varthabharthi


ಸಂಪಾದಕೀಯ

ಆರೋಗ್ಯ ಸಚಿವರ ಅನಾರೋಗ್ಯ ಹೇಳಿಕೆ

ವಾರ್ತಾ ಭಾರತಿ : 26 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಎಲುಬಿಲ್ಲದ ಎರಡು ಅಂಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ಇದ್ದರೆ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ಒಂದು ನಾಲಗೆ, ಇನ್ನೊಂದು ಗುಪ್ತಾಂಗ’ ಎಂದು ಹಿರಿಯರು ಎಚ್ಚರಿಸಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರಕಾರದೊಳಗಿರುವ ನಾಯಕರೆಂದು ಕರೆಸಿಕೊಂಡವರು ಎರಡರ ಮೇಲೂ ನಿಯಂತ್ರಣವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗುತ್ತಿದೆ. ಅಶ್ಲೀಲ ಸಿಡಿಯ ಮೂಲಕ ಕಳೆದುಕೊಂಡ ಮತ್ತು ಮುಂದೆ ಕಳೆದುಕೊಳ್ಳಲಿರುವ ಮಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಸರಕಾರದೊಳಗಿರುವ ಮುಖಂಡರು ಹತಾಶೆಯ ಸಮರ್ಥನೆಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಅಶ್ಲೀಲ ಸಿಡಿಯಲ್ಲಿ ಜಾರಕಿಹೊಳಿ ಮಾತ್ರವಲ್ಲ, ಇಡೀ ಸರಕಾರವೇ ಗುರುತಿಸಿಕೊಂಡಿದೆ ಎನ್ನುವುದನ್ನು ಜನರಿಗೆ ಪರೋಕ್ಷವಾಗಿ ಸಾರಿ ಹೇಳುತ್ತಿದ್ದಾರೆ. ಸಿಡಿಯಲ್ಲಿ ಕಾಣಿಸಿಕೊಂಡಿರುವ ಜಾರಕಿಹೊಳಿ ಅವರು ‘ಸಿಡಿ ನಕಲಿ’ ಎಂದು ತೇಪೆ ಸಾರುತ್ತಿದ್ದರೆ, ಉಳಿದವರೆಲ್ಲ ಅವರ ಸಮರ್ಥನೆಗೆ ಇಳಿದಿದ್ದಾರೆ. ಇದರ ಬೆನ್ನಿಗೇ, ಕೆಲವು ಸಚಿವರು, ಶಾಸಕರು ನ್ಯಾಯಾಲಯದ ಮೆಟ್ಟಿಲೇರಿ, ಇನ್ನಷ್ಟು ಸಿಡಿಗಳು ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದಾರೆ. ಅಂದರೆ, ಇನ್ನಷ್ಟು ಸಿಡಿಗಳು ಇವೆ ಎನ್ನುವುದನ್ನು ಅವರೂ ಆ ಮೂಲಕ ಒಪ್ಪಿಕೊಂಡಿದ್ದಾರೆ. ಅವರು ಯಾರಿಂದಲೋ ಬ್ಲಾಕ್‌ಮೇಲ್‌ಗೆ ಒಳಗಾಗಿದ್ದಾರೆ ಎನ್ನುವುದೂ ಇದರಿಂದ ಗೊತ್ತಾಗಿ ಬಿಡುತ್ತದೆ. ಇವೆಲ್ಲದರ ಬೆನ್ನಿಗೆ, ‘ನಾವು ಮಾತ್ರ ಅಲ್ಲ, ಎಲ್ಲ 224 ಶಾಸಕ, ಶಾಸಕಿಯರೂ ಸಾಚಾಗಳಲ್ಲ, ಏಕಪತ್ನಿ ವ್ರತಸ್ಥರಲ್ಲ, ಜನ ಪ್ರತಿನಿಧಿಗಳ ವೈಯಕ್ತಿಕ ಜೀವನದ ತನಿಖೆಯಾಗಲಿ’ ಎಂಬ ಅನಾರೋಗ್ಯಕರ ಹೇಳಿಕೆಯೊಂದನ್ನು ಆರೋಗ್ಯ ಸಚಿವರಾಗಿರುವ ಸುಧಾಕರ್ ನೀಡಿದ್ದಾರೆ. ಆ ಮೂಲಕ ಸುಧಾಕರ್ ಇಡೀ ಸರಕಾರದ ಮಾನವನ್ನೇ ಕಳೆದಿದ್ದಾರೆ. ಇದರಿಂದಾಗಿ ಸುಧಾಕರ್ ತಾನು ಏಕ ಪತ್ನಿ ವ್ರತಸ್ಥನಲ್ಲ ಎನ್ನುವುದು ಸ್ಪಷ್ಟ ಪಡಿಸಿರುವುದು ಮಾತ್ರವಲ್ಲ, ಮುಖ್ಯಮಂತ್ರಿಯೂ ಸೇರಿದಂತೆ ಬಿಜೆಪಿಯೊಳಗಿರುವ ಎಲ್ಲ ಸಚಿವ, ಶಾಸಕರಿಗೂ ಅಕ್ರಮ ಸಂಬಂಧಗಳಿವೆ ಎಂದು ಆರೋಪಿಸಿದಂತಾಗಿದೆ.

‘ಅಶ್ಲೀಲ ಸಿಡಿ ಪ್ರಕರಣದ ತನಿಖೆ ಹೈಕೋರ್ಟ್ ಸಿಜೆ ಉಸ್ತುವಾರಿಯಲ್ಲಿ ನಡೆಸಬೇಕು. ರಮೇಶ್ ಜಾರಕಿಹೊಳಿ ವಿರುದ್ಧ ತನಿಖೆ ನಡೆಸಬೇಕು. ಸಂತ್ರಸ್ತ ಯುವತಿಗೆ ನ್ಯಾಯ ನೀಡಬೇಕು’ ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ‘ಸಿಡಿ ವಿಷಯದಲ್ಲಿ ಕಾಲಹರಣ ಮಾಡದೇ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಿ’ ಎಂದು ಕಾಗೇರಿ ಮನವಿ ಮಾಡಿದ್ದಾರೆ. ಆದರೆ ಇಲ್ಲೊಂದು ಸೂಕ್ಷ್ಮವಿದೆ. ಸಿಡಿ ಹೊರಬಿದ್ದಿರುವುದು ಸರಕಾರದ ಅತ್ಯುನ್ನತ ಖಾತೆ ನಿರ್ವಹಿಸುತ್ತಿದ್ದ ಸಚಿವರದ್ದು. ಸಚಿವರೊಬ್ಬರು ದುಷ್ಕರ್ಮಿಗಳಿಂದ ಹನಿಟ್ರಾಪ್‌ಗೆ ಒಳಗಾದರೆ ಅದರಿಂದ ನಾಡಿಗೆ ಅಪಾಯವಿದೆ. ಸರಕಾರವೊಂದು ಅಶ್ಲೀಲ ಸಿಡಿಗಳಿಂದ ಬ್ಲಾಕ್‌ಮೇಲ್‌ಗೆ ಒಳಗಾಗುತ್ತಿದ್ದರೆ ಅದು ಅಭಿವೃದ್ಧಿಯ ಮೇಲೂ ದುಷ್ಪರಿಣಾಮ ಉಂಟು ಮಾಡಬಹುದು. ದುಷ್ಕರ್ಮಿಗಳು, ಉಗ್ರಗಾಮಿಗಳು ಆ ಸಿಡಿಯನ್ನು ಬಳಸಿಕೊಂಡು ಸಚಿವರ ಮೂಲಕ ತಮ್ಮ ಹಿತಾಸಕ್ತಿಗಳನ್ನು ಸಾಧಿಸುವ ಅಪಾಯಗಳೂ ಇವೆ. ಆದುದರಿಂದ ಅಶ್ಲೀಲ ಸಿಡಿ ಪ್ರಕರಣ ಗಂಭೀರ ತನಿಖೆಗೆ ಒಳಗಾಗಬೇಕು ಎಂದು ಬಯಸುವುದರಲ್ಲಿ ಯಾವ ತಪ್ಪೂ ಇಲ್ಲ. ವಿಪರ್ಯಾಸವೆಂದರೆ ಸಿಡಿ ವಿಷಯದಲ್ಲಿ ಜಾರಕಿಹೊಳಿಯವರಿಗಿಂತ ಸಚಿವ ಸುಧಾಕರ್ ಅವರೇ ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತಿದ್ದಾರೆ. ಸ್ವತಃ ತಮ್ಮದೇ ಸಿಡಿ ಬಿಡುಗಡೆಯಾಗಿದೆ ಎಂಬ ರೀತಿಯಲ್ಲಿ ಭಯ ಪಡುತ್ತಿದ್ದಾರೆ. ಇನ್ನಷ್ಟು ಸಿಡಿಗಳು ಬಿಡುಗಡೆಯಾಗದಂತೆ ಸಚಿವರು, ಶಾಸಕರು ನ್ಯಾಯಾಲಯದ ಮೆಟ್ಟಿಲೇರುವುದರ ಹಿಂದೆ ಸುಧಾಕರ್ ಅವರ ಒತ್ತಡವಿತ್ತು ಎನ್ನುವುದನ್ನು ಬಿಜೆಪಿಯ ಶಾಸಕರೇ ಹೇಳಿಕೊಂಡಿದ್ದಾರೆ. ಈಗ ಅನಗತ್ಯವಾಗಿ, ‘ಎಲ್ಲ ಶಾಸಕರೂ ಅಕ್ರಮ ಸಂಬಂಧವನ್ನು ಹೊಂದಿದ್ದಾರೆ. ಆದುದರಿಂದ ಅಶ್ಲೀಲ ಸಿಡಿಯಲ್ಲಿರುವ ದೃಶ್ಯಗಳು, ಅಲ್ಲಿ ಎಸಗಿರುವ ಕೃತ್ಯಗಳು ಸಮರ್ಥನೀಯ’ ಎಂಬಂತಹ ಮಾತುಗಳನ್ನು ಆಡಿ, ಅಕ್ರಮ ಸಂಬಂಧಗಳಿಗೆ ಮಾನ್ಯತೆಯನ್ನು ನೀಡಲು ಹೊರಟಿದ್ದಾರೆ.

 ಈ ಆರೋಪ ಮೊತ್ತ ಮೊದಲು ಇರಿಯುವುದೇ ಬಿಜೆಪಿಯ ಶಾಸಕರನ್ನು. ವಿರೋಧ ಪಕ್ಷಗಳು ಈಗಾಗಲೇ ಸುಧಾಕರ್ ಹೇಳಿಕೆಯನ್ನು ಖಂಡಿಸಿವೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಸುಧಾಕರ್ ಆಗ್ರಹದಂತೆ ತನಿಖೆಯಾಗಲಿ’ ಎಂದೂ ಹೇಳಿದ್ದಾರೆ. ಕಾಂಗ್ರೆಸ್ ಶಾಸಕಿಯರು ಸುಧಾಕರ್ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ ಬಿಜೆಪಿಯ ಶಾಸಕರು ಮಾತ್ರ ಈ ಆರೋಪವನ್ನು ನುಂಗಲೂ ಆಗದೆ, ಉಗುಳಲೂ ಆಗದೆ ಧರ್ಮ ಸಂಕಟದಲ್ಲಿದ್ದಾರೆ. ಈ ಹೇಳಿಕೆಯ ಕುರಿತು ವೌನವಾಗಿದ್ದರೆ ಆರೋಪವನ್ನು ಒಪ್ಪಿಕೊಂಡಂತಾಗುತ್ತದೆ. ತಮ್ಮದೇ ಪಕ್ಷದ ನಾಯಕನ ಹೇಳಿಕೆಯಾದುದರಿಂದ ಖಂಡಿಸುವಂತೆಯೂ ಇಲ್ಲ. ಸುಧಾಕರ್ ಇಂತಹದೊಂದು ಹೇಳಿಕೆ ನೀಡುವ ಮೂಲಕ ಸದನದ ಗೌರವವನ್ನು ಗಾಳಿಗೆ ತೂರಿದ್ದಾರೆ. ಮಹಿಳೆ, ಸಂಸ್ಕೃತಿ ರಕ್ಷಣೆ, ಲವ್ ಜಿಹಾದ್’ ಇತ್ಯಾದಿಗಳ ಕುರಿತಂತೆ ಭಾಷಣ ಬಿಗಿಯುವ ಪಕ್ಷದಿಂದ ಬಂದಿರುವ ಸುಧಾಕರ್, ಎಲ್ಲ ಮಹಿಳಾ ಶಾಸಕರ ಮೇಲೆ ವ್ಯಭಿಚಾರದ ಆರೋಪ ಹೊರಿಸಿರುವುದು, ಜಾರಕಿಹೊಳಿ ಸಿಡಿಯಲ್ಲಿ ಕಾಣಿಸಿಕೊಂಡ ದೃಶ್ಯಗಳಷ್ಟೇ ಅಶ್ಲೀಲವಾದುದು. ಸುಧಾಕರ್ ಈ ಮಾತುಗಳನ್ನು ಆಡುವ ಮೂಲಕ, ಸಿಡಿಯಲ್ಲಿರುವ ದೃಶ್ಯಗಳು ಸಾಮಾನ್ಯೀಕರಿಸುವುದಕ್ಕೆ ಮುಂದಾಗಿದ್ದಾರೆ. ರಾಜಕಾರಣಿಗಳಿಗೆ ಅಕ್ರಮ ಸಂಬಂಧಗಳು ಇರುವುದು ಸುಳ್ಳೇನೂ ಅಲ್ಲ. ಆದರೆ ಆ ಸಂಬಂಧಗಳು ಖಾಸಗಿ ಕೋಣೆಯೊಳಗಷ್ಟೇ ಇರದೆ, ಸಿಡಿಗಳ ಮೂಲಕ ಬೀದಿ ಬದಿಯಲ್ಲಿ ಬಿಕರಿಯಾಗುತ್ತಿದ್ದರೆ ಸರಕಾರದ ಘನತೆ ಏನಾಗಬೇಕು? ಇಂದು ಅಕ್ರಮ ಸಂಬಂಧದ ಕುರಿತಂತೆ ಮಾಧ್ಯಮಗಳು ಮಾತನಾಡುತ್ತಿಲ್ಲ. ಸಚಿವರ ಅಶ್ಲೀಲ ಕೃತ್ಯಗಳು ಚಿತ್ರೀಕರಣಗೊಂಡು ದುಷ್ಕರ್ಮಿಗಳ ಕೈಯಲ್ಲಿವೆ. ಅವರು ಸರಕಾರವನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎನ್ನುವ ಆತಂಕದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಿಡಿ ಬಿಡುಗಡೆಯಾದ ಕಾರಣದಿಂದ ಜಾರಕಿಹೊಳಿ ರಾಜೀನಾಮೆ ನೀಡುವಂತಾಯಿತು. ಒಂದು ವೇಳೆ ಅದನ್ನು ಬಿಡುಗಡೆ ಮಾಡದೆ, ಜಾರಕಿ ಹೊಳಿಯನ್ನು ಬ್ಲಾಕ್‌ಮೇಲ್ ಮಾಡುತ್ತಾ ತಮ್ಮ ಕಾರ್ಯಗಳನ್ನು ಸಾಧಿಸುತ್ತಾ ಇದ್ದಿದ್ದರೆ?. ಬಿಡುಗಡೆಯಾದ ಸಿಡಿಗಳಿಗಿಂತ ಬಿಡುಗಡೆಯಾಗದ ಸಿಡಿಗಳೇ ಹೆಚ್ಚು ಅಪಾಯಕಾರಿ. ಆದುದರಿಂದಲೇ, ಇರುವ ಎಲ್ಲ ಸಿಡಿಗಳೂ ಬಿಡುಗಡೆಯಾಗಬೇಕಾಗಿದೆ. ಅಶ್ಲೀಲ ಸಿಡಿಗಳನ್ನು ಸುಧಾಕರ್ ಅವರು ಸಮರ್ಥಿಸುವ ರೀತಿ ನೋಡಿದರೆ, ಅವರ ಅಶ್ಲೀಲ ಸಿಡಿಯೂ ದುಷ್ಕರ್ಮಿಗಳ ಬಳಿ ಇದೆಯೇ ಎಂದು ಅನುಮಾನ ಪಡುವಂತಾಗಿದೆ. ಅವರೂ ಹನಿಟ್ರಾಪ್‌ಗೆ ಒಳಗಾಗಿ, ಬ್ಲಾಕ್‌ಮೇಲ್‌ಗೆ ಒಳಗಾಗುತ್ತಿದ್ದಾರೆಯೆ?. ಆದುದರಿಂದ ಅಕ್ರಮ ಸಂಬಂಧಗಳನ್ನು ಎಲ್ಲರ ತಲೆಗೂ ಕಟ್ಟುತ್ತಿದ್ದಾರೆಯೇ? ಒಂದು ವೇಳೆ ಹನಿಟ್ರಾಪ್‌ಗೆ ಒಳಗಾಗಿದ್ದೇನೆ ಎಂಬ ಆತಂಕ ಸುಧಾಕರ್ ಅವರಿಗಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು. ಸುಧಾಕರ್ ಮಾತ್ರವಲ್ಲ, ಹನಿಟ್ರಾಪ್‌ಗೆ ಒಳಗಾಗಿದ್ದೇವೆ ಎಂದು ಭಯ ಪಡುತ್ತಿರುವ ಎಲ್ಲ ಸಚಿವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಾಡಿನ ಹಿತಾಸಕ್ತಿಯನ್ನು ಕಾಪಾಡಬೇಕು. ಇಲ್ಲವಾದರೆ, ಈ ಸಚಿವರನ್ನು ಬಳಸಿಕೊಂಡು ದುಷ್ಕರ್ಮಿಗಳು ನಾಡಿಗೆ ಭಾರೀ ಹಾನಿ ಎಸಗುವ ಅಪಾಯಗಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)