varthabharthi


ಆರೋಗ್ಯ

ಕೋವಿಡ್-19 ಲಸಿಕೆಯ ಎರಡು ಡೋಸ್‌ಗಳ ನಡುವೆ 28 ದಿನಗಳ ಅಂತರವೇಕೆ?

ವಾರ್ತಾ ಭಾರತಿ : 16 Mar, 2021
ವಾಣಿ ಮಲಿಕ್ , ಡಾ.ಫರ್ಹಾ ಇಂಗಳೆ

ಭಾರತದ ಲಸಿಕೆ ನೀಡಿಕೆ ಕಾರ್ಯಕ್ರಮದಂತೆ ವ್ಯಕ್ತಿ ಕೋವಿಡ್-19 ಲಸಿಕೆಯ ಎರಡು ಡೋಸ್‌ಗಳನ್ನು ಪಡೆಯಬೇಕು ಮತ್ತು ಈ ಎರಡು ಡೋಸ್‌ಗಳ ನಡುವೆ 28 ದಿನಗಳ ಅಂತರವಿರಬೇಕು. ಆದರೆ ಜಾಗತಿಕ ಅಧ್ಯಯನಗಳು ಮತ್ತು ಹಲವಾರು ವಿಜ್ಞಾನಿಗಳು ಈ ಅಂತರವನ್ನು 8ರಿಂದ 12 ವಾರಗಳಿಗೆ ವಿಸ್ತರಿಸುವಂತೆ ಕರೆ ನೀಡಿದ್ದಾರೆ. ಭಾರತದಲ್ಲಿ ಹಾಲಿ ಲಭ್ಯವಿರುವ ಕೋವಿಡ್-19 ಲಸಿಕೆಗಳ ಡೋಸೇಜ್ ಅಂತರದ ಬಗ್ಗೆ ಚರ್ಚಿಸಲು ಮತ್ತು ಪುನರ್‌ಪರಿಶೀಲನೆ ನಡೆಸಲು ಪ್ರತಿರಕ್ಷಣೆ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು ಇತ್ತೀಚಿಗೆ ಸಭೆಯನ್ನೂ ಸೇರಿತ್ತು. ಎರಡು ಡೋಸ್‌ಗಳ ನಡುವೆ 8ರಿಂದ 12 ವಾರಗಳ ಅಂತರವಿದ್ದರೆ ಕೋವಿಡ್-19 ಲಸಿಕೆಗಳ ಪರಿಣಾಮಕಾರತ್ವವು ಹೆಚ್ಚು ಎನ್ನುವುದನ್ನು ಹೊಸ ಪುರಾವೆಯು ಬೆಟ್ಟು ಮಾಡಿದೆ.

ಅಂತರ್ಜಾಲದಲ್ಲಿ ಕೋವಿಡ್-19 ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಅತಿಯಾದ ಮಾಹಿತಿಗಳು ಹರಿದಾಡುತ್ತಿರುವುದರಿಂದ ಲಸಿಕೆಯ ಕುರಿತು ಜನರಲ್ಲಿ ಫಲಾನುಭವಿಗಳಲ್ಲಿ ಗೊಂದಲವುಂಟಾಗುವುದು ಸಹಜವೇ ಆಗಿದೆ. ಈವರೆಗೆ ದೇಶಾದ್ಯಂತ 32 ಲಕ್ಷಕ್ಕೂ ಅಧಿಕ ಜನರು ಲಸಿಕೆಯನ್ನು ಪಡೆದುಕೊಂಡಿದ್ದಾರೆ ಮತ್ತು ಹಲವಾರು ಜನರು ಎರಡನೇ ಡೋಸ್‌ಗಾಗಿ ಈಗಾಗಲೇ ಹೆಸರುಗಳನ್ನು ನೋಂದಾಯಿಸಿ ಕೊಂಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಬಿಕ್ಕಟ್ಟು ಮುಂದುವರಿದಿರುವುದರಿಂದ ಲಸಿಕೆ ಪಡೆದುಕೊಳ್ಳುವುದಕ್ಕಿಂತ ಮೊದಲು ಅಗತ್ಯ ಮಾಹಿತಿಗಳನ್ನು ತಿಳಿದುಕೊಂಡಿರುವುದು ಮುಖ್ಯವಾಗುತ್ತದೆ.

ಲಸಿಕೆ ಪಡೆದುಕೊಳ್ಳುವುದು ಏಕೆ ಮುಖ್ಯ?

ಕೊರೋನವೈರಸ್ ಸೋಂಕಿನಿಂದ ರಕ್ಷಣೆಗಾಗಿ ಲಸಿಕೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ವ್ಯಕ್ತಿಯು ಸೋಂಕಿಗೆ ಗುರಿಯಾದರೆ ತನ್ನ ಕುಟುಂಬ ಸದಸ್ಯರು,ಸ್ನೇಹಿತರು,ಸಹೋದ್ಯೋಗಿಗಳು ಮತ್ತು ತನ್ನ ಸುತ್ತಲಿನ ಇತರರಿಗೂ ಸೋಂಕನ್ನು ಹರಡುತ್ತಾನೆ. ಲಸಿಕೆಯು ನಿರೋಧಕತೆಯನ್ನು ಅಭಿವೃದ್ಧಿಗೊಳಿಸಲು ನೆರವಾಗುತ್ತದೆ ಮತ್ತು ಸೋಂಕು ಹರಡುವಿಕೆ ಸರಣಿಯನ್ನು ತುಂಡರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾರತದಲ್ಲಿ ಲಭ್ಯವಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಿಗೆ ಕ್ಲಿನಿಕಲ್ ಪರಿಣಾಮಕಾರಿತ್ವ ಪ್ರಕ್ರಿಯೆ ಮತ್ತು ಟ್ರಯಲ್‌ಗಳನ್ನು ನಡೆಸಿದ ಬಳಿಕವೇ ಸಾರ್ವಜನಿಕರಿಗೆ ನೀಡಲು ಪ್ರಮಾಣೀಕರಿಸಲಾಗಿದೆ. ಈ ಲಸಿಕೆಗಳು ಸುರಕ್ಷಿತವಾಗಿದ್ದು,ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿದ ಬಳಿಕ ಲಸಿಕೆಯನ್ನು ಪಡೆದುಕೊಳ್ಳಬೇಕು.

ಲಸಿಕೆ ಡೋಸ್‌ಗಳ ನಡುವಿನ ಅಂತರದ ಬಗ್ಗೆ ವಿವಿಧ ದೇಶಗಳು ಭಿನ್ನ ಅಭಿಪ್ರಾಯಗಳನ್ನು ಹೊಂದಿರುವುದೇಕೆ?

 ಮೊದಲನೆಯದಾಗಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದ ಬಳಿಕ ಆ್ಯಂಟಿ-ಬಾಡಿಗಳು ಅಥವಾ ಪ್ರತಿಕಾಯಗಳು ಅಭಿವೃದ್ಧಿಗೊಳ್ಳಲು ಆರಂಭವಾಗುವುದಕ್ಕೆ 2ರಿಂದ 3 ವಾರಗಳ ಕಾಲಾವಕಾಶ ಬೇಕಾಗುತ್ತದೆ. ಮೊದಲ ಡೋಸ್ ಪಡೆದ ಬಳಿಕ ವ್ಯಕ್ತಿಯಲ್ಲಿ ಪ್ರತಿಕಾಯಗಳು ನಿಧಾನವಾಗಿ ರೂಪುಗೊಳ್ಳತೊಡಗುತ್ತವೆ,ಆದರೆ ಎರಡನೇ ಡೋಸ್‌ನ ಬಳಿಕ ಈ ಪ್ರಕ್ರಿಯೆಯು ವೇಗವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ 28 ದಿನಗಳ ಅಂತರವು ಸೂಕ್ತವಾಗಿದೆ. ಹಲವಾರು ದೇಶಗಳು ಗರಿಷ್ಠ ಸಂಖ್ಯೆಯಲ್ಲಿ ಪ್ರಜೆಗಳು ಲಸಿಕೆಯನ್ನು ಪಡೆದುಕೊಳ್ಳುವಂತಾಗಲು ಎರಡು ಡೋಸ್‌ಗಳ ನಡುವೆ ಸುಮಾರು ಮೂರು ತಿಂಗಳುಗಳ ಅಂತರವನ್ನು ಕಾಯ್ದುಕೊಳ್ಳುತ್ತಿವೆ. ಆದರೆ ಭಾರತದಲ್ಲಿ ಲಸಿಕೆ ನೀಡಿಕೆ ನೀತಿಯು ಭಿನ್ನವಾಗಿದೆ. ನಮ್ಮ ದೇಶದ ಜನಸಂಖ್ಯೆಯ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತಗಳಲ್ಲಿ ಲಸಿಕೆ ನೀಡುವ ಮೂಲಕ ಜನರು ಸಕಾಲದಲ್ಲಿ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಬೇಕು ಎನ್ನುವುದು ಮುಖ್ಯ ಉದ್ದೇಶವಾಗಿದೆ.

ಎರಡು ಡೋಸ್‌ಗಳ ನಡುವೆ ವಹಿಸಬೇಕಾದ ಮುನ್ನೆಚ್ಚರಿಕೆಗಳು

ಲಸಿಕೆಯ ಮೊದಲ ಡೋಸ್ ಪಡೆದುಕೊಂಡುಬಿಟ್ಟರೆ ಕೊರೋನ ವೈರಸ್ ಸೋಂಕು ತಗುಲುವುದಿಲ್ಲ ಎಂಬ ಭ್ರಮೆ ಬೇಡ. ಎರಡನೇ ಡೋಸ್ ಪಡೆದುಕೊಂಡ ಬಳಿಕವೂ ವ್ಯಕ್ತಿಯು ಕೊರೋನವೈರಸ್ ಸೋಂಕಿಗೆ ತುತ್ತಾಗಬಹುದು,ಆದರೆ ಅದು ಅತ್ಯಂತ ಸೌಮ್ಯ ಸ್ವರೂಪದ್ದಾಗಿರುತ್ತದೆ ಮತ್ತು ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗದಿರಬಹುದು. ಆದರೂ ಎಲ್ಲ ಸಮಯಗಳಲ್ಲೂ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಮನೆಯಿಂದ ಹೊರಗಿದ್ದಾಗ ಮಾಸ್ಕ್ ಧರಿಸುವುದು,ಜನಜಂಗುಳಿಯಿಂದ ದೂರವಿರುವುದು ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು,ಸ್ವಚ್ಛತೆ ಮತ್ತು ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡುವುದು ಅತ್ಯಂತ ಮುಖ್ಯವಾಗಿವೆ.

ಬೇರೆ ಊರುಗಳಿಗೆ ಪ್ರಯಾಣಿಸಿದಾಗ ಅಲ್ಲಿ ನಮ್ಮ ಸುತ್ತಲಿನ ಜನರು ಲಸಿಕೆ ಪಡೆದುಕೊಂಡಿದ್ದಾರೆಯೇ ಎನ್ನುವುದು ನಮಗೆ ಗೊತ್ತಿರುವುದಿಲ್ಲ,ಹೀಗಾಗಿ ಪ್ರಯಾಣವು ಅಪಾಯಕಾರಿಯಾಗಿಯೇ ಉಳಿಯಲಿದೆ.

ಲಸಿಕೆ ಪಡೆದುಕೊಂಡ ನಂತರ ನೋವು,ಲಘು ಜ್ವರ,ಬಳಲಿಕೆ ಇತ್ಯಾದಿ ಸಾಮಾನ್ಯ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಯಥೇಚ್ಛ ಪಾನೀಯಗಳನ್ನು ಸೇವಿಸಬೇಕು. ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು. ಒಳ್ಳೆಯ ನಿದ್ರೆಯನ್ನು ಮಾಡಬೇಕು. ಮದ್ಯಪಾನ ಮತ್ತು ಧೂಮ್ರಪಾನದಿಂದ ದೂರವಿರಬೇಕು. ಅತ್ಯಂತ ಮುಖ್ಯವೆಂದರೆ ನೀವು ಮಾರಣಾಂತಿಕ ಕೊರೋನವೈರಸ್‌ಗೆ ಈಗ ಅತೀತರು ಎಂದು ಭಾವಿಸಬೇಡಿ. ಸೂಕ್ತ ಎಚ್ಚರಿಕೆಯನ್ನು ವಹಿಸದಿದ್ದರೆ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡ ಬಳಿಕವೂ ಸೋಂಕು ದಾಳಿಯಿಡಬಹುದು.

ಕೃಪೆ:Onlymyhealth

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)