varthabharthi


ಆರೋಗ್ಯ

ಮಲ್ಟಿಪಲ್ ಸ್ಕ್ಲೆರೋಸಿಸ್‌ನ ಲಕ್ಷಣಗಳು ಮತ್ತು ಕಾರಣಗಳು

ವಾರ್ತಾ ಭಾರತಿ : 15 Mar, 2021
ನವ್ಯಾ ಖರಬಂದಾ (onlymyhealth.com)

► ಪೂರಕ ಮಾಹಿತಿ:ಡಾ.ಮನೀಷ್ ಮಹಾಜನ

ಮಲ್ಟಿಪಲ್ ಸ್ಕ್ಲೆರೋಸಿಸ್(ಎಂಎಸ್) ಅಥವಾ ಬಹು ಅಂಗಾಂಶ ಗಟ್ಟಿಯಾಗುವ ರೋಗವು ಮಿದುಳು ಮತ್ತು ಮಿದುಳು ಬಳ್ಳಿಯ ದೀರ್ಘಕಾಲಿಕ ಕಾಯಿಲೆಯಾಗಿದ್ದು ಶರೀರದ ಕಾರ್ಯನಿರ್ವಹಣೆಗೆ ಅಪಾಯವನ್ನುಂಟು ಮಾಡುತ್ತದೆ ಮತ್ತು ಕೇಂದ್ರ ನರಮಂಡಳ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಎಂಎಸ್‌ನಲ್ಲಿ ನಮ್ಮದೇ ರೋಗನಿರೋಧಕ ವ್ಯವಸ್ಥೆಯು ನರತಂತುಗಳ ರಕ್ಷಣಾ ಪದರದ ಮೇಲೆ ದಾಳಿಯನ್ನು ಮಾಡುತ್ತದೆ ಮತ್ತು ಮಿದುಳು ಹಾಗೂ ಶರೀರದ ಇತರ ಭಾಗಗಳ ನಡುವೆ ಸಂವಹನಕ್ಕೆ ತೊಡಕನ್ನುಂಟು ಮಾಡುತ್ತದೆ. ಅಂತಿಮವಾಗಿ ಎಂಎಸ್ ನರಗಳಿಗೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ ಮತ್ತು ಅವುಗಳನ್ನು ನಿಶ್ಶಕ್ತಗೊಳಿಸುತ್ತದೆ. ಈ ರೋಗದ ಲಕ್ಷಣಗಳು ಪ್ರತಿ ರೋಗಿಗೂ ಭಿನ್ನವಾಗಿರುತ್ತವೆ ಮತ್ತು ಹೆಚ್ಚಾಗಿ ನರಕ್ಕೆ ಆಗಿರುವ ಹಾನಿಯ ಪ್ರಮಾಣ ಹಾಗೂ ಯಾವ ನರಗಳು ಹಾನಿಗೀಡಾಗಿವೆ ಎನ್ನುವುದನ್ನು ಅವಲಂಬಿಸಿರುತ್ತವೆ.

ಎಂಎಸ್‌ನ ತೀವ್ರ ಲಕ್ಷಣಗಳಿಂದ ಪೀಡಿತರಾಗಿರುವ ರೋಗಿಗಳಿಗೆ ನಡೆದಾಡಲು ಸಾಧ್ಯವಾಗದಿರಬಹುದು ಮತ್ತು ಕೆಲವರಿಗೆ ಲಕ್ಷಣಗಳೊಂದಿಗೆ ಹೊಂದಿಕೊಳ್ಳಲು ಹೆಚ್ಚು ಸಮಯ ಬೇಕಾಗಬಹುದು. ಎಂಎಸ್‌ಗೇ ಎಂದು ಯಾವುದೇ ಒಂದು ಚಿಕಿತ್ಸೆಯಿಲ್ಲ. ಆದರೆ ತ್ವರಿತ ಚೇತರಿಕೆಗೆ ಮತ್ತು ಲಕ್ಷಣಗಳ ತೀವ್ರತೆಯನ್ನು ನಿಯಂತ್ರಿಸಲು ನೆರವಾಗಬಲ್ಲ ಚಿಕಿತ್ಸೆಗಳು ಲಭ್ಯವಿವೆ. ಗುರ್ಗಾಂವ್‌ನ ಆರ್ಟಿಮಿಸ್ ಅಗ್ರಿಮ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸಸ್‌ನ ನ್ಯೂರೊಇಮ್ಯುನಾಲಜಿ ವಿಭಾಗದ ಮುಖ್ಯಸ್ಥ ಡಾ.ಮನೀಷ್ ಮಹಾಜನ ಅವರು ಎಂಎಸ್‌ನ ವಿಧಗಳು,ಲಕ್ಷಣಗಳು,ಕಾರಣಗಳು ಮತ್ತು ಚಿಕಿತ್ಸೆಯ ಕುರಿತು ಪೂರಕ ಮಾಹಿತಿಗಳನ್ನು ಒದಗಿಸಿದ್ದಾರೆ.

ವಿಧಗಳು: ಮಲ್ಟಿಪಲ್ ಸ್ಕ್ಲೆರೋಸಿಸ್ ಅನ್ನು ಕ್ಲಿನಿಕಲಿ ಐಸೊಲೇಟೆಡ್ ಸಿಂಡ್ರೋಮ್(ಸಿಐಎಸ್),ರಿಲ್ಯಾಪ್ಸ್ ರೆಮಿಟಿಂಗ್ ಮಲ್ಟಿಪಲ್ ಸ್ಕ್ಲೆರೋಸಿಸ್ (ಆರ್‌ಆರ್‌ಎಂಎಸ್),ಪ್ರೈಮರಿ ಪ್ರೊಗ್ರೆಸಿವ್ ಮಲ್ಟಿಪಲ್ ಸ್ಕ್ಲೆರೋಸಿಸ್ (ಪಿಪಿಎಂಎಸ್) ಮತ್ತು ಸೆಕೆಂಡರಿ ಪ್ರೊಗ್ರೆಸಿವ್ ಮಲ್ಟಿಪಲ್ ಸ್ಕ್ಲೆರೋಸಿಸ್ (ಎಸ್‌ಪಿಎಂಎಸ್) ಎಂಬ ನಾಲ್ಕು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ.

ಲಕ್ಷಣಗಳು: ಹಾನಿಗೀಡಾದ ನರಗಳು ಮತ್ತು ರೋಗದ ಅವಧಿಯನ್ನು ಅವಲಂಬಿಸಿ ಎಂಎಸ್‌ನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಮಸುಕಾದ ದೃಷ್ಟಿ,ಅಂಧತ್ವ,ಬಳಲಿಕೆ,ತಲೆಸುತ್ತುವಿಕೆ,ನಿಶ್ಶಕ್ತಿ,ಮರಗಟ್ಟುವಿಕೆ,ತೊದಲು ಮಾತು ಇವು ಎಂಎಸ್‌ನ ಲಕ್ಷಣಗಳಾಗಿವೆ.

ಕಾರಣಗಳು: ಎಂಎಸ್‌ಗೆ ನಿಖರ ಕಾರಣವಿನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಈ ರೋಗವನ್ನುಂಟು ಮಾಡುವ ಅಪಾಯಕಾರಿ ಅಂಶಗಳಿವೆ. ಇದೊಂದು ಸ್ವರಕ್ಷಿತ ರೋಗ ಎಂದು ಹೇಳಲಾಗಿದ್ದು,ಈ ಸ್ಥಿತಿಯಲ್ಲಿ ಶರೀರದ ನಿರೋಧಕ ವ್ಯವಸ್ಥೆಯು ತನ್ನದೇ ನರಗಳ ಮೇಲೆ ದಾಳಿ ನಡೆಸುತ್ತದೆ. ಎಂಎಸ್‌ನಲ್ಲಿ ನಿರೋಧಕ ವ್ಯವಸ್ಥೆಯು ಮಿದುಳು ಮತ್ತು ಮಿದುಳು ಬಳ್ಳಿಯಲ್ಲಿನ ನರತಂತುಗಳ ರಕ್ಷಣಾ ಪದರಕ್ಕೆ ಹಾನಿಯನ್ನುಂಟು ಮಾಡುತ್ತದೆ. ಈ ರಕ್ಷಣಾ ಪದರವು ಹಾನಿಗೀಡಾಗಿ ನರತಂತುವು ತೆರೆದುಕೊಂಡಾಗ ಸಂವಹನವು ನಿಧಾನಗೊಳ್ಳುತ್ತದೆ ಅಥವಾ ಅದಕ್ಕೆ ತಡೆಯುಂಟಾಗುತ್ತದೆ.

ಡಾ.ಮಹಾಜನ ಹೇಳುವಂತೆ ವಯಸ್ಸು,ಕುಟುಂಬದ ಇತಿಹಾಸ,ವಿಟಾಮಿನ್ ಡಿ ಕೊರತೆ,ಸ್ವರಕ್ಷಿತ ರೋಗಗಳು ಮತ್ತು ಧೂಮ್ರಪಾನ ಇವು ಎಂಎಸ್‌ಗೆ ತುತ್ತಾಗುವ ಅಪಾಯವನ್ನುಂಟು ಮಾಡುತ್ತವೆ.

 ರೋಗನಿರ್ಧಾರ ಮತ್ತು ಚಿಕಿತ್ಸೆ: ಎಂಎಸ್‌ಗೆ ಯಾವುದೇ ನಿರ್ದಿಷ್ಟ ಸರಣಿ ಪರೀಕ್ಷೆಗಳಿಲ್ಲ. ಆದರೆ ರೋಗನಿರ್ಧಾರವನ್ನು ಮಾಡುವಾಗ ಇಂತಹುದೇ ಲಕ್ಷಣಗಳನ್ನು ಪ್ರಕಟಿಸಬಹುದಾದ,ರೋಗಿಗೆ ಈಗಾಲೇ ಇರಬಹುದಾದ ಅನಾರೋಗ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವೈದ್ಯರು ರೋಗಿಯ ಕುಟುಂಬದ ವೈದ್ಯಕೀಯ ಇತಿಹಾಸವನ್ನೂ ಕೇಳಬಹುದು. ರೋಗನಿರ್ಧಾರವು ಲಕ್ಷಣಗಳ ಅವಧಿಯನ್ನು ಪ್ರಮುಖವಾಗಿ ಆಧರಿಸಿರುತ್ತದೆ ಮತ್ತು ಎಂಆರ್‌ಐ,ಸಿಟಿ ಸ್ಕಾನ್ ಮತ್ತು ಇತರ ಬ್ರೇನ್ ಇಮೇಜಿಂಗ್ ಪರೀಕ್ಷೆಗಳ ಮೂಲಕ ರೋಗವನ್ನು ದೃಢಪಡಿಸಲಾಗುತ್ತದೆ. ವಿರಳ ಲಕ್ಷಣಗಳಿರುವ ರೋಗಿಗಳಲ್ಲಿ ಎಂಎಸ್ ರೋಗನಿರ್ಧಾರವು ಹೆಚ್ಚು ಕಷ್ಟಕರವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಮಿದುಳುಬಳ್ಳಿ ಅಥವಾ ಬೆನ್ನುಹುರಿಯಲ್ಲಿನ ದ್ರವದ ಸೂಕ್ತ ವಿಶ್ಲೇಷಣೆಗಾಗಿ ಇತರ ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ.

  ಈಗಾಗಲೇ ಹೇಳಿರುವಂತೆ ಎಂಎಸ್‌ಗೆ ನಿರ್ದಿಷ್ಟವಾದ ಒಂದು ಚಿಕಿತ್ಸೆಯಿಲ್ಲ. ತ್ವರಿತ ಚೇತರಿಕೆ,ರೋಗದ ಪ್ರಗತಿಯನ್ನು ಕುಂಠಿತಗೊಳಿಸುವ ಮತ್ತು ತೀವ್ರ ಲಕ್ಷಣಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಕೆಲವರಿಗೆ ಅತ್ಯಂತ ಸೌಮ್ಯ ಎಂಎಸ್ ಲಕ್ಷಣಗಳಿರಬಹುದು ಮತ್ತು ಇದಕ್ಕಾಗಿ ಚಿಕಿತ್ಸೆ ಅಗತ್ಯವಾಗದಿರಬಹುದು. ಆದರೆ ಇಂತಹ ಪ್ರಕರಣಗಳಲ್ಲಿ ವೈದ್ಯರ ಸಲಹೆ ಮುಖ್ಯವಾಗುತ್ತದೆ.

ಈ ದೀರ್ಘಕಾಲಿಕ ರೋಗವನ್ನು ತಡೆಯುವುದೇ ಈ ರೋಗಕ್ಕೆ ಅತ್ಯುತ್ತಮ ಚಿಕಿತ್ಸೆಯಾಗಿದೆ. ಎಂಎಸ್‌ನ ಲಕ್ಷಣಗಳನ್ನು ತಗ್ಗಿಸಲು ವೈದ್ಯರು ಫಿಝಿಕಲ್ ಥೆರಪಿ ಮತ್ತು ಕೆಲವು ಔಷಧಿಗಳನ್ನು ಸೂಚಿಸಬಹುದು. ಸಾಕಷ್ಟು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮತ್ತು ಸಮತೋಲಿತ ಆಹಾರ ಸೇವನೆಯೂ ಈ ನಿಟ್ಟಿನಲ್ಲಿ ನೆರವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)