varthabharthi


ಸಂಪಾದಕೀಯ

ಹಸಿವು ಎಂಬ ಮಾರಣಾಂತಿಕ ವೈರಸ್!

ವಾರ್ತಾ ಭಾರತಿ : 18 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ತನ್ನ ಆಳ್ವಿಕೆಯಲ್ಲಿ ಬಡವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಪ್ರಧಾನಿ ಮೋದಿಯವರು ಹೇಳಿಕೆ ನೀಡುವುದಿದೆ. ಬಡವರನ್ನು ಗುರುತಿಸುವ ಮಾನದಂಡವನ್ನೇ ಬದಲಿಸಿದರೆ ಬಡತನವನ್ನು ಇಳಿಕೆ ಮಾಡುವುದು ಸುಲಭ ಎನ್ನುವುದು ಮೋದಿಯವರ ಸಂಶೋಧನೆ. ಬಡತನ ರೇಖೆಗಿಂತ ಕೆಳಗೆ ಇರುವವರು ಯಾರು? ಎನ್ನುವುದಕ್ಕಿರುವ ಮಾನದಂಡಗಳನ್ನು ಬದಲಾಯಿಸುವ ಮೂಲಕ, ಬಡವರ ಸಂಖ್ಯೆಯನ್ನು ಇಳಿಸಲಾಗಿದೆ. ಈ ಮೂಲಕ ಲಕ್ಷಾಂತರ ಜನರು ಈಗಾಗಲೇ ಬಿಪಿಎಲ್ ಕಾರ್ಡ್‌ನಿಂದ ಹೊರಗೆ ಬಿದ್ದಿದ್ದಾರೆ. ಮನೆಯೊಳಗೆ ಸಣ್ಣ ಟಿವಿ ಇರುವ ಕಾರಣಕ್ಕಾಗಿ ಬಿಪಿಎಲ್ ಕಾರ್ಡ್‌ಗಳನ್ನು ಕಳೆದುಕೊಂಡವರಿದ್ದಾರೆ. ಬಿಪಿಎಲ್ ಕಾರ್ಡ್‌ನಿಂದ ಹೊರಬಿದ್ದರೂ, ಅದೇ ಹಸಿವಿನಿಂದ ಇವರು ನರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಆಧಾರ್ ಕಾರ್ಡ್‌ನ ಹೆಸರಲ್ಲಿಯೂ ಹಲವರು ರೇಷನ್ ಸಿಗದೆ ಹಸಿವಿನಿಂದ ಸಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣ ಮುಂದೊಡ್ಡಿ ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ಬಡವರಿಗೆ ರೇಷನ್ ನೀಡುವುದನ್ನು ನಿಲ್ಲಿಸಲಾಯಿತು. ಬಿಪಿಎಲ್ ಕಾರ್ಡ್‌ನ ಅಕ್ಕಿಯನ್ನೇ ಅವಲಂಬಿಸಿದ್ದ ಕುಟುಂಬಗಳು ಹಸಿವಿನಿಂದ ಕಳೆಯಬೇಕಾಯಿತು. ಹಸಿವಿನಿಂದ ಸಾವು ಸಂಭವಿಸಿದ ಪ್ರಕರಣಗಳೂ ಬೆಳಕಿಗೆ ಬಂದವು. ಹಲವರು ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋದರು. ಆಧಾರ್ ಕಾರ್ಡ್‌ನ ಅವ್ಯವಸ್ಥೆಯ ಪರಿಣಾಮವಾಗಿ ಈ ದೇಶದಲ್ಲಿ ಬಡವರ ಸುಮಾರು 3 ಕೋಟಿ ಪಡಿತರ ಕಾರ್ಡ್‌ಗಳು ರದ್ದುಗೊಂಡವು. ಇದರ ವಿರುದ್ಧ ಸಂತ್ರಸ್ತೆ ಜಾರ್ಖಂಡ್‌ನ ಕೊಯಿಲಿ ದೇವಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲು ತುಳಿದರು. ಆಧಾರ್ ಕಾರ್ಡ್ ಇಲ್ಲದ ಕಾರಣದಿಂದ 2017ರ ಮಾರ್ಚ್‌ನಲ್ಲಿ ಈಕೆಯ ಪಡಿತರ ಚೀಟಿಯನ್ನು ರದ್ದುಗೊಳಿಸಲಾಯಿತು. ಆನಂತರ ಅರೆ ಹೊಟ್ಟೆಯಿಂದ ಕುಟುಂಬ ಜೀವಿಸಬೇಕಾಯಿತು. 2018 ಸೆಪ್ಪಂಬರ್‌ನಲ್ಲಿ ಈಕೆಯ ಪುತ್ರಿ ಹಸಿವಿನ ಕಾರಣದಿಂದ ಮೃತಪಟ್ಟಳು. ಉಪ್ಪು ಮತ್ತು ಚಾ ಹುಡಿಯ ಹೊರತು ಆ ಮನೆಯಲ್ಲಿ ಇನ್ನೇನೂ ಇದ್ದಿರಲಿಲ್ಲ. ಪುತ್ರಿ ಸತ್ತ ದಿನವೂ ಆ ಕುಟುಂಬ ಉಪ್ಪು ಮತ್ತು ಚಹಾವನ್ನೇ ಆಹಾರವಾಗಿ ಬಳಸಿತ್ತು. ತನ್ನ ಪುತ್ರಿಯ ಸಾವಿಗೆ ಕಾರಣವಾದ ಸರಕಾರದ ವಿರುದ್ಧ ಇದೀಗ ಕೊಯಿಲಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾಳೆ.

ನೋಟು ನಿಷೇಧ ಈ ದೇಶದ ಬಡತನವನ್ನು ತೀವ್ರ ಪ್ರಮಾಣದಲ್ಲಿ ಹೆಚ್ಚಿಸಿತ್ತು. ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡರು. ಸಿಗುವ ವೇತನ ಭಾರೀ ಪ್ರಮಾಣದಲ್ಲಿ ಇಳಿಕೆಯಾಯಿತು. ಅಪೌಷ್ಟಿಕತೆ ಹೆಚ್ಚಾಯಿತು. ಈ ಸಂದರ್ಭದಲ್ಲೇ ಗಾಯದ ಮೇಲೆ ಬರೆ ಎಳೆಯುವಂತೆ ಆಧಾರ್ ಕಾರ್ಡ್ ನ್ನು ಮುಂದಿಟ್ಟು ಮೂರು ಕೋಟಿ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸಲಾಯಿತು. ಒಂದೆಡೆ ಕೆಲಸವನ್ನೂ ಕಸಿದುಕೊಂಡು, ಮಗದೊಂದೆಡೆ ಸಿಗುವ ಪಡಿತರವನ್ನೂ ಸರಕಾರ ಅವರಿಂದ ಕಿತ್ತುಕೊಂಡಿತು. ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗದವರೆಲ್ಲರೂ ತೀರಾ ತಳಸ್ತರದ ಜನರು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಮಧ್ಯಮ ವರ್ಗ ಅದು ಹೇಗೋ ಕ್ಯೂನಲ್ಲಿ ನಿಂತು, ಕಚೇರಿಯಿಂದ ಕಚೇರಿಗೆ ಅಲೆದಾಡಿ ಕಾರ್ಡ್ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆೆ. ಆದರೆ ಉಣ್ಣುವುದಕ್ಕೂ ತತ್ವಾರವಿರುವ ಕುಟುಂಬಗಳು ರೇಷನ್ ಕಾರ್ಡ್‌ನ ಹಿಂದೆ ಅಲೆಯುವುದು ಅಸಾಧ್ಯವಾಗಿತ್ತು. ಹಾಗೆಯೇ ಆದಿವಾಸಿಗಳು, ಬುಡಕಟ್ಟು ಸಮುದಾಯಕ್ಕೆ ಆಧಾರ್ ಕಾರ್ಡ್ ಮಾಡಲು ಅಗತ್ಯವಿರುವ ದಾಖಲೆಗಳನ್ನು ಒದಗಿಸುವುದೂ ಕಷ್ಟವಾಗಿತ್ತು. ಆಧಾರ್‌ಕಾರ್ಡ್ ಮಾಡಿಸಲು ಅಸಾಧ್ಯವಾದ ಕುಟುಂಬಗಳೆಲ್ಲವೂ ಬದುಕುವುದಕ್ಕಾಗಿ ಬಹುತೇಕ ಪಡಿತರ ಚೀಟಿಯನ್ನೇ ಅವಲಂಬಿಸಿದ್ದವು. ಆದರೆ ದುರದೃಷ್ಟವೆಂಬಂತೆ ಆಧಾರ್‌ಕಾರ್ಡ್ ಅವರ ಬದುಕುವ ಹಕ್ಕನ್ನೇ ಕಿತ್ತುಕೊಂಡಿತು.

ಲಾಕ್‌ಡೌನ್‌ನ ಬಳಿಕ ದೇಶದ ಬಡವರ ಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಮೂರು ತಿಂಗಳ ಲಾಕ್‌ಡೌನ್‌ನಲ್ಲಿ, ಕೊರೋನದಿಂದ ಸತ್ತವರ ಸಂಖ್ಯೆಗಳನ್ನು ಮಾಧ್ಯಮಗಳು ಪ್ರತಿದಿನ ಪ್ರಕಟಿಸುತ್ತಿದ್ದವು. ಆದರೆ ಹಸಿವಿನಿಂದ ಸತ್ತವರ ಸಂಖ್ಯೆಗಳು ಬೆಳಕಿಗೆ ಬರುತ್ತಲೇ ಇರಲಿಲ್ಲ. ಯಾಕೆಂದರೆ ಹಸಿವು ಎನ್ನುವುದು ರೋಗದ ಪಟ್ಟಿಯಲ್ಲಿ ಸೇರಿಯೇ ಇಲ್ಲ. ಹಸಿವು ಎಲ್ಲ ರೋಗಗಳ ತಾಯಿ. ಅದು ಹಂತ ಹಂತವಾಗಿ ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿ ಬಲಿ ತೆಗೆದುಕೊಳ್ಳುತ್ತದೆ. ಹಸಿವು ಎನ್ನುವ ರೋಗಾಣುವನ್ನು ಪತ್ತೆ ಮಾಡುವ ಯಾವುದೇ ಉಪಕರಣಗಳು ಆಸ್ಪತ್ರೆಗಳಲ್ಲಿ ಇಲ್ಲ. ಯಾವುದೇ ಆಸ್ಪತ್ರೆಗಳು ಹಸಿವಿನಿಂದ ಸಾವು ಎಂದು ಷರಾ ಬರೆಯುವುದಿಲ್ಲ. ಹಸಿವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದೇ ವೈದ್ಯರು ನಿರ್ಧರಿಸಿ ಬಿಟ್ಟಿದ್ದಾರೆ. ಒಂದು ವೇಳೆ, ಹಸಿವನ್ನೂ ರೋಗದ ಪಟ್ಟಿಯಲ್ಲಿ ಸೇರಿಸಿದ್ದಿದ್ದರೆ, ಈ ದೇಶದಲ್ಲಿ ಕೊರೋನಕ್ಕಿಂತ ಹಸಿವಿಗೆ ಬಲಿಯಾದವರ ಪಟ್ಟಿಯೇ ದೊಡ್ಡದಿರುತ್ತಿತ್ತು. ಈ ಸಾವುಗಳಿಗೆ ಸರಕಾರ ಆಧಾರ್ ಕಾರ್ಡ್‌ನ ಹೆಸರಲ್ಲಿ ಬಡವರಿಂದ ಕಿತ್ತುಕೊಂಡ ಮೂರು ಕೋಟಿ ಪಡಿತರ ಕಾರ್ಡ್‌ಗಳ ಕೊಡುಗೆಯೂ ಇದೆ. ಕೊರೋನ ಭಜನೆಯನ್ನು ನಾವು ನಿಲ್ಲಿಸಿ, ತಕ್ಷಣ ಗ್ರಾಮೀಣ ಪ್ರದೇಶಗಳ ಕಡೆಗೆ, ನಗರದಲ್ಲಿರುವ ವಲಸೆ ಕಾರ್ಮಿಕರ ಸ್ಥಿತಿಗತಿಗಳ ಕಡೆಗೆ ಕಣ್ಣಾಯಿಸಬೇಕಾಗಿದೆ.

ಕೊರೋನ ಸೋಂಕಿತರ ಅಂಕೆಗಳನ್ನು ಸಂಗ್ರಹಿಸಿದಂತೆಯೇ ಈ ಕಾರ್ಮಿಕರ ಬದುಕಿನ ಸ್ಥಿತಿಗತಿಗಳ ಕುರಿತು ಸರಕಾರ ವರದಿಯೊಂದನ್ನು ತರಿಸಿಕೊಳ್ಳಬೇಕು. ಎಷ್ಟು ಮಂದಿ ಹಸವಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಯಬೇಕು. ಕಾರ್ಮಿಕರಲ್ಲಿ ಎಷ್ಟು ಮಂದಿ ಸರಕಾರದ ಪಡಿತರ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎನ್ನುವುದರ ವಿವರಗಳನ್ನು ಸಂಗ್ರಹಿಸಬೇಕು. ಒಂದು ವೇಳೆ ಇವರಲ್ಲಿ ಪಡಿತರ ಚೀಟಿಗಳು ಇಲ್ಲವೆಂದಾದರೆ ಅದರ ಕಾರಣಗಳನ್ನೂ ಹುಡುಕಬೇಕು. ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಕರೆಸಿಕೊಳ್ಳುತ್ತಿದ್ದ ಭಾರತ ನೋಟು ನಿಷೇಧದ ಬಳಿಕ ಬಡ ರಾಷ್ಟ್ರದ ಪಟ್ಟಿಗೆ ಸೇರಿದೆ. ಮುಂದಿನ ದಿನಗಳಲ್ಲಿ ಈ ಬಡತನ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಪಡಿತರ ವ್ಯವಸ್ಥೆಯ ಮೂಲಕ ಬಡವರಿಗೆ ಹೆಚ್ಚು ಹೆಚ್ಚು ಆಹಾರ ಧಾನ್ಯಗಳನ್ನು ಒದಗಿಸುವುದು ಸರಕಾರದ ಕರ್ತವ್ಯ.

ಇಂತಹ ಸಂದರ್ಭದಲ್ಲಿ ಸುಮಾರು ಮೂರು ಕೋಟಿ ಪಡಿತರ ಚೀಟಿಗಳು ರದ್ದುಗೊಂಡಿವೆ ಎಂದರೆ, ಬಡವರನ್ನು ಸಾಮೂಹಿಕವಾಗಿ ಹಸಿವಿನಿಂದ ಸಾಯಿಸುವ ಬೃಹತ್ ಯೋಜನೆಯೊಂದನ್ನು ಸರಕಾರ ರೂಪಿಸಲು ಹೊರಟಿದೆ ಎಂದೇ ಭಾವಿಸಬೇಕಾಗುತ್ತದೆ. ಇದೀಗ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ನ್ಯಾಯಾಲಯ, ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ. ಆದರೆ ಸರಕಾರಗಳು, ಈ ನೋಟಿಸನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ಭಾವಿಸುವಂತಿಲ್ಲ. ಸಿಲಿಂಡರ್ ಸಬ್ಸಿಡಿಗಳನ್ನು ಈಗಾಗಲೇ ಕಿತ್ತುಕೊಂಡಿರುವ ಸರಕಾರ ಭವಿಷ್ಯದಲ್ಲಿ ಪಡಿತರಕಾರ್ಡ್‌ಗಳನ್ನು ಸಾಮೂಹಿಕವಾಗಿ ರದ್ದುಗೊಳಿಸುವ ಬಗ್ಗೆ ಯೋಚಿಸುತ್ತಿದೆ.ಇಡೀ ದೇಶ ಹಸಿವಿನಿಂದ ತತ್ತರಿಸುತ್ತಿರುವಾಗ ಅದಾನಿ, ಅಂಬಾನಿಯಂತಹ ಉದ್ಯಮಿಗಳು ವಿಶ್ವದಲ್ಲಿ ಶ್ರೀಮಂತರಾಗಿ ಕಂಗೊಳಿಸುತ್ತಿದ್ದಾರೆ. ನೋಟು ನಿಷೇಧ, ಕೊರೋನ, ಲಾಕ್‌ಡೌನ್ ಯಾವುದೂ ಇವರ ಮೇಲೆ ಪರಿಣಾಮ ಬೀರಿಲ್ಲ. ಯಾಕೆಂದರೆ ಇಡೀ ದೇಶದ ಅಭಿವೃದ್ಧಿಯೆಂದರೆ ಅದಾನಿ, ಅಂಬಾನಿಗಳ ಅಭಿವೃದ್ಧಿಯೆಂದು ಸರಕಾರ ಭಾವಿಸಿದೆ. ಇವರಿಬ್ಬರ ಏಳಿಗೆಗಾಗಿ ಈ ದೇಶದ ಕೋಟ್ಯಂತರ ಜನರನ್ನು ಹಸಿವಿನ ಬಾಯಿಗೆ ಕೊಟ್ಟಿದೆ. ಸರಕಾರದ ಕೃಷಿ ನೀತಿ ಜಾರಿಗೊಂಡರೆ ನಿಧಾನಕ್ಕೆ ಪಡಿತರ ವ್ಯವಸ್ಥೆ ಇಲ್ಲವಾಗುತ್ತದೆ. ಹೀಗಿರುವಾಗ, ತಾಂತ್ರಿಕ ಕಾರಣದಿಂದ ರದ್ದುಗೊಳಿಸಲ್ಪಟ್ಟ 3 ಕೋಟಿ ರೇಷನ್ ಕಾರ್ಡ್‌ಗಳಿಗೆ ಸರಕಾರ ನ್ಯಾಯ ನೀಡೀತು ಎಂದು ನಿರೀಕ್ಷಿಸುವುದಾದರೂ ಹೇಗೆ?.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)