varthabharthi


ವಿಶೇಷ-ವರದಿಗಳು

'Thewire.in' ತನಿಖಾ ವರದಿ- ಭಾಗ 2

ದಿಲ್ಲಿ ದಂಗೆಗೆ ಸ್ವಲ್ಪ ಮುನ್ನ ಉಗ್ರವಾದಿ ಹಿಂದುತ್ವ ನಾಯಕನೋರ್ವ ಮುಸ್ಲಿಮರನ್ನು ಕೊಲ್ಲುವಂತೆ ಪದೇ ಪದೆ ಕರೆ ನೀಡಿದ್ದ

ವಾರ್ತಾ ಭಾರತಿ : 15 Mar, 2021
ಆಲಿಶಾನ್ ಜಾಫ್ರಿ, ಶೆಹ್ಲತ್ ಮಕ್ನೂನ್ ವಾನಿ ಮತ್ತು ಸಿದ್ಧಾರ್ಥ್ ವರದರಾಜನ್

'Thewire.in' ತನಿಖಾ ವರದಿ- ಭಾಗ 2

ಉಗ್ರ ಹಿಂದೂತ್ವವಾದಿ ನಾಯಕ ಯತಿ ನರಸಿಂಗಾನಂದನ ದ್ವೇಷ ಭಾಷಣಗಳು ದಂಗೆಕೋರರನ್ನು ಉಗ್ರವಾದಿಗಳನ್ನಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಇದರ ಪರಿಣಾಮವಾಗಿಯೇ ಈಶಾನ್ಯ ದೆಹಲಿಯಲ್ಲಿ ರಕ್ತಪಾತವೂ ಸಂಭವಿಸಿತು.

ಪೊಲೀಸರು ಕಡೆಗಣಿಸಿರುವ ದಿಲ್ಲಿ ದಂಗೆಗಳ ಹಿಂದಿನ ಒಳಸಂಚಿನ ಕುರಿತು ‘The Wire’ ನಡೆಸಿದ ತನಿಖೆಯ ವರದಿಯ ಮೊದಲ ಭಾಗದಲ್ಲಿ ಇಬ್ಬರು ಹಿಂದುತ್ವ ಕಾರ್ಯಕರ್ತರಾದ ದೀಪಕ್ ಸಿಂಗ್ ಹಿಂದು ಮತ್ತು ಅಂಕಿತ್ ತಿವಾರಿ ಅವರ ಪಾತ್ರಗಳನ್ನು ವಿವರವಾಗಿ ಪರಿಶೀಲಿಸಲಾಗಿತ್ತು.

ಈಗ ಯತಿ ನರಸಿಂಹಾನಂದ ಸರಸ್ವತಿ ಮತ್ತು ಆತನ ಸಹಚರರ ಬಗ್ಗೆ ಗಮನಹರಿಸೋಣ. ಇವರ ದ್ವೇಷ ಭಾಷಣಗಳು ಮತ್ತು ಪ್ರಚೋದನೆಗಳು ದಂಗೆಕೋರರನ್ನು ಉಗ್ರವಾದಿಗಳನ್ನಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಇದರ ಪರಿಣಾಮವಾಗಿಯೇ ಈಶಾನ್ಯ ದೆಹಲಿಯಲ್ಲಿ ೨೦೨೦ರ ಫೆಬ್ರವರಿಯಲ್ಲಿ ರಕ್ತಪಾತವೂ ಸಂಭವಿಸಿತು. ದೆಹಲಿ ದಂಗೆಗಳಿಗೆ ಮುನ್ನ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸಲು  ನಿರಂತರವಾಗಿ ನೀಡಲಾಗುತ್ತದ್ದ ಕರೆಗಳು ಒಂದು ಅಮೂರ್ತ ಪ್ರತಿಪಾದನೆಗಳಾಗಿರದೆ ನೈಜ ಒಳಸಂಚಿನ ಅತ್ಯಗತ್ಯ ಭಾಗವಾಗಿತ್ತೆಂಬುದು ಈಗ ಸ್ಪಷ್ಟವಾಗಿದೆ. ತಮ್ಮನ್ನು ಪೊಲೀಸರು ಏನೂ ಮಾಡುವುದಿಲ್ಲ ಎಂದು ಗೊತ್ತಿದ್ದರಿಂದಲೇ ಈ ಹಿಂಸಾಚಾರಗಳನ್ನು ಅಷ್ಟು ಬಹಿರಂಗವಾಗಿ ನಡೆಸಲಾಗಿದೆ.

ಘಾಝಿಯಾಬಾದಿನ ದೇವಮಾನವ

ಘಾಝಿಯಾಯಾಬಾದಿನ ಯತಿ ನರಸಿಂಹಾನಂದ ಉಗ್ರವಾದಿ ಹಿಂದುತ್ವ ನಾಯಕನಾಗಿದ್ದು,ಈತನ ಕೇಂದ್ರಸ್ಥಾನವು ದಿಲ್ಲಿ ಮತ್ತು ಉತ್ತರ ಪ್ರದೇಶಗಳ ಗಡಿಗಳು ಸಂಧಿಸುವ ಘಾಝಿಯಾಬಾದಿನ ದಸನಾದಲ್ಲಿದೆ. ಕಪಿಲ್ ಮಿಶ್ರಾರಂತಹ ಬಿಜೆಪಿಯ ಹಿರಿಯ ನಾಯಕರೊಂದಿಗಿನ ಸಾಂಗತ್ಯ ಮತ್ತು ಮುಖ್ಯವಾಹಿನಿಯ ಹಿಂದುತ್ವ ರಾಜಕಾರಣಿಗಳು ಮುಸ್ಲಿಮರ ಕುರಿತು ನೀಡಲು ಹಿಂದೇಟು ಹೊಡೆಯುವ ಹೇಳಿಕೆಗಳನ್ನು ಒರಟಾಗಿ ಮತ್ತು ಬಹಿರಂಗವಾಗಿ ನೀಡುವ ತನ್ನ ಧಾಷ್ಟದಿಂದಾಗಿ ಈತ ದಿಲ್ಲಿಯ ಬಹಿರಂಗ ಹಾಗೂ ಭೂಗತ ಹಿಂದುತ್ವ ಜಾಲದ ಮೇಲೆ ಅಗಾಧ ಪ್ರಭಾವವನ್ನು ಹೊಂದಿದ್ದಾನೆ.‌

ಉದಾಹರಣೆಗೆ ದಂಗೆಗಳ ಎರಡು ತಿಂಗಳು ಮೊದಲು ನರಸಿಂಹಾನಂದ ಮುಸ್ಲಿಮರನ್ನು ರಾಕ್ಷಸರು ಎಂದು ಬಣ್ಣಿಸಿದ್ದ.:

 ‘ಹಾಲಿ ಯುಗದಲ್ಲಿ ನಾವು ಮುಸ್ಲಿಮರೆಂದು ಕರೆಯುತ್ತಿರುವವರನ್ನು ಗತ ಯುಗಗಳಲ್ಲಿ ರಾಕ್ಷಸರೆಂದು ಕರೆಯಲ್ಪಡುತ್ತಿದ್ದರು ’ಎಂದು ಹೇಳಿದ್ದ. ಗಾಂಧಿಜಿಯವರ ಹಂತಕ ನಾಥುರಾಮ ಗೋಡ್ಸೆಯ ಆರಾಧಕನಾಗಿರುವ ನರಸಿಂಹಾನಂದ,‘ನಾಥುರಾಮ ಗೋಡ್ಸೆಜಿಯವರನ್ನು ಬಣ್ಣಿಸಲು ನಮಗೆ ಶಬ್ದಗಳು ಸಾಲುವುದಿಲ್ಲ. ವೀರ ಸಾವರ್ಕರ್‌ ಜಿ ಮತ್ತು ನಾಥುರಾಮ ಗೋಡ್ಸೆಜಿ ಅವರನ್ನು ನನ್ನ ಮಹಾನ್ ಹಿರೋಗಳೆಂದು ನಾನು ಪರಿಗಣಿಸಿದ್ದೇನೆ ’ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದ.

ವಾಸ್ತವದಲ್ಲಿ ಸಿಎಎ ಮತ್ತು ಅದರ ವಿರುದ್ಧ ಪ್ರತಿಭಟನೆಗಳಿಗೆ ಮೊದಲೇ ನರಸಿಂಹಾನಂದ ಹಿಂಸೆಗೆ ಕರೆಗಳನ್ನು ನೀಡಿದ್ದ. 2019,ಅಕ್ಟೋಬರ್ ನಲ್ಲಿ ಲಕ್ನೋದಲ್ಲಿ ಚೂರಿಯಿಂದ ಇರಿತದಿಂದ ಉಗ್ರವಾದಿ ಹಿಂದುತ್ವ ನಾಯಕ ಕಮಲೇಶ್ ತಿವಾರಿಯ ಹತ್ಯೆಯಾದಾಗಲೇ ಆತ  ಎಲ್ಲ ಮುಸ್ಲಿಮರ ಮೇಲೂ ಹಿಂಸಾಚಾರ ಎಸಗುವ ಬೆದರಿಕೆಯನ್ನೊಡ್ಡಿದ್ದ ಮತ್ತು ಇಸ್ಲಾಮನ್ನು ಭಾರತದಿಂದ ನಿರ್ಮೂಲಿಸುವುದಾಗಿ ಹೇಳಿದ್ದ.

‌‘ಹಿಂದು ಹುಲಿಯ ಹತ್ಯೆಯಿಂದ ವಿಶ್ವಾದ್ಯಂತ ಮುಸ್ಲಿಮರು ಸಂಭ್ರಮದಲ್ಲಿದ್ದಾರೆ ಮತ್ತು ನಮ್ಮ ಮನೆಗಳಲ್ಲಿ ಶೋಕ ತುಂಬಿಕೊಂಡಿದೆ. ಕಮಲೇಶ್ ತಿವಾರಿಯ ಕುಟುಂಬವು ಇಂದು ರೋಧಿಸುತ್ತಿರುವಂತೆ ನೀವೂ ರೋಧಿಸುವಂತೆ ಮಾಡದಿದ್ದರೆ ನಾನು ಅಪ್ಪನಿಗೆ ಹುಟ್ಟಿದ ಮಗನೇ ಅಲ್ಲ ಎಂದು ಪ್ರತಿಯೊಬ್ಬ ಮುಸ್ಲಿಮನಿಗೂ ನಾನು ಇಂದು ಸವಾಲೊಡ್ಡುತ್ತಿದ್ದೇನೆ. ನಾನು ಬದುಕಿರುವವರೆಗೂ ಶಸ್ತ್ರಾಸ್ತ್ರಗಳನ್ನು ಬಳಸುತ್ತೇನೆ. ಒಂದು ದಿನ ಈ ದೇಶದಿಂದ ಇಸ್ಲಾಮನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇವೆ ಎಂದು ನಾನು ಪ್ರತಿಯೊಬ್ಬ ಮುಸ್ಲಿಮನಿಗೂ ಎಚ್ಚರಿಸುತ್ತಿದ್ದೇನೆ’ ಎಂದು ಆತ ಹೇಳಿಕೆ ನೀಡಿದ್ದ.

ಚಿತ್ರದಲ್ಲಿ ಯತಿಯ ಎಡಕ್ಕೆ ಬಿಳಿಯ ಶರ್ಟ್ ಅನ್ನು ಧರಿಸಿರುವ ಮೀಸೆ ಬಿಟ್ಟರುವ ವ್ಯಕ್ತಿ ಹಿಂದು ರಕ್ಷಾ ದಳದ ಪಿಂಕಿ ಚೌಧರಿ ಆಗಿದ್ದಾನೆ. ಈತ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ದಾಳಿಯ ಹೊಣೆಯನ್ನು ಹೊತ್ತುಕೊಂಡು 2020,ಜನವರಿಯಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದ.

ಬೂದು ಬಣ್ಣದ ಶರ್ಟ್ ಮತ್ತು ಕಿತ್ತಳೆ ಬಣ್ಣದ ಸ್ಕಾರ್ಫ್ ಧರಿಸಿರುವ ವ್ಯಕ್ತಿ ದೀಪಕ್ ಸಿಂಗ್ ಹಿಂದು. ಇದೇ ವ್ಯಕ್ತಿ 2020,ಫೆ.23ರಂದು ಅಪರಾಹ್ನ 2:30ಕ್ಕೆ ದಿಲ್ಲಿಯ ಮೌಜಪುರ ಚೌಕ್ನಲ್ಲಿ ಸೇರುವಂತೆ ಗುಂಪುಗಳಿಗೆ ಕರೆ ನೀಡಿ ಅಂದು ಬೆಳಿಗ್ಗೆ ವೀಡಿಯೊ ಪೋಸ್ಟ್ ಮಾಡಿದ್ದ ಮತ್ತು ಅದೇ ದಿನ ಸಂಜೆ ದಂಗೆಗಳು ಆರಂಭಗೊಂಡಿದ್ದವು.

ಆರ ವಾರಗಳ ನಂತರ, 2019,ಡಿ.4ರಂದು ತನ್ನ ಭಾಷಣವೊಂದರಲ್ಲಿ ನರಸಿಂಹಾನಂದ,ಮುಸ್ಲಿಮರ ವಿರುದ್ಧ ಹೋರಾಡುವ ಇಚ್ಛಾಶಕ್ತಿಯನ್ನು ಹಿಂದುಗಳು ಕಳೆದುಕೊಂಡಿದ್ದಾರೆ ಎಂಬ ತನ್ನ ಎಂದಿನ ಪ್ರತಿಪಾದನೆಯನ್ನು ಕೊಂಚ ವಿಸ್ತರಿಸಿದ್ದ ಮತ್ತು ಇತ್ತೀಚಿಗೆ ಮುಸ್ಲಿಮರ ವಿರದ್ಧ ದಂಗೆಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದ್ದ. ಇದಕ್ಕಾಗಿ ಆತ ಶಸ್ತ್ರಾಸ್ತ್ರಗಳನ್ನು ಹಿಡಿದು ಬೀದಿಗಿಳಿಯುವಲ್ಲಿ ಹಿಂದುಗಳ ವೈಫಲ್ಯವನ್ನು ದೂರಿದ್ದ.

‘ಮಹಾರಾಜ್,ಎಲ್ಲಿಯೂ ದಂಗೆಗಳು ನಡೆಯುತ್ತಿಲ್ಲ ಎಂದು ಹಲವಾರು ಹಿಂದುಗಳು ಇಂದು ನನಗೆ ಹೇಳುತ್ತಿರುತ್ತಾರೆ. ದಂಗೆಗಳು ಏಕೆ ನಡೆಯುತ್ತಿಲ್ಲ? ಹಿಂದೆಲ್ಲ ಶಸ್ತ್ರಾಸ್ತ್ರಗಳೊಂದಿಗೆ ಹಿಂದುಗಳನ್ನು ಬೀದಿಗಳಿಗೆ ತರುತ್ತಿದ್ದ ವಿಷಯಗಳ ಬಗ್ಗೆ  ಇಂದು ಧ್ವನಿಯೆತ್ತಲೂ ಕೂಡಾ ಯಾವುದೇ ಹಿಂದುವಿಗೆ ಧೈರ್ಯವಿಲ್ಲ. ನಮ್ಮ ಸಂಘಟನೆಗಳಿಂದ ಏನು ಉಪಯೋಗವಿದೆ ಎನ್ನುವುದು ನನಗೆ ಗೊತ್ತಿಲ್ಲ. ದೊಡ್ಡದಿರಲಿ ಅಥವಾ ಸಣ್ಣದಿರಲಿ,ನಮ್ಮ ಸೋದರರಿಗಾಗಿ ಹೋರಾಡಲು ನಾವು ಸಿದ್ಧರಿಲ್ಲ,ನಮ್ಮ ಸೋದರರ ಪರವಾಗಿ ಮಾತನಾಡಲೂ ನಾವು ಸಿದ್ಧರಿಲ್ಲ.  ಆದರೆ ಇದೇ ವೇಳೆ ಮುಸ್ಲಿಮರು  ಹಿಂದುಗಳ  ಕೊರಳು ಸೀಳದ ದಿನವೇ ಇಲ್ಲ.’

 2020,ಫೆಬ್ರವರಿ ದಂಗೆಗಳ ಮುಂಚಿನ ವಾರಗಳು ಮತ್ತು ತಿಂಗಳುಗಳಲ್ಲಿ ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಯತಿಯು ಸಾರ್ವಜನಿಕವಾಗಿ ಉದುರಿಸಿದ್ದ ಆಣಿಮುತ್ತುಗಳು ಆತ ಹಿಂದುಗಳಲ್ಲಿದೆ ಎಂದು ಭಾವಿಸಿದ್ದ ಇಂತ ದೌರ್ಬಲ್ಯವನ್ನು ನಿವಾರಿಸುವ ಸ್ಪಷ್ಟ ಉದ್ದೇಶವನ್ನು ಹೊಂದಿದ್ದವು. ದಂಗೆಯು ನಡೆದು ಮುಸ್ಲಿಮರಿಗೆ ಪಾಠ ಕಲಿಸುವಂತಾಗಲು ಹಿಂದುಗಳನ್ನು ಶಸ್ತ್ರಾಸ್ತ್ರಗಳೊಂದಿಗೆ ಬೀದಿಗಿಳಿಸುವುದು ಆತನ ಸ್ಪಷ್ಟ ಯೋಜನೆಯಾಗಿತ್ತು.

ಸಾಮಾಜಿಕ ಮಾಧ್ಯಮಗಳು ಮತ್ತು ವೀಡಿಯೊಗಳ ಬಳಕೆ ಯತಿಯ ಸುಳ್ಳು ಪ್ರಚಾರಗಳಿಗೆ ಇನ್ನಷ್ಟು ಇಂಬು ಮತ್ತು ಕೊಂಬು ಒದಗಿಸಿದವು. ನ್ಯೂಸ್ ನೇಷನ್,ಸುದರ್ಶನ ಟಿವಿ ಮತ್ತು ಆಜ್ ತಕ್‌ ನಂತಹ ಪ್ರಮುಖ ಹಿಂದಿ ಸುದ್ದಿ ವಾಹಿನಿಗಳಲ್ಲಿ ನಡೆಯುವ ಪ್ಯಾನೆಲ್ ಚರ್ಚೆಗಳಲ್ಲಿ ಸದಾ ಯತಿಗೊಂದು ಖಾಯಂ ಸ್ಥಾನವಿರುತ್ತದೆ ಮತ್ತು ಯುಟ್ಯೂಬ್ನಲ್ಲಿ ಹಲವಾರು ಉಗ್ರವಾದಿ ಹಿಂದುತ್ವ ನೆಟ್ವರ್ಕ್ ಗಳ ಪಾಲಿಗೆ ಆತ ಹಿರೋ ಆಗಿದ್ದಾನೆ. ಈ ಯೂಟ್ಯೂಬರ್ಗಳು ಯತಿಯ ಕರೆಗಳು ಲಕ್ಷಾಂತರ ಜನರಿಗೆ ತಲುಪುವಂತೆ ನೋಡಿಕೊಳ್ಳುತ್ತಾರೆ.

2019 ಡಿಸೆಂಬರ್ ಮತ್ತು 2020 ಜನವರಿ ಹಾಗೂ ಫೆಬ್ರವರಿಯಲ್ಲಿ ಯತಿಯು ಮಾಡಿದ್ದ ಭಾಷಣಗಳನ್ನು ಸ್ಪಷ್ಟವಾಗಿ ದ್ವೇಷಭಾಷಣಗಳೆಂದು ವರ್ಗೀಕರಿಸಬಹದು. ಸಾವಿರಾರು ಜನರನ್ನು ಹಿಂಸೆಗಿಳಿಯುವಂತೆ ಪ್ರಚೋದಿಸುವಲ್ಲಿ  ಮತ್ತು ಸಂಘಟಿತಗೊಳ್ಳುವಲ್ಲಿ ಈತನ ಭಾಷಣಗಳು ಪ್ರಮುಖ ಪಾತ್ರವನ್ನು ಹೊಂದಿದ್ದವು. ಹೀಗಿದ್ದರೂ ಯತಿಯನ್ನು ದಂಗೆಗಳ ಹಿಂದಿನ ಪ್ರಮುಖ ಒಳಸಂಚುಕೋರ ಎಂದು ಪೊಲೀಸರು ಪರಿಗಣಿಸದಿರುವುದು ಅಚ್ಚರಿಯನ್ನುಂಟು ಮಾಡುತ್ತದೆ.

ಜಫ್ರಾಬಾದ್ನಲ್ಲಿ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಹಲ್ಲೆಯಿಂದ ಆರಂಭಗೊಂಡಿದ್ದ ದಂಗೆಗಳು ಶೀಘ್ರವೇ ಮುಸ್ಲಿಮರ ಪ್ರಾಣ ಹಾಗೂ ಆಸ್ತಿಗಳ ಮೇಲಿನ ದಾಳಿಗಳಾಗಿ ಬದಲಾಗಿಬಿಟ್ಟವು. ಅದು ಈಶಾನ್ಯ ದಿಲ್ಲಿಯ ಇತರ ಕಡೆಗಳಿಗೂ ಹರಡಿಕೊಂಡಿತು.  ಮೂರು ದಿನಗಳ ಕಾಲ ಮುಂದುವರೆಯಿತು.

ಸಿಎಎ ವಿರುದ್ಧ ಮುಸ್ಲಿಂ ಮಹಿಳೆಯರು 2019,ಡಿ.14ರಿಂದ ಆರಂಭಿಸಿದ್ದ ಶಾಹೀನ್ ಬಾಗ್ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಸಿಎಎ ಅನ್ನು ಬೆಂಬಲಿಸಿ ನಡೆಯುತ್ತಿದ್ದ ಸಭೆಗಳು ಮತ್ತು ಮತಪ್ರದರ್ಶನಗಳಲ್ಲಿ ಯತಿಯು ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಮುಸ್ಲಿಂ ಪ್ರತಿಭಟನಾಕಾರರನ್ನು ಗೇಲಿ ಮಾಡುವುದು, ಅವರನ್ನು ರಾಕ್ಷಸರು ಮತ್ತು ಹಿಂದುಗಳ ಶತ್ರುಗಳು ಎಂದು ಬಿಂಬಿಸುವುದು ಮತ್ತು ಬಲವಂತದಿಂದ ಪ್ರತಿಭಟನೆಯನ್ನು ಅಂತ್ಯಗೊಳಿಸುವ ಕಡೆ ಮುಂದುವರೆಯುವುದು ಇಂತಹ ಸಭೆಗಳ ಉದ್ದೇಶಗಳಾಗಿದ್ದವು. ಹಿಂಸೆಗೆ ಕರೆ ನೀಡುವುದನ್ನೂ ಒಳಗೊಂಡಂತೆ ಯತಿಯ ದ್ವೇಷ ಭಾಷಣಗಳು 2019 ಡಿಸೆಂಬರ್ನಿಂದ  ಮೊದಲುಗೊಂಡು, ದಿಲ್ಲಿ ಹಿಂಸೆಯು ಆರಂಭಗೊಳ್ಳುವ ಮುಂಚಿನ ದಿನವಾಗಿದ್ದ 2020,ಫೆ.22ರವರೆಗೆ ಕ್ರಮೇಣ ಹೆಚ್ಚಾಗತ್ತಲೇ ಹೋಗಿದ್ದವು ಎನ್ನುವುದನ್ನು ದಾಖಲೆಗಳು ತೋರಿಸುತ್ತಿವೆ.

ದಿಲ್ಲಿ ಪೊಲೀಸರು ಬಯಸಿದರೆ ಯತಿಯ ವಿರುದ್ಧ ಅತ್ಯಂತ ಉಗ್ರ, ಜೀವ ಬೆದರಿಕೆಯ ಭಾಷಣಗಳ ವೀಡಿಯೋ ಸಾಕ್ಷಾಧಾರಗಳ ಸಂಪೂರ್ಣ ದಸ್ತಾವೇಜನ್ನೇ ಸುಲಭವಾಗಿ ಸಿದ್ಧಗೊಳಿಸಬಹುದು. ದಕ್ಕೆ ಹೋಲಿಸಿದಲ್ಲಿ ಅಧಿಕೃತ ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಿರುವ ಸಿಎಎ ವಿರೋಧಿ ಹೋರಾಟಗಾರರ ಭಾಷಣಗಳು ಅತ್ಯಂತ ಸೌಮ್ಯವಾಗಿವೆ. ಉಮರ್ ಖಾಲಿದ್ ಮತ್ತು ಇತರರ ಪ್ರಕರಣಗಳಲ್ಲಿ ಹಿಂಸೆಯನ್ನು ಪ್ರತಿಪಾದಿಸಿದ,‌ ಯಾವುದೇ ಧರ್ಮದ ವಿರುದ್ಧ ದ್ವೇಷವನ್ನು ಪ್ರಚೋದಿಸಿದ ಒಂದು ಮಾತನ್ನು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹಿಂಸಾಚಾರದಲ್ಲಿ ತೊಡಗಿದ್ದ ಯಾವುದೇ ವ್ಯಕ್ತಿಯೊಂದಿಗೆ ಅವರು ಸಂಪರ್ಕವಿರಿಸಿಕೊಂಡಿದ್ದ ಬಗ್ಗೆ ಯಾವುದೇ ಸಾಕ್ಷಾಧಾರವನ್ನೂ ಸಂಗ್ರಹಿಸಲು ಪೊಲೀಸರಿಗೆ ಆಗಿಲ್ಲ.

ಯತಿ ಈ ಎಲ್ಲ ತಪ್ಪುಗಳನ್ನೆಸಗಿದ್ದ, ಆದರೆ ಆತನ ವಿರುದ್ಧ ಈವರೆಗೂ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

ವಿಷಯಕ್ತ ವಾರಗಳು

ಗುಪ್ತಚರ ಏಜೆನ್ಸಿಗಳು ಸಿಎಎ ಪರ ಪಾಳಯದ ಪ್ರಚೋದಕ ಮತ್ತು ಹಿಂಸಾತ್ಮಕ ಹೇಳಿಕೆಗಳ ಮೇಲೆ ನಿಗಾಯಿರಿಸಿದ್ದರೆ ಹಿಂಸಾಚಾರವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬಹುದಿತ್ತು. ಬದಲಿಗೆ ಪೊಲೀಸರು ದಿಲ್ಲಿಯ ಬೀದಿಗಳಲ್ಲಿ ಮತ್ತು ಯುಟ್ಯೂಬ್ನಲ್ಲಿ ರೂಪುಗೊಳ್ಳುತ್ತಿದ್ದ ವಾತಾವರಣದ ಬಗ್ಗೆ ಜಾಣಗುರುಡು ಪ್ರದರ್ಶಿಸಿದ್ದರು. 2019,ಡಿ.22ರಂದು ಯತಿ ದಿಲ್ಲಿಯ ಜಂತರ್ ಮಂತರ್ನಲ್ಲಿ ಏನು ಹೇಳಿದ್ದ ಕೇಳಿ......

‘ಸಿಎಎ ಮುಸ್ಲಿಮರ ವಿರುದ್ಧವಲ್ಲ,ಅದು ದೇಶದ್ರೋಹಿಗಳ ವಿರುದ್ಧವಾಗಿದೆ. ಅವರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಈ ದೇಶವನ್ನು ವಶಪಡಿಸಿಕೊಳ್ಳಬಹುದು ಎಂದು ಭಾವಿಸಿದ್ದರು. ಆದರೆ ಮೋದಿಜಿ ಮತ್ತು ಅಮಿತ್ ಶಾ ಈ ಕಾನೂನನ್ನು ತಂದು ಅವರ ಕನಸನ್ನು ನುಚ್ಚುನೂರು ಮಾಡಿದ್ದಾರೆ. ಅವರು ಒಂದು ಹೆಜ್ಜೆಯೂ ಹಿಂದಡಿಯಿಡದಂತೆ ಮತ್ತು ಎನ್ಆರ್ಸಿ,ಏಕರೂಪ ನಾಗರಿಕ ಸಂಹಿತೆಯನ್ನೂ ಮತ್ತು ನಂತರ ಜನಸಂಖ್ಯಾ ನಿಯಂತ್ರಣ ಕಾನೂನೊಂದನ್ನು ತರುವ ದಿಕ್ಕಿನಲ್ಲಿ ಮುಂದುವರೆಯಬೇಕೆಂದು ನಾನು ಅವರನ್ನು ಆಗ್ರಹಿಸುತ್ತಿದ್ದೇನೆ’

2019,ಡಿ.25ರಂದು ತೀವ್ರವಾದಿ ಗುಂಪಾದ ವಿಶ್ವ ಸನಾತನ ಸಂಘದ ಸ್ಥಾಪಕ ಉಪದೇಶ್ ರಾಣಾ ಸಿಎಎ ಅನ್ನು ಬೆಂಬಲಿಸಿ ಜಂತರ್ ಮಂತರ್ನಲ್ಲಿ ಏರ್ಪಡಿಸಿದ್ದ ರ್ಯಾಲಿಯಲ್ಲಿ ಯತಿ ನರಸಿಂಹಾನಂದ ಸರಸ್ವತಿ ತಾರಾ ಭಾಷಣಕಾರ (ಸ್ಟಾರ್ ಸ್ಪೀಕರ್) ಆಗಿದ್ದ. ಆ ವೇಳೆಗಾಗಲೇ ಯತಿಯ ದ್ವೇಷ ಭಾಷಣ ಸಾರವು ಹೊಸ ಎತ್ತರಗಳನ್ನು ತಲುಪಿತ್ತು. ಅಮಿತ್ ಶಾ ಅವರು ಸಿಎಎಗೂ ಭಾರತೀಯ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರಬಹುದು,ಆದರೆ ಯತಿಯ ಪಾಲಿಗೆ ಅದು ಭಾರತೀಯ ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಿಸುವತ್ತ ಮೊದಲ ಹೆಜ್ಜೆಯಾಗಿತ್ತು. ಸಿಎಎ ಅನ್ನು ವಿರೋಧಿಸುವ ಮುಸ್ಲಿಮರಿಗೆ ಪಾಠವನ್ನು ಕಲಿಸಲು ಹಿಂದುಗಳು ಬೀದಿಗಳಿಗೆ ಇಳಿಯಬೇಕು ಎಂದು ಮೊದಲ ಬಾರಿಗೆ ಆತ ಜಂತರ್ಮಂತರ್ನಲ್ಲಿ ಹೇಳಿದ್ದ.

‘ಯುವಜನರೇ,ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಈಗ ಮುಸ್ಲಿಮರು ಬೀದಿಗಿಳಿದಿದ್ದಾರೆ. ಆದರೆ ನಾವು ಬೀದಿಗಿಳಿದರೆ ತಮಗೇನು ಆಗಲಿದೆ ಎನ್ನುವುದನ್ನು ಮುಸ್ಲಿಮರು ತಿಳದುಕೊಳ್ಳುವಂತಾಗಬೇಕು.  ಏನೂ ಯೋಚನೆ ಮಾಡಬೇಡಿ. ನಾವೆಲ್ಲ ನಿಮ್ಮಿಂದಿಗಿದ್ದೇವೆ ಎಂದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಹೇಳಲು ನಾನು ಬಯಸುತ್ತೇನೆ. ನೀವು ಸಿಎಎ ಅನ್ನು ತಂದಿದ್ದೀರಿ,ಈಗ ಎನ್ಆರ್ಸಿಯನ್ನು ತನ್ನಿ ಮತ್ತು ನಂತರ ಮುಸ್ಲಿಮರ ಜನಸಂಖ್ಯೆಗೆ ತಡೆಯನ್ನು ಹಾಕಿ. ಈ ಹಂದಿಗಳು ತಮ್ಮ ಸಂಖ್ಯೆಯನ್ನು ಹೆಚ್ಚಿದರೆ ಅವರು ಹೊಲಸನ್ನು ಹರಡುತ್ತಾರೆ. ಹೀಗಾಗಿ ದೇಶವನ್ನು ಈ ಹೊಲಸು ಮತ್ತು ಕೊಳಕಿನಿಂದ ರಕ್ಷಿಸಲು ಅವರ ಜನಸಂಖ್ಯೆಯನ್ನು ತಡೆಯಲು ಕಾನೂನನ್ನು ತನ್ನಿ,ನಾವು ನಿಮ್ಮನ್ನು ಬೆಂಬಲಿಸುತ್ತೇವೆ’

ನರಸಿಂಹಾನಂದ ಮುಸ್ಲಿಮರನ್ನು ಬಣ್ಣಿಸಲು ‘ಸುವ್ವರ್ ’ ಮತ್ತು ‘ಕಟುವಾ’ಗಳಂತಹ ನಿಂದಾತ್ಮಕ ಶಬ್ದಗಳನ್ನು ಬಳಸುತ್ತಾನೆ ಮತ್ತು ಅವರ ಕಣ್ಣುಗಳನ್ನು ಕಿತ್ತು ಹಾಕುವಂತೆ ಕರೆನೀಡುತ್ತಾನೆ:

‘ನೀವೆಲ್ಲ ಧರ್ಮ ರಕ್ಷಕ ಹೋರಾಟಗಾರರು. ನೀವು ಪ್ರತಿಯೊಬ್ಬರೂ ಹುಲಿಗಳಿದ್ದ ಹಾಗೆ. ಒಂದೊಂದು ಹುಲಿ 1,25,000 ಹಂದಿಗಳಿಗೆ ಸಾಕು. ಮುಸ್ಲಿಮರು ಭಾರತವನ್ನು ವಶಪಡಿಸಿಕೊಳ್ಳುವ ಕನಸನ್ನು ಕಾಣುತ್ತಿದ್ದರೆ ನಾವು ಅವರ ಕಣ್ಣುಗಳನ್ನು ಕಿತ್ತುಹಾಕುತ್ತೇವೆ ಎಂದು ಅವರಿಗೆ ಹೇಳಿ’

ಈ ಅವಧಿಯಲ್ಲಿನ ಯತಿಯ ಭಾಷಣಗಳು ಅಂತಿಮ ಯುದ್ಧ ಮತ್ತು ಅಂತಿಮ ಪರಿಹಾರ ಸಮೀಪವಾಗಿವೆ ಎಂಬ ಪರಿಕಲ್ಪನೆಯಿಂದ ತುಂಬಿಕೊಂಡಿವೆ. ದಂಗೆಗಳಿಗೆ ಎಂಟು ವಾರಗಳ ಮುನ್ನ 2019,ಡಿ.25ರಂದು ಆತ ಹೇಳಿದ್ದು:

‘ನಾನು ಹಿಂದುಗಳಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇಂದು ಸಮಯವು ಬಂದಿದೆ. ಈಗಲೂ ನಾವು ಎದ್ದು ನಿಲ್ಲದಿದ್ದರೆ ನಾವು ಬದುಕುಳಿಯುವುದಿಲ್ಲ. ಇದು ಅಂತಿಮ ಯುದ್ಧವಾಗಿದೆ,ಈ ಯುದ್ಧದಲ್ಲಿ ಸೋತಲ್ಲಿ ಏನೇನೂ ಉಳಿಯುವುದಿಲ್ಲ ಎಂದು ಹಿಂದುಗಳಿಗೆ ಹೇಳಲು ನಾನು ಬಯಸುತ್ತಿದ್ದೇನೆ ’

ಆದರೆ ಅಂದು ನರಸಿಂಹಾನಂದ ಯತಿಯ ಬಳಿ ಹೇಳಲು ಬಹಳಷ್ಟಿತ್ತು. ತನ್ನ ಪ್ರಚೋದನಾತ್ಮಕ ಭಾಷಣವನ್ನು ಮುಗಿಸಿದ ಬಳಿಕ ಆತ ಹಲವಾರು ಹಿಂದುತ್ವ ಯುಟ್ಯೂಬ್ ಚಾನೆಲ್ಗಳಿಗೆ ಸಂದರ್ಶನಗಳನ್ನು ನೀಡಿದ್ದು,ಅಲ್ಲಿಯೂ ತನ್ನ ಭೀಷಣ ದ್ವೇಷಭಾಷಣವನ್ನು ಮುಂದುವರಿಸಿದ್ದ. ಇವುಗಳ ಪೈಕಿ ’ಹಿಂದು ಪಬ್ಲಿಷರ್’ಚಾನೆಲ್, ಸಿಎಎ ಅನ್ನು ವಿರೋಧಿಸುತ್ತಿರುವ ಮತ್ತು ಈ ದೇಶವನ್ನು ಸುಡುತ್ತಿದ್ದಾರೆ ಎಂದು ಅವರು ಕೆಂಡ ಕಾರಿದ್ದ ಜನರ ಕುರಿತು ಪ್ರತಿಕ್ರಯೆಯನ್ನು ಕೋರಿತ್ತು. ಅದಕ್ಕವರು ಉತ್ತರಿಸುತ್ತಾ:

‘ಈ ಜನರು ದೇಶದ ಶತ್ರುಗಳಾಗಿದ್ದಾರೆ. ಅವರನ್ನು ಜೈಲಿಗೆ ಹಾಕಬೇಕು. ಜೈಲಿನಲ್ಲಿಯೂ ಅವರು ಸುಧಾರಿಸದಿದ್ದರೆ ಅವರಿಗೆ ಮರಣ ದಂಡನೆ ವಿಧಿಸಬೇಕು’

ಭಾರತವು ತನ್ನ ಗಡಿಗಳನ್ನು  ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ಮುಸ್ಲಿಂ ನಿರಾಶ್ರಿತರಿಗಾಗಿ ತೆರೆಯಬೇಕು ಎಂದು ಬಯಸಿರುವ ಈ ಜನರು ಯಾರು ಎಂಬ ಹಿಂದು ಪಬ್ಲಿಷರ್ನ ವರದಿಗಾರನ ಪ್ರಶ್ನೆಗೆ ಯತಿಯ ಉತ್ತರ ಆಘಾತಕಾರಿಯಾಗಿತ್ತು. ಭಾರತೀಯ ಮುಸ್ಲಿಮರನ್ನು ಹಿಂದುಗಳನ್ನು ಮತ್ತು ಭಾರತವನ್ನು ನಾಶಗೊಳಿಸಲು ಹೊರಟಿರುವ ಜಿಹಾದಿಗಳು ಎಂದು ಬಣ್ಣಿಸಿದ್ದ ಆತ,ಇಂತಹವರನ್ನು ನಿರ್ನಾಮ ಮಾಡುವುದು ಹಿಂದುಗಳ ಮೂಲ ಧಾರ್ಮಿಕ ಕರ್ತವ್ಯವಾಗಿದೆ ಎಂದು ಹೇಳಿದ್ದ.

‘ಈ ಜನರು ದೇಶದಲ್ಲಿ ಹೊಲಸನ್ನು ಹರಡಲು ಬಯಸಿರುವ ಜಿಹಾದಿಗಳಾಗಿದ್ದಾರೆ. ಇವರು ದೇಶವನ್ನು ನಾಶ ಮಾಡಲು ಬಯಸಿರುವ ಜಿಹಾದಿಗಳಾಗಿದ್ದಾರೆ. ಇವರು ನಮ್ಮ ಸಂಪನ್ಮೂಲಗಳನ್ನು ಆಕ್ರಮಿಸಿಕೊಳ್ಳಲು ಬಯಸಿರುವ ಜಿಹಾದಿಗಳಾಗಿದ್ದಾರೆ. ಇವರು ನಮ್ಮನ್ನು ಕೊಲ್ಲಲು ಬಯಸಿರುವ ಜಿಹಾದಿಗಳಾಗಿದ್ದಾರೆ. ಇವರು ನಮ್ಮ ಪುತ್ರಿಯರು ಮತ್ತು ನಮ್ಮ ಸಹೋದರಿಯರನ್ನು ವೇಶ್ಯೆಯರನ್ನಾಗಿಸಲು ಬಯಸಿರುವ ಜಿಹಾದಿಗಳಾಗಿದ್ದಾರೆ. ಇಂತಹ ಜನರನ್ನು ನಿರ್ನಾಮ ಮಾಡಬೇಕು ಮತ್ತು ಇದು ನಮ್ಮ ಮೂಲ ಧಾರ್ಮಿಕ ಕರ್ತವ್ಯವಾಗಿದೆ’

ಮೋದಿ ಸರಕಾರವು ಸಿಎಎ ಪ್ರತಿಪಾದನೆಯಲ್ಲಿ ಹೇಳಲು ಬಯಸಿರದ್ದನ್ನು ಹೇಳಲು ನರಸಿಂಹಾನಂದ ಸಜ್ಜಾಗಿದ್ದ: ಅದು ಸಿಎಎ ಎಂಬುದು ಭಾರತ ವಿಭಜನೆಯ ನಂತರ ಅಪೂರ್ಣವಾಗಿ ಉಳಿದಿದ್ದ ಅಜೆಂಡಾ ಎಂದು ಹಿಂದೂತ್ವವಾದಿಗಳು ಭಾವಿಸುವ ಅರ್ಥಾತ್ ಎಲ್ಲಾ ಮುಸ್ಲಿಮರನ್ನು ಭಾರತದಿಂದ ಹೊರದಬ್ಬುವ ಯೋಜನೆಯ ಭಾಗ ಎಂಬುದೇ ಆಗಿತ್ತು.  

ಯತಿ: ವಿಭಜನೆಯ ಬಳಿಕ ಗಾಂಧಿ ಮತ್ತು ನೆಹರು ಈ ದೇಶದ್ರೋಹಿಗಳನ್ನು ದೇಶದಲ್ಲಿಯೇ ಉಳಿಸಿಕೊಂಡಿದ್ದರು. ಇದು ಭಾರತದ ಅತ್ಯಂತ ದೊಡ್ಡ ದುರ್ದೈವ.

ಪ್ರಶ್ನೆ: ಆದರೆ ಮಹಾರಾಜಜಿ,ಈ ಜನರು ತಮ್ಮ ಆಯ್ಕೆಯಿಂದಲೇ ಇಲ್ಲಿ ಉಳಿದುಕೊಂಡಿದ್ದಾಗಿ ಹೇಳುತ್ತಾರಲ್ಲ?

ಯತಿ: ಅದು ಅವರ ಆಯ್ಕೆಯಾಗಿರಲಿಲ್ಲ,ಅದು ನಮ್ಮ ದೌರ್ಬಲ್ಯವಾಗಿತ್ತು. ನಾವು ಅವರನ್ನು ಹೊರಗಟ್ಟಬೇಕಿತ್ತು. ಅವರು ನಮ್ಮ ಜನರಲ್ಲ, ಅವರು ಜಿಹಾದಿಗಳು ಎನ್ನುವುದನ್ನು ಹಿಂದುಗಳು ಅರ್ಥ ಮಾಡಿಕೊಳ್ಳಬೇಕು. ಅವರನ್ನು ನಾವು ಮುಗಿಸಲೇಬೇಕು. ಇದು ನಮ್ಮ ಧರ್ಮ, ಇದೇ ರಾಷ್ಟ್ರಪ್ರೇಮ.

ಯತಿಯ ನರಮೇಧದ ವಾಸನೆ ಹೊಡೆಯುವ ಸಂದೇಶದ ಬಗ್ಗೆ ಏನಾದರೂ ಸಂದೇಹವಿದ್ದರೆ ಇಲ್ಲಿದೆ ಉತ್ತರ...

ಇಸ್ಲಾಂ ಎಂಬುದು ಒಂದು ಮಾನಸಿಕ ಅಸ್ವಸ್ಥತೆ ಮತ್ತು ಅದನ್ನು ಹರಡಲು ಬಿಡಬಾರದು ಎಂದು ಪರಿಗಣಿಸುವ ಚೀನಾ ದೇಶವನ್ನು ಭಾರತವು ಅನುಸರಿಸಬೇಕು ಎಂದು ಯತಿ ನರಸಿಂಹಾನಂದ ಖಬರ್ ಇಂಡಿಯಾ ಸುದ್ದಿವಾಹಿನಿಗೆ ಹೇಳಿದ್ದ.

ಯತಿ: ಚೀನಾ ಮುಸ್ಲಿಮರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದನ್ನು ಇಡೀ ಜಗತ್ತೇ ನೋಡಿದೆ. ಇಸ್ಲಾಂ ಒಂದು ಮಾನಸಿಕ ರೋಗ ಮತ್ತು ನಮ್ಮ ದೇಶವು ಈ ರೋಗಕ್ಕೆ ತುತ್ತಾಗಲು ನಾವು ಬಿಡುವುದಿಲ್ಲ ಎಂದು ಚೀನಾದ ಅಧ್ಯಕ್ಷರು ಹೇಳಿದ್ದಾರೆ.

ಪ್ರಶ್ನೆ: ಹಾಗಿದ್ದರೆ ನಾವು ನಮ್ಮ ದೇಶವನ್ನು ಹೇಗೆ ರಕ್ಷಿಸಿಕೊಳ್ಳಬೇಕು?

ಯತಿ: ಚೀನಾದ ಮಾದರಿಯನ್ನು ಅನುಸರಿಸುವ ಮೂಲಕ ನಮ್ಮ ದೇಶವು ತನ್ನನ್ನು ರಕ್ಷಿಸಿಕೊಳ್ಳುತ್ತದೆ, ಬೇರೆ ಯಾವುದೇ ಮಾರ್ಗವಿಲ್ಲ.

‘ಧರ್ಮ ಸಂಸದ್‘ನ ಪಾತ್ರ

ಜಂತರ್ ಮಂತರ್‌ ನ ಕಾರ್ಯಕ್ರಮದ ಬಳಿಕ ಯತಿ ನರಸಿಂಗಾನಂದ,  ಇನ್ನೂ ಉಗ್ರವಾದ ಯೋಜನೆಗಳಿಗಾಗಿ ಯುವ ಹಿಂದುಗಳನ್ನು ಸಂಘಟಿಸಲು ತನ್ನ ಶಕ್ತಿಯನ್ನು ಕೇಂದ್ರೀಕರಿಸಿದ್ದಂತೆ ಕಂಡು ಬರುತ್ತದೆ. ಡಿ.29ರಂದು ವೀಡಿಯೊವೊಂದರಲ್ಲಿ ಯತಿ ಎರಡು ದಿನಗಳ ಮಹತ್ವಪೂರ್ಣ ‘ಧರ್ಮ ಸಂಸದ್ ’ಗಾಗಿ ಜ.12 ಮತ್ತು 13ರಂದು ಘಾಝಿಯಾಬಾದ್ನ ತನ್ನ ಕೇಂದ್ರ  ಸ್ಥಾನಕ್ಕೆ ಬರುವಂತೆ ಆತ ‘ಹಿಂದು ಸಿಂಹ’ಗಳಿಗೆ ಮನವಿಯನ್ನು ಮಾಡಿಕೊಂಡಿದ್ದ. ನೀವು ನನಗೆ ನೆರವು ನೀಡದಿದ್ದರೆ ಏನೂ ಸಾಧಿಸಲಾಗುವುದಿಲ್ಲ ಎಂದೂ ಕರೆ ನೀಡಿದ್ದ:

‘ಘಾಝಿಯಾಬಾದ್ನಲ್ಲಿ ಜ.12 ಮತ್ತು 13ರಂದು ಧರ್ಮಸಂಸದ್ನಲ್ಲಿ ನೀವು ಪ್ರತಿಯೊಬ್ಬರೂ ಭಾಗಿಯಾಗಬೇಕು. ಈ ಕರೆ ತಲುಪುವ ನನ್ನೆಲ್ಲ ಯುವ ಹಿಂದು ಬಾಂಧವರನ್ನು ನಾನು ಕೋರಿಕೊಳ್ಳುತ್ತೇನೆ. ಇದು ನನ್ನ ಮನವಿ. ನನ್ನ ಮಕ್ಕಳೇ,ನನ್ನ ಸಿಂಹಗಳೇ,ನೀವು ನನಗೆ ನೆರವಾಗದಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ ’

ಈ ಧರ್ಮ ಸಂಸತ್ತು 2020ರ ಜನವರಿ ೧೨ , ೧೩ ರಂದು ನಡೆಯುತ್ತದೆ. ಮತ್ತು ಹಲವಾರು ಹಿಂದೂತ್ವವಾದಿಗಳು ಮತ್ತು ಧಾರ್ಮಿಕ ನಾಯಕರು ಹಲವಾರು ಪ್ರಚೋದನಕಾರಿ ಭಾಷಣಗಳನ್ನೂ ಮಾಡುತ್ತಾರೆ.

ಸತ್ಯ ಸನಾತನ ಯುಟ್ಯೂಬ್ ಚಾನೆಲ್ ಜ.16ರಂದು ಪೋಸ್ಟ್ ಮಾಡಿದ್ದ ವೀಡಿಯೊ ನರಸಿಂಹಾನಂದ,ಅಂಕುರ್ ಆರ್ಯ ಮತ್ತು ಯತಿಮಾ ಚೇತನಾ ಸರಸ್ವತಿ ಅವರು ಈ ಧರ್ಮ ಸಂಸದ್ನ ಮುಖ್ಯ ನಿರ್ಣಯಗಳು ಮತ್ತು ಸಂದೇಶದ ಬಗ್ಗೆ ಮಾತನಾಡಿದ್ದನ್ನು ಒಳಗೊಂಡಿತ್ತು.

‌ಹಿಂದುಗಳು ಪೊಲೀಸರು ಮತ್ತು ಸೇನೆಯನ್ನು ಅವಲಂಬಿಸಬಾರದು,ಆದರೆ ತಮ್ಮ ಪುರುಷತ್ವವನ್ನು ಪ್ರದರ್ಶಿಸಬೇಕು ಮತ್ತು ತಮ್ಮ ರಕ್ಷಣೆಗೆ ಅಗತ್ಯವಾಗಿರುವ ಎಲ್ಲವನ್ನೂ ಮಾಡಬೇಕು. ಪ್ರತಿ ಹಿಂದು ಕುಟುಂಬವು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸಬೇಕು, ಪ್ರತಿ ಹಿಂದು ಮನೆಯೂ ಶಸ್ತ್ರಸಜ್ಜಿತವಾಗಿರಬೇಕು ಎನ್ನುವುದು ಒಂದು ನಿರ್ಣಯವಾಗಿದೆ ಎಂದು ನರಸಿಂಹಾನಂದ ಹೇಳಿದ್ದ. ಭಯೋತ್ಪಾದಕರನ್ನು ಅವರ ಮನೆಗಳಿಗೆ ನುಗ್ಗಿ ಕೊಲ್ಲಬೇಕು ಎಂಬ ಸಿದ್ಧಾಂತವನ್ನು ಹೊಂದಿರುವುದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಗೌರವಿಸಲು ಧರ್ಮ ಸಂಸದ್ ನಿರ್ಣಯಿಸಿದೆ ಎಂದೂ ಆತ ಹೇಳಿದ್ದ.

‘ಡೊನಾಲ್ಡ್ ಟ್ರಂಪ್ರನ್ನು ಗೌರವಿಸಲು ಮತ್ತು ಮುಂದಿನ ಧರ್ಮ ಸಂಸದ್ ಗೆ ಅವರನ್ನು ಆಹ್ವಾನಿಸಲು ನಿರ್ಣಯಿಸಲಾಗಿದೆ. ಭಯೋತ್ಪಾದಕರನ್ನು ಅವರ ಮನೆಗಳಿಗೆ ನುಗ್ಗಿ ಕೊಲ್ಲುವ ಟ್ರಂಪ್ ರೀತಿಯು ಇಡೀ ವಿಶ್ವಕ್ಕೆ ಅತ್ಯಂತ ಅಗತ್ಯವಾಗಿದೆ ಮತ್ತು ಟ್ರಂಪ್ ಅವರನ್ನು ನಮ್ಮ ಹಿರೋ ಎಂದು ನಾವು ಗೌರವಿಸುತ್ತೇವೆ’

ಯತಿಯು ಟ್ರಂಪ್ ಅವರನ್ನು ಪ್ರಸ್ತಾಪಿಸಿದ್ದು 2019 ಡಿಸೆಂಬರ್ನಿಂದ ಘೋಷಿಸಲಾಗುತ್ತಿದ್ದ  ಅಂತಿಮ ಯುದ್ಧದ ಸಮಯದ ಕುರಿತು ಸೂಕ್ಷವಾದ ಸಂದೇಶವಾಗಿತ್ತೇ? ನರಸಿಂಹಾನಂದನ ಸಂದೇಶಗಳಿಂದ ಉಗ್ರವಾದಿಕರಣಗೊಂಡಿದ್ದ ಉಗ್ರಗಾಮಿ ಹಿಂದುತ್ವ ಕಾರ್ಯಕರ್ತರು ಟ್ರಂಪ್ ಭೇಟಿ ಸಂದರ್ಭದಲ್ಲಿ ಮುಸ್ಲಿಮರನ್ನು ಅವರ ಮನೆಗಳಿಗೆ ನುಗ್ಗಿ ಕೊಲ್ಲುವ ಮೂಲಕ ತಮ್ಮ ಹೀರೋನನ್ನು ಗೌರವಿಸಿದರೇ? ಈ ಆಯ್ಕೆ ಮಾಡಿಕೊಂಡಿದ್ದು ಕೇವಲ ಕಾಕತಾಳೀಯವಾಗಿತ್ತೇ? ಇದು ದಿಲ್ಲಿ ಪೊಲೀಸರು ನಿಜವಾದ ಒಳಸಂಚಿನ ಬಗ್ಗೆ ತನಿಖೆ ನಡೆಸಿದ್ದರೆ ಉತ್ತರಿಸಬಹುದಾಗಿದ್ದ ಪ್ರಶ್ನೆಯಾಗಿದೆ.

ಹತ್ಯೆಗಳಿಗೆ ಬಹಿರಂಗ ಕರೆಗಳು

ದಿಲ್ಲಿ ದಂಗೆಗಳ ಕಾಲಾನುಕ್ರಮಣಿಕೆಯಲ್ಲಿ ಧರ್ಮ ಸಂಸದ್ ಪ್ರಮುಖ ಘಟನೆಯಾಗಿ ಕಂಡು ಬರುತ್ತಿರುವುದಕ್ಕೆ ಕಾರಣವೆಂದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೂರಾರು ಯುವಹಿಂದುಗಳಿಗೆ ಅವರ ನಿಜವಾದ ವೈರಿಗಳು ಮುಸ್ಲಿಮರಾಗಿದ್ದಾರೆ ಮತ್ತು ಈ ವೈರಿಗಳನ್ನು ಕೊಲ್ಲಬೇಕು ಎಂದು ಹೇಳುವುದು ಆ ಧರ್ಮ ಸಂಸತ್ತಿನ ನಿಜವಾದ ಸಂದೇಶವಾಗಿತ್ತು ಎಂಬುದೇ ಅಗಿದೆ.  ಸತ್ಯ ಸನಾತನ ಚಾನೆಲ್ ಅನ್ನು ನಡೆಸುತ್ತಿರುವ ಅಂಕುರ್ ಆರ್ಯ ಈ ಸಂದೇಶದ ಮೊದಲ ಭಾಗವನ್ನು ಅತ್ಯಂತ ನೇರವಾಗಿ ವಿವರಿಸಿದ್ದಾನೆ.

‘ಗುರು ಗೋವಿಂದ ಸಾಹಬ್ 1,25,000 ಜನರ ವಿರುದ್ಧ ಒಬ್ಬನೇ ವೀರನನ್ನು ಕಣಕ್ಕಿಳಿಸುವುದಾಗಿ ಒಮ್ಮೆ ಹೇಳಿದ್ದರು. ಈ 1,25,000 ಜನರು ಯಾರು ಎಂದು ನಾವು ಅಂದಿನಿಂದಲೂ ಅಚ್ಚರಿ ಪಟ್ಟುಕೊಂಡಿದ್ದೆವು. ಈ 1,25,000 ಜನರು ಯಾರು ಎನ್ನುವುದನ್ನು ಯತಿಜಿ ಸ್ಪಷ್ಟ ಶಬ್ದಗಳಲ್ಲಿ ತಿಳಿಸಿದ್ದಾರೆ, ಅವರು ಜಿಹಾದಿಗಳಾಗಿದ್ದಾರೆ. ಅವರು ನಮ್ಮ ಧರ್ಮದ ವೈರಿಗಳಾಗಿದ್ದಾರೆ’ ನಮಗೆ ಯಾವಾಗಲೂ ಅಚ್ಚರಿ ಕಾಡುತ್ತಿತ್ತು. ಯಾರೂ ವಿವರಿಸುತ್ತಿರಲಿಲ್ಲ. ಈ ಶತ್ರುಗಳು ಯಾರು ಎನ್ನುವುದನ್ನು ದೊಡ್ಡ ಧರ್ಮ ಸಂಸದ್ಗಳೂ ನಮಗೆ ಹೇಳಿರಲಿಲ್ಲ. ಆದರೆ ಸ್ವಾಮೀಜಿಯವರು ಸ್ಪಷ್ಟ ಶಬ್ದಗಳಲ್ಲಿ ನಮಗೆ ವಿವರಿಸಿದ್ದಾರೆ. ಈಗ ನಮ್ಮ ಯುವಜನರಿಗೆ ಸ್ಪಷ್ಟ ಅರ್ಥ  ಸಿಕ್ಕಂತಾಗಿದೆ.. ಏಕೆಂದರೆ ಈ ಮೊದಲು ಗುರು ಗೋವಿಂದ್ ಸಾಹಬ್ ಅವರು  ಹೋರಾಡಬೇಕು ಮತ್ತು ವಿರೋಧಿಗಳನ್ನು ತುಂಡರಿಸಬೇಕು  ಎಂದು ಹೇಳಿದ್ದ ಈ ಸವಾ ಲಾಖ್(1,25,000 ಜನರು) ಯಾರು ಎನ್ನುವುದು ಅವರಿಗೆಂದೂ ಅರ್ಥವಾಗಿರಲಿಲ್ಲ.”

 ನಂತರ ನರಸಿಂಹಾನಂದ ವೇದಿಕೆಯನ್ನು ಅಂತಿಮ ಹೇಳಿಕೆ ನೀಡಲು ತನ್ನ ನಿಕಟವರ್ತಿ ಯತಿಮಾ ಚೇತನಾ ಸರಸ್ವತಿಗೆ ಬಿಟ್ಟುಕೊಟ್ಟಿದ್ದ ಮತ್ತು ಆಕೆ ಹತ್ಯೆಗಳಿಗೆ ಬಹಿರಂಗವಾಗಿಯೇ ಕರೆಯನ್ನು ನೀಡಿದ್ದಳು.

‘ ನಮ್ಮ ಗುರುಗಳಾದ ನರಸಿಂಹಾನಂದ ಸರಸ್ವತಿಜಿ ಇಂದು ನಮಗೆ ಈ ಸಂದೇಶವನ್ನು ನೀಡಿದ್ದಾರೆ: ನಾವು ಶಸ್ತ್ರಸಜ್ಜಿತರಾಗಲು ಮತ್ತು ವೈರಿಗಳ ಮಾರಣಹೋಮವನ್ನು ನಡೆಸಲು ಸಮಯವಿಂದು ಬಂದಿದೆ. ಏಕೆಂದರೆ ನಿಮ್ಮ ಬಳಿ ಶಸ್ತ್ರಾಸ್ತ್ರಗಳಿದ್ದರೆ ಮತ್ತು ನಿಮ್ಮ ನಂಬಿಕೆಯನ್ನು ಎತ್ತಿ ಹಿಡಿಯುವ ಸಾಮರ್ಥ್ಯ ನಿಮ್ಮಲ್ಲಿದ್ದರೆ ಮಾತ್ರ ಈ ನರಪಿಶಾಚಿಗಳ ಲೆಕ್ಕವನ್ನು ಚುಕ್ತಾ ಮಾಡಬಹುದು. ಇಲ್ಲದಿದ್ದರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ. ಈ ಸಂದೇಶ ತಲುಪುವ ಎಲ್ಲರಲ್ಲಿ ನನ್ನ ವಿನಂತಿಯೇನೆಂದರೆ ಅವರು ಈ ಸಂದೇಶವನ್ನು ಎಚ್ಚರಿಕೆಯಿಂದ ಆಲಿಸಬೇಕು ಮತ್ತು ಸಮಯವು ಅವರಿಂದ ಏನನ್ನು ಬೇಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.’

ಈ ಮೈ ನಡುಗಿಸುವ ಸಂದೇಶಗಳು ಪ್ರಸಾರಗೊಂಡ ಒಂದು ತಿಂಗಳ ಬಳಿಕ ನರಸಿಂಹಾನಂದನ ಧರ್ಮ ಸಂಸದ್ ನಲ್ಲಿ ಘೋಷಿಸಿದ್ದ ‘ಸಂಹಾರ’ ಅಥವಾ ನರಮೇಧವು ಈಶಾನ್ಯ ದಿಲ್ಲಿಯ ಬೀದಿಗಳಲ್ಲಿ ಕಾರ್ಯರೂಪಕ್ಕೆ ಬಂದಿತ್ತು. ನರಸಿಂಹಾನಂದನ ಯುವ ಸಿಂಹಗಳು ತಾವು ಹೋರಾಡಬೇಕಾದ,ಕತ್ತರಿಸಬೇಕಾದ,ಕಣ್ಣುಗುಡ್ಡೆಗಳನ್ನು ಕೀಳಬೇಕಾದ ಬಲಿಪಶುಗಳ ಬೇಟೆಯಲ್ಲಿ ತೊಡಗಿದ್ದರು.

ಮುಸ್ಲಿಮರಿಗೆ ಬದುಕಿರುವ ಹಕ್ಕಿಲ್ಲ

 ಮುಸ್ಲಿಂ ವಿರೋಧಿ ಹಿಂಸಾಚಾರವು ಭುಗಿಲೇಳುವುದಕ್ಕೆ ಒಂದು ದಿನ ಮೊದಲು,2020 ಫೆ.22ರಂದು ನರಸಿಂಹಾನಂದ ತನ್ನ ಅಂತಿಮ, ನರಮೇಧದ ಕರೆಯನ್ನು ನೀಡಿದ್ದ. ಮುಸ್ಲಿಮರಿಗೆ ಬದುಕಿರಲು ಯಾವುದೇ ಹಕ್ಕು ಇಲ್ಲ ಎಂದು ಆತ ಘೋಷಿಸಿದ್ದ. ಮುಸ್ಲಿಮರೊಂದಿಗೆ ಕೂಡಾ ‘ಬದುಕು ಮತ್ತು ಬದುಕಲು ಬಿಡು ’ಎಂಬ ಉಕ್ತಿಯನ್ನು ಅನುಸರಿಸುವ ಬಗ್ಗೆ  ನಿಮಗೆ ನಂಬಿಕೆಯಿದೆಯೇ ಎಂದು ಇನ್ನೊಂದು ಹಿಂದುತ್ವ ಚಾನೆಲ್ನ ಪ್ರಶ್ನೆಗೆ ನರಸಿಂಹಾನಂದ ಉತ್ತರಿಸಿದ್ದು ಹೀಗೆ:

‘ಒಳ್ಳೆಯ ಜನರು ಬದುಕಬೇಕು ಮತ್ತು ಒಳ್ಳೆಯ ಜನರನ್ನು ಬದುಕಲು ಬಿಡಬೇಕು,ಆದರೆ ನಮ್ಮ ಮತ್ತು ನಮ್ಮ ಧರ್ಮದ ವೈರಿಗಳನ್ನು,ನಮ್ಮನ್ನು ಅಳಿಸಿಹಾಕಲು ಬಯಸಿರುವವರನ್ನು ನಾವು ಮುಗಿಸಿದ ಹೊರತು,ಇಸ್ಲಾಂ ಎಂಬ ಈ ಪಾಪವನ್ನು ಸಮಾಜದಿಂದ ನಿರ್ಮೂಲಿಸದ ಹೊರತು ನಾವು ಬದುಕುಳಿಯಲು ಹೇಗೆ ಸಾಧ್ಯ? ಬದುಕು ಮತ್ತು ಬದುಕಲು ಬಿಡು ಉಕ್ತಿ ನಾಗರಿಕ ಜನರಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಅನಾಗರಿಕ ಕಳ್ಳರಿಗೆ,ಭಯೋತ್ಪಾದಕರಿಗೆ,ಜಿಹಾದಿಗಳಿಗೆ ಅಲ್ಲ. ನಾವು ನಮಗೆ ಯಾವುದೇ ಸಮಸ್ಯೆಯನ್ನುಂಟು ಮಾಡದ ನಮ್ಮ ಸ್ನೇಹಿತರನ್ನು ಬದುಕಲು ಬಿಡಬೇಕು. ಆದರೆ ನಮ್ಮ ಮಕ್ಕಳನ್ನು ಕೊಲ್ಲುವುದನ್ನೇ ಗುರಿಯಾಗಿಸಿಕೊಂಡಿರುವ ಜನರಿಗೆ ಬದುಕುಳಿಯುವ ಹಕ್ಕು ಇಲ್ಲ. ಇಂತಹ ಜನರಿಗೆ ಬದುಕುಳಿಯುವ ಹಕ್ಕನ್ನು ನೀಡಲಾಗದು’

 ಹಿಂಸೆಯನ್ನು ಪ್ರಚೋದಿಸುವುದೇ ಒಂದು ಅಪರಾಧವಾಗಿದೆ…ಆ ಅಪರಾಧ ಯೋಗಿ ಮಾಡಿರುವುದರ ಜೊತೆಗೆ ತನ್ನ ಕರೆಯ ಬಳಿಕ ಸಂಭವಿಸಿದ ಹತ್ಯೆಗಳಲ್ಲಿ ಯತಿ ನರಸಿಂಹಾನಂದ ಸರಸ್ವತಿ ಯಾವುದೇ ನೇರ ಪಾತ್ರವನ್ನು ಹೊಂದಿದ್ದನೇ ಎಂಬ ಬಗ್ಗೆ ಕೂಡಾ ಸೂಕ್ತ ಪೊಲೀಸ್ ತನಿಖೆಯ ಅಗತ್ಯವಿದೆ.

* ಯತಿಯ ಬಂಟ,ಹಿಂದು ರಕ್ಷಾ ದಳದ ನಾಯಕ ಪಿಂಕಿ ಚೌಧರಿ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಶಸ್ತ್ರಸಜ್ಜಿತ ದಾಳಿಯ ಹೊಣೆಗಾರಿಕೆಯನ್ನು ಒಪ್ಪಿಕೊಂಡಿದ್ದು ಈಗಾಗಲೇ ನಮಗೆ ಗೊತ್ತಾಗಿದೆ.

* ಯತಿಯ ನಿಕಟವರ್ತಿ, ಹಿಂದು ಫೋರ್ಸ್ ನ ದೀಪಕ್ ಸಿಂಗ್ ಹಿಂದು 2020,ಫೆ.23ರಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮೌಜಪುರ ಚೌಕದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಸಮಯದಲ್ಲಿ ಅಂದರೆ ಅಪರಾಹ್ನ 2:30 ಗಂಟೆಗೆ ಅಲ್ಲಿ ಸಮಾವೇಶಗೊಳ್ಳುವಂತೆ ತನ್ನ ಬೆಂಬಲಿಗರಿಗೆ ಅಂದು ಬೆಳಿಗ್ಗೆ ವೀಡಿಯೊ ಮನವಿಯನ್ನು ಮಾಡಿಕೊಂಡಿದ್ದು ನಮಗೆ ಗೊತ್ತಿದೆ.

* ಕನಿಷ್ಠ ಓರ್ವ ದಂಗೆಕೋರ,ಆರೆಸ್ಸೆಸ್ ಕಾರ್ಯಕರ್ತ ಅಂಕಿತ್ ತಿವಾರಿಯು ನರಸಿಂಹಾನಂದ ಮಾತನಾಡಿದ್ದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಎನ್ನುವುದು ನಮಗೆ ಗೊತ್ತಿದೆ. 2029,ಡಿ.25ರಂದು ಜಂತರ್ ಮಂತರ್ನಲ್ಲಿ ನರಸಿಂಹಾನಂದ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದಾಗ ಸಭಿಕರಲ್ಲಿ ತಿವಾರಿಯೂ ಇದ್ದ. ಯತಿ ಅಲ್ಲಿ ಮಾಡಿದ್ದ ಭಾಷಣದ ವೀಡಿಯೊವನ್ನು ತಿವಾರಿ ತನ್ನ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದ ಎನ್ನುವುದೂ ನಮಗೆ ಗೊತ್ತಿದೆ. ‘The Wire ’ನ ತನಿಖಾ ವರದಿಯ ಮೊದಲ ಭಾಗ ಬಹಿರಂಗಗೊಂಡ ಬಳಿಕ ತಿವಾರಿ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾನೆ,ಆದರೆ ಪೊಲೀಸರು ಎಂದಾದರೂ ತಿವಾರಿಯನ್ನು ತನಿಖೆಗೊಳಪಡಿಸಲು ನಿರ್ಧರಿಸಿದರೆ ಇರಲಿ ಎಂದು ಆತನ ಎಲ್ಲ ವೀಡಿಯೊಗಳನ್ನು ‘The Wire ’ ಸೇವ್ ಮಾಡಿಟ್ಟುಕೊಂಡಿದೆ.

ಹೀಗೆ ನಾವು ಸಾಬತುಮಾಡಿರುವ ಹಿಂಸಚಾರದ ಕ್ರೋನಾಲಜಿಯು ಹಿಂಸಾಚಾರವನ್ನು ಭುಗಿಲೆಬ್ಬಿಸಲು 2019 ಡಿಸೆಂಬರ್ನಲ್ಲಿಯೇ ಒಂದು ಒಳಸಂಚು ರೂಪುಗೊಂಡಿತ್ತು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಮತ್ತು ಇದಕ್ಕಾಗಿ ಮುಂದಿನ ಎರಡು ತಿಂಗಳುಗಳ ಕಾಲ ತಳಮಟ್ಟದ ಸಿದ್ಧತೆಗಳು ನಡೆದಿದ್ದವು ಮತ್ತು ಅಂತಿಮವಾಗಿ ಫೆ.23ರಂದು ಹಿಂಸಾಚಾರವು ಸ್ಫೋಟಿಸಿ 53 ಜೀವಗಳನ್ನು ಬಲಿತೆಗೆದುಕೊಂಡಿತ್ತು. ಆದರೆ ವಿಷಾದವೆಂದರೆ ದಿಲ್ಲಿ ಪೊಲೀಸರು ತನಿಖೆ ನಡೆಸುತ್ತಿರುವ ಒಳಸಂಚು ಇದಲ್ಲ.

ತನಿಖಾ ವರದಿಯ ಮೂರನೇ ಭಾಗದಲ್ಲಿ ರಾಗಿಣಿ ತಿವಾರಿ ಮತ್ತು ಇತರ ಹಿಂದುತ್ವ ಕಾರ್ಯಕರ್ತರ ಬಗ್ಗೆ ಮತ್ತು ಬಿಜೆಪಿ ಮತ್ತು ಸಂಘ ಪರಿವಾರದ ದೆಹಲಿ ವಲಯಕ್ಕೆ ರೂಪಿಸಲಾಗಿರುವ ವಿಶಾಲ ರಾಜಕೀಯ ಅಜೆಂಡಾದಲ್ಲಿ ಮತ್ತು ಅದರ ಭಾಗವೇ ಆಗಿದ್ದ ೨೦೨೦ರ ದಿಲ್ಲಿ  ದಂಗೆಗಳಲ್ಲಿ ಅವರ ಪಾತ್ರವೇನು ಎನ್ನುವುದರ ಕುರಿತು ವಿಶ್ಲೇಷಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)