varthabharthi


ಅನುಗಾಲ

ಸಾವಿತ್ರಿ-ಪುಟ್ಟಕನ್ನಡಿಯಲ್ಲಿ ಪ್ರೀತಿಯ ಜಗತ್ತು

ವಾರ್ತಾ ಭಾರತಿ : 18 Mar, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ರೇಗೇಯವರ ಇತರ ಕೃತಿಗಳನ್ನು ಓದುವ ಅವಕಾಶ ನನಗೆ ಲಭಿಸಿಲ್ಲವಾದರೂ ಅವರ ಸಾವಿತ್ರಿ ಎಂಬ ಕಾದಂಬರಿಯನ್ನು ಕನ್ನಡದಲ್ಲಿ ಓದಲು ಸಾಧ್ಯವಾಗಿಸಿದ್ದು ಮುಂಬೈಯಲ್ಲಿರುವ ಕನ್ನಡತಿ ಡಾ. ಗಿರಿಜಾ ಶಾಸ್ತ್ರಿಯವರು ಅನುವಾದಿಸಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವರು 2018ರಲ್ಲಿ ಪ್ರಕಟಿಸಿದ ಕನ್ನಡ ಆವೃತ್ತಿ. ಕನ್ನಡಾನುವಾದವು 81 ಪುಟಗಳಷ್ಟು ಕಿರಿದು. ಅನ್ನ ಬೆಂದಿದೆಯೆಂದು ತಿಳಿಯಲು ಒಂದಗುಳು ಸಾಕೆಂಬಂತೆ ಈ ಶ್ರೇಷ್ಠ ಸಾಹಿತಿಯ ಈ ಕೃತಿ ತನ್ನ ಪುಟ್ಟ್ಟ ಆಕೃತಿಯಲ್ಲೇ ಮಹತ್ವದ್ದನ್ನು ಹೇಳಿದೆ; ಮಹತ್ತನ್ನು ಸಾಧಿಸಿದೆ.


ಮನುಷ್ಯ ಸಂಬಂಧಗಳು ಬಹು ಸಂಕೀರ್ಣವಾದವುಗಳು. ಅವು ಯಾಕೆ, ಯಾವಾಗ, ಯಾರಲ್ಲಿ (ಸಂ)ಘಟಿಸುತ್ತವೋ ಗೊತ್ತಾಗುವುದಿಲ್ಲ. ಆದರೂ ಸಮಾಜದ ಚೌಕಟ್ಟನ್ನು ಮೀರಿ ಹೋಗದ ಮಂದಿಯೇ ಹೆಚ್ಚು. ಯಾರೋ ಒಬ್ಬರನ್ನು ಯಾಕೆ ಇಷ್ಟು ಹಚ್ಚಿಕೊಳ್ಳುತ್ತೇವೆಂದು ಕೇಳಿದರೆ ಒಂದೊಂದು ಕಾರಣಗಳನ್ನು ಕೊಡಬಹುದಾದರೂ ನಿಜಕ್ಕೂ ಅಲ್ಲಿ ಅರ್ಥವಿರುವುದಿಲ್ಲ. ಬದುಕಿನ ಸಹಜ ಪ್ರೀತಿಗಳು ಬೇಂದ್ರೆ ಹೇಳಿದಂತೆ ‘‘ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತೆ’’ ಎಂಬಂತಿರುತ್ತವೆ. ಇಂತಹ ಒಂದು ಸಂಬಂಧವನ್ನು ಏಕಪಕ್ಷೀಯ ಪತ್ರಗಳ ಮೂಲಕ ವಿವರಿಸುತ್ತ ಮನುಷ್ಯ ಸ್ವಭಾವಗಳನ್ನು ಸೂಕ್ಷ್ಮವಾಗಿ ಸ್ಪರ್ಶಿಸುವ ಒಂದು ಪುಟ್ಟ ಕಾದಂಬರಿ ಮರಾಠಿ ಲೇಖಕ ಪುರುಷೋತ್ತಮ ಶಿವರಾಮ ರೇಗೇ ಅವರ ‘ಸಾವಿತ್ರಿ’ ಎಂಬ, ಮರಾಠಿಯಲ್ಲಿ ‘ಪತ್ರಾಂಕಿತ ಕಾದಂಬರಿ’ ಎನ್ನಿಸಿಕೊಂಡ ಕೃತಿ. ರೇಗೇ (1910-1978) ಅವರು ಮಹಾರಾಷ್ಟ್ರದ ರತ್ನಗಿರಿಯವರು. ಮುಂಬೈ ಮತ್ತು ಲಂಡನ್ ವಿಶ್ವವಿದ್ಯಾನಿಲಯಗಳಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದವರು. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಉಪನ್ಯಾಸಕರಾಗಿ ದುಡಿದು ಮುಂಬೈಯ ಎಲ್ಫಿನ್ಸ್ಟನ್ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ 1970ರ ದಶಕದಲ್ಲಿ ನಿವೃತ್ತಿಹೊಂದಿದವರು.

ಈ ಅರ್ಥಶಾಸ್ತ್ರಜ್ಞ ಮರಾಠಿ ಸಾಹಿತ್ಯದಲ್ಲಿ ಬಹಳಷ್ಟನ್ನು ಸಾಧಿಸಿದವರು. ಮರ್ಮಭೇದ, ಛಾಂದಸಿ ಎಂಬ ವಿಮರ್ಶಾ ಕೃತಿಗಳನ್ನು, ಎಕಾ ಪದೀಚೆ ಆತ್ಮಕಥನ್ ಎಂಬ ಆತ್ಮಚರಿತ್ರೆ, ಮಾತೃಕಾ, ಅವಲೋಕಿತಾ, ಸಾವಿತ್ರಿ ಮತ್ತು ರೆಣ್ಣು ಎಂಬ ಕಾದಂಬರಿಗಳನ್ನು, ರಂಗಪಂಚಾಲಿಕ ಎಂಬ ನಾಟಕವನ್ನು ಮತ್ತು ಹತ್ತಕ್ಕೂ ಹೆಚ್ಚು ಕವಿತಾ ಸಂಕಲನಗಳನ್ನು ಬರೆದವರು. 1969ರಲ್ಲಿ ವಾರ್ಧಾದಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದವರು. (ವಿಷಾದವೆಂದರೆ ಇನ್ನೊಬ್ಬ ಪ್ರಸಿದ್ಧ ಮರಾಠಿ ಲೇಖಕ ಜಯವಂತ ದಳವಿಯವರಂತೆ, ನಮ್ಮ ಅನಂತಮೂರ್ತಿ, ರಾವಬಹದ್ದೂರರಂತೆ ಇವರೂ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಂಚಿತರು!)

ರೇಗೇಯವರ ಇತರ ಕೃತಿಗಳನ್ನು ಓದುವ ಅವಕಾಶ ನನಗೆ ಲಭಿಸಿಲ್ಲವಾದರೂ ಅವರ ಸಾವಿತ್ರಿ ಎಂಬ ಕಾದಂಬರಿಯನ್ನು ಕನ್ನಡದಲ್ಲಿ ಓದಲು ಸಾಧ್ಯವಾಗಿಸಿದ್ದು ಮುಂಬೈಯಲ್ಲಿರುವ ಕನ್ನಡತಿ ಡಾ. ಗಿರಿಜಾ ಶಾಸ್ತ್ರಿಯವರು ಅನುವಾದಿಸಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವರು 2018ರಲ್ಲಿ ಪ್ರಕಟಿಸಿದ ಕನ್ನಡ ಆವೃತ್ತಿ. ಕನ್ನಡಾನುವಾದವು 81 ಪುಟಗಳಷ್ಟು ಕಿರಿದು. ಅನ್ನ ಬೆಂದಿದೆಯೆಂದು ತಿಳಿಯಲು ಒಂದಗುಳು ಸಾಕೆಂಬಂತೆ ಈ ಶ್ರೇಷ್ಠ ಸಾಹಿತಿಯ ಈ ಕೃತಿ ತನ್ನ ಪುಟ್ಟ್ಟ ಆಕೃತಿಯಲ್ಲೇ ಮಹತ್ವದ್ದನ್ನು ಹೇಳಿದೆ; ಮಹತ್ತನ್ನು ಸಾಧಿಸಿದೆ.

 ಸಾವಿತ್ರಿ ಈಗಾಗಲೇ ಸೂಚಿಸಿದಂತೆ 1962ರಲ್ಲಿ ಪ್ರಕಟವಾದ ಒಂದು ಪುಟ್ಟ ಕಾದಂಬರಿ. ಈ ಕೃತಿಯ ಕಥಾವಸ್ತು ಎರಡನೇ ಮಹಾಯುದ್ಧದ ಸಂದರ್ಭದ್ದು. ಇದು ಕೃತಿಯ ಹೆಸರನ್ನು ಹೊಂದಿದ ನಾಯಕಿ ಸಾವಿತ್ರಿ ಹೆಸರೇ ಸೂಚಿತವಾಗದ ತನ್ನ ಆತ್ಮೀಯನೊಬ್ಬನಿಗೆ ಪತ್ರ ಬರೆಯುವ ಮೂಲಕ ಅನಿರ್ವಚನೀಯ ಸಂಬಂಧಗಳನ್ನು ವಿವರಿಸುವ, ವಿಶ್ಲೇಷಿಸುವ ಸಂದರ್ಭವನ್ನು ಹೊಂದಿರುವ ಕಥನ. ಸಂಬಂಧ ಆತ್ಮೀಯತೆಯನ್ನಷ್ಟೇ ಹೊಂದಿದೆಯೆಂದು ಮಿತಿಗೊಳಿಸುವುದೂ ಕಷ್ಟ. ಏಕೆಂದರೆ ಅವರು ಭಾವನಾತ್ಮಕವಾಗಿ (ಅಥವಾ ಕನಿಷ್ಠ ನಾಯಕಿಯ ಮಟ್ಟಿಗಾದರೂ) ಪರಸ್ಪರ ಒಂದಾದವರು. ಕೃತಿಯಲ್ಲೆಲ್ಲೂ ಅವನ ಪತ್ರಗಳಿಲ್ಲ. ಆದರೆ ಅವನು ಏನು ಬರೆದಿರಬಹುದೆಂಬುದನ್ನು ಮತ್ತು ಹೇಗೆ ಬದುಕಿರಬಹುದೆಂಬುದನ್ನು ಸಾಂಕೇತಿಸುವ ಚಿತ್ರಣಗಳಿವೆ. ಇದು ‘ಲವ್ ಇನ್ ದ ಟೈಮ್ ಆಫ್ ಕಾಲೆರಾ’ ಕೃತಿಯನ್ನು ಅಥವಾ ‘ಪರ್ಲ್ ಹಾರ್ಬರ್’ ಸಿನೆಮಾವನ್ನು ಜ್ಞಾಪಿಸುವಂತೆ ಯುದ್ಧದ ಸಮಯದ ಪ್ರೇಮವಷ್ಟೇ ಅಲ್ಲ. ಬದಲಾಗಿ ಬದುಕಿನ ಹಲವು ಸ್ತರಗಳನ್ನು ಮೀರಿ ಬೆಳೆಯುತ್ತದೆ. ಭಾವನೆಗಳೊಂದಿಗೆ ವಿಚಾರವೂ ಬೆಳೆಯುತ್ತದೆ. ಅಕಡಮಿಕ್ ಜಗತ್ತಿನ ಸ್ವಾರಸ್ಯಕರವೆಂಬಂತಿರುವ ಘಟನಾವಳಿಗಳಿವೆ.

ಹುಟ್ಟು, ಬದುಕು, ಅನಾರೋಗ್ಯ ಮತ್ತು ಸಾವಿನ ಚುಟುಕಾದ, ಆದರೆ ಅಷ್ಟೇ ಮರ್ಮಭೇದಕವಾದ ಸುಳಿಗಳಿವೆ. ಮೂಲತಃ ಕೊಡಗಿನವಳೆಂದು ಹೇಳಲ್ಪಟ್ಟ, ಬೆಂಗಳೂರಿನಲ್ಲಿ ಬೆಳೆದ ಹುಡುಗಿಯೊಬ್ಬಳು ‘ಯಾವ ಪರಿಚಯವೂ ಇರದ’ವನಿಗೆ ಪತ್ರ ಬರೆಯುವುದರಿಂದ ಕೃತಿ ಆರಂಭವಾಗುತ್ತದೆ. ಅಲ್ಲಿಂದ ತನ್ನ ಎಳೆಯ ನೆನಪನ್ನು, ಅನುಭವಗಳನ್ನು ವಿನಿಮಯಗೊಳಿಸಿದಂತೆ ಪತ್ರಗಳು- ದೀರ್ಘವಾಗದೆ, ಮನಮುಟ್ಟುವಂತೆ ಮತ್ತು ಅನೌಪಚಾರಿಕವಾಗಿ- ಬರೆಯಲ್ಪಟ್ಟಿವೆ. ಕಲೆಯ ಬಗ್ಗೆ, ಸಾಹಿತ್ಯದ ಬಗ್ಗೆ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಅನುದ್ವೇಗಕರ ವಾಕ್ಯಗಳ ಮೂಲಕ ಕಣ್ಣೆದುರು ತನ್ನನ್ನು ತಾನು ಸ್ಥಾಪಿಸಿಕೊಳ್ಳಬಯಸುವ ಹೆಣ್ಣಿನ ಆರ್ತತೆ ಈ ಪತ್ರಗಳಲ್ಲಿದೆ. ‘ಅವನ’ ಕಾರ್ಯಕ್ರಮಗಳನ್ನು, ಪ್ರವಾಸವನ್ನು, ಉಪನ್ಯಾಸಗಳನ್ನು, ಬರಹಗಳನ್ನು ಅವಳು ತನ್ನ ಪತ್ರಗಳ ಮೂಲಕವೇ ವಿವರಿಸುತ್ತಾಳೆ. ಜೊತೆಗೇ ತನ್ನ ಬದುಕು ವಿಕಾಸವಾಗುತ್ತ ಹೋಗುವುದನ್ನು ಮತ್ತು ಅದರ ಕಾರಣೀಭೂತವಾದ ಅಂಶಗಳು, ವ್ಯಕ್ತಿಗಳು, ಸಂದರ್ಭಗಳು, ಸಂಬಂಧಗಳು ಅವಳ ಪತ್ರಗಳ ಮೂಲಕ ಬಿಚ್ಚಿಕೊಳ್ಳುತ್ತವೆ. ಪ್ರತಿಭಾವಂತರೂ ಪಂಡಿತರೂ ಆದ ಅವಳ ತಂದೆಯ ಅಪಾರ ಪ್ರಭಾವ ಅವಳ ಮೇಲಿದೆ. ಇದನ್ನು ಅವಳು ನಿರಾತಂಕವಾಗಿ ಅವರನ್ನು ಎದುರಿಸುತ್ತಲೇ ಹೇಳಬಲ್ಲಳು.

ಅವಳ ಪತ್ರಗಳ ಮೂಲಕ ಓಡಾಡುವ ಕಥಾಸರಿತ್ಸಾಗರ ರಾಜಮ್ಮ, ಪ್ರೊ. ಗುರುಪಾದಸ್ವಾಮಿ, ನೆರೆಯ ಪ್ಲಾಂಟರ್ ಎಚ್‌ವರ್ಥ್, ಪ್ರೊ. ಜೋಶಿ, ಜಪಾನಿನಲ್ಲಿ ಆತಿಥ್ಯ ನೀಡುವ ನಾಮುರಾ, ಅವರ ಸಹೋದ್ಯೋಗಿ ಇಮೋಟೋ, ಜೋಲಾಫ್ ಎಂಬ ಸಹಪಾಠಿ, ಮುಂದೆ ಸಂಗಾತಿಯಾಗಿ ನಿಕಟವಾಗುವ ಲ್ಯೋರೆ ಎಂಬ ಸ್ವೀಡಿಷ್ ಹುಡುಗಿ, ಅಗಲುವ ಸೇನ್ ದಂಪತಿಯ ಮಗು ಬೀನಾ- ಹೀಗೆ ಪುಟ್ಟ ಪ್ರಪಂಚ ವಿಶಾಲವಾಗಿ ಬೆಳೆಯುತ್ತದೆ. ಇವರೆಲ್ಲ ನೆರಳಿನಂತೆ ತಮ್ಮ ಅಸ್ತಿತ್ವವನ್ನು ಮೆರೆಯುತ್ತ ಆದರೆ ಮಾತಿಗೆ ಸಿಕ್ಕದ ವ್ಯಕ್ತಿತ್ವಗಳು. ಇವನ್ನೆಲ್ಲ ಇಷ್ಟು ಪುಟ್ಟ ಕೃತಿಯಲ್ಲಿ ಹಿಡಿದಿಟ್ಟುಕೊಂಡ ಬಗೆ ಹೇಗೆ ಎಂಬುದೇ ವಿಸ್ಮಯಕಾರಿ. ಸಾವಿತ್ರಿ ತನ್ನ ಹೆಸರನ್ನು ‘ಸಾವೂ’ ಎಂದು ಹೇಳುವುದನ್ನು ಜ್ಞಾಪಿಸಿ ಅದು ಮಾಡಬಹುದಾದ ಪರಿಣಾಮವನ್ನು ಹಿಂದೆ ಬಿಟ್ಟು ಮುಂದುವರಿಯುತ್ತಾಳೆ. ಆದರೆ ಅವಳ ಅಪ್ಪನಿಗೆ ಅವಳು ‘ಆನಂದ ಭಾಮಿನಿ’. ಜಪಾನಿನಲ್ಲಿ ಸೇರುವುದೂ ‘ಆನಂದ-ಮಿಷನ್’. ನಡುವೆ ಕಂಬಾರರ ಪದ್ಯ, ದೇವನೂರರ ಒಡಲಾಳ (ಇದನ್ನು ಅನುವಾದಕರು ಸ್ಮರಿಸಿದ್ದಾರೆ) ಮುಂತಾದ ಕೃತಿಗಳಲ್ಲಿ ಬರುವಂತಹ ನಾದಗಳನ್ನು ನುಡಿಯಾಗಿಸುವ ನವಿಲಿನ ಚಿತ್ರವಿದೆ. ಹಾಡುವ ಮರವೆಂಬ ನಾಟಕವಿದೆ. ಇವೆಲ್ಲ ರೂಪಕಗಳಂತೆ ಸೃಷ್ಟಿಯಾಗಿವೆ. ಮಳೆ ನಿಂತ ಮೇಲಣ ಹನಿಗಳಂತೆ ಓದಿದ ಮೇಲೂ ಕಾಡಬಹುದಾದ ಚಿತ್ರಗಳು.

ಇತಿಹಾಸದೊಂದಿಗೇ ಹೆಜ್ಜೆ ಹಾಕುವ ಇಲ್ಲಿಯ ಘಟನಾವಳಿಗಳು ನೇಪಥ್ಯದಲ್ಲಿ ನಡೆಯುವಂತಿರುವ ಯುದ್ಧದ ಭೀಕರತೆಯನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟಿವೆ. ಮೇಜರ್ ಸೇನ್ ಅವರ ಸಾವು ಇದರ ಪ್ರತ್ಯಕ್ಷ ಪ್ರಮಾಣವಾಗುತ್ತದೆ. ಬೀನಾ ಆ ಯುದ್ಧದ ಪರಿಣಾಮದಂತಿರುವ ಶಿಶು. ಸಾವಿತ್ರಿಯ ಬದುಕನ್ನು ಪರಿಪೂರ್ಣಗೊಳಿಸುವ, ಹಳೆಯ ನೆನಪುಗಳಿಗೆ ಬಂದ ಹೊಸ ಹೊಳಪು.

ಕೃತಿಯಲ್ಲಿ ಸಾವಿತ್ರಿ ಬಳಸುವ ಭಾಷೆ ತೀರ ಸರಳ ಮತ್ತು ಅಷ್ಟೇ ನಿಗೂಢ. ಅವಳ ಬೆಳವಣಿಗೆಯನ್ನು ಅವಳೇ ಹೇಳಿಕೊಳ್ಳುತ್ತಾಳೆ: ‘ಪ್ರತಿಯೊಬ್ಬ ಹುಡುಗಿಯೂ ಹುಟ್ಟಿನಿಂದಲೇ ತನ್ನ ತಾಯಿತಂದೆಯರನ್ನು ಬಿಟ್ಟು ಹೊರಡಲು ಸಿದ್ಧತೆಯನ್ನು ಮಾಡಿಕೊಂಡೇ ಬಂದಿರುತ್ತಾಳೆ.’ ‘ನವಿಲು ಬೇಕಾದರೆ ನಾನೇ ನವಿಲಾಗಬೇಕು. ನನಗೆ ಏನೇನು ಬೇಕೋ ಅದೆಲ್ಲಾ ನಾನೇ ಆಗಬೇಕು.’

ಕಲೆಯ ಬಗ್ಗೆ ಇಲ್ಲೊಂದು ವಿಶಿಷ್ಟ ದೃಷ್ಟಿಕೋನವಿದೆ: ‘ಕಲಾವಿದ ತನ್ನನ್ನು ತಾನು ಪರಿಪೂರ್ಣಗೊಳಿಸಿಕೊಳ್ಳುತ್ತಾನೆ. ಬಣ್ಣ, ಕಾಗದ, ಬಿದಿರು, ಮಣ್ಣು ಕಲ್ಲು ಮುಂತಾದವುಗಳನ್ನು ಕೇವಲ ಸಾಧನಗಳೆಂದು ಕರೆಯುವ ಹಾಗಿಲ್ಲ. ಇವುಗಳು ಸಾಧನಗಳಾದರೆ ಕಲಾವಿದನೂ ಒಂದು ಸಾಧನವೇ. ವಾಸ್ತವಿಕವಾಗಿ ಕಲಾವಿದನ ಇತರ ಅಂಗಗಳೇ.’

ಚರಿತ್ರೆ ಮತ್ತು ಸಾಹಿತ್ಯದ ನಡುವಣ ವಿಘಟನೆ ತನ್ನ ಸಂದೇಶವನ್ನು ಹೇಳುವುದು ಹೀಗೆ: ‘ಒಳಿತು ಮತ್ತು ಕೆಡುಕುಗಳ ಹೋರಾಟ ಮಾತ್ರದಿಂದಲೇ ಸಂಘರ್ಷವೊಂದು ಉದ್ಭವವಾಗುತ್ತದೆ ಮತ್ತು ಹೀಗೆಯೇ ಇದು ನಿರಂತರವಾಗಿ ಮುಂದುವರಿಯುತ್ತದೆ ಎನ್ನುವುದಾದರೆ, ಚರಿತ್ರೆಗೆ ಕೇವಲ ಹೆಸರನ್ನು ಬದಲಾಯಿಸುವುದಕ್ಕಿಂತ ಹೆಚ್ಚಿನ ಕೆಲಸವಿಲ್ಲ. ಕಾದಂಬರಿ, ನಾಟಕಗಳ ಕೆಲಸವಂತೂ ಇನ್ನೂ ಸುಗಮವಾಗಿಬಿಡುತ್ತದೆ. ಕೇವಲ ಕಪ್ಪುಬಿಳುಪಿನ ಬೊಂಬೆಗಳನ್ನು ಕುಣಿಸಿದರೆ ಸಾಕು. ನಿಜವಾಗಿ ನಮ್ಮ ನಮ್ಮ ಅನುಭವಕ್ಕೆ ಬಂದ ಒಬ್ಬ ದುರ್ಜನನನ್ನೂ ತೆಗೆದುಕೊಳ್ಳದೇ ಕಾದಂಬರಿ ಅಥವಾ ನಾಟಕವನ್ನು ಬರೆಯಲು ಸಾಧ್ಯವೇ ಎಂಬುದನ್ನು ನೋಡಬೇಕು.

ಕಾವ್ಯಮೀಮಾಂಸಕರು ಚರ್ಚಿಸಬಹುದಾದ, ಅಧ್ಯಯನ ಮಾಡಬಹುದಾದ ಹೊಸ ವಿಚಾರಗಳು ಇವು. ನೆನಪುಗಳು ಹೇಗಿರುತ್ತವೆ?: ‘ಮುಂದಿನದನ್ನು ಬಹಳ ದೂರ ನೋಡಬಾರದು, ಹಿಂದಿನದರಲ್ಲಿ ಮುಳುಗಬಾರದು.’ ‘ಕೆಲವೊಂದು ಸಲ ಕೆಲವು ಸಂಗತಿಗಳನ್ನು ನಿಶ್ಚಿತ ವೇಳೆಯಲ್ಲಿ ಮಾಡದಿರುವುದರಲ್ಲಿಯೂ ಮೋಜಿದೆ.’ ‘ನನ್ನ ಬಗ್ಗೆ ಏನೂ ಬರೆದಿಲ್ಲವೆಂದು ನೀವು ಹೇಳಬಹುದು. ಆದರೆ ನಾನು ಇನ್ನೂ ಸುತ್ತಮುತ್ತಲಿನ ಸಂಗತಿಗಳನ್ನೇ ನೋಡುತ್ತಿದ್ದೇನೆ.’

ಕೈಗೆ ಸಿಕ್ಕಿದ್ದನ್ನು/ಸಿಕ್ಕದ್ದನ್ನು ಅನುಭವಿಸುವ ಬಗೆ ಹೇಗೆ?: ‘ಗ್ರಂಥಪಾಲಕನೊಬ್ಬನಿಗೆ ಓದಲು ನಿಜವಾಗಿ ಬಿಡುವೆಲ್ಲಿರುತ್ತದೆ? ಅಲ್ಲದೆ ಒಮ್ಮೆಲೇ ಅವನಿಗೆ ಅಪಾರ ಪುಸ್ತಕಗಳ ಸಂಪರ್ಕ ಒದಗುವುದರಿಂದಾಗಿ, ಅವುಗಳನ್ನು ಓದಬಾರದು ಎಂದೇ ಎನಿಸುತ್ತಿರಬೇಕು.’
(ಇಂದಿನ ಸಂದರ್ಭವನ್ನು ಸಾಂಕೇತಿಸುವಂತೆ)‘ಸಾವೂ’ವಿನ ಕಥೆಯ ಬದಲಾಗಿ ಕಾಗೆ ಗುಬ್ಬಿಗಳ ಕಥೆಗಳನ್ನು ಬರೆದರೂ ಎಲ್ಲವನ್ನೂ ಗುಮಾನಿಯಿಂದಲೇ ನೋಡುವ ನಮ್ಮ ಅಧಿಕಾರಿಗಳು, ಅದಕ್ಕೂ ಅಪಾರ್ಥ ಕಲ್ಪಿಸಿಯಾರು.

ಇವೆಲ್ಲ ಈ ಪುಟ್ಟ ಕೃತಿಯಲ್ಲಿದ್ದರೆ ಕಥೆಯೇನಿದ್ದೀತು ಎಂಬ ಸಂದೇಹ ಬರುವುದು ಸಹಜ. ಇವುಗಳ ನಡುವೆಯೇ ಕಥಾ ವಸ್ತು, ಕಥೆಯ ಹಂದರವಿದೆ. ಇದೊಂದು ಸುಂದರ ಲಹರಿಯ ಗಂಭೀರ ಕಥಾನಕ. ಪ್ರಾಯಃ ಇಂದಿನ ಇ-ಯುಗದಲ್ಲಿ ಇಂತಹ ಪತ್ರಗಳು ಸಾಧ್ಯವಿಲ್ಲ. ಹೊಸ ತಲೆಮಾರು ಇದನ್ನು ಊಹಿಸುವುದೂ ಅಶಕ್ಯ. ತಾಂತ್ರಿಕವಾಗಿ ಆಕ್ಷೇಪಗಳನ್ನು ಹುಡುಕುವುದಾದರೆ- ಈ ಪತ್ರಗಳು ಅವನಲ್ಲಿರಬೇಕಾದವುಗಳು. ಅವನ ಮೂಲಕ ಬಿಂಬಿತವಾಗಿದ್ದರೆ ಈ ಕೃತಿಯ ಹಾದಿ ಹೇಗಿರುತ್ತಿತ್ತೋ? ಮರುಕಳಿಸುವ ನೆನಪುಗಳ ವಿನ್ಯಾಸ ಇನ್ನೂ ಚೆನ್ನಾಗಿ ಹೊಂದುತ್ತಿತ್ತೋ ಏನೋ? ಇಂತಹ ಪ್ರಶ್ನೆಗಳು ಸಹಜವಾಗಿಯೇ ಮೂಡಬಹುದು. ಹಾಗೆಯೇ ಅನುವಾದದಲ್ಲಿ ‘ಪುಸ್ತಕದೊಳಗೆ ಮೂಗು ತೂರಿಸಿಕೊಂಡೇ ಇರುತ್ತಿದ್ದೇನೆಂದಲ್ಲ’ ಎಂಬ ಬಳಕೆ ಕನ್ನಡಕ್ಕೆ ಹೊಂದುವುದಿಲ್ಲ. ಏಕೆಂದರೆ ಕನ್ನಡವು ಇಂಗ್ಲಿಷಿನ ‘ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸುವುದು’ ಎಂಬ ಹಾಗೆ ಬಳಸಲಾಗಿದೆ. ‘ಸೀ ಸಿಕ್‌ನೆಸ್ ಎಂಬುದಕ್ಕೆ ಕಡಲ ಕರಕರೆ’ ಸ್ವಲ್ಪಒರಟು ಅನುವಾದವಾಯಿತೇನೋ? ಅನ್ನಿಸಬಹುದು. ಇಂತಹ ಒಂದೆರಡು ಅಪವಾದಗಳನ್ನು ಹೊರತುಪಡಿಸಿದರೆ ಅನುವಾದ ಅದ್ಭುತವಾಗಿದೆ. ಒಂದು ವಿಚಾರವನ್ನು ಚರ್ಚಿಸಬೇಕು:

ಇದು ನಾವೆಲ್ಲ ಗ್ರಹಿಸುವಂತೆ ಪುರಾಣದ ಸಾವಿತ್ರಿಯ ಹೋಲುವೆಗೆ ಸಿಗುವ ಕೃತಿಯಲ್ಲ. ಹೆಸರನ್ನು ಹೊರತುಪಡಿಸಿದರೆ ಇದೊಂದು ಸ್ವತಂತ್ರ ವಿಚಾರಗಳನ್ನು ಅನುಭವದ ಮೂಸೆಯಲ್ಲಿಟ್ಟು ಪರೀಕ್ಷಿಸುವ ಕೃತಿ. ಆದರೆ ಅನುವಾದದಲ್ಲಿ ಕೃತಿಯ ಹೊರಗೆ ಈ ಕುರಿತು ಸಾಕಷ್ಟು ಚರ್ಚೆ ನಡೆದಂತೆ ಕಾಣಿಸುತ್ತದೆ. ಅನುವಾದಕರು ಪುರಾಣದ ಸಾವಿತ್ರಿಯನ್ನು ನೆನಪಿಸುತ್ತಾರೆ. ಎಸ್.ಜಿ.ಸೀತಾರಾಮ್ ‘ತ್ರಿಸಾವಿತ್ರೀ ಸಂಗಮ’ವನ್ನು ಕಂಡಿದ್ದಾರೆ. ಇವೆಲ್ಲದಕ್ಕೆ ಕಾದಂಬರಿಯೊಳಗೆ ಸಾವಿತ್ರಿ ಉತ್ತರಿಸಿದ್ದಾಳೆಂದುಕೊಂಡಿದ್ದೇನೆ: ಅವಳು ಹೇಳುತ್ತಾಳೆೆ: ‘ಕೆಲವರು ಅದರೊಳಗೆ ವಿಭಿನ್ನ ಅರ್ಥ ಕಂಡುಕೊಂಡರು. ನಾನು ಒಂದು ಸರಳ ಕಥೆಯನ್ನು ಪ್ರಸ್ತುತಪಡಿಸಲು ಪ್ರಯತ್ನಿಸಿದೆನಷ್ಟೇ. ಕನಸುಮನಸಿನೊಳಗೂ ಬೇರೆ ಯಾವುದೇ ವಿಚಾರಗಳಿರಲಿಲ್ಲ.’

ಆದರೂ ಇದು ಸಮರ್ಥ ಓದಿಗೆ ಒಳ್ಳೆಯ ಗ್ರಾಸ. ಪುಟ್ಟ ಕನ್ನಡಿಯಲ್ಲಿ ಪ್ರೀತಿಯ ವ್ಯಷ್ಠಿ ಮತ್ತು ಸಮಷ್ಠಿ ಪ್ರಜ್ಞೆಯನ್ನು ಪರಿಚಯಿಸುವ ಇದನ್ನು ಮೂಲ ಮರಾಠಿಯಲ್ಲಿ ಓದದವರಿಗೆ ಅದರ ಸೊಗಸು ಸ್ಪರ್ಶಿಸುವಷ್ಟು ಸುಂದರವಾಗಿ ಡಾ. ಗಿರಿಜಾಶಾಸ್ತ್ರಿ ಅನುವಾದಿಸಿದ್ದಾರೆ. ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿದ್ದ ಡಾ.ಗಿರಿಜಾ ಶಾಸ್ತ್ರಿಯವರು ಅನೇಕ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ‘ಸೆರಗ ಬಿಡೋ ಮರುಳೆ’ ಮತ್ತು ‘ತಾಯ ಮುಖ ಕಾಣದಲ್ಲಾ’ ಎಂಬ ಸ್ತ್ರೀಕೇಂದ್ರಿತವೆನ್ನಲಾಗದ ಆದರೆ ಅಕ್ಕಮಹಾದೇವಿ ಮುಂತಾದ ಅಭೀತೆಯರ ನಿಲುವು-ಗೆಲುವಿನ ಸಮರ್ಥ(ಕ) ಕೃತಿಗಳು ಪ್ರಕಟವಾಗಿವೆ.

ಈ ಕೃತಿಯನ್ನು ಕನ್ನಡಿಗರಿಗೆ ಒದಗಿಸಿದ ಅನುವಾದಕರು ಮತ್ತು ಪ್ರಕಾಶಕರು ಇಲ್ಲಿ ಹೇಳಿದ ಮತ್ತು ಹೇಳಬಹುದಾದ ಇನ್ನೂ ಹಲವು ಕಾರಣಗಳಿಗಾಗಿ ಅಭಿನಂದನಾರ್ಹರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)