varthabharthi


ಸಂಪಾದಕೀಯ

ಮಲ ಹೊರುವವರ ಪುನರ್ವಸತಿ ಯಾಕೆ ಸಾಧ್ಯವಾಗುತ್ತಿಲ್ಲ?

ವಾರ್ತಾ ಭಾರತಿ : 25 Mar, 2021

ಛೂ ಬಾಣ: ಪಿ. ಮಹಮ್ಮದ್ ಕಾರ್ಟೂನ್

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮಲದ ಗುಂಡಿ ಶುಚಿಗೈವ ಸಂದರ್ಭದಲ್ಲಿ ಐವರು ಮೃತರಾದ ಘಟನೆ ನಡೆದ ಬಳಿಕ, ಮಲಹೊರುವ ಪದ್ಧತಿ ಮತ್ತೆ ಚರ್ಚೆಗೆ ಬಂದಿದೆ. ಮ್ಯಾನುವಲ್ ಸ್ಕಾವೆಂಜರ್‌ಗಳ ಸಮಸ್ಯೆಯ ಕುರಿತಂತೆ ರಾಜ್ಯಸಭೆಯಲ್ಲಿ ಜಯಾಬಚ್ಚನ್ ಪ್ರಶ್ನಿಸಿದ್ದಾರೆ. ‘‘ಮಲಹೊರುವಿಕೆಯನ್ನು ಇದುವರೆಗೆ ನಿಲ್ಲಿಸಲು ನಮಗೆ ಯಾಕೆ ಸಾಧ್ಯವಾಗಿಲ್ಲ? ಅವರಿಗೆ ಕನಿಷ್ಠ ಸಂರಕ್ಷಕ ಸಾಧನಗಳನ್ನಾದರೂ ಒದಗಿಸಲು ಸಾಧ್ಯವಾಗಿಲ್ಲ ಯಾಕೆ? ಇದು ಸ್ವಚ್ಛ ಭಾರತದ ಭಾಗವಲ್ಲವೇ?’’ ಎಂದು ಅವರು ಕೇಳಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆಯೂ ಒತ್ತಾಯಿಸಿದ್ದಾರೆ. ಮ್ಯಾನುವಲ್ ಸ್ಕಾವೆಂಜರ್‌ಗಳಾಗಿ ದುಡಿಯುತ್ತಿರುವವರ ವಿಮೋಚನೆ ಹಾಗೂ ಅವರಿಗೆ ಪುನರ್ವಸತಿಯನ್ನು ಒದಗಿಸುವುದು ಸರಕಾರದ ಪ್ರಮುಖ ಆದ್ಯತೆಯಾಗಿರಬೇಕಿತ್ತು. ಆದರೆ ವಾಸ್ತವವಾಗಿ ಈ ನಿಟ್ಟಿನಲ್ಲಿ ಸರಕಾರ ಅತ್ಯಂತ ವಿರಳವಾದ, ನಿಧಾನಗತಿಯ ಮತ್ತು ಅಸಮರ್ಪಕವಾದ ಪ್ರಗತಿಯನ್ನು ಸಾಧಿಸಿದೆ.ಮ್ಯಾನುವಲ್ ಸ್ಕಾವೆಂಜರ್‌ಗಳಾಗಿ ಕೆಲಸ ಮಾಡುವವರನ್ನು ಗುರುತಿಸುವುದರಲ್ಲಿ ಹಾಗೂ ಅವರ ವೃತ್ತಿಯ ಕುರಿತಂತೆ ಸಮರ್ಪಕವಾದ ವ್ಯಾಖ್ಯಾನ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಆದುದರಿಂದಲೇ ಇರುವ ಸರಕಾರಲ್ಲಿರುವ ಸೌಲಭ್ಯಗಳೂ ಅರ್ಹರಿಗೆ ತಲುಪುತ್ತಿಲ್ಲ.ಮಲಹೊರುವಿಕೆ ನಿಷೇಧ ಹಾಗೂ ಆ ಕೆಲಸದಲ್ಲಿ ತೊಡಗಿರುವವರ ಪುನರ್ವಸತಿಗೆ ಸಂಬಂಧಿಸಿದ ಎರಡು ಮಹತ್ವದ ಕಾನೂನುಗಳನ್ನು 1993 ಹಾಗೂ 2013ರಲ್ಲಿ ಜಾರಿಗೆ ತರಲಾಯಿತು. ಮೊದಲ ಕಾನೂನಿನಲ್ಲಿ ಮ್ಯಾನುವಲ್ ಸ್ಕಾವೆಂಜಿಂಗ್‌ನ ವ್ಯಾಖ್ಯಾನವು ಅತ್ಯಂತ ಸೀಮಿತ ರೂಪದಲ್ಲಿತ್ತು. ಆದರೆ ಎರಡನೇ ಕಾನೂನಿನಲ್ಲಿ ಆ ವ್ಯಾಖ್ಯಾನವನ್ನು ವಿಸ್ತರಿಸುವ ಪ್ರಯತ್ನಗಳು ನಡೆದವು. ಆದರೆ ಮ್ಯಾನುವಲ್ ಸ್ಕಾವೆಂಜಿಂಗ್‌ನ ಎಲ್ಲಾ ರೂಪಗಳನ್ನು ಗುರುತಿಸಲು ಸಾಧ್ಯವಾಗುವಷ್ಟು ವಿಸ್ತಾರವನ್ನು ಈ ಕಾನೂನು ಹೊಂದಿರಲಿಲ್ಲ.

‘ವಾಟರ್ ಏಡ್ ಇಂಡಿಯಾ’ ಹಾಗೂ ‘ರೂರಲ್ ಆ್ಯಂಡ್ ಆರ್ಬನ್ ನೀಡೀ’ ಸಂಘಟನೆಗಳ ನೆರವಿನೊಂದಿಗೆ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ ಇತ್ತೀಚೆಗೆ ಹಲವಾರು ದಲಿತ ಕಾರ್ಯಕರ್ತರನ್ನು ಒಳಪಡಿಸಿಕೊಂಡು ನಡೆಸಿದ ಅಧ್ಯಯನವು ವಾಸ್ತವತೆಯನ್ನು ಸವಿವರವಾಗಿ ಮುಂದಿಟ್ಟಿದೆ. ಹಲವಾರು ಸ್ಥಳಗಳಲ್ಲಿ ಮ್ಯಾನುವಲ್ ಸ್ಕಾವೆಂಜರ್‌ಗಳ ಸಮೀಕ್ಷೆಯ ಹೊಣೆಯನ್ನು ಆಯಾ ಸ್ಥಳೀಯಾಡಳಿತ ಅಧಿಕಾರಿಗಳ ಮರ್ಜಿಗೆ ಬಿಡಲಾಗಿದೆ. ಒಂದು ವೇಳೆ ಮ್ಯಾನುವಲ್ ಸ್ಕಾವೆಂಜಿಂಗ್‌ನಲ್ಲಿ ಯಾರೂ ತೊಡಗಿಲ್ಲವೆಂದು ಅವರು ಭಾವಿಸಿದಲ್ಲಿ, ಆ ಪ್ರದೇಶದಲ್ಲಿ ಸಮೀಕ್ಷೆಯ ಕಾರ್ಯವನ್ನು ರದ್ದುಪಡಿಸಲಾಗುತ್ತದೆ. ಬಹುತೇಕ ಅಧಿಕಾರಿಗಳು ‘ನಮ್ಮಲ್ಲಿ ಮಲ ಹೊರುವ ಪದ್ಧತಿ’ ಇಲ್ಲ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ.

2013ರ ಬಳಿಕ ಸರಕಾರವು 13 ರಾಜ್ಯಗಳಲ್ಲಿ ಒಟ್ಟು 12,742 ಮ್ಯಾನುವಲ್ ಸ್ಕಾವೆಂಜರ್‌ಗಳನ್ನು ಗುರುತಿಸಿದ್ದು, ಅವರಲ್ಲಿ ಶೇ.82ರಷ್ಟು ಮಂದಿ ಉತ್ತರಪ್ರದೇಶದಲ್ಲಿದ್ದಾರೆ. ಆದರೆ ಈ ಸಮೀಕ್ಷೆಯು ಮ್ಯಾನುವಲ್ ಸ್ಕಾವೆಂಜರ್‌ಗಳ ಜೀವನಪರಿಸ್ಥಿತಿ ಹಾಗೂ ಅವರ ಸಂಖ್ಯೆಯನ್ನು ಪೂರ್ಣಪ್ರಮಾಣದಲ್ಲಿ ಪ್ರಕಟ ಪಡಿಸಿಲ್ಲ ಎಂಬ ಆರೋಪವೂ ಇದೆ. 2011ರಲ್ಲಿ ನಡೆದ ಜನಗಣತಿಯಲ್ಲಿ ದೇಶಾದ್ಯಂತ 7,40078 ಮನೆಗಳಲ್ಲಿ ಈಗಲೂ ಮಲ ಹಾಗೂ ತ್ಯಾಜ್ಯವನ್ನು ಮ್ಯಾನುವಲ್ ಸ್ಕಾವೆಂಜರ್‌ಗಳಿಂದ ತೆಗೆಸಲಾಗುತ್ತಿದೆ. ಆದರೆ ಈ ಸಂಖ್ಯೆಯಲ್ಲಿ ಸೆಪ್ಟಿಕ್‌ಟ್ಯಾಂಕ್‌ಗಳು, ಸಾರ್ವಜನಿಕ ಚರಂಡಿಗಳು ಹಾಗೂ ರೈಲ್ವೆ ಟ್ರಾಕ್‌ಗಳಲ್ಲಿ ನಡೆಸಲಾಗುವ ಮ್ಯಾನುವಲ್ ಸ್ಕಾವೆಂಜಿಂಗ್‌ನ್ನು ಒಳಪಡಿಸಲಾಗಿಲ್ಲ. ದೇಶದ 1.82 ಲಕ್ಷಕ್ಕೂ ಅಧಿಕ ಕುಟುಂಬಗಳಲ್ಲಿ ಕನಿಷ್ಠ ಓರ್ವ ಸದಸ್ಯನು ಮ್ಯಾನುವಲ್ ಸ್ಕಾವೆಂಜರ್ ಆಗಿ ದುಡಿಯುತ್ತಿದ್ದಾನೆ. 2018-19ರಲ್ಲಿ ನಡೆಸಿದ ಅಧ್ಯಯನದಲ್ಲಿ ಕೇಂದ್ರ ಸರಕಾರವು 18 ರಾಜ್ಯಗಳ 170 ಜಿಲ್ಲೆಗಳಲ್ಲಿ ಮಲಹೊರುವ ಕೆಲಸ ಮಾಡುತ್ತಿರುವ 54,130 ವ್ಯಕ್ತಿಗಳನ್ನು ಗುರುತಿಸಿತ್ತು.

ಮ್ಯಾನುವಲ್ ಸ್ಕಾವೆಂಜರ್‌ಗಳ ಪುನರ್ವಸತಿಯ ಭಾಗವಾಗಿ ಪ್ರತಿ ಕಾರ್ಮಿಕನ ಕುಟುಂಬಕ್ಕೆ ಮೊದಲ ಕಂತು 40 ಸಾವಿರ ರೂ.ಗಳ ಅನುದಾನವನ್ನು ಒಳಗೊಂಡಿದೆ. ಇದನ್ನು ಬಿಡುಗಡೆಗೊಳಿಸುವ ಮೂಲಕ ಸರಕಾರವು ತಾನು ಮ್ಯಾನುವಲ್ ಸ್ಕಾವೆಂಜರ್‌ಗಳೆಂದು ಗುರುತಿಸಿರುವ ಬಹುತೇಕ ಎಲ್ಲಾ ವ್ಯಕ್ತಿಗಳಿಗೆ ಅನುದಾನವನ್ನು ಒದಗಿಸಿರುವುದಾಗಿ ಹೇಳಿ ಕೈತೊಳೆದುಕೊಂಡಿದೆ. ಆದರೆ ನಿಖರವಾಗಿ ಹೇಳುವುದಾದರೆ ಹೆಚ್ಚಿನ ಸಂಖ್ಯೆಯ ಮ್ಯಾನುವಲ್ ಸ್ಕಾವೆಂಜರ್‌ಗಳನ್ನು ಇನ್ನೂ ಗುರುತಿಸಲಾಗಿಲ್ಲ. ಹೀಗಾಗಿ ಅತ್ಯಂತ ಅರ್ಹ ವ್ಯಕ್ತಿಗೆ ಈ ಯೋಜನೆಯ ನೆರವು ತಲುಪುವುದಾದರೂ ಹೇಗೆ ಸಾಧ್ಯ?

ಮ್ಯಾನುವಲ್ ಸ್ಕಾವೆಂಜರ್‌ಗಳು ಉದ್ಯಮಶೀಲತಾ ಕೆಲಸವನ್ನು ಕೈಗೊಳ್ಳಲು ಹಾಗೂ ಸಲಕರಣೆಗಳನ್ನು ಖರೀದಿಸಲು ಬ್ಯಾಂಕ್ ಸಾಲ ಒದಗಿಸುವ ಮೂಲಕ ಅವರಿಗೆ ಪರ್ಯಾಯ ಜೀವನೋಪಾಯಗಳನ್ನು ಒದಗಿಸುವಲ್ಲಿ ಸರಕಾರ ವಿಫಲವಾಗಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಮ್ಯಾನುವಲ್ ಸ್ಕಾವೆಂಜರ್‌ಗಳ ಪುನರ್ವಸತಿಗಾಗಿ ಬ್ಯಾಂಕುಗಳು ಅತ್ಯಂತ ಕಡಿಮೆ ಪ್ರಮಾಣದ ಸಾಲವನ್ನು ಒದಗಿಸುತ್ತಿವೆ ಹಾಗೂ ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಅನುದಾನಗಳು ಸ್ಥಿರವಾಗಿ ಬಿಡುಗಡೆಯಾಗುತ್ತಿಲ್ಲ.

ಮ್ಯಾನುವಲ್ ಸ್ಕಾವೆಂಜರ್‌ಗಳ ಬಗ್ಗೆ ವ್ಯಾಪಕವಾದ ತಾರತಮ್ಯ ಹಾಗೂ ಅಸ್ಪಶ್ಯತೆಯು ನಗರ ಮತ್ತು ಪಟ್ಟಣಗಳಲ್ಲಿ ಕೂಡಾ ಇನ್ನೂ ಅಸ್ತಿತ್ವದಲ್ಲಿದೆ. ಈ ದೇಶದಲ್ಲಿ ಹೇಗೆ ವೃತ್ತಿಗಳು ಜಾತಿಯನ್ನು ನಿರ್ಮಿಸಿದೆಯೋ, ಹಾಗೆಯೇ ಮಲ ಹೊರುವ ಪದ್ಧತಿಯೂ ಒಂದು ಜಾತಿಯನ್ನು ಸೃಷ್ಟಿಸಿದೆ. ಭಾರತದ ಮಾನಸಿಕತೆ, ಆ ಜಾತಿ ಬೇರೆ ವೃತ್ತಿಯನ್ನು ನಿರ್ವಹಿಸುವುದನ್ನು ಒಪ್ಪುತ್ತಿಲ್ಲ. ಇತರ ದಲಿತ ಸಮುದಾಯಗಳು ಕೂಡಾ ಈ ಮ್ಯಾನುವಲ್ ಸ್ಕಾವೆಂಜರ್‌ಗಳ ಬಗ್ಗೆ ತಾರತಮ್ಯದ ಭಾವನೆಯನ್ನು ಹೊಂದಿವೆ. ಕೊಳಗೇರಿ ಹಾಗೂ ಕಾಲನಿಗಳಲ್ಲಿ ಒಟ್ಟಿಗೆ ವಾಸಿಸಿದರೂ ಕೂಡಾ ಇತರ ದಲಿತ ಸಮುದಾಯಗಳು ಮ್ಯಾನುವಲ್ ಸ್ಕಾವೆಂಜರ್‌ಗಳನ್ನು ಕೀಳಾಗಿ ಕಾಣುತ್ತಿವೆ. ಸಣ್ಣಪುಟ್ಟ ಪಟ್ಟಣಗಳಲ್ಲಿ ಜನರಿಗೆ ಪರಸ್ಪರರ ಪರಿಚಯವಿರುವುದರಿಂದ ಈ ಮೊದಲು ಮ್ಯಾನುವಲ್ ಸ್ಕಾವೆಂಜಿಂಗ್ ಕೆಲಸದಲ್ಲಿ ತೊಡಗಿದ್ದವರು ಸರಕಾರ ಅಥವಾ ಎನ್‌ಜಿಓ ನೆರವಿನೊಂದಿಗೆ ಅಂಗಡಿ ತೆರೆದರೂ ಕೂಡಾ ಗ್ರಾಹಕರು ಬಾರದಂತಹ ಪರಿಸ್ಥಿತಿಯಿದೆ.ಹಾಗೆಯೇ ಅವರನ್ನು ಮನೆಗೆಲಸಕ್ಕೂ ತೆಗೆದುಕೊಳ್ಳುತ್ತಿಲ್ಲ.

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಮ್ಯಾನುವಲ್ ಸ್ಕಾವೆಂಜಿಂಗ್ ಕೆಲಸದಿಂದ ಹೊರಬಂದ ದಲಿತನೊಬ್ಬ ಸಣ್ಣಪಟ್ಟಣವೊಂದರಲ್ಲಿ ಅಂಗಡಿಯೊಂದನ್ನು ತೆರೆದಿದ್ದ. ಆದರೆ ಆತನ ಜಾತಿ ಬಹಿರಂಗಗೊಂಡಿತು ಹಾಗೂ ಇತರ ವ್ಯಾಪಾರಿಗಳು ಆತನನ್ನು ವಿರೋಧಿಸಿದ್ದರಿಂದ ಅನಿವಾರ್ಯವಾಗಿ ಆತ ಅಂಗಡಿಮುಚ್ಚಿ, ಜಬಲ್‌ಪುರಕ್ಕೆ ಮರಳಿದ. ಇನ್ನೊಬ್ಬಾತ ಪ್ರತಿಷ್ಠಿತ ಪಾದರಕ್ಷೆಯ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ಜಾತಿ ಗುರುತು ಬಹಿರಂಗಗೊಳ್ಳುತ್ತಿದ್ದಂತೆಯೇ ಆತನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇದೇ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ತರಕಾರಿ ಅಂಗಡಿಯನ್ನು ತೆರೆದರೂ, ಗ್ರಾಹಕರು ಆಕೆಯ ತರಕಾರಿಗಳನ್ನು ಖರೀದಿಸಲು ನಿರಾಕರಿಸಿದರು. ಮ್ಯಾನುವಲ್ ಸ್ಕಾವೆಂಜರ್‌ಗಳ ಪುನರ್ವಸತಿಗೆ ಅತ್ಯಂತ ಪ್ರಬಲವಾದ ಹಾಗೂ ಸುಸ್ಥಿರವಾದ ಪ್ರಯತ್ನಗಳು ನಡೆಯಬೇಕಾಗಿದೆ. ಆದರೆ ಅಂತಹ ಬದ್ಧತೆಯು ಸರಕಾರದ ಕಡೆಯಿಂದ ಕಂಡುಬರುತ್ತಿಲ್ಲ. ನೈರ್ಮಲೀಕರಣ ಕೆಲಸಕ್ಕೆ ಸಂಬಂಧಿಸಿದಂತೆ ಸುರಕ್ಷಿತವಾದ ಹಾಗೂ ಆಧುನಿಕ ಸಲಕರಣಿಗಳ ಅಗತ್ಯವಿದೆ, ಆದರೆ ಸರಕಾರ ಅದಕ್ಕಾಗಿ ಹೂಡಿಕೆಗಳನ್ನು ಮಾಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಮ್ಯಾನುವಲ್ ಸ್ಕಾವೆಂಜರ್‌ಗಳ ಪುನರ್ವಸತಿಗೆ ಮತ್ತು ಸುರಕ್ಷಿತವಾದ ಶುಚೀಕರಣಕ್ಕೆ ತಂತ್ರಜ್ಞಾನಗಳ ಅಳವಡಿಕೆಗೆ ಭಾರೀ ದೊಡ್ಡ ಹೂಡಿಕೆಯ ಅಗತ್ಯವಿದೆ. ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸರಕಾರ ದೃಢ ಹೆಜ್ಜೆಗಳನ್ನು ಇಡಬೇಕಾಗಿದೆ. ಹಾಗಾದಲ್ಲಿ ಮಾತ್ರ ಮ್ಯಾನುವಲ್ ಸ್ಕಾವೆಂಜರ್‌ಗಳು ಹಾಗೂ ಅವರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ನಿಕಟ ಭವಿಷ್ಯದಲ್ಲಿ ಪರಿಹಾರವಾಗಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)