varthabharthi


ಆರೋಗ್ಯ

ನಿಮಗೆ ಸರಿಯಾಗಿ ಆಹಾರ ನುಂಗಲು ಸಾಧ್ಯವಾಗುತ್ತಿಲ್ಲವೇ? ಅದು ಅಕಲೇಜಿಯಾ ಆಗಿರಬಹುದು

ವಾರ್ತಾ ಭಾರತಿ : 16 Mar, 2021
ಚಂಚಲ ಸೆಂಗಾರ್, ಡಾ. ಕಪಿಲ್ ಶರ್ಮಾ

ಘನ ಆಹಾರಗಳನ್ನು ನುಂಗಲು ಅಥವಾ ಪಾನೀಯಗಳನ್ನು ಸೇವಿಸುವುದು ಸಮಸ್ಯೆಯಾಗುತ್ತಿದ್ದರೆ ಅದು ಅಕಲೇಜಿಯಾ ಎಂಬ ಅಪರೂಪದ ರೋಗವನ್ನು ಸೂಚಿಸುತ್ತಿರಬಹುದು. ಈ ರೋಗಕ್ಕೆ ಕಾರಣಗಳು ಮತ್ತು ಲಕ್ಷಣಗಳ ಕುರಿತು ಮಾಹಿತಿಗಳಿಲ್ಲಿವೆ.

ನುಂಗುವುದು ಆಹಾರ ಸೇವನೆ ಪ್ರಕ್ರಿಯೆಯ ಅಗತ್ಯ ಭಾಗವಾಗಿದೆ. ಆಹಾರವನ್ನು ನುಂಗುವಲ್ಲಿ ಯಾವುದೇ ಕಷ್ಟವಾದರೆ ಅದಕ್ಕೆ ಅನ್ನನಾಳಕ್ಕೆ ಸಂಬಂಧಿಸಿದ ಸಮಸ್ಯೆ ಕಾರಣವಾಗಿರಬಹುದು. ಈ ಸ್ಥಿತಿಯನ್ನು ಅಕಲೇಜಿಯಾ ಎಂದು ಕರೆಯಲಾಗುತ್ತದೆ. ಇದು ಅಪರೂಪದ ಕಾಯಿಲೆಯಾಗಿದೆ,ಆದರೆ ಮುಂದಿನ ತೊಂದರೆಗಳಿಂದ ಪಾರಾಗಲು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.

 ಡಾ.ಕಪಿಲ ಶರ್ಮಾ ತಿಳಿಸಿರುವಂತೆ ಅಕಲೇಜಿಯಾ ನರಗಳ ಅವನತಿಯಿಂದ ಉಂಟಾಗುವ ರೋಗವೆಂದು ಭಾವಿಸಲಾಗಿದ್ದು,ಕಾಲಕ್ರಮೇಣ ಅನ್ನನಾಳವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅನ್ನನಾಳದಲ್ಲಿಯ ಆಯ್ದ ನರತಂತುಗಳು ಈ ಸ್ಥಿತಿಯನ್ನುಂಟು ಮಾಡುತ್ತವೆ ಎಂದು ನಂಬಲಾಗಿದೆ. ಇದು ಅಪರೂಪದ ರೋಗವಾಗಿದ್ದು,ವರ್ಷಕ್ಕೆ ಪ್ರತಿ 100,000 ವಯಸ್ಕರಲ್ಲಿ ಶೇ.0.3ರಿಂದ ಶೇ.1.63ರಷ್ಟು ಜನರು ಇದಕ್ಕೆ ತುತ್ತಾಗುತ್ತಾರೆ.

 ಸಾಮಾನ್ಯವಾಗಿ ನಾವು ಏನನ್ನಾದರೂ ಸೇವಿಸಿದಾಗ ಅದು ನುಂಗಲ್ಪಟ್ಟು ಅನ್ನನಾಳದ ಮೂಲಕ ಶರೀರದೊಳಗೆ ಸಾಗುತ್ತದೆ. ಅಕಲೇಜಿಯಾ ಪ್ರಕರಣದಲ್ಲಿ ಅನ್ನನಾಳದ ಸ್ನಾಯುಗಳು ಸಂಕುಚನಗೊಳ್ಳುವುದಿಲ್ಲ ಮತ್ತು ಇದು ಆಹಾರದ ಸಾಗುವಿಕೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಘನ ಆಹಾರ ಮಾತ್ರವಲ್ಲ,ದ್ರವಗಳನ್ನು ಸೇವಿಸಲೂ ರೋಗಿಗಳಿಗೆ ಸಾಧ್ಯವಾಗುವುದಿಲ್ಲ ಮತ್ತು ಇದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಕೆಲವೊಮ್ಮೆ ಆಹಾರವು ಜೀರ್ಣಗೊಳ್ಳದೆ ಅನ್ನನಾಳದಲ್ಲಿಯೇ ಉಳಿಯುವುದರಿಂದ ಅದು ಮೇಲಕ್ಕೆ ಸಾಗಿ ಬಾಯಿಗೆ ವಾಪಸಾಗಬಹುದು.

ಲಕ್ಷಣಗಳು: ಆಹಾರವನ್ನು ನುಂಗುವುದು ಕಷ್ಟವಾಗುವುದು ಅಕಲೇಜಿಯಾದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಎದೆಯುರಿ,ಸೇವಿಸಿದ ಆಹಾರ ವಾಂತಿಯಾಗುವುದು,ಕೆಮ್ಮು,ನ್ಯುಮೋನಿಯಾ,ಎದೆನೋವು,ಕಾರಣವಿಲ್ಲದೆ ತೂಕ ನಷ್ಟ ಇತ್ಯಾದಿಗಳೂ ಅಕಲೇಜಿಯಾದ ಲಕ್ಷಣಗಳಲ್ಲಿ ಸೇರಿವೆ.

ಕಾರಣಗಳು: ಅಕಲೇಜಿಯಾಕ್ಕೆ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಈ ಸ್ಥಿತಿಗೆ ಸಂಬಂಧಿಸಿದಂತೆ ವಿವಿಧ ಥಿಯರಿಗಳು ಮತ್ತು ಅಭಿಪ್ರಾಯಗಳಿವೆ. ಉದಾಹರಣೆಗೆ ಈಗಾಗಲೇ ತಿಳಿಸಿರುವಂತೆ ಅನ್ನನಾಳದಲ್ಲಿ ನರಗಳ ಅವನಿತಿ ಅಥವಾ ನರ ಕೋಶಗಳ ನಷ್ಟ ಈ ರೋಗಕ್ಕೆ ಕಾರಣವೆಂದು ಭಾವಿಸಲಾಗಿದೆ. ದುರ್ಬಲ ಸ್ವರಕ್ಷಿತ ವ್ಯವಸ್ಥೆ ಮತ್ತು ವೈರಲ್ ಸೋಂಕುಗಳು ಅಕಲೇಜಿಯಾಕ್ಕೆ ಸಂಭಾವ್ಯ ಕಾರಣಗಳಾಗಿವೆ ಎಂಬ ಇನ್ನೊಂದು ವಾದವೂ ಇದೆ. ಅತ್ಯಂತ ಅಪರೂಪದ ಪ್ರಕರಣದಲ್ಲಿ ಅಕಲೇಜಿಯಾಕ್ಕೆ ಸೋಂಕು ಅಥವಾ ಆನುವಂಶಿಕ ರೋಗವು ಕಾರಣವಾಗಬಹುದು.

ಅಕಲೇಜಿಯಾದ ಲಕ್ಷಣಗಳು ಕಂಡು ಬಂದರೆ ವ್ಯಕ್ತಿಯು ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ. ಎಸೊಫೇಜಿಯಲ್ ಮ್ಯಾನೊಮೆಟ್ರಿ,ಅಪ್ಪರ್ ಎಂಡೋಸ್ಕೋಪಿ ಮತ್ತು ಅಪ್ಪರ್ ಡೈಜೆಸ್ಟಿವ್ ಸಿಸ್ಟಮ್ ಎಕ್ಸ್-ರೇ ಇತ್ಯಾದಿ ಪರೀಕ್ಷೆಗಳನ್ನು ನಡೆಸುವ ಮೂಲಕ ವೈದ್ಯರು ರೋಗನಿರ್ಧಾರವನ್ನು ಕೈಗೊಳ್ಳುತ್ತಾರೆ.

ರೋಗದ ಲಕ್ಷಣಗಳು ಮತ್ತು ತೀವ್ರತೆಯನ್ನು ಆಧರಿಸಿ ವೈದ್ಯರು ಚಿಕಿತ್ಸಾ ಕ್ರಮವನ್ನು ನಿರ್ಧರಿಸುತ್ತಾರೆ. ಅಗತ್ಯವಾದರೆ ಶಸ್ತ್ರಚಿಕಿತ್ಸೆಯನ್ನೂ ನಡೆಸಬಹುದು.

 ಕೃಪೆ:Onlymyhealth

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)