಕತೆ ವಿಪರೀತವಾಗಿದೆ. ಅಪೌಷ್ಟಿಕತೆ ಜನರನ್ನು ಇನ್ನಿತರ ರೋಗಗಳಿಗೆ ತಳ್ಳಿದೆ. ಲಕ್ಷಾಂತರ ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಅವರಿಗಿನ್ನೂ ಹೊಸ ಉದ್ಯೋಗ ಸಿಕ್ಕಿಲ್ಲ.

ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರು ಭಾರತಕ್ಕೆ ಬಂದಿದ್ದಾರೆ. ಅವರು ತವರೂರಲ್ಲೇ ಸಣ್ಣ ಪುಟ್ಟ ಉದ್ದಿಮೆಗಳನ್ನು ತೆರೆಯಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಆದರೆ ಸರಕಾರದ ಲಾಕ್‌ಡೌನ್ ಬೆದರಿಕೆಯಿಂದಾಗಿ ಅವರು ಹಿಂದೇಟು ಹಾಕುತ್ತಿದ್ದಾರೆ. ಇಂದು ಈ ದೇಶದ ಜನರು ಕೊರೋನಕ್ಕೆ ಅಂಜಿಲ್ಲ. ಆದರೆ ಲಾಕ್‌ಡೌನ್‌ಗೆ ಅಂಜುತ್ತಿದ್ದಾರೆ. ಒಂದು ದಿನ ‘ಭಾರತ ಬಂದ್’ ಆದರೆ ಆಗುವ ನಾಶ, ನಷ್ಟದ ಕುರಿತಂತೆ ಈ ದೇಶ ಚಿಂತೆ ಮಾಡುವ ಕಾಲವೊಂದಿತ್ತು. ಒಂದು ವಾರ ಕರ್ಫ್ಯೂ ವಿಧಿಸಿದರೆ ಜನಸಾಮಾನ್ಯರು ಕಂಗಾಲಾಗಿ ಬಿಡುವ ದಿನಗಳಿದ್ದವು. ಈ ದೇಶದ ಜನರು ಜೀವನದಲ್ಲಿ ಇದೇ ಮೊದಲು ಎರಡು ತಿಂಗಳ ಕಾಲ ಭಾರತ ಬಂದ್‌ನ್ನು ಅನುಭವಿಸಬೇಕಾಯಿತು. ಇನ್ನೊಮ್ಮೆ ದೇಶಾದ್ಯಂತ ಲಾಕ್‌ಡೌನ್ ಮಾಡುವುದೆಂದರೆ, ಜರ್ಮನಿಯಲ್ಲಿ ಹಿಟ್ಲರ್ ಗ್ಯಾಸ್ ಚೇಂಬರ್ ಮೂಲಕ ಯಹೂದಿಗಳನ್ನು ಸಾಮೂಹಿಕವಾಗಿ ಕೊಂದಂತೆ. ಅಲ್ಲಿ ಜನರು ಒಮ್ಮೆಲೆ ಸತ್ತರು. ಈ ದೇಶದ ಕಾರ್ಮಿಕರು, ಬಡವರು, ಮಧ್ಯಮ ವರ್ಗದ ಜನರು ಹಂತ ಹಂತವಾಗಿ ನರಳಿ ಸಾಯುತ್ತಾರೆ.

ಏಕಾಏಕಿ ಮತ್ತೆ ಕೊರೊನಾತಂಕವನ್ನು ಬಿತ್ತುವುದರ ಹಿಂದೆ ‘ಲಸಿಕೆ ರಾಜಕೀಯ’ ಕೆಲಸ ಮಾಡುತ್ತಿದೆ ಎಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ. ಸ್ವದೇಶಿ ‘ಕೋವ್ಯಾಕ್ಸಿನ್’ ಲಸಿಕೆಯ ಕುರಿತಂತೆ ದೇಶದ ಜನರು ಪೂರ್ಣ ವಿಶ್ವಾಸವನ್ನು ಹೊಂದಿಲ್ಲ ಅಥವಾ ಅದರ ಕುರಿತಂತೆ ವಿಶ್ವಾಸವನ್ನು ಬಿತ್ತುವಲ್ಲಿ ಸರಕಾರ ವಿಫಲವಾಗಿದೆ. ಆರೋಗ್ಯ ಸಿಬ್ಬಂದಿಯೇ ಲಸಿಕೆಯನ್ನು ಸ್ವೀಕರಿಸಲು ಹಿಂಜರಿಯುತ್ತಿದ್ದಾರೆ. ಲಸಿಕೆಯ ವಿಷಯದಲ್ಲಿ ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ಲಾಕ್‌ಡೌನ್ ಬೆದರಿಕೆಯನ್ನು ಒಡ್ಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ‘ಲಸಿಕೆಯನ್ನು ಪಡೆಯಿರಿ-ಇಲ್ಲವೇ ಲಾಕ್‌ಡೌನ್ ಅನುಭವಿಸಿ’ ಎನ್ನುವ ಬ್ಲಾಕ್‌ಮೇಲ್ ತಂತ್ರವಿದು ಎನ್ನುವುದು ಹಲವು ವೈದ್ಯಕೀಯ ತಜ್ಞರ ಆರೋಪ. ಅದು ನಿಜವೇ ಆಗಿದ್ದರೆ, ಇಂತಹ ನಿಷ್ಕರುಣಿ ಸರಕಾರ ಹಿಂದೆಂದೂ ಈ ದೇಶವನ್ನು ಆಳಿಲ್ಲ ಎಂದು ಹೇಳಬೇಕಾಗುತ್ತದೆ.

ಹಾಗೆಂದು, ಕೊರೋನ ಕುರಿತಂತೆ ಸಂಪೂರ್ಣ ನಿರ್ಲಕ್ಷವೂ ಸಲ್ಲ. ಯಾರೆಲ್ಲ ಕೊರೋನ ಸಂಬಂಧಿ ರೋಗಲಕ್ಷಣಗಳನ್ನು ಹೊಂದಿದ್ದಾರೆಯೋ ಅವರು ಮತ್ತು ಅವರ ಕುಟುಂಬಸ್ಥರು ಜಾಗರೂಕತೆಯನ್ನು ವಹಿಸಬೇಕು. ರೋಗ ಲಕ್ಷಣಗಳುಳ್ಳವರು ಚೇತರಿಸಿಕೊಳ್ಳುವವರೆಗೆ ಯಾವ ಕಾರಣಕ್ಕೂ ಸಾರ್ವಜನಿಕವಾಗಿ ಓಡಾಡಬಾರದು. ಅವರ ಕುಟುಂಬಸ್ಥರು ಕಡ್ಡಾಯವಾಗಿ ಮಾಸ್ಕ್‌ನ್ನು ಧರಿಸಿಯೇ ಸಾರ್ವಜನಿಕ ವ್ಯವಹಾರಗಳನ್ನು ಮಾಡಬೇಕು. ಜನರಲ್ಲಿ ಜಾಗೃತಿಯನ್ನು ಬಿತ್ತುವ ಮೂಲಕ ಮಾತ್ರ ನಾವು ಕೊರೋನಾವನ್ನು ಎದುರಿಸಬಹುದೇ ಹೊರತು, ಲಾಕ್‌ಡೌನ್ ಮೂಲಕ ಅಲ್ಲ. ಇದೇ ಸಂದರ್ಭದಲ್ಲಿ ಲಸಿಕೆಯ ಕುರಿತಂತೆ ಜನರಲ್ಲಿ ವಿಶ್ವಾಸವನ್ನು, ಭರವಸೆಯನ್ನು ಮೂಡಿಸಬೇಕು. ಆಗ ಜನರೇ ಲಸಿಕೆ ಪಡೆಯಲು ಧಾವಿಸುತ್ತಾರೆ. ಬೆದರಿಕೆಯ ಮೂಲಕ ಲಸಿಕೆಯನ್ನು ನೀಡುವುದರಿಂದ, ಅದು ಜನರಲ್ಲಿ ಇನ್ನಷ್ಟು ಆತಂಕವನ್ನು ಬಿತ್ತಿ, ಅವರ ಆರೋಗ್ಯವನ್ನು ಕೆಡಿಸುವ ಸಾಧ್ಯತೆಗಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)