varthabharthi


ವಿಶೇಷ-ವರದಿಗಳು

'Thewire.in' ತನಿಖಾ ವರದಿ- ಭಾಗ 1

ದಿಲ್ಲಿ ಗಲಭೆ-2020: ಪೊಲೀಸರು ನೋಡಲು ನಿರಾಕರಿಸುತ್ತಿರುವ ನೈಜ ಒಳಸಂಚು

ವಾರ್ತಾ ಭಾರತಿ : 13 Mar, 2021
ಆಲಿಶಾನ್ ಜಾಫ್ರಿ, ಶೆಹ್ಲತ್ ಮಕ್ನೂನ್ ವಾನಿ ಮತ್ತು ಸಿದ್ಧಾರ್ಥ್ ವರದರಾಜನ್

'Thewire.in' ನಡೆಸಿದ ತನಿಖಾ ವರದಿಯ 1ನೇ ಭಾಗ

ದ್ವೇಶವನ್ನು ಹರಡುವಲ್ಲಿ, ಜನರನ್ನು ಒಟ್ಟುಗೂಡಿಸುವಲ್ಲಿ, ಮತ್ತು ಹಿಂಸಾಚಾರಕ್ಕೆ ಚಿತಾವಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಹಿಂದೂತ್ವದ ಕಾರ್ಯಕರ್ತರನ್ನು ಮತ್ತು ನಾಯಕರ ಪರಿಚಯ ಇಲ್ಲಿದೆ

ಹೊಸದಿಲ್ಲಿ,ಮಾ.8: ರಾಜಧಾನಿ ದಿಲ್ಲಿಯಲ್ಲಿನ ಕೋಮು ಹಿಂಸಾಚಾರದಲ್ಲಿ 53 ಜನರು ಮೃತಪಟ್ಟು,ನೂರಾರು ಮನೆಗಳು ಮತ್ತು ಅಂಗಡಿಗಳು ಧ್ವಂಸಗೊಂಡು ಒಂದು ವರ್ಷ ಕಳೆದಿದೆ. ಸತ್ತವರಲ್ಲಿ ಮುಸ್ಲಿಮರೇ ಅಧಿಕವಾಗಿದ್ದರು.

ಇಂತಹ ಅಪರಾಧವನ್ನು ವೃತ್ತಿಪರ ತನಿಖೆದಾರರು ಹೇಗೆ ಬಯಲಿಗೆಳೆಯುತ್ತಾರೆ? ಮೊದಲು ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಪುರುಷರು ಮತ್ತು ಮಹಿಳೆಯರನ್ನು ಗುರುತಿಸುತ್ತಾರೆ,ನಂತರ ಹಿಂಸಾಚಾರಕ್ಕೆ ಅವರನ್ನು ಪ್ರೇರೇಪಿಸಿದವರು ಯಾರು ಎಂಬ ಬಗ್ಗೆ ತನಿಖೆಯನ್ನು ನಡೆಸುತ್ತಾರೆ. ಲಭ್ಯ ಸುಳಿವುಗಳ ಜಾಡಿನಲ್ಲಿ ಸಾಗುತ್ತಾ, ಅವುಗಳನ್ನು ಜೋಡಿಸುತ್ತಾ,  ಅತ್ಯಂತ ಶ್ರಮಪಟ್ಟು ಪ್ರಕರಣದ ಪೂರ್ಣ ಚಿತ್ರಣವನ್ನು ಪಡೆದುಕೊಳ್ಳುವಡೆ ಸಾಗುತ್ತಾರೆ. ಆದರೆ ದಿಲ್ಲಿ ಪೊಲೀಸರು ಹೀಗೆ ಮಾಡುವ ಬದಲು ಕಳೆದ 10 ತಿಂಗಳುಗಳಿಂದಲೂ ಕಾಲ್ಪನಿಕ ಒಳಸಂಚೊಂದರ ಹಿಂದೆ ಬಿದ್ದಿದ್ದಾರೆ.

ದಿಲ್ಲಿ ದಂಗೆಗಳು ಸಿಎಎ ವಿರುದ್ಧದ ಪ್ರತಿಭಟನೆಗಳ ಫಲಶ್ರುತಿಯಾಗಿತ್ತು ಎಂದು ಪ್ರತಿಪಾದಿಸುವ ತವಕದಲ್ಲಿ ದಿಲ್ಲಿ ಪೊಲೀಸರು ೨೦೧೯ರ ಡಿಸೆಂಬರ್ ನಲ್ಲಿ ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿ ನೀಡಲಾದ ಪ್ರಚೋದನಾತ್ಮಕ ಹೇಳಿಕೆಗಳು ಹಾಗೂ ಆಗ ನಡೆದ ಸಣ್ಣಪುಟ್ಟ ಹಿಂಸಾಚಾರಗಳಲ್ಲೇ ದಿಲ್ಲಿ ದಂಗೆಗಳ ಒಳಸಂಚಿತ್ತು ಎಂದು ಹೇಳುತ್ತಿದ್ದಾರೆ.

ಆದರೆ ಅವರು ಎಷ್ಟೇ ಪ್ರಯತ್ನ ಪಟ್ಟರೂ ಪ್ರಮುಖ ಸಂಚುಕೋರರೆಂದು ಬಂಧಿಸಲ್ಪಟ್ಟಿರುವ ಉಮರ್ ಖಾಲಿದ್, ಸಫೂರಾ ಝರ್ಗರ್,ದೇವಾಂಗನಾ ಕಲಿಟಾ,ಶಾರ್ಜೀಲ್ ಇಮಾಂ,ಇಷ್ರತ್ ಜಹಾನ್,ಖಾಲಿದ್ ಸೈಫಿ,ನತಾಶಾ ನರ್ವಾಲ್,ಮೀರಾನ್ ಹೈದರ್,ಆಸಿಫ್ ತನ್ಹಾ ಮತ್ತು ಶಿಫಾ ಉರ್ ರೆಹಮಾನ್ ಅವರಿಗೂ,  ಹಿಂಸಾಚಾರದ ವಾಸ್ತವ ಕೃತ್ಯಗಳಿಗೂ ನಂಟು ಕಲ್ಪಿಸಲು ದಿಲ್ಲಿ ಪೊಲೀಸರಿಗೆ ಸಾಧ್ಯವಾಗಿಲ್ಲ.

ಆದರೆ ಯಾವುದನ್ನು ಪೊಲೀಸರು ಮಾಡಲು ನಿರಾಕರಿಸಿದ್ದರೋ ಆ ಕೆಲಸವನ್ನು ಕಳೆದ ಕೆಲವು ತಿಂಗಳುಗಳಿಂದ ‘The Wire’  ಸುದ್ದಿ ಜಾಲತಾಣವು ಮಾಡುತ್ತಾಬಂದಿದೆ. .

‘The Wire’  ಸುದ್ದಿ ಜಾಲತಾಣವು ಸಾಕ್ಷಿ ಪುರಾವೆಗಳನ್ನಾಗಿ  ಪರಿಗಣಿಸಿರುವುದು ಪೊಲೀಸರು ತಮ್ಮ ದೋಷಾರಾಪಣ ಪಟ್ಟಿಯನ್ನು ಸಿದ್ಧಗೊಳಿಸಲು ನೆಚ್ಚಿಕೊಂಡಿದ್ದ ಅನಾಮಿಕ ಸಾಕ್ಷಿಗಳ ಆಧಾರರಹಿತ ಹೇಳಿಕೆಗಳನ್ನಲ್ಲ, ಪ್ರಶ್ನಾರ್ಹ ತಪ್ಪೊಪ್ಪಿಗೆಗಳನ್ನಲ್ಲ ಮತ್ತು ಉತ್ಪ್ರೇಕ್ಷಿತ ಅತಾರ್ಕಿಕ ತೀರ್ಮಾನಗಳನ್ನಲ್ಲ.. ಬದಲಿಗೆ ಅದು ವೀಡಿಯೊಗಳು,ಸಾಮಾಜಿಕ ಮಾಧ್ಯಮಗಳಲ್ಲಿಯ ಪೋಸ್ಟ್ಗಳು ಹಾಗೂ ಹಿಂದುತ್ವ ಕಾರ್ಯಕರ್ತರು ಮತ್ತು ನಾಯಕರು ಖುದ್ದು ನೀಡಿರುವ ಹೇಳಿಕೆಗಳನ್ನು ಸಾಕ್ಷಾಧಾರಗಳನ್ನಾಗಿ ಬಳಸಿಕೊಂಡಿದೆ. ಇವೆಲ್ಲದರ ಮೂಲಕ ಹೊರಬರುವ ಚಿತ್ರಣ  ಕಳವಳಕಾರಿಯಾಗಿದೆ. .

ಕಣ್ಣಿಗೆ ನಿಚ್ಚಳವಾಗಿ ಕಾಣುತ್ತಿದ್ದ ಕೆಲವು ಸುಳಿವುಗಳಿದ್ದವು. ಅವು ಸಾಕ್ಷಾತ್ ದಂಗೆಕೋರರೇ ಸ್ವಯಂ  ಪೋಸ್ಟ್ ಮಾಡಿದ್ದ ವೀಡಿಯೊಗಳು.  ಅದರ  ಮೂಲಕ ತನ್ನ ತನಿಖೆಯನ್ನು ಆರಂಭಿಸಿದ ‘The Wire ’, ಈ ದಂಗೆಕೋರರು  ಯಾರು? ಅವರನ್ನು ಹೇಗೆ ತೀವ್ರಗಾಮಿಗಳನ್ನಾಗಿ  ಪರಿವರ್ತಿಸಲಾಯಿತು? ಮತ್ತು ಅವರು ಗನ್ ಗಳು,ಖಡ್ಗಗಳು,ಇಟ್ಟಿಗೆಗಳು ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದುಕೊಂಡು ಬೀದಿಗಳಿಗೆ ಇಳಿದಿದ್ದು ಹೇಗೆ? ಎನ್ನುವುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತನಿಖೆಯನ್ನು ಮುಂದುವರಿಸಿತ್ತು.

ಲಭ್ಯ ಸುಳಿವುಗಳನ್ನು ಜೋಡಿಸುತ್ತಾ ಹೋದಂತೆ, ದಿಲ್ಲಿ ದಂಗೆಗಳನ್ನು  ಒಂದು ಪ್ರಚೋದನಕಾರಿ ಭಾಷಣವನ್ನು ಮಾಡಿದ್ದ  ಒಬ್ಬ ಬಿಜೆಪಿ ನಾಯಕನ ನಡೆಸಿದ ಸಂಚಾಗಿರದೆ, 2019 ರ ಡಿಸೆಂಬರ್  ಎರಡನೇ ವಾರದಿಂದಲೇ ಹಲವಾರು ಜನರು ಒಳಸಂಚು ನಡೆಸಿದ್ದರು  ಎನ್ನುವುದು ಸ್ಪಷ್ಟವಾಗತೊಡಗಿತು. ಹೀಗೆ ದ್ವೇಷದ ಕಾರ್ಖಾನೆಯೊಂದನ್ನು ಸೃಷ್ಟಿಸಲಾದ ನಂತರ, ಇಂಥಾ ತಥಾಕಥಿತ ಪ್ರಧಾನಧಾರೆಯಲ್ಲಿಲ್ಲದ  “ಅಂಚಿನ” ವ್ಯಕ್ತಿಗಳ ಜೊತೆ ಮುಖ್ಯವಾಹಿನಿ ರಾಜಕಾರಣಿಗಳು ಮತ್ತು ಅವರ ನಿಷ್ಠ ಮಾಧ್ಯಮ ವ್ಯವಸ್ಥೆಯು ನಿರಂತರ ಒಡನಾಡುತ್ತಾ ಕೋಮುವಾದದ ಜ್ವಾಲೆ ಸದಾ ಉರಿಯುತ್ತಲೇ ಇರುವ ಹಾಗೆ ನೋಡಿಕೊಳ್ಳಲಾಗಿತ್ತು.

ಇವುಗಳ ಅದಾರದಲ್ಲಿ  ‘The Wire’ ಸಾಬೀತುಪಡಿಸವ ಕ್ರೊನಾಲಜಿಯು (ಕಾಲಾನುಕ್ರಮಣಿಕೆಯು) ನಿಜವಾದ ಒಳಸಂಚಿನ ಸ್ವರೂಪವನ್ನು ನಿಚ್ಚಳವಾಗಿ ಸ್ಪಷ್ಟಗೊಳಿಸುತ್ತದೆ. ಇಲ್ಲಿ ನಿಮಗೆ ತೋರಿಸಲಾಗುವ  ಹಲವಾರು ವ್ಯಕ್ತಿಗಳನ್ನು ದಿಲ್ಲಿ ಪೊಲೀಸರು ತನಿಖೆಗೊಳಪಡಿಸಲು ಅಥವಾ ಅವರ ಬಗ್ಗೆ ಮಾತನಾಡಲೂ ನಿರಾಕರಿಸುವ ಮೂಲಕ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಂದ ಮಚ್ಚಿಟ್ಟಿದ್ದರು.  

ಆದರೆ ಈಗ ಅವರ ಕುರಿತು ಮೌನಕ್ಕೆ ತೆರೆಬಿದ್ದಿದೆ.

ಪೊಲೀಸರು ಏನನ್ನು ನೋಡಲು ನಿರಾಕರಿಸುತ್ತಿದ್ದಾರೆ?

2020,ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ 1984ರ ಸಿಖ್ ನರಮೇಧ ನಡೆದ ನಂತರದಲ್ಲಿನ  ಅತ್ಯಂತ ಭೀಕರ ಕೋಮು ಹಿಂಸಾಚಾರದಿಂದ ದಿಲ್ಲಿಯು ನಡುಗಿತ್ತು.

ಈ ಬಾರಿ ದಂಗೆಗಳ ವ್ಯಾಪ್ತಿ ಮತ್ತು ವಿಸ್ತಾರ ಕಡಿಮೆಯಿದ್ದು,ಹಿಂಸಾಚಾರದ ಬೆಂಕಿಯಿಂದ ನಲುಗಿದವರು ಮುಸ್ಲಿಮರಾಗಿದ್ದರು. ಆದರೆ ಎರಡೂ ದಂಗೆಗಳಲ್ಲಿ ಎರಡು ಸಾಮ್ಯತೆಗಳಿದ್ದವು. ಮೊದಲನೆಯದಾಗಿ ಬಲಿಯಾದವರನ್ನು ರಕ್ಷಿಸಲು ಈ ಬಾರಿಯೂ ಪೊಲೀಸರು ಯಾವುದೇ ಪ್ರಯತ್ನಗಳನ್ನು ಮಾಡಿರಲಿಲ್ಲ. ಎರಡನೆಯದಾಗಿ ಆಡಳಿತ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಾಯಕರು ಮತ್ತು ಕಾರ್ಯಕರ್ತರು ದ್ವೇಷವನ್ನು ಹರಡುವಲ್ಲಿ ಮತ್ತು ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಹಿಂಸಾಚಾರಗಳು ಒಂದು ನಿರ್ದಿಶ್ಟ ಸಮದಾಯವನ್ನ ಗುರಿಯಾಗಿಸಿಕೊಂಡದ್ದ ವಾಸ್ತವದಿಂದ  ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ತಮ್ಮ ಸ್ವಂತ ವೈಫಲ್ಯಗಳನ್ನು ಬಚ್ಚಿಡಲು ದಿಲ್ಲಿ ಪೊಲೀಸರು ಕೋಮು ಹಿಂಸೆಗೆ ಮುಸ್ಲಿಮರು ಮತ್ತು ಸಿಎಎ ವಿರುದ್ಧದ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಪ್ರಗತಿಪರ ಕಾರ್ಯಕರ್ತರನ್ನು ಹೊಣೆಯಾಗಿಸಿದ್ದಾರೆ. ಅಂದ ಹಾಗೆ ದಿಲ್ಲಿ ಪೊಲೀಸರು ಬಿಜೆಪಿ ನಾಯಕ ಅಮಿತ್ ಶಾ ನೇತೃತ್ವದ ಕೇಂದ್ರ ಗೃಹಸಚಿವಾಲಯದ ಅಧೀನದಲ್ಲಿದ್ದಾರೆ.

ಕಳೆದೊಂದು ವರ್ಷದಲ್ಲಿ ಡಝನ್ ಗಟ್ಟಲೆ ಬೀದಿಮಟ್ಟದ ದಂಗೆಕೋರರನ್ನು ಬಂಧಿಸಲಾಗಿದೆ. ಆದರೆ ಹಿಂಸಾಚಾರದ ನಿಜವಾದ ಒಳಸಂಚಿನ ಹಿಂದೆ ಸಿಎಎ ವಿರೋಧಿಗಳ ಕೈವಾಡವಿದೆ ಎನ್ನುವುದು ಪೊಲೀಸರ ವಾದವಾಗಿದೆ. ಡಝನ್ ಗೂ ಅಧಿಕ ಸಾಮಾಜಿಕ ಹೋರಾಟಗಾರರ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಲಾಗಿದೆ. ವಿಶ್ವದ ಕಣ್ಣಲ್ಲಿ ನರೇಂದ್ರ ಮೋದಿ ಸರಕಾರದ ಮಾನವನ್ನು ಕಳೆಯಲು ಮತ್ತು ನಂತರ ಅದನ್ನು ಬಲಪ್ರಯೋಗದ ಮೂಲಕ ಉರುಳಿಸುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ಸಂದರ್ಭದಲ್ಲಿ ದಂಗೆಗಳ ಕಿಚ್ಚನ್ನೆಬ್ಬಿಸಲು ಈ ಸಾಮಾಜಿಕ ಹೋರಾಟಗಾರರು ಪಿತೂರಿ ನಡೆಸಿದ್ದರು ಎಂದು ಪೊಲೀಸರು ದಾಖಲಿಸಿರುವ ಬೃಹತ್ ದೋಷಾರೋಪಣ ಪಟ್ಟಿಯಲ್ಲಿ ಆರೋಪಿಸಲಾಗಿದೆ.

ಆದರೆ ಪೊಲೀಸ್ ಆರೋಪಕ್ಕೆ ನಿಜಕ್ಕೂ ಆಧಾರಗಳಿವೆಯೇ? ಅಥವಾ ಅವರು ನಿಜವಾದ ಒಳಸಂಚನ್ನು ಮುಚ್ಚಿಡಲು ಒಂದು ಬೆರ್ಚಪ್ಪನನ್ನು ಸೃಷ್ಟಿಸಿದ್ದಾರೆಯೇ?

ಪೊಲೀಸರು ದಾಖಲಿಸಿರುವ ದೋಷಾರೋಪಣ ಪಟ್ಟಿಗಳಲ್ಲೊಂದರಲ್ಲಿ ದಂಗೆಗಳನ್ನು ಭುಗಿಲೆಬ್ಬಿಸಲು ಟ್ರಂಪ್ ಅವರ ಭಾರತ ಭೇಟಿಯನ್ನು ಬಳಸಲು 2020,ಜ.8ರಂದು ಸಂಚನ್ನು ರೂಪಿಸಲಾಗಿತ್ತು ಎಂಬ ಪೊಲೀಸ್ ಹೇಳಿಕೆಯು ಉಲ್ಲೇಖಗೊಂಡಿದೆ. ಆದರೆ ಆ ವೇಳೆಗೆ ಟ್ರಂಪ್ ಭೇಟಿಯನ್ನು  ಅಮೆರಿಕವಾಗಲೀ ಭಾರತವಾಗಲೀ ಪ್ರಕಟಿಸಿರಲೇ ಇಲ್ಲ.

ಒಂದಡೆ, ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಹೀಗೆ ಅಸಂಬದ್ಧ ಸನ್ನಿವೇಶಗಳನ್ನು ಪೊಲೀಸರು ಮುಂದಿರಿಸಿದ್ದಾರಾದರೂ, ಮತ್ತೊಂದೆಡೆ 2019 ರ ಡಿಸೆಂಬರ್ ಮೂರನೇ ವಾರದಿಂದಲೇ ಸಿಎಎ ವಿರುದ್ಧದ  ಶಾಂತಿಯುತ ಪ್ರತಿಭಟನೆಯನ್ನು ದಮನಿಸಲು ಹಿಂಸೆಯ ಬಳಕೆಯನ್ನು ಬಹಿರಂಗವಾಗಿವೇ ಪ್ರತಿಪಾದಿಸುತ್ತಿದ್ದ ಕೆಲವು  ಪ್ರಭಾವಿ ಪುರುಷರು ಮತ್ತು ಮಹಿಳೆಯರ ಗುಂಪೊಂದನ್ನು ತನಿಖೆಗೆ ಒಳಪಡಿಸದಿರಲು ಉದ್ದೇಶಪೂರ್ವಕವಾಗಿ  ತೀರ್ಮಾನಿಸಿದ್ದರು.

ಈ ಪ್ರಭಾವಿ ಗುಂಪು ಆಡಳಿತ ವ್ಯವಸ್ಥೆಯೊಂದಿಗೆ ಬಲವಾದ ನಂಟುಗಳನ್ನು ಹೊಂದಿವೆ.  ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರಕಾರಕ್ಕೆ ಮುಜುಗರವನ್ನುಂಟು ಮಾಡಿದ್ದ ಪ್ರತಿಭಟನೆಗಳನ್ನು ಅಂತ್ಯಗೊಳಿಸುವುದು ಮತ್ತು ಅದರಲ್ಲಿ ಪಾಲ್ಗೊಂಡವರಿಗೆ,ವಿಶೇಷವಾಗಿ ಮುಸ್ಲಿಮರು ಮತ್ತು ವಿದ್ಯಾರ್ಥಿಗಳಿಗೆ ಪಾಠವನ್ನು ಕಲಿಸುವುದು ಈ ಗುಂಪಿನ ಉದ್ದೇಶವಾಗಿತ್ತು. ಈ ಗುಂಪು ದಿಲ್ಲಿ ಹಿಂಸಾಚಾರಕ್ಕಿಂತ ಮುಂಚಿನ  ವಾರಗಳಲ್ಲಿ ಸರಕಾರದ ಹಿಂದುತ್ವ ಅಜೆಂಡಾವನ್ನು ವಿರೋಧಿಸುತ್ತಿರುವುದಕ್ಕಾಗಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎಂಬ ಸಂದೇಶವನ್ನು ನಿರಂತರವಾಗಿ ರವಾನಿಸುತ್ತಲೇ ಇತ್ತು.

ಈ ಗುಂಪು ಹಿಂದುತ್ವ ಸಂಘಟನಾ-ವ್ಯವಸ್ಥೆಯದೇ ಭಾಗವಾಗಿದ್ದು ಕ್ರಿಮಿನಲ್ ಶಕ್ತಿಗಳಿಂದ ಹಿಡಿದು ಬಿಜೆಪಿ ರಾಜಕಾರಣಿಗಳು ಮತ್ತು ಮೋದಿ ಸರಕಾರದ ಸಚಿವರವರೆಗೆ  ಹರಡಿಕೊಂಡಿದೆ. ಪೊಲೀಸರು ಅದರ ವಿರುದ್ಧ ತನಿಖೆಗೆ ನಿರಾಕರಿಸಲು ಇದೇ ಕಾರಣವಾಗಿದೆ.

ಫೆ.23ರಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ದಿಲ್ಲಿಯ ಮೌಜಪುರದಲ್ಲಿ ಪ್ರಚೋದನಾಕಾರಿ ಭಾಷಣವನ್ನು ಮಾಡಿದ್ದರು ಎನ್ನುವ ಅಂಶ ಎಲ್ಲರಿಗೂ ಗೊತ್ತಿದೆ. ಆದರೆ ಪೊಲೀಸರು ಅವರ ವಿರುದ್ಧ ತನಿಖೆಗೆ ನಿರಾಕರಿಸಿದ್ದು ಮಾತ್ರವಲ್ಲ, ತನಿಖೆಯೇ ಇಲ್ಲದೇ ಅವರನ್ನು ದೋಷಮುಕ್ತಗೊಳಿಸಿದ್ದಾರೆ. ಆದರೆ ಇದೇ ಮಿಶ್ರಾ ಅವರೇ ಡಿ.19ರ ಹೊತ್ತಿಗೇ ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಹಿಂಸೆಯನ್ನು ಪ್ರತಿಪಾದಿಸಿದ್ದರು ಮತ್ತು ಫೆ.23ರಂದು ಹಿಂಸಾಚಾರವು ಭುಗಿಲೇಳುವುದಕ್ಕೆ ಮುಂಚಿನ ಇಡೀ ಅವಧಿಯುದ್ದಕ್ಕೂ ಇಂತಹ ಬೆದರಿಕೆಗಳನ್ನೊಡ್ಡುತ್ತಿದ್ದ ಇತರರೊಂದಿಗೆ ಗುರುತಿಸಿಕೊಂಡಿದ್ದರು.

ಜಾಮಿಯಾ,ಜೆಎನ್ಯು ಮತ್ತು ಅಮು(ಅಲಿಗಡ ಮುಸ್ಲಿಂ ವಿವಿ) ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕೆಂಬ ಮಿಶ್ರಾರ ಘೋಷಣೆಯ ಕುರಿತು ‘The Wire’ ಅವರನ್ನು ಪ್ರಶ್ನಿಸಿದಾಗ ಹೀಗೆ ಹೇಳಿದ್ದನ್ನು ಅವರು ಮೊದಲು ನಿರಾಕರಿಸಿದ್ದರು. ಆದರೆ ಅವರದೇ ಸ್ವಂತ ವೀಡಿಯೊಗಳನ್ನು ತೋರಿಸಿದಾಗ ‘ಗೋಲಿ ಮಾರೋ ಸಾಲೋಂ ಕೊ ’ಎಂದು ಹೇಳಿದ್ದು ದೊಡ್ಡ ವಿಷಯವೇನಲ್ಲ ಮತ್ತು ಅದೊಂದು ಮಾತಿನ ವರಸಯಲ್ಲಿ ಆಡಿದ ಮಾತಾಗಿತ್ತು ಅಶ್ಟೆ ಎಂದು ತಿಪ್ಪೆ ಸಾರಿಸಿದ್ದರು. ಇದೇ ರೀತಿ,ಫೆ.23ರಂದು ಮೌಜಪುರದಲ್ಲಿ ತನ್ನ ಹೇಳಿಕೆಯು ಮುಸ್ಲಿಮರಿಗೆ ಬೆದರಿಕೆಯೊಡ್ಡುವ ಉದ್ದೇಶ ಹೊಂದಿತ್ತು ಎನ್ನುವುದನ್ನೂ ಅವರು ನಿರಾಕರಿಸಿದರು.

ದಿಲ್ಲಿಯ ಮಾಜಿ ಪೊಲೀಸ್ ಆಯುಕ್ತ ಅಜಯ ರಾಜ್ ಶರ್ಮಾ ಅವರು ದಂಗೆಯ ಸಂದರ್ಭದಲ್ಲಿ ತಾನು ಅಧಿಕಾರದಲ್ಲಿ ಇದ್ದಿದ್ದರೆ ಮಿಶ್ರಾರನ್ನು ಬಂಧಿಸುತ್ತಿದ್ದೆ ಮತ್ತು ಮಿಶ್ರಾ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾಗ ಮೌನವಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುತ್ತಿದ್ದೆ ಎಂದು ಕಳೆದ ವರ್ಷ ‘The Wire’ ಗೆ ತಿಳಿಸಿದ್ದರು.

ಬಿಜೆಪಿ ನಾಯಕರ ಹೆಸರುಗಳನ್ನೂ ಮತ್ತು ಹಿಂಸಾಚಾರವನ್ನು ನಡೆಸಲು ಬಹಿರಂಗವಾಗಿ  ಒಟ್ಟಾಗುತ್ತಿದ್ದ ಹಿಂದುತ್ವ ಗುಂಪುಗಳನ್ನು ರಕ್ಷಿಸುವ ಉತ್ಸಾಹದಲ್ಲಿರುವ ಪೊಲೀಸರು ಮಿಶ್ರಾರ ಹೇಳಿಕೆಯನ್ನು ವಿನಮ್ರವಾಗಿ ಒಪ್ಪಿಕೊಂಡಿದ್ದು ಮಾತ್ರವಲ್ಲದೆ, ಈ ನಾಯಕರು ಮತ್ತು ಗುಂಪುಗಳು ದಿಲ್ಲಿ ಒಳಸಂಚಿನಲ್ಲಿ ಭಾಗಿಯಾಗಿದ್ದವು ಎನ್ನುವುದನ್ನು ಬೆಟ್ಟು ಮಾಡಿ ತೋರಿಸುವ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಭಾರೀ ಪ್ರಮಾಣದ ಸಾಕ್ಷಾಧಾರಗಳನ್ನೂ ಕಡೆಗಣಿಸುತ್ತಾ ಬಂದಿದ್ದಾರೆ.

ಉಗ್ರವಾದಿ ಹಿಂದುತ್ವ ನಾಯಕಿ ರಾಗಿಣಿ ತಿವಾರಿ ಅಲಿಯಾಸ್ ಜಾನಕಿ ಬೆನ್ ಅವರು ಎರಡು ತಿಂಗಳ ಹಿಂದೆ ಬಿಡುಗಡೆಗೊಳಿಸಿದ್ದ ಆಘಾತಕಾರಿ ವೀಡಿಯೊವೊಂದರಲ್ಲಿ ತಾನು ಮೌಜಪುರದಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭ ಮಾಡಿದ್ದಂತೆ ದಿಲ್ಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಹಿಂಸಾಚಾರವನ್ನು ಭುಗಿಲೆಬ್ಬಿಸುವುದಾಗಿ ಬೆದರಿಕೆಯೊಡ್ಡಿದ್ದನ್ನು ಸ್ಪಷ್ಟವಾಗಿ ತೋರಿಸಿದೆ. ಇದೇ ತಿವಾರಿ 2020,ಫೆಬ್ರವರಿಯ ದಿಲ್ಲಿ ದಂಗೆಗಳಲ್ಲಿ ಭಾಗಿಯಾಗಿದ್ದಕ್ಕೆ ವೀಡಿಯೊ ಸಾಕ್ಷಗಳಿವೆ.

‘ಸರಕಾರವು ನಮ್ಮನ್ನು ರೈತರ ಪ್ರತಿಭಟನೆಯಿಂದ ಮುಕ್ತಗೊಳಿಸದಿದ್ದರೆ,ದಿಲ್ಲಿಯಿಂದ ರೈತರನ್ನು ತೊಲಗಿಸದಿದ್ದರೆ ರಾಗಿಣಿ ತಿವಾರಿ ಇನ್ನೊಂದು ಜಫ್ರಾಬಾದ್ ಅನ್ನು ಸೃಷ್ಟಿಸುತ್ತಾಳೆ ಮತ್ತು ಆ ನಂತರ ಸಂಭವಿಸುವ ಎಲ್ಲದಕ್ಕೂ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ದಿಲ್ಲಿ ಪೊಲೀಸ್ ಹೊಣೆಯಾಗುತ್ತವೆ. ಜೈ ಶ್ರೀರಾಮ್. ಭಾರತದ ರಾಷ್ಟ್ರವಾದಿಗಳೇ ದಿ.17ರಂದು ರಾಗಿಣಿ ತಿವಾರಿಯೊಂದಿಗೆ ಕೈಜೋಡಿಸಿ. ಹೇಗಿದ್ದರೂ ನಾವು ರೈತರ ಪ್ರತಿಭಟನೆಯನ್ನು ನಿವಾರಿಸುತ್ತೇವೆ. ಹೇಗೂ ನಾನು ಅವರನ್ನು ಖಾಲಿ ಮಾಡಿಸುತ್ತೇನೆ. ಜೈ ಜಗತ್ ಜನನಿ ಜಾನಕಿ. ಜೈ ಪುನರೌ ಧಾಮ. ಜೈ ಶ್ರೀರಾಮ. ವಂದೇ ಮಾತರಂ. 16ನೇ ತಾರೀಖಿನೊಳಗೆ ರೈತರ ಪ್ರತಿಭಟನೆಯ ಸೋಗಿನಲ್ಲಿ ನಡೆಯುತ್ತಿರುವ ಒಳಸಂಚನ್ನು ನಿರ್ನಾಮ ಮಾಡದಿದ್ದರೆ 17ರಂದು ರಾಗಿಣಿ ತಿವಾರಿ ಅದನ್ನು ನಿರ್ಮೂಲಿಸುತ್ತಾಳೆ. ಜೈ ಶ್ರೀರಾಮ್ ’ ಎಂದು ಹೇಳಿಕೆ ನೀಡಿದ್ದರು.

2020 ಫೆ.23ರಂದು ಮಿಶ್ರಾ ನಿಖರವಾಗಿ ಇದೇ ರೀತಿಯ ಬೆದರಿಕೆಯನ್ನೊಡ್ಡಿದ್ದರು ಮತ್ತು ಈಶಾನ್ಯ ದಿಲ್ಲಿಯ ಮೌಜಪುರ ಮತ್ತು ಇತರ ಸ್ಥಳಗಳಲ್ಲಿ ರಾಗಿಣಿ ತಿವಾರಿಯಂತಹ ಹಿಂದುತ್ವ ನಾಯಕರು ತಳಮಟ್ಟದಲ್ಲಿ ಇದನ್ನೇ ಜಾರಿಗೆ ತಂದಿದ್ದರು. ಈಗ ರಾಗಿಣಿ ತಿವಾರಿ ಮತ್ತೊಂದು ಕಡೇ ಜಫ್ರಾಬಾದನ್ನು ಮರುಸೃಷ್ಟಿಸುವ ಮಾತುಗಳನ್ನಾಡುತ್ತಿದ್ದಾರೆ..

ಈ ಸರಣಿಯಲ್ಲಿ ‘The Wire’ , ದ್ವೇಷವನ್ನು ಹರಡುವಲ್ಲಿ,ಗುಂಪುಗಳನ್ನು ಸೇರಿಸುವಲ್ಲಿ ಮತ್ತು ಹಿಂಸೆಯನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದ ಹಲವಾರು ಹಿಂದುತ್ವ ಕಾರ್ಯಕರ್ತರನ್ನು ಮತ್ತು ನಾಯಕರನ್ನು ನಿಮಗೆ ಪರಿಚಯಿಸುತ್ತಿದೆ. ಈ ಪೈಕಿ ಕೆಲವರನ್ನು ಗುರುತಿಸಲು ಸಾಧ್ಯವಾಗಿದೆ,ಇತರರ ಗುರುತು ತಿಳಿದಿಲ್ಲ. ರಾಗಿಣಿ ತಿವಾರಿಯಂತಹ ಕಾರ್ಯಕರ್ತರು ಹಿಂಸಾಚಾರದಲ್ಲನ ತಮ್ಮ ಪಾತ್ರದ ಬಗ್ಗೆ ವೀಡಿಯೊಗಳಲ್ಲಿ ಪದೇ ಪದೇ ಕೊಚ್ಚಿಕೊಂಡಿದ್ದಾರೆ. ಆದರೆ ಹಿಂಸಾಚಾರವನ್ನು ಭುಗಿಲೆಬ್ಬಿಸುವಲ್ಲಿ ಅವರ ಪಾತ್ರಕ್ಕಾಗಿ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವ ಯಾವುದೇ ಪ್ರಯತ್ನಗಳನ್ನು ಪೊಲೀಸರು ಮಾಡದಿರುವುದು ಅಚ್ಚರಿಯನ್ನುಂಟು ಮಾಡುತ್ತದೆ. ಈ ಹಿಂಸಾಚಾರ ಅಂತಿಮವಾಗಿ 53 ಅಮಾಯಕರನ್ನು ಬಲಿ ಪಡೆದಿತ್ತು. ಅದರಲ್ಲಿ ಒಬ್ಬರು ಪೊಲೀಸರು ಸೇರಿದ್ದಾರೆ.

ಸರಣಿಯ ಮೊದಲ ಭಾಗದಲ್ಲಿ ಇಂತಹ ಇಬ್ಬರು ವ್ಯಕ್ತಿಗಳಾದ ದೀಪಕ್ ಸಿಂಗ್ ಹಿಂದು ಮತ್ತು ಅಂಕಿತ್ ತಿವಾರಿ ಅವರ ಪಾತ್ರಗಳನ್ನು ನೋಡೋಣ...

 ದೀಪಕ್ ಸಿಂಗ್ ಹಿಂದು: ತೀವ್ರಗಾಮಿ ಸಂಘಟನೆ ‘ಹಿಂದು ಫೋರ್ಸ್ʼ ನ ಸ್ಥಾಪಕ ಹಾಗೂ ಬಜರಂಗ ದಳದ ಒಡನಾಡಿ

 2020,ಫೆ.23ರಂದು ಕಪಿಲ್ ಮಿಶ್ರಾ ಅವರು ಮೌಜಪುರದಲ್ಲಿ ಪ್ರಚೋದನಾತ್ಮಕ ಭಾಷಣವನ್ನು ಮಾಡಿದ ದಿನದಂದೇ ದೀಪಕ್ ಸಿಂಗ್ ಹಿಂದು ಅಲ್ಲಿ ಗುಂಪುಗಳನ್ನು ಸೇರಿಸಲು ಆ ದಿನ ಬೆಳಿಗ್ಗೆಯೇ ಫೇಸ್ಬುಕ್ ನಲ್ಲಿ ಈ  ಪೋಸ್ಟ್ ಹಾಕಿದ್ದ.

‘ನಾನು ಈ ಯುದ್ಧವನ್ನು ಏಕಾಂಗಿಯಾಗಿ ಎದುರಿಸುತ್ತಿದ್ದೇನೆ. ಈ ಧಾರ್ಮಿಕ ಯುದ್ಧದಲ್ಲಿ ನನ್ನ ಜೊತೆ ನೀವೂ ಕೈ ಸೇರಿಸುವುದು ಅಗತ್ಯವಾಗಿದೆ. ಇಡೀ ದಿಲ್ಲಿಯನ್ನು ಶಾಹೀನ್ ಬಾಗ್ ಆಗಿ ಪರಿವರ್ತಿಸಲಾಗಿದೆ ಮತ್ತು ಈಗ ಈಶಾನ್ಯ ದಿಲ್ಲಿಯ ಜಫ್ರಾಬಾದ್ ಅನ್ನು ಶಾಹೀನ್ ಬಾಗ್ ಅನ್ನಾಗಿ ಮಾಡಲಾಗಿದೆ. ಜಿಹಾದಿ ಮನೋಸ್ಥಿತಿಯ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಆದರೆ ನಾವು ಹಿಜಡಾಗಳಂತೆ ಇದನ್ನು ಮೌನವಾಗಿ ನೋಡುತ್ತಿರುವ ಬದಲು ಪುರುಷರಾಗಿಯೇ ಸಾಯುವುದು ಒಳ್ಳೆಯದು ಮತ್ತು ನಾನು, ದೀಪಕ್ ಸಿಂಗ್ ಹಿಂದು ಈ ಯುದ್ಧವನ್ನು ಅದರ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ದಯವಿಟ್ಟು ಮಧ್ಯಾಹ್ನ 2:30ಕ್ಕೆ ಮೌಜಪುರ ಚೌಕ್ ಗೆ ಬನ್ನಿ, ಏಕೆಂದರೆ ದೀಪಕ್ ಸಿಂಗ್ ಹಿಂದು ಅಲ್ಲಿ ಒಬ್ಬನೇ ತಲುಪಿದರೆ ಅದು ನೀವೆಲ್ಲ ನಾಚಿಕೆಯಿಂದ ಸಾಯಬೇಕಾದ ಘಳಿಗೆಯಾಗುತ್ತದೆ. ಭಾರೀ ಸಂಖ್ಯೆಯಲ್ಲಿ ಮೌಜಪುರ ಚೌಕ್ನಲ್ಲಿ ಸೇರುವಂತೆ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇಲ್ಲಿ ಉಲ್ಲೇಖಿಸುವ ನನ್ನ ಮೊಬೈಲ್ ಸಂಖ್ಯೆಯನ್ನು ಬರೆದುಕೊಳ್ಳಿ ಮತ್ತು ನನಗೆ ಕರೆ ಮಾಡಿ. ನಾನು ನನ್ನ ಬೆಂಬಲಿಗರೊಂದಿಗೆ ಅಲ್ಲಿಗೆ ತಲುಪುತ್ತೇನೆ. ನನಗೆ ನಿಮ್ಮ ಬೆಂಬಲವೂ ದೊರಕಿದರೆ ನನ್ನ ಶಕ್ತಿಯು ಸಾವಿರ ಪಟ್ಟು ಹೆಚ್ಚುತ್ತದೆ ’

ಹಿಂಸಾಚಾರ ಆರಂಭವಾಗಿದ್ದ ದಿನ ಬೆಳಿಗ್ಗೆ ದೀಪಕ್ ಸಿಂಗ್ ನಿಖರವಾಗಿ ಏನು ಹೇಳಿದ್ದ ಎನ್ನುವುದನ್ನು ನೋಡಿ. ಆತ ಈ ಪ್ರಚೋದನಕಾರಿ ವೀಡಿಯೊವನ್ನು ರೆಕಾರ್ಡ್ ಮಾಡಿದಾಗ ಹಿಂಸಾಚಾರವಿನ್ನೂ ಆರಂಭವಾಗಿರಲಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

ಮೌಜಪುರ ಚೌಕದಲ್ಲಿ ಅಪರಾಹ್ನ 2:30ಕ್ಕೆ ಸೇರುವಂತೆ ದೀಪಕ್ ಸಿಂಗ್ ತನ್ನ ವೀಕ್ಷಕರಿಗೆ ಕರೆ ನೀಡುತ್ತಾನೆ. 2:30ಕ್ಕೇ ಏಕೆ? ಇದೇ ಸಮಯದಲ್ಲಿ ಕಪಿಲ್ ಮಿಶ್ರಾ ಕೂಡ ಅದೇ ಸ್ಥಳದಲ್ಲಿ ಮಾತನಾಡಲಿದ್ದಾರೆ ಎನ್ನುವುದು ಆತನಿಗೆ ಗೊತ್ತಿತ್ತೇ? ಹಿಂಸಾಚಾರವನ್ನು ಆರಂಭಿಸಲು, ಬಳಸಿಕೊಳ್ಳಲು, ಗುಂಪುಗಳನ್ನು ಸೇರಿಸಲು ಇದೇ ಸಮಯ ಮತ್ತು ಸ್ಥಳವನ್ನು ನಿಗದಿಗೊಳಿಸಿದ್ದ ಕಾಣದ ಕೈ ಯಾವುದಾಗಿತ್ತು? ದಿಲ್ಲಿ ಪೊಲೀಸರು ಈ ಮೂಲ ಪ್ರಶ್ನೆಯನ್ನು ಕೇಳುವ ಬಗ್ಗೆ ಯಾಕೆ ತಲೆ ಕೆಡಿಸಿಕೊಂಡಿರಲಿಲ್ಲ?

ಹಿಂಸೆಯನ್ನು ಹುಟ್ಟುಹಾಕುವ ತಮ್ಮ ಒಳಸಂಚಿನ ಭಾಗವಾಗಿ ಸಾಮಾಜಿಕ ಹೋರಾಟಗಾರರು ಮೌಜಪುರ ಚೌಕ್ ಬಳಿಯ ರಸ್ತೆಯಲ್ಲಿ ತಡೆಯನ್ನು ನಿರ್ಮಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ದೀಪಕ್ ಸಿಂಗ್ ಬೆಳಗ್ಗೆ ಕರೆ ನೀಡಿರದಿದ್ದರೆ ಆಗಲೂ ಅಲ್ಲಿ ಹಿಂಸೆ ನಡೆಯುತ್ತಿತ್ತೇ? ಪೊಲೀಸರು ಆತನ ವಿರುದ್ಧವೇಕೆ ಆರೋಪವನ್ನು ಹೊರಿಸಿಲ್ಲ?

ವಿಪರ್ಯಾಸವೆಂದರೆ,2020,ಫೆ.22ರಂದು ಸಿಎಎ ವಿರೋಧಿ ಪ್ರತಿಭಟನಾಕಾರರು ಜಫ್ರಾಬಾದ್ ಮೆಟ್ರೋ ನಿಲ್ದಾಣದಲ್ಲಿ ತಡೆಯನ್ನು ಸೃಷ್ಟಿಸುವುದಕ್ಕೂ ಮೊದಲೇ ಹಿಂಸೆಯನ್ನು ಆರಂಭಿಸಲು ದೀಪಕ್ ಸಿಂಗ್ ಮತ್ತು ಇತರರು ಹುನ್ನಾರ ನಡೆಸಿದ್ದರು ಎನ್ನುವುದನ್ನು ನೋಡಿದಾಗ ದಿಲ್ಲಿ ಪೊಲೀಸರ ವಾದವು ನಿಜಕ್ಕೂ ಕುಸಿದುಬೀಳುತ್ತದೆ. ಆದರೂ ದಿಲ್ಲಿ ಪೊಲೀಸರು ಮೆಟ್ರೋ ನಿಲ್ದಾಣದಲ್ಲಿ ತಡೆಯನ್ನುಂಟು ಮಾಡಿದ್ದು ದಂಗೆಗಳಿಗೆ ನಾಂದಿ ಹಾಡಿತ್ತು ಮತ್ತು ನಂತರ ನಡೆದಿದ್ದಕ್ಕೆಲ್ಲ ಸಿಎಎ ವಿರೋಧಿ ಕಾರ್ಯಕರ್ತರೇ ಕಾರಣರಾಗಿದ್ದರು ಎನ್ನುತ್ತಿದ್ದಾರೆ.

ಆದರೆ 2020,ಜ.23ರಂದು ಅಂದರೆ ಮೆಟ್ರೋ ನಿಲ್ದಾಣದಲ್ಲಿ ಗಲಭೆ ನಡೆದ ಬರೋಬ್ಬರಿ ಒಂದು ತಿಂಗಳು ಮೊದಲೇ ದೀಪಕ್ ಸಿಂಗ್ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ತಾನು ನಡೆಸಲು ಉದ್ದೇಶಿಸಿರುವ ಹಿಂಸಾಚಾರದ ಎಚ್ಚರಿಕೆಯನ್ನು ನೀಡಿದ್ದ.

‘ನಾನು ಶಾಹೀನ್ ಬಾಗ್, ಜೆಎನ್ಯೂ ಮತ್ತು ಜಾಮಿಯಾಕ್ಕೆ ಏಕಾಂಗಿಯಾಗಿ ತೆರಳಿ ಅಲ್ಲಿ ಸಾವಿರಾರು ಜನರ ನಡುವೆ ತಿರುಗಾಡಿದ ವ್ಯಕ್ತಿಯಾಗಿದ್ದೇನೆ. ನೀವು (ಮುಸ್ಲಿಮರು) ದೇಶಪ್ರೇಮಿಗಳಾಗಿದ್ದರೆ ನೀವು ಧರ್ಮದ ಹೆಸರಿನಲ್ಲಿ ಈ ದೇಶವನ್ನು ವಿಭಜಿಸುತ್ತಿರಲಿಲ್ಲ. ನೀವು ದೇಶಪ್ರೇಮಿಗಳಲ್ಲ,ನೀವು ಹಂದಿಗಳು. ನೀವು ಕೇವಲ ದೇಶದ್ರೋಹಿಗಳಾಗಿದ್ದೀರಿ ಮತ್ತು ದೇಶದ್ರೋಹಿಗಳನ್ನು ಚಪ್ಪಲಿಗಳಿಂದ ಥಳಿಸಲಾಗುತ್ತದೆ. ನಾನು ನಿಮಗೆ ಬೇಕಾದರೆ ಬರೆದು ಕೊಡುತ್ತೇನೆ. ಮತ್ತು ಇದೇ ನಡೆಯಲಿದೆ ’ ಎಂದು ಆತ ಹೇಳಿದ್ದ.

 ದೀಪಕ್ ಸಿಂಗ್ನಂತಹ ಜನರು ಮುಖ್ಯವಾಹಿನಿಯನ್ನು ಪ್ರತಿನಿಧಿಸದ ಅಂಚಿನಲ್ಲಿರುವ  ಶಕ್ತಿಗಳಾಗಿದ್ದಾರೆ ಎಂದು ಹೇಳಲು ಬಿಜೆಪಿ ಬಯಸುತ್ತದೆ. ಆದರೂ ಆತ ವಾಸ್ತವದಲ್ಲಿ ಪರ್ವೇಶ್ ವರ್ಮಾ ಮತ್ತು ಮೋದಿ ಸರಕಾರದ ಸಚಿವ ಅನುರಾಗ್ ಠಾಕೂರ್ರಂತಹ ಹಿರಿಯ ಬಿಜೆಪಿ ನಾಯಕರು ಜನವರಿ ಅಂತ್ಯದಲ್ಲಿ ದಿಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಹೇಳಿದ್ದನ್ನೇ ಪ್ರತಿಧ್ವನಿಸಿದ್ದ.

ರಾಗಿಣಿ ತಿವಾರಿ, ಗಿರಿರಾಜ್ ಸಿಂಗ್, ಯತಿ ನರಸಿಂಗಾನಂದ್ ಮತ್ತು ಸುಬ್ರಮಣಿಯನ್ ಸ್ವಾಮಿ ಅವರೊಂದಿಗೆ ಫೋಟೋಗಳಲ್ಲಿ ದೀಪಕ್ ಸಿಂಗ್ ಹಿಂದೂ.

 ಈ ತೀವ್ರವಾದಿ ಶಕ್ತಿಗಳ ನಡುವೆ ಆನ್ ಲೈನ್ ನಲ್ಲಿ,ಪ್ರತಿಭಟನೆಗಳಲ್ಲಿ ಮತ್ತು ಬೀದಿಗಳಲ್ಲಿ ನಿರಂತರ ಒಡನಾಟ ಮತ್ತು ಸಂಪರ್ಕಗಳಿರುವಂತೆ ಹಿಂದುತ್ವ ವ್ಯವಸ್ಥೆ ಕಾರ್ಯಾಚರಿಸುತ್ತಿದೆ. ಇದೇ ರೀತಿ ಈ ತಥಾಕಥಿತ ಅಂಚಿನ ಶಕ್ತಿಗಳೂ ಬಿಜೆಪಿಯ ಮುಖ್ಯವಾಹಿನಿ ನಾಯಕರೊಂದಿಗೆ ನಿಯಮಿತವಾಗಿ ಒಡನಾಟ ನಡೆಸುತ್ತಿರುತ್ತವೆ.

ಆದರೆ ದೀಪಕ್ ಸಿಂಗ್ ದಿಲ್ಲಿ ಹಿಂಸಾಚಾರದಲ್ಲಿ ವಹಿಸಿದ್ದ ಪಾತ್ರವನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ. ಆತ ಮಾತ್ರವಲ್ಲ,ಆತನಂತಹ ಹಲವಾರು ಹಿಂದುತ್ವ ಕಾರ್ಯಕರ್ತರಿದ್ದಾರೆ.                           

ಅಂಕಿತ್ ತಿವಾರಿ: ಬಿಜೆಪಿಯ ಸ್ವಯಂ ಸೇವಕ ಮತ್ತು ದಿಲ್ಲಿಯ ಕೊಂಡ್ಲಿಯ ಆರೆಸ್ಸೆಸ್  ಸದಸ್ಯ

ಬಿಜೆಪಿ ನಾಯಕ ಕಪಿಲ್ ಮಿಶ್ರಾ ನಿಜವಾದ ಒಳಸಂಚಿನ ರಾಜೀಯ ಮುಖವಾಗಿದ್ದರೆ ದೀಪಕ್ ಸಿಂಗ್ ಮೌಜಪುರ ಮತ್ತು ಈಶಾನ್ಯ ದಿಲ್ಲಿಯ ಇತರ ಪ್ರದೇಶಗಳಲ್ಲಿ ಹಿಂಸಾತ್ಮಕ ಗುಂಪುಗಳನ್ನು ಸೇರಿಸುವಲ್ಲಿ ಹಿಂದುತ್ವ ಸಂಘಟನೆಗಳಿಗೆ ನೆರವಾಗಿದ್ದ. ಇದೇ ವೇಳೆ ದಿಲ್ಲಿಯ ಕೊಂಡ್ಲಿಯ ಬಿಜೆಪಿ ಸ್ವಯಂಸೇವಕ ಮತ್ತು ಆರೆಸ್ಸೆಸ್ ಸದಸ್ಯ ಅಂಕಿತ್ ತಿವಾರಿ ಪದಾತಿ ಸೈನಿಕನಾಗಿದ್ದ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿದ್ದಲ್ಲದೆ ಮುಸ್ಲಿಮರನ್ನು ತಾನು ಕೊಂದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿಯೇ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ.

ತಿವಾರಿಯ ಸೋಷಿಯಲ್ ಮೀಡಿಯಾ ಪ್ರೊಫೈಲ್ಗಳು ಮುಸ್ಲಿಮರ ವಿರುದ್ಧ ದ್ವೇಷದಿಂದ ತುಂಬಿವೆ. ಆತ ಆರೆಸ್ಸೆಸ್ನೊಂದಿಗೆ ತನ್ನ ಒಡನಾಟವನ್ನೂ ಬಹಿರಂಗವಾಗಿ ಜಾಹೀರು ಮಾಡಿಕೊಂಡಿದ್ದಾನೆ. ತಿವಾರಿ ಹಿಂಸೆಯನ್ನು ಪ್ರಚೋದಿಸುತ್ತಿರುವುದನ್ನು ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿದ್ದನ್ನು ಹಲವಾರು ವೀಡಿಯೊಗಳು ತೋರಿಸಿವೆ.

ಕುತೂಹಲಕರವೆಂದರೆ ಡಝನ್ಗೂ ಅಧಿಕ ಸಿಎಎ ವಿರೋಧಿ ಪ್ರತಿಭಟನಾಕಾರರು ಹಲವಾರು ತಿಂಗಳುಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದರೆ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಖುದ್ದು ತಾನೇ ಒದಗಿಸಿರುವ ಸಾಕ್ಷಾಧಾರಗಳಿದ್ದರೂ ತಿವಾರಿ ದಿಲ್ಲಿಯ ಬೀದಿಗಳಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾನೆ. ತಿವಾರಿ ಹಿಂಸಾಚಾರದ ಬೆದರಿಕೆಯೊಡ್ಡುವ ಉಗ್ರ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ಈಗಲೂ ಮುಂದುವರಿಸಿರುವುದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತಿದೆ.

2020,ನ.12ರಂದು ಇನ್ಸ್ಟಾಗ್ರಾಮ್ನಲ್ಲಿ ಬಿಡುಗಡೆಗೊಳಿಸಿದ ವೀಡಿಯೊದಲ್ಲಿ ತಿವಾರಿ ‘ಕಟುವಾಗಳನ್ನು ಅಥವಾ ಕಾಶ್ಮೀರದಲ್ಲಿಯ ಮುಸ್ಲಿಮರನ್ನು ಕೊಲ್ಲಲು ಸೇನೆಗೆ ಸೇರಲು ಉದ್ದೇಶಿಸಿರುವುದಾಗಿ ಹೇಳಿಕೊಂಡಿದ್ದಾನೆ.

 ಕಳೆದ ವರ್ಷದ ಅಕ್ಟೋಬರ್ ಮತ್ತು ನವಂಬರ್ನಲ್ಲಿ ಪತ್ರಕರ್ತೆಯೋರ್ವರು ಮಾರವೇಷದಲ್ಲಿ ತಿವಾರಿಯೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಚಾಟಿಂಗ್ ನಡೆಸಿದ್ದರು.

ಈ ಚಾಟ್ಗಳಲ್ಲಿ ತಿವಾರಿ ತಾನು ಹಲವಾರು ಮುಸ್ಲಿಮರನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಮೌಜಪುರದಲ್ಲಿ ಒಂದು ರಾತ್ರಿ ತಾನು ಈ ಕೆಲಸವನ್ನು ಮಾಡಿದ್ದೆ. ತನ್ನೊಂದಿಗೆ ರಾಷ್ಟ್ರವಾದಿ ಸ್ನೇಹಿತರು ಇದ್ದರು,ಮದ್ದುಗುಂಡುಗಳೂ ಇದ್ದವು ಎಂದಾತ ಹೇಳಿದ್ದಾನೆ.

ಆರೆಸ್ಸೆಸ್,ಬಜರಂಗ ದಳ ಮತ್ತು ಎಬಿವಿಪಿಯ ಕೆಲವು ಕಾರ್ಯಕರ್ತರು ಜಂಟಿ ತಂಡಗಳನ್ನು ರಚಿಸಿಕೊಂಡಿದ್ದೆವೆಂದೂ,  ಮುಸ್ಲಿಮರ ವಿರುದ್ಧ ಹಿಂಸೆಗೆ ಒತ್ತು ನೀಡಲು ಕೋಡೆಡ್ ಭಾಷೆಯನ್ನು ಬಳಸುತ್ತಿದ್ದೆವೆಂದು ಹೇಳಿರುವ ಆತ ‘‘ನಾವು ‘ಪ್ರಸಾದ’ವನ್ನು ಸರಿಯಾಗಿ ವಿತರಿಸಿದ್ದೆವು ’’ಎಂದೂ ಈ ಚಾಟ್ಗಳಲ್ಲಿ ಹೇಳಿದ್ದಾನೆ.

ಇನ್ನೊಂದು ಇನ್ ಸ್ಟಾಗ್ರಾಮ್ ಚಾಟ್ನಲ್ಲಿ ತಿವಾರಿ ತಾನು ಹಲವಾರು ‘ಮುಲ್ಲಾಗಳು ’ಮತ್ತು ‘ಕಟುವಾ’ಗಳನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾನೆ. 

ದೀಪಕ್ ಸಿಂಗ್ ನಂತೆ ಅಂಕಿತ್ ಕೂಡಾ ಏಕಾಂಗಿಯಲ್ಲ. ಬದಲಿಗೆ ಅವರುಗಳು ಸುಸಂಘಟಿತ ಹಿಂದೂತ್ವ ವ್ಯವಸ್ಥೆಯ ಭಾಗವಾಗಿದ್ದಾರೆ.

ಈಶಾನ್ಯ ದಿಲ್ಲಿಯಲ್ಲಿ ಭಾರೀ ಪ್ರಮಾಣದಲ್ಲಿ ಹಿಂಸಾಚಾರ ಸ್ಫೋಟಗೊಳ್ಳುವುದಕ್ಕೆ ಮೂರು ವಾರಗಳ ಮುನ್ನ,2020,ಜ.30ರಂದು ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಾಟ ನಡೆಸಿದ್ದ ‘ರಾಮಭಕ್ತ ’ ಗೋಪಾಲ ತನಗೆ ಗೊತ್ತು ಎಂದು ತನ್ನ ಒಂದು ಚಾಟ್ನಲ್ಲಿ ಆತ ತಿಳಿಸಿದ್ದಾನೆ.
 
2019,ಡಿ.20ರಂದು ದಿಲ್ಲಿಯ ಕನಾಟ್ ಪ್ಲೇಸ್ನಲ್ಲಿ ನಡೆದಿದ್ದ ಆರೆಸ್ಸೆಸ್ ರ್ಯಾಲಿಯಲ್ಲಿ ತಾನು ಭಾಗವಹಿಸಿದ್ದೆ ಎಂದೂ ತಿವಾರಿ ಹೇಳಿದ್ದಾನೆ. ಈ ರ್ಯಾಲಿಯಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸಿಎಎ-ಎನ್ಆರ್ಸಿ ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದರು. ಅಮಿತ್ ಶಾ ಭಾಷಣ ಮಾಡಿದ್ದ ದಿಲ್ಲಿಯ ಚುನಾವಣಾ ರ್ಯಾಲಿಯಲ್ಲಿ ತಾನು ಪಾಲ್ಗೊಂಡಿದ್ದ ವೀಡಿಯೊವೊಂದನ್ನೂ ಕೂಡಾ ಆತ ಪೋಸ್ಟ್ ಮಾಡಿದ್ದಾನೆ.

ಅತ್ಯಂತ ತಲ್ಲಣಕಾರಿ ವಿಷಯವೆಂದರೆ ತಾನು ಮತ್ತು ತನ್ನ ಸಹಚರರು ಇನ್ನೊಂದು ಸುತ್ತಿನ ದಂಗೆಗಳನ್ನು ನಡೆಸಲು ಯೋಜಿಸಿದ್ದೇವೆ ಮತ್ತು ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ತಿವಾರಿ ಹೇಳಿಕೊಂಡಿದ್ದಾನೆ. ದಿಲ್ಲಿಯಲ್ಲಿ ಎನ್ಆರ್ಸಿಯನ್ನು ಜಾರಿಗೊಳಿಸಿದಾಗ ಇನ್ನೊಂದು ಸುತ್ತಿನ ದಂಗೆಗಳು ನಡೆಯಲಿವೆ ಎಂದೂ ಆತ ಹೇಳಿದ್ದಾನೆ.

2020ರ ದಿಲ್ಲಿ ದಂಗೆಗಳ ಹಿಂದಿನ ನಿಜವಾದ ಒಳಸಂಚಿನ ಕುರಿತು ಸರಣಿಯ ಎರಡನೇ ಭಾಗದಲ್ಲಿ ರಾಜಧಾನಿಯ ಹಿಂದುತ್ವ ನೆಟ್ವರ್ಕ್ನ ನ ಇನ್ನೂ ನಾಲ್ವರನ್ನು ಪರಿಚಯಿಸಲಾಗುವುದು. ಈ ವ್ಯಕ್ತಿಗಳು ಮತ್ತು ಅವರು ಕಾರುತ್ತಿರುವ ವಿಷ ಹೇಗೆ ಆಡಳಿತ ಪಕ್ಷದ ರಾಜಕೀಯ ಯೋಜನೆಯ ಭಾಗವಾಗಿವೆ ಎನ್ನುವುದನ್ನು ನೀವು ನೋಡಲಿದ್ದೀರಿ. ಈ ರಾಜಕೀಯ ಯೋಜನೆ ದಿಲ್ಲಿಗೆ ಮಾತ್ರ ಸೀಮಿತವಾಗದೆ ಅಖಿಲ ಭಾರತ ವ್ಯಾಪ್ತಿಯನ್ನು ಹೊಂದಿದೆ.

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)