varthabharthi


ಸಂಪಾದಕೀಯ

ಸರಕಾರಿ ಭೂಮಿ ಕಬಳಿಸುವ ಜಾಲ

ವಾರ್ತಾ ಭಾರತಿ : 16 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸಾರ್ವಜನಿಕರಿಗೆ ಬಳಕೆಯಾಗಬಹುದಾದ ಸರಕಾರಿ ಭೂಮಿಯನ್ನು ಕಬಳಿಸಿ ತಮ್ಮದನ್ನಾಗಿ ಮಾಡಿಕೊಳ್ಳುವ ಮಾಫಿಯಾ ನಮ್ಮ ದೇಶದಲ್ಲಿ ವ್ಯಾಪಕವಾಗಿ ತನ್ನ ಜಾಲವನ್ನು ವಿಸ್ತರಿಸುತ್ತಿದೆ. ಇದಕ್ಕೆ ನಮ್ಮ ಕರ್ನಾಟಕವೂ ಹೊರತಲ್ಲ. ನಮ್ಮ ರಾಜ್ಯದಲ್ಲೂ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ದಂಧೆ ಬಿರುಸಾಗಿ ನಡೆದಿದೆ. ಬಯಲುಸೀಮೆ ಪ್ರದೇಶಗಳಲ್ಲಿ ಮಾತ್ರವಲ್ಲ ಅರಣ್ಯ ಪ್ರದೇಶದಲ್ಲೂ ಕಾಡನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿದ ಸಾವಿರಾರು ಉದಾಹರಣೆಗಳಿವೆ. ಇದನ್ನು ತಡೆಯಲು ಯತ್ನಿಸಿದ ಐಎಎಸ್ ಅಧಿಕಾರಿಗಳೇ ಎತ್ತಂಗಡಿಯಾಗಿದ್ದಾರೆ. ನಗರ ಪ್ರದೇಶಗಳಲ್ಲಂತೂ ಸಾರ್ವಜನಿಕ ಉದ್ಯಾನಗಳನ್ನು, ಪಾದಚಾರಿಗಳು ಓಡಾಡುವ ರಸ್ತೆಗಳನ್ನು ನುಂಗಿ ನೀರು ಕುಡಿದಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿಯಂತಹ ದೊಡ್ಡ ನಗರಗಳಲ್ಲಿ ಸಾರ್ವಜನಿಕ ಉದ್ಯಾನಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ, ಅಲ್ಲೊಬ್ಬ ಪುರೋಹಿತನನ್ನು ತಂದಿಟ್ಟು, ಅದಕ್ಕೊಂದು ಟ್ರಸ್ಟ್ ಮಾಡಿ ಇಡೀ ಉದ್ಯಾನವನ್ನೇ ಕಬಳಿಸುವ ಧಾರ್ಮಿಕ ಮಾಫಿಯಾಗಳು ಹುಟ್ಟಿಕೊಂಡಿವೆ. ಫುಟ್‌ಪಾತ್‌ಗಳನ್ನೂ ಆಕ್ರಮಿಸಿ ಪುಟ್ಟ ಗುಡಿಗಳನ್ನು ನಿರ್ಮಿಸಿ ಜನರಿಗೆ ತೊಂದರೆ ಮಾಡಲಾಗುತ್ತಿದೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂಬ ಹುಯಿಲೆಬ್ಬಿಸಲಾಗುತ್ತಿದೆ. ಇಂತಹ ಅಕ್ರಮಗಳನ್ನು ತಡೆಯಲು ಯಾವ ಸರಕಾರದಿಂದಲೂ ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಸರಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯನ್ ವರದಿ, ಕೆ. ಬಿ. ಕೋಳಿವಾಡ ವರದಿ ಮತ್ತು ಎ. ಟಿ. ರಾಮಸ್ವಾಮಿ ವರದಿಗಳು ಕಡತದಲ್ಲಿ ಧೂಳು ತಿನ್ನುತ್ತಾ ಬಿದ್ದಿವೆ. ಈ ವರದಿಗಳ ಪ್ರಕಾರ ಒತ್ತುವರಿ ಮಾಡಲಾಗಿರುವ 14.18 ಲಕ್ಷ ಎಕರೆ ಭೂಮಿಯಲ್ಲಿ ಶೇಕಡಾ 20ರಷ್ಟು (2.70 ಲಕ್ಷ ಎಕರೆ) ಮಾತ್ರ ತೆರವು ಮಾಡಲಾಗಿದೆ. ಈಗಂತೂ ತೆರವು ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿದೆ.

ಇಂತಹ ಸನ್ನಿವೇಶದಲ್ಲಿ ಒತ್ತುವರಿ ತೆರವಿನ ಬಗ್ಗೆ ಸರಕಾರದ ನಿಲುವೇನು ಎಂಬುದು ಸ್ಪಷ್ಟವಾಗಬೇಕಾಗಿದೆ. ಹಿಂದೆ ಬೆಂಗಳೂರಿನಲ್ಲಿ ಬಡವರು ಮತ್ತು ಕೆಳ ಮಧ್ಯಮ ವರ್ಗದ ಜನರು ರಿಯಲ್ ಎಸ್ಟೇಟ್ ಲಾಬಿಯ ಮೋಸಕ್ಕೆ ಮಾರು ಹೋಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ತಮ್ಮ ಜೀವಮಾನದ ದುಡಿಮೆಯ ಹಣವನ್ನು ಬಳಸಿ ಕಟ್ಟಿಸಿಕೊಂಡಿದ್ದ ಮನೆಗಳನ್ನು ಸರಕಾರ ನೆಲಸಮಗೊಳಿಸಿತ್ತು. ಆದರೆ ಗೋಮಾಳ, ಗುಂಡುತೋಪು, ಕೆರೆ, ಕುಂಟೆ, ಮೊದಲಾದ ಸಾರ್ವಜನಿಕ ಒಡೆತನದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನುಂಗಿದ ಪ್ರಭಾವಿ ಕೋಟ್ಯಧೀಶರ ಬಗ್ಗೆ ಸರಕಾರದಲ್ಲಿ ಇದ್ದವರು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ರಾಜಕೀಯ ಪಕ್ಷಗಳೂ ಮೌನವಾಗಿದ್ದವು. 9,90,721 ಎಕರೆ ಸರಕಾರಿ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಇಂತಹ ಒತ್ತುವರಿ ಮಾಡಿಕೊಂಡ ಭೂಮಿಯನ್ನು ತೆರವುಗೊಳಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಆದರೆ ಅವು ಸಂಪೂರ್ಣವಾಗಿ ನಿಷಕ್ಕ್ರೆಿಯವಾಗಿವೆ. ಇವುಗಳನ್ನು ತೆರವುಗೊಳಿಸಲು ನಿಗದಿತ ಯೋಜನೆ ರೂಪಿಸಲು ಸೂಚಿಸಿದ್ದರೂ ಪ್ರಯೋಜನವಾಗಿಲ್ಲ.

ಸಾರ್ವಜನಿಕ ಬಳಕೆಗೆ ಲಭ್ಯವಾಗಬೇಕಿದ್ದ ಜಮೀನು ಜನ ಸಮುದಾಯದ ಕೈತಪ್ಪಿಲಾಭಕೋರರ ಪಾಲಾಗಿರುವುದರಿಂದ ಸರಕಾರಕ್ಕೆ ಬರಬೇಕಿದ್ದ ಕಂದಾಯವೂ ಬರುತ್ತಿಲ್ಲ. ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳು, ಸಿರಿವಂತರು ಕಾನೂನು ಉಲ್ಲಂಘನೆ ಮಾಡಿದರೆ ಯಾರೂ ಕೇಳುವುದಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ದಗಾಕೋರರಿಗೆ ಜನಪ್ರತಿನಿಧಿಗಳ, ಮಂತ್ರಿಗಳ ಕೃಪಾಕಟಾಕ್ಷವೂ ಇರುತ್ತದೆ ಎಂಬುದು ಜನಜನಿತವಾದ ಮಾತು. ಇದನ್ನೇ ಇತರರು ಮಾದರಿಯಾಗಿಟ್ಟುಕೊಂಡು ಅಕ್ರಮ ನಡೆಸುವ ಮನೋಭಾವ ಬೆಳೆದರೆ ಅದು ಒಳ್ಳೆಯದಲ್ಲ.

ಸರಕಾರದ ಜಮೀನು ಅಂದರೆ ಯಾರು ಬೇಕಾದರೂ, ಅದರಲ್ಲೂ ದುಡ್ಡಿದ್ದವರು ಬಳಸಿಕೊಂಡರೆ ನಡೆಯುತ್ತದೆ ಎಂಬುದು ಸರಿಯಲ್ಲ. ಸರಕಾರ ಇಂತಹ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಅದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದನ್ನು ಸಾರ್ವಜನಿಕರು ಅದರಲ್ಲೂ ಸಾಮಾಜಿಕ ಕಾರ್ಯಕರ್ತರು ಪ್ರಶ್ನಿಸಿದರೆ ಅವರ ಮೇಲೆ ಹಲ್ಲೆ ನಡೆದ, ಕೊಲೆ ಬೆದರಿಕೆಯನ್ನು ಹಾಕಿದ ಘಟನೆಗಳು ಜರುಗಿವೆ.ಇದು ಖಂಡನೀಯ. ಇಂತಹ ಸಾಮಾಜಿಕ ಕಾರ್ಯಕರ್ತರಿಗೆ ಸರಕಾರ ರಕ್ಷಣೆ ನೀಡಬೇಕು. ಸಾರ್ವಜನಿಕ ಭೂಮಿ ಮುಂದಿನ ಪೀಳಿಗೆಗೂ ಸೇರಬೇಕಾದ ಭೂಮಿ. ಅದನ್ನು ಸರಕಾರ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಬೇಕು.

ಆದರೆ ಈ ವರೆಗೆ ರಾಜ್ಯವನ್ನಾಳಿದ ಯಾವ ಸರಕಾರಗಳೂ ಒತ್ತುವರಿ ಭೂಮಿಯನ್ನು ತೆರವುಗೊಳಿಸುವ ಆಸಕ್ತಿಯನ್ನು ತೋರಿಸಿಲ್ಲ. ಏಕೆಂದರೆ ಬಹುತೇಕ ಒತ್ತುವರಿ ಮಾಡಿಕೊಂಡವರು ರಾಜಕಾರಣಿಗಳು ಮತ್ತು ಅವರ ಹತ್ತಿರದ ಸಂಬಂಧಿಕರು. ಇದಕ್ಕೆ ಯಾವುದೇ ಒಂದು ಪಕ್ಷವನ್ನು ದೂರುವಂತಿಲ್ಲ. ಬಹುತೇಕ ಎಲ್ಲ ಪಕ್ಷಗಳ ರಾಜಕಾರಣಿಗಳು ಹಾಗೂ ಅವರ ಸಂಬಂಧಿಕರು ರಿಯಲ್ ಎಸ್ಟೇಟ್ ದಂಧೆಯನ್ನು ನಡೆಸುತ್ತಾರೆ. ಅವರೇ ಸರಕಾರದ ಭೂಮಿಯನ್ನು ಒತ್ತುವರಿ ಮಾಡಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿ ಕೋಟ್ಯಂತರ ರೂಪಾಯಿ ಬಾಡಿಗೆಯನ್ನು ಪಡೆಯುತ್ತಿದ್ದಾರೆ. ಅವರೇ ಅಧಿಕಾರದ ಉನ್ನತ ಸ್ಥಾನದಲ್ಲಿ ಇರುವುದರಿಂದ ಅಧಿಕಾರಿಗಳು ಅವರ ಮೇಲೆ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.

ಯಡಿಯೂರಪ್ಪನವರ ಸರಕಾರ ಈಗ ರಾಜ್ಯದಲ್ಲಿದೆ. ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪುಗಳೇನೇ ಇರಲಿ, ಈಗಲಾದರೂ ಒತ್ತುವರಿ ಮಾಡಲ್ಪಟ್ಟ ಸರಕಾರಿ ಭೂಮಿಯನ್ನು ತೆರವುಗೊಳಿಸಿದರೆ ಸಾರ್ಥಕ ಕೆಲಸವಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)