varthabharthi


ಅನುಗಾಲ

ಕಾಲೋತ್ಸವ

ವಾರ್ತಾ ಭಾರತಿ : 25 Mar, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಜನತಾ ಕರ್ಫ್ಯೂ ಬಳಿಕ ಲಾಕ್‌ಡೌನ್ ಘೋಷಣೆಯಾಗಿ ಒಂದು ವರ್ಷ. ಇದನ್ನೂ ಸಂಭ್ರಮಿಸುವ ಜನರಿದ್ದಾರೆಂಬುದು ವಿಚಿತ್ರ ಮತ್ತು ವಿಷಾದನೀಯ. ಅದು ಆರಂಭದಲ್ಲಿ ಕೆಲವೇ ದಿನಗಳ ವಯೋಮಾನವನ್ನು ಹೊಂದಿದ ಸೋಂಕೆಂದು ಸ್ವತಃ ಪ್ರಧಾನಿಯವರೇ ಖುದ್ದಾಗಿ ಹೇಳಿದರೂ ಬಳಿಕ ವಾರ, ತಿಂಗಳುಗಳ ಕಾಲ ಮತ್ತು ಅನಿರ್ದಿಷ್ಟವಾಗಿ ಮುಂದುವರಿಯಿತು. ಜನರನ್ನು ನಿರಾಶೆಯಿಂದ ಹೊರತರಲು ಸಾಕಷ್ಟು ಮಂತ್ರವಾದ ನಡೆಯಿತು. ಶಂಖ, ಜಾಗಟೆ, ದೀಪ, ಪಟಾಕಿಯ ವರಸೆಗೆ ದೇಶದ ಕುರಿಮಂದೆ ತಲೆಬಾಗಿ ನರ್ತಿಸಿತೇ ಹೊರತು ಕೊರೋನ ತಲೆಬಾಗುತ್ತದೆಂಬ ನಿರೀಕ್ಷೆ ಸುಳ್ಳಾಯಿತು. ಕೊನೆಗೂ ವ್ಯಾಕ್ಸಿನ್‌ನ ಅಗತ್ಯ ತಲೆದೋರಿದೆ. ವ್ಯಾಕ್ಸಿನ್ ಕುರಿತ ಪ್ರಚಾರ ಮತ್ತು ಅದನ್ನು ವಿವರಿಸುವ ಮತ್ತು ನಿರೂಪಿಸುವ ವೈಖರಿಯೇ ಅದರ ಕುರಿತು ಜನರು ಸಂಶಯತಾಳುವಂತಿದೆ.


ಹುಲಿ, ಸಿಂಹಗಳನ್ನು ನಿಯಂತ್ರಿಸಬೇಕಾದರೆ ಕೋವಿಯಲ್ಲದಿದ್ದರೂ ಕನಿಷ್ಠ ಚಾವಟಿಯಾದರೂ ಬೇಕೆಂದು ಸರ್ಕಸ್ ನೋಡಿದವರಿಗೆ ಗೊತ್ತಾಗುತ್ತದೆ. ಆದರೆ ಕುರಿಗಳನ್ನು ನಿಯಂತ್ರಿಸಬೇಕಾದರೆ ಇವ್ಯಾವುದು ಬೇಡ. ಒಂದು ಕುರಿಯನ್ನು ಹುಡುಕಿ ಜೊತೆಗೆ ಒಯ್ದರೆ ಸಾಕು, ಉಳಿದವು ಅದನ್ನು ಹಿಂಬಾಲಿಸುತ್ತವೆ. ಸದ್ಯ ಭಾರತದಲ್ಲಿ ಕುರಿಯೇ ರಾಷ್ಟ್ರಿಯ ಪ್ರಾಣಿಯಾಗಿದೆ. ನಮ್ಮ ಜನರು ವಿದ್ಯೆ, ಬುದ್ಧಿ ಇವನ್ನು ಹೊಂದಿದರೂ, ಹೊಂದದಿದ್ದರೂ ಕುರಿಗಳಾಗಿಯೇ ಉಳಿದು ಡಾರ್ವಿನ್‌ನ ವಿಕಾಸವಾದಕ್ಕೆ ಸೆಡ್ಡುಹೊಡೆದಿದ್ದಾರೆ. ನೀವು ಹೇಗಾದರೂ ಇರಿ, ನೋಡಿ ಸ್ವಾಮಿ ನಾವಿರೋದೇ ಹೀಗೆ ಎಂಬ ತರ್ಕಹೂಡಿದ್ದಾರೆ. ಮೈಸೂರು ಅರಸರ ಕಾಲದ ಒಂದು ಕಥೆಯಿದೆ: ಮಹಾರಾಜರು ವಿದೇಶಕ್ಕೆ ಆರು ತಿಂಗಳ ಪ್ರವಾಸ ಹೋದರಂತೆ. ಅವರ ಆಸ್ಥಾನ ವಿದ್ವಾಂಸ ಬಸವಪ್ಪ ಶಾಸ್ತ್ರಿಗಳೋ ಏನೋ ಹೆಸರು. ನಿತ್ಯ ಮಹಾರಾಜರಿಗೆ ಅರಮನೆಯಲ್ಲಿ ಸಂಸ್ಕೃತ ಪಾಠ ಹೇಳುತ್ತಿದ್ದವರು. ಮಹಾರಾಜರು ವಿದೇಶಕ್ಕೆ ಹೋದಾಗ ಇವರಿಗೆ ಕೆಲಸವಿರಲಿಲ್ಲ. ಇವರ ನಿರುದ್ಯೋಗವನ್ನು ಊಹಿಸಿ ಮಹಾರಾಜರು ಅರಮನೆಯ ಸುತ್ತ ದನಗಳನ್ನು, ಕುರಿಗಳನ್ನು ಮೇಯಿಸುತ್ತಿದ್ದವರನ್ನು ಬರಹೇಳಿ ಅವರಿಗೆ ಪಾಠ ಹೇಳಲು ಸೂಚಿಸಿ ತೆರಳಿದರಂತೆ. ಶಾಸ್ತ್ರಿಗಳು ಒಪ್ಪಿದರು. ಆರು ತಿಂಗಳು ಕಳೆದು ಮಹಾರಾಜರು ಮರಳಿದಾಗ ಶಾಸ್ತ್ರಿಗಳು ಕಾಣಲಿಲ್ಲ. ದನ, ಕುರಿ ಮೇಯಿಸುತ್ತಿದ್ದವರ ಬಳಿ ಹೋಗಿ ನೋಡಿದರೆ ಅವರೊಂದಿಗೆ ಕಂಬಳಿ ಹೊದ್ದ ಒಬ್ಬ ಮುದುಕ ಕುಳಿತಿದ್ದ. ಮಹಾರಾಜರು ಶಾಸ್ತ್ರಿಗಳು ಎಲ್ಲೋ? ಎಂದು ಆತನನ್ನು ಕೇಳಿದರು. ಆತ ‘‘ನಾನೇ ಸ್ವಾಮೀ ಬಸ್ಯಾ’’ ಎಂದು ಹಲ್ಲುಕಿರಿದನಂತೆ. ಹೀಗೆ ಕುರಿಗಳ ಸಹವಾಸದಲ್ಲಿ ವಿದ್ಯೆ, ಬುದ್ಧಿ ಎಲ್ಲವೂ ಮಣ್ಣುಪಾಲಾಗುತ್ತದೆ ಎಂಬ ನೀತಿಗೆ ಈ ಕಥೆ. (ಯಾವ ಸಮುದಾಯವನ್ನೂ ಹೀಗಳೆಯುವ ಉದ್ದೇಶವಿಲ್ಲ.)

 ಸದ್ಯ ಅಸ್ಸಾಮ್, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ಈ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಯಾರು ಗೆಲ್ಲುತ್ತಾರೋ ಸೋಲುತ್ತಾರೋ ಗೊತ್ತಿಲ್ಲ. ಆದರೆ ನಮ್ಮ ಪ್ರಧಾನಿಗಳು ರಾಜ್ಯಮಟ್ಟಕ್ಕಿಳಿದು ಚುನಾವಣೆಯನ್ನು ಎದುರಿಸುತ್ತಿರುವುದು ಮಾತ್ರ ಅಚ್ಚರಿಯನ್ನು ತಂದಿದೆ. ತಾನು ದೇಶದ ಪ್ರಧಾನಿಯೆಂಬುದನ್ನು ಮರೆತು ರಾಜ್ಯಮಟ್ಟದ ರಾಜಕಾರಣಿಗಳೊಂದಿಗೆ ಯುದ್ಧಕ್ಕೆ ನಿಂತವರಂತೆ ಪ್ರಚಾರಮಾಡುವ ಪ್ರಧಾನಿ ಈ ಮೂಲಕ ಚುನಾವಣಾಮಟ್ಟವನ್ನು ಅಧೋಗತಿಗಿಳಿಸಿದ್ದಾರೆ. ಅವರನ್ನು ಎದುರಿಸಬೇಕಾದರೆ ಈ ಮಟ್ಟಕ್ಕಿಳಿದರೆ ಮಾತ್ರ ಸಾಧ್ಯವೆಂಬುದನ್ನು ಕೆಲವಾದರೂ ಪ್ರತಿಪಕ್ಷಗಳು ಕಂಡುಕೊಂಡಿವೆ. ದೇಶದ ಐಕ್ಯತೆಯನ್ನು ಸಾರಬೇಕಾದ ಪ್ರಧಾನಿಯವರು ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ ಮಾತುಗಳನ್ನಾಡುತ್ತಿದ್ದಾರೆ. ಅವರಿಗೆ ಸಾಥ್ ನೀಡುವ ಅವರ ಸಹವರ್ತಿ ಅಮಿತ್ ಶಾ ಈ ವಿಚಾರವನ್ನು ರುಬ್ಬುತ್ತಿದ್ದಾರೆ. ಒಂದೇ ಒಂದು ಉದಾಹರಣೆಯನ್ನು ಹೇಳುವುದಾದರೆ ಪ್ರಧಾನಿಯಾದಿಯಾಗಿ ಭಾಜಪದ ಎಲ್ಲ ಧುರೀಣರು ಪಶ್ಚಿಮ ಬಂಗಾಳದಲ್ಲಿ ಸಿಎಎಯನ್ನು ಜಾರಿಗೊಳಿಸುವುದಾಗಿ ಘೋಷಿಸಿದರೆ, ನೆರೆಯ ಅಸ್ಸಾಮಿನಲ್ಲಿ ಸಿಎಎಯನ್ನು ರದ್ದುಗೊಳಿಸುವುದಾಗಿ ಅಥವಾ ಜಾರಿಗೊಳಿಸುವುದಿಲ್ಲವಾಗಿ ಘೋಷಿಸುತ್ತಿದ್ದಾರೆ. ಜನರ ಬುದ್ಧಿಮತ್ತೆಯ ಬಗ್ಗೆ ಇವರಿಗೆ ನಂಬಿಕೆಯೇ ಇಲ್ಲ; ಬದಲಿಗೆ ಜನರನ್ನು ದಡ್ಡರೆಂದು ದೃಢೀಕರಿಸುವತ್ತ ಈ ಪ್ರಚಾರ ನಡೆಯುತ್ತಿದೆ. ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಅವರು ಈ ದೇಶದ ಶೇ. 90 ಜನರು ದಡ್ಡರು ಎಂದಾಗ ಆಕ್ರೋಶಭರಿತರಾದ ಜನರು ಆನಂತರ ನಡೆದ ವಿವಿಧ ಚುನಾವಣೆಗಳಲ್ಲಿ ಅದಕ್ಕೆ ಪುರಾವೆ ಸಲ್ಲಿಸಿದ್ದರು.

ಕೇರಳದ ವಿಧಾನಸಭೆಯಲ್ಲಿರುವ ಏಕೈಕ ಬಿಜೆಪಿ ಶಾಸಕ ಮತ್ತು ಜನಸಂಘದ ಕಾಲದಿಂದಲೂ ನಿಷ್ಠೆಯನ್ನು ಬದಲಾಯಿಸದ ರಾಜಕಾರಣಿ ಒ. ರಾಜಗೋಪಾಲನ್ ಅವರಿಗೀಗ 90ರ ಹರೆಯ. ಅವರು ಇಡೀ ದೇಶವೇ ತತ್ತರಿಸುವಂತಹ ಒಂದು ಹೇಳಿಕೆಯನ್ನು ನೀಡಿದರು: ಕೇರಳದಲ್ಲಿ ಭಾಜಪವು ಹಿನ್ನಡೆಯನ್ನು ಅನುಭವಿಸಲು ಮುಖ್ಯ ಕಾರಣವೆಂದರೆ ಅಲ್ಲಿರುವ ಜನರಲ್ಲಿ ಶೇ. 90 ಅಕ್ಷರಸ್ಥರು. ಇಷ್ಟು ಪಾರದರ್ಶಕವಾಗಿ, ನಿರುಮ್ಮಳವಾಗಿ ಸತ್ಯವನ್ನು ಹೇಳಿದ ಅವರ ಮನದಿಂಗಿತವೇನಿತ್ತೋ ಗೊತ್ತಿಲ್ಲ. ಆದರೆ ಕೇರಳದ ಅಕ್ಷರಸ್ಥರನ್ನು ಈ ಮಾತು ನಿಜಕ್ಕೂ ಸಂತೋಷಪಡಿಸಿರಬೇಕು. ಕೇರಳದ ಭಾಜಪಗಳು ಕೆರಳಿದರೇನೋ ಗೊತ್ತಿಲ್ಲ.

ಈ ರಾಜಕೀಯ ಕೊರೋನ ಅವಧಿಯಲ್ಲೂ ನಡೆದಿತ್ತು. ಸರಕಾರ- ಮುಖ್ಯವಾಗಿ ಕೇಂದ್ರ- ಮತ್ತು ಅದರದ್ದೇ ಆದ ಕರ್ನಾಟಕ ರಾಜ್ಯ- ಪ್ರಜೆಗಳ ಮೇಲೆ ಸವಾರಿಮಾಡುವಲ್ಲಿ ಲಜ್ಜಾಹೀನವಾಗಿ ವರ್ತಿಸಿತು. ತಮಗಿಷ್ಟಬಂದ ಅನೇಕ ಕಾನೂನುಗಳನ್ನು ಜಾರಿಗೊಳಿಸಿತು. ಕೇಂದ್ರ ಸರಕಾರವು ತಂದ ಸಿಎಎ ಕಾನೂನಿಗೆ ವಿರುದ್ಧವಾಗಿ ದಿಲ್ಲಿಯಲ್ಲಿ ಮತ್ತು ದೇಶದ ವಿವಿಧೆಡೆ ನಡೆದ ಚಳವಳಿಯನ್ನು ಕೊರೋನ ಕಾರಣದಿಂದ ಮುಕ್ತಾಯಗೊಳಿಸಲಾಯಿತು. ಆನಂತರ ಜಾರಿಗೆ ತಂದ ಕೃಷಿಕಾಯ್ದೆಯ ವಿರುದ್ಧ ಜನರು ಸಿಡಿದೆದ್ದರಾದರೂ ಧರ್ಮ, ಮತ, ಮುಂತಾದ ಅನವಶ್ಯಕ ವಿಚಾರಗಳಿಂದ ರಾಜಕೀಯ ಭ್ರಮಿತರಾದ ಜನರು ಎಲ್ಲಕಡೆ ಇದನ್ನು ಬೆಂಬಲಿಸದಾದರು.

ಆದರೂ ಈ ಚಳವಳಿ ನಡೆಯುತ್ತಿದೆ. ಇನ್ನೊಂದೆಡೆ ಸರಕಾರ ಭಿನ್ನಮತವನ್ನು ಸಹಿಸದಿರುವ ಮತ್ತು ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸುವ ಎಲ್ಲ ಹಾದಿಗಳನ್ನು ಹುಡುಕಿದೆ ಮತ್ತು ಈ ಹುಡುಕಾಟದಲ್ಲಿ ಅದಕ್ಕೆ ಸಿದ್ಧ ಮಾದರಿಯೆಂದರೆ ಕಾಂಗ್ರೆಸ್. ಕಾಂಗ್ರೆಸ್ ಅವಧಿಯಲ್ಲಿ ನಡೆದಿದೆಯೆನ್ನಲಾದ ಅಥವಾ ನಡೆದ ಅಕ್ರಮಗಳೇ ಈಗಿನ ಸರಕಾರಕ್ಕೆ ಪಠ್ಯವಸ್ತು. ಕಾಂಗ್ರೆಸ್‌ನ ಅವಧಿಯಲ್ಲಿ ಬಸವಳಿದ ಜನರು ಅದನ್ನು ಬದಲಾಯಿಸುವ ಅವಸರದಲ್ಲಿ ಬಾಜಪವನ್ನು ತಂದರು. ಹಿಂದಿನ ತಲೆಮಾರುಗಳು ಬುದ್ಧಿವಂತರು. ಅವರು ಯಾವೊಬ್ಬ ರಾಜಕಾರಣಿಗೂ ಸುರಕ್ಷಿತ ತಂಗುದಾಣವನ್ನು ನಿರ್ಮಿಸಲಿಲ್ಲ. ಇಂದಿರಾ ಸರಕಾರ ಬಿದ್ದು ಜನತಾ ಸರಕಾರ ಬಂದರೂ ಅದು ಸೋತಿತೆಂಬುದನ್ನು ನೆನಪಿಡಬೇಕು. ಕಾಂಗ್ರೆಸ್ ಸರಕಾರ ಸೋತು 1999ರಲ್ಲಿ ವಾಜಪೇಯಿ ಸರಕಾರ ಬಂದರೂ 2004ರಲ್ಲಿ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಮರಳಿತು. 2014ರಲ್ಲಿ ಮೋದಿ ಸರಕಾರ ಬಂದಿತು. ಅದೀಗ ಎರಡನೇ ಬಾರಿ ಅಧಿಕಾರ ಹಿಡಿದು 2024ರಲ್ಲಿ ಮತ್ತೆ ಪರೀಕ್ಷೆಗೆ ಸಜ್ಜಾಗಬೇಕಿದೆ. ಆದರೆ ಅದರ ಹುಲಿಸವಾರಿಯಲ್ಲಿ ಧರ್ಮ, ಮತ, ಹಿಂದುತ್ವ ಇಂತಹ ಅಪಾಯಕಾರಿ ವಿಚಾರಗಳೇ ಬಂಡವಾಳಗಳಾಗಿವೆ. ಅವುಗಳನ್ನು ತ್ಯಜಿಸಿದರೆ ತನ್ನ ಅಂತ್ಯ ಸಿದ್ಧವೆಂದು ಅದಕ್ಕೆ ಅರಿವಾದಂತಿದೆ. ಅದ್ದರಿಂದ ಯಾವುದೇ ಚುನಾವಣೆಯಿರಲಿ, ಧರ್ಮ-ಮತ ಇವೇ ವಿವಾದಾಂಶಗಳಾಗಿವೆ. ದೇಶವಿಡೀ ವೈಷಮ್ಯದ ಅಗ್ನಿಕುಂಡವಾದರೂ ಸರಿಯೇ, ಅಧಿಕಾರದಲ್ಲಿರಬೇಕು ಎಂಬ ಭಯೋತ್ಪಾದನೆಗಿಂತಲೂ ಆತಂಕಕಾರಿಯಾದ ಮತ್ತು ದೇಶಕ್ಕೆ ಅಪಾಯವನ್ನು ತಂದೊಡ್ಡಬಲ್ಲ ದೇಶದ್ರೋಹದ ಕಾರ್ಯದಲ್ಲಿ ಮಗ್ನವಾಗಿದೆ. ಇವನ್ನೆಲ್ಲ ಒಂದು ಉತ್ಸವದಂತೆ ನೋಡುವ ಸಹಕರಿಸುವ ಮಂದಿ ಭವಿಷ್ಯದ ತಲೆಮಾರಿಗೆ, ಕಾಲಕ್ಕೆ ಉತ್ತರನೀಡಬೇಕಾಗುತ್ತದೆ.

ಗತವನ್ನು ಸ್ವಲ್ಪನೆನಪು ಮಾಡಿಕೊಳ್ಳೋಣ: 2020ರ ಮಾರ್ಚ್‌ನಲ್ಲಿ ಕೊರೋನದ ನೈಜ ಸ್ವರೂಪವು ಬೆಳಕಿಗೆ(!) ಬಂದಿತು. ಅಲ್ಲಿದೆ ಅಲ್ಲಿದೆ ಎಂದು ಜಗತ್ತಿನ ಭೂಪಟದಲ್ಲಿ ನೋಡುತ್ತಿದ್ದವರೆಲ್ಲ ಇದ್ದಕ್ಕಿದ್ದಂತೆ ಇಲ್ಲಿದೆ! ಎಂದು ಕಾಲಬಳಿ ಹರಿಯುವ ಹಾವನ್ನು ಕಂಡಂತೆ ಬೆಚ್ಚಿಬಿದ್ದರು. ಪ್ರಾಯಃ ಜನರು ಇದರ ಬಿಸಿಯನ್ನು ಅರಿಯುವಂತೆ ಮಾಡಿದ್ದು ಸರಕಾರ. ಜನತಾ ಕರ್ಫ್ಯೂ ಮತ್ತು ಆನಂತರ ಲಾಕ್‌ಡೌನ್ ಜಾರಿಯಾಯಿತು. ನಿಷೇಧಾಜ್ಞೆ ಮತ್ತು ಸರಕಾರವೇ ಹೇರಿದ ಬಂದ್‌ನಿಂದಾಗಿ ಬಾಗಿಲುಗಳು ಮುಚ್ಚಿದವು. ಆನಂತರ ದೇಶದೆಲ್ಲೆಡೆ ಕೋವಿಡ್-19ರಡಿ ಜನಜೀವನ ಸ್ತಬ್ಧವಾದಂತಿತ್ತು. ಅನೇಕ ಉದ್ದಿಮೆಗಳು, ವ್ಯಾಪಾರಗಳು ತಮ್ಮ ವಹಿವಾಟನ್ನು ನಿಲ್ಲಿಸಿದವು. ಸಿನೆಮಾ ಥಿಯೇಟರುಗಳು, ಕಲ್ಯಾಣ ಮಂಟಪಗಳು, ಅಂಗಡಿ ಮಳಿಗೆಗಳು, ಸಾರಿಗೆ ಸೌಕರ್ಯಗಳು ಬಾಗಿಲು ಮುಚ್ಚಿದವು. ಸಂಬಳ, ನಿವೃತ್ತಿವೇತನ, ಸಾಕಷ್ಟು ಆದಾಯಮೂಲಗಳ ಜನರಷ್ಟೇ ತಮ್ಮ ಬದುಕಿನಿಂದಾಚೆಗೆ ಯೋಚಿಸುವ ಪರಿಸ್ಥಿತಿಯಿತ್ತು. ವಿದ್ಯುನ್ಮಾನ ಉದ್ದಿಮೆ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಮನೆಯಿಂದಲೇ ದುಡಿಯುವ ಸವಲತ್ತಿನ ಮಂದಿಯನ್ನು ಹೊರತುಪಡಿಸಿ ಖಾಸಗಿ ಉದ್ಯೋಗಸ್ಥರಲ್ಲಿ ಬಹುಪಾಲು ಮಂದಿಗೆ ಹೊಟ್ಟೆತುಂಬಿಸಿಕೊಳ್ಳುವುದೂ ಕಷ್ಟವಾಗಿ ಜೀವ ಉಳಿದರೆ ಸಾಕು ಎಂಬ ಸ್ಥಿತಿಯಲ್ಲಿ ಕಳೆದ ಕೆಲವು ತಿಂಗಳುಗಳು ಯುಗಾಂತ್ಯದಂತಿದ್ದವು.

ಮಧ್ಯಮ ವರ್ಗದವರು ತಮ್ಮ ಆಸೆ-ಆಸಕ್ತಿಗಳಿಗೆ ಕಡಿವಾಣ ಹಾಕಿ ಮಾನಮುಚ್ಚಿಕೊಳ್ಳಲು ಬಗೆಬಗೆಯ ತಂತ್ರ-ಮಂತ್ರಗಳನ್ನು ಬಳಸಿದರೆ ಬಡವರಿಗೆ ಉಳಿಯಲು ಎಲ್ಲಾದರೂ ಕೊಂಚ ಜಾಗ, ಹಸಿವು-ನೀರಡಿಕೆಯನ್ನು ಶಮನಗೊಳಿಸಲು ಒಂದಷ್ಟು ಆಹಾರ ಸಿಕ್ಕರೆ ಸಾಕು ಎಂಬ ದಯನೀಯ ಸ್ಥಿತಿಯಿತ್ತು. ವಲಸೆಯೆಂಬ ಚಿಂತಾಜನಕ ದಣಿವಿನಲ್ಲಿ ಸಾವಿರಾರು ಜನರು ಬಳಲಿದರು. ಸಾಹಿತ್ಯ-ಸಂಸ್ಕೃತಿಗಳ ಕುಣಿದಾಟವೂ ನಿಂತಿತ್ತು. ಕ್ರೀಡಾಂಗಣಗಳಲ್ಲಿ ಹುಲ್ಲು ಮೊಳೆಯಿತು. ಉಳಿದವು ಪಾಚಿಗಟ್ಟಿದವು. ಆಸ್ಪತ್ರೆಗಳು ಶ್ಮಶಾನಕ್ಕೆ ಮಾರ್ಗದರ್ಶಕರಂತಿದ್ದವು. ಕೈಯಲ್ಲಿ ಕಾಸಿಲ್ಲದವರಿಗೆ ಕೊರೋನ ಬಿಡಿ, ಯಾವುದೇ ಚಿಕಿತ್ಸೆಗಳು ಕೈಗೆಟುಕದಾದವು. ‘ದಾರಿ ಯಾವುದಯ್ಯೆ ವೈಕುಂಠಕೆ?’ ಎಂದರೆ ಆಸ್ಪತ್ರೆಗಳನ್ನು ತೋರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಹೋಗಲಿ, ಸತ್ತರೂ ಸುಖವಿಲ್ಲ ಎಂಬಂತೆ ಶವಗಳನ್ನು ಮರಳಿಪಡೆಯಲಾಗದ ದಯನೀಯ ಸ್ಥಿತಿಯಿಂದ ಹೊರಗೆ ಬರಬೇಕಾದರೆ ಕುಟುಂಬವರ್ಗದವರು ಭಾರೀ ಪ್ರಭಾವವನ್ನೂ ಹಣವನ್ನೂ ಪ್ರಯೋಗಿಸಬೇಕಾಗಿತ್ತು. ಮಾನವೀಯತೆಯೇ ಇಲ್ಲದ ನಿಯಮಗಳಡಿ ದಡ ಕಾಣದ ಕಡಲಿನಂತಹ ಚಿಂತಾಜನಕ ಬದುಕಿನಲ್ಲಿ ಚಿಂದಿಯನ್ನು ಆಯ್ದುಕೊಂಡು ಮರಳಿ ಮಣ್ಣಿಗೆ ಎಂಬಂತೆ ತಮ್ಮೂರಿಗೆ ತಲುಪಬೇಕಾದರೆ ಅನೇಕ ಬದುಕುಗಳು ಸಮಾಪ್ತವಾಗಿದ್ದವು.

ಈಗ 2021ರ ಮಾರ್ಚ್ ತಿಂಗಳು. ಜನತಾ ಕರ್ಫ್ಯೂ ಬಳಿಕ ಲಾಕ್‌ಡೌನ್ ಘೋಷಣೆಯಾಗಿ ಒಂದು ವರ್ಷ. ಇದನ್ನೂ ಸಂಭ್ರಮಿಸುವ ಜನರಿದ್ದಾರೆಂಬುದು ವಿಚಿತ್ರ ಮತ್ತು ವಿಷಾದನೀಯ. ಅದು ಆರಂಭದಲ್ಲಿ ಕೆಲವೇ ದಿನಗಳ ವಯೋಮಾನವನ್ನು ಹೊಂದಿದ ಸೋಂಕೆಂದು ಸ್ವತಃ ಪ್ರಧಾನಿಯವರೇ ಖುದ್ದಾಗಿ ಹೇಳಿದರೂ ಬಳಿಕ ವಾರ, ತಿಂಗಳುಗಳ ಕಾಲ ಮತ್ತು ಅನಿರ್ದಿಷ್ಟವಾಗಿ ಮುಂದುವರಿಯಿತು. ಜನರನ್ನು ನಿರಾಶೆಯಿಂದ ಹೊರತರಲು ಸಾಕಷ್ಟು ಮಂತ್ರವಾದ ನಡೆಯಿತು. ಶಂಖ, ಜಾಗಟೆ, ದೀಪ, ಪಟಾಕಿಯ ವರಸೆಗೆ ದೇಶದ ಕುರಿಮಂದೆ ತಲೆಬಾಗಿ ನರ್ತಿಸಿತೇ ಹೊರತು ಕೊರೋನ ತಲೆಬಾಗುತ್ತದೆಂಬ ನಿರೀಕ್ಷೆ ಸುಳ್ಳಾಯಿತು. ಕೊನೆಗೂ ವ್ಯಾಕ್ಸಿನ್‌ನ ಅಗತ್ಯ ತಲೆದೋರಿದೆ. ವ್ಯಾಕ್ಸಿನ್ ಕುರಿತ ಪ್ರಚಾರ ಮತ್ತು ಅದನ್ನು ವಿವರಿಸುವ ಮತ್ತು ನಿರೂಪಿಸುವ ವೈಖರಿಯೇ ಅದರ ಕುರಿತು ಜನರು ಸಂಶಯತಾಳುವಂತಿದೆ. ದೂರವಾಣಿಯ ಸಂದೇಶಗಳನ್ನು ಗಮನಿಸಿ: ಕೋವಿಡ್ ಪೂರ್ತಿ ಸ್ವದೇಶದ್ದು (ಮೇಡ್ ಇನ್ ಇಂಡಿಯಾ), ಅದರಿಂದ ದುಷ್ಪರಿಣಾಮಗಳಿಲ್ಲ, ಅದರ ಕುರಿತು ನಂಬಿಕೆಯಿಡಿ, ಅದನ್ನು ಹಾಕಿಸಿಕೊಂಡರೂ ಮುಖಕ್ಕೆ ಮಾಸ್ಕ್ ಹಾಕುವುದನ್ನು, ಸ್ಯಾನಿಟೈಸರ್ ಬಳಸುವುದನ್ನು, ಕೈತೊಳೆಯುವುದನ್ನು, ಸುರಕ್ಷಿತ ಅಂತರವನ್ನು ಮುಂದುವರಿಸಿ ಎಂದೆಲ್ಲ ಸಾರುತ್ತವೆ. ಅಶ್ವತ್ಥಕಟ್ಟೆಗೆ ದಿನವೂ ನೂರು ಸುತ್ತು ಬನ್ನಿ ಆದರೆ ವೈದ್ಯರಲ್ಲಿ ಪರೀಕ್ಷಿಸಿ ಸೂಕ್ತ ಔಷಧಿಯನ್ನು ಪಡೆದುಕೊಳ್ಳಿ ಎಂಬಂತಿದೆ ಈ ವಾದ. ಅಲ್ಲೂ ಸಾಕಷ್ಟು ರಾಜಕೀಯ ನಡೆಯುತ್ತಿದೆ. ವ್ಯಾಕ್ಸಿನ್ ಕುರಿತು ನಂಬಿಕೆ ಎಂದರೇನು? ಅದರಲ್ಲಿ ಸ್ವದೇಶವಾದದ್ದೇನಿದೆ? ಕೊರೋನದ ದುಷ್ಪರಿಣಾಮದಿಂದ ಜನತೆ ಮಾತ್ರವಲ್ಲ ದೇಶವೇ ಎದ್ದು ನಿಂತಿಲ್ಲ. ಆದರೆ ನಮ್ಮ ಕುರಿಗಳಿಗೆ ಇವ್ಯಾವುದೂ ಲಗಾವಿಲ್ಲ.

ಕೊರೋನ ಇದ್ದರೂ ಇಲ್ಲದಿದ್ದರೂ ದೇಶವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ತೈಲ ಮತ್ತು ಬಹುತೇಕ ಅವಶ್ಯಕ ಸಾಮಗ್ರಿಗಳ ಬೆಲೆ ಏರಿದೆ. ಅಡುಗೆ ಅನಿಲ ದುಬಾರಿಯಾಗಿದೆ. ಎಲ್ಲವೂ ಏರಿದೆ- ಜೀವಗಳ ಬೆಲೆಯ ಹೊರತಾಗಿ. ಬ್ಯಾಂಕ್ ಮುಂತಾದ ಸಂಸ್ಥೆಗಳಿಂದ ಸಾಲ ಪಡೆದವರು ಮರುಪಾವತಿಸಲಾಗದೆ ಒದ್ದಾಡಿದಾಗ ಸರಕಾರ ತಾತ್ಕಾಲಿಕವಾಗಿ ಮರುಪಾವತಿಯನ್ನು ಅಮಾನತ್ತು ಮಾಡಿತು. 2020ರ ಮಾರ್ಚ್‌ನಿಂದ ಅಗಸ್ಟ್ ತನಕ ಮರುಪಾವತಿಯ ದಣಿವಿಲ್ಲದೆ ಸಾಲಗಾರ ಉಸಿರಾಡುವಂತಾದರೂ ಇದನ್ನು ಮುಂದೆ ಸಹಿಸಿಕೊಳ್ಳುವ ಬಗೆ ಹೇಗೆಂದು ಸರಕಾರ ಸೂಚಿಸಲಿಲ್ಲ. ಪರಿಣಾಮವಾಗಿ ಇತ್ತೀಚೆಗಿನ ವರದಿಗಳ ಆಧಾರದಲ್ಲಿ ಹೇಳುವುದಾದರೆ ಸುಮಾರು ಮೂರೂವರೆ ಕೋಟಿಗೂ ಮಿಕ್ಕಿ ಮಧ್ಯಮವರ್ಗದ ಜನರು ಬಡವರಾದರು. ಕೆಲವೇ ಮಂದಿ ಈ ಅವಧಿಯಲ್ಲಿ ಸರಕಾರದ ಮತ್ತು ರಾಜಕೀಯದ ನಂಟಿನಿಂದಾಗಿ ತಮ್ಮ ಸಂಪತ್ತನ್ನು ವೃದ್ಧಿಗೊಳಿಸಿದರು. ಈ ಅಭಿವೃದ್ಧಿಯೇ ಒಂದು ಅಧ್ಯಯನಕ್ಕೆ ವಸ್ತುವಾಗಬಲ್ಲುದು.
ಸದ್ಯ ಕೊರೋನದ ಮೊದಲ ವರ್ಷದ ಸಂಪೂರ್ಣತೆಯು ‘ವಾರ್ಷಿಕೋತ್ಸವ’ವೆಂಬ ಹಂತಕ್ಕೆ ತಲುಪಿದೆ. ನೆನಪಿಸಿದರೆ ಮುಂದಿನ ‘ಮನ್ ಕೀ ಬಾತ್’ ವೆಬಿನಾರಿಗೆ, ಬಾನುಲಿ ಪ್ರಸಾರಕ್ಕೆ ಇದೊಂದು ವೈಭವದ ಸಂಕೇತವಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)