varthabharthi


ಸಂಪಾದಕೀಯ

ಪ್ರಜಾಸತ್ತೆಗೆ ಸವಾಲು

ವಾರ್ತಾ ಭಾರತಿ : 27 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘ಅಂತಹ ಸರಕಾರವನ್ನೇ ಬೀಳಿಸಿದ್ದೇನೆ, ಇದೇನು ಮಹಾ’ ಎಂಬ ಮಾತನ್ನು ಆಡಿರುವ ಕಾರಣಕ್ಕಾಗಿಯಾದರೂ ರಮೇಶ್ ಜಾರಕಿಹೊಳಿಯವರ ಬಂಧನವಾಗಬೇಕಾಗಿದೆ. ಪ್ರಜಾಸತ್ತಾತ್ಮಕವಾದ ಒಂದು ಸರಕಾರವನ್ನು ಅನೈತಿಕ ದಾರಿಯಲ್ಲಿ ಉರುಳಿಸುವುದು ಅಪರಾಧವಲ್ಲವೇ, ಅದನ್ನು ಬಹಿರಂಗವಾಗಿ ಕೊಚ್ಚಿಕೊಳ್ಳುವುದು ಪ್ರಜಾಸತ್ತೆಗೆ ಹಾಕುವ ಸವಾಲಲ್ಲವೇ ಅಶ್ಲೀಲ ಸಿಡಿಯ ಜೊತೆಗೆ ಈ ಪ್ರಶ್ನೆಗಳು ಮುನ್ನೆಲೆಗೆ ಬರಬೇಕಾಗಿವೆ. ‘10 ಸಿಡಿ ಬಿಡುಗಡೆ ಮಾಡಿದರೂ ನಾನು ಹೆದರುವುದಿಲ್ಲ’ ಎಂದು ಜಾರಕಿಹೊಳಿ ಗುರುವಾರ ಹೇಳಿಕೆಯನ್ನು ನೀಡಿದ್ದರು. ಆ ಸಿಡಿಯಲ್ಲಿರುವ ಅತ್ಯಂತ ಅಶ್ಲೀಲ ದೃಶ್ಯಗಳನ್ನು ಇಡೀ ದೇಶ ನೋಡಿದೆ ಎಂಬ ಅರಿವಿದ್ದೂ, ಸಾರ್ವಜನಿಕರ ಮುಂದೆ, ಮಾಧ್ಯಮಗಳ ಮುಂದೆ ಯಾವುದೋ ಸಾಧನೆಗೈದವರಂತೆ ಯಾವುದೇ ಲಜ್ಜೆಯಿಲ್ಲದೆ ನಿಂತುಕೊಳ್ಳುತ್ತಾರೆ ಎಂದರೆ, ಜಾರಕಿಹೊಳಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎನ್ನುವುದನ್ನು ಹೇಳುತ್ತದೆ. ಲಜ್ಜೆಯನ್ನು ಕಳೆದುಕೊಂಡ ಮನುಷ್ಯನನ್ನು ಯಾವ ಜೈಲೂ ಶಿಕ್ಷಿಸಲಾರದು ಎನ್ನುವುದಕ್ಕೆ ಜಾರಕಿಹೊಳಿ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಈಗಾಗಲೇ ನಾಡಿನ ಮುಂದೆ ನಗ್ನರಾಗಿರುವ ರಮೇಶ್ ಅವರ ಇನ್ನಷ್ಟು ಸಿಡಿಗಳಲ್ಲಿ ನೋಡುವುದಕ್ಕಾದರೂ ಏನಿದೆ? ಆದುದರಿಂದಲೇ 10 ಸಿಡಿಗಳು ಬಿಡುಗಡೆಯಾದರೂ ನಾನು ಹೆದರುವುದಿಲ್ಲ ಎಂದು ಹೇಳಿರಬೇಕು. ಆದರೆ ‘ಅಂತಹ ಸರಕಾರವನ್ನೇ ಉರುಳಿಸಿದ್ದೇನೆ’ ಎನ್ನುವ ಹೇಳಿಕೆಯ ಹಿಂದೆ ದುರಂಹಕಾರವಷ್ಟೇ ಅಡಗಿಲ್ಲ, ಈ ಮೂಲಕ ಅವರು ಪ್ರಜಾಸತ್ತೆಗೆ ಸವಾಲು ಹಾಕಿದ್ದಾರೆ.

ಅನೈತಿಕತೆಯ ಮೇಲೆ ನಿಂತಿರುವ ಸರಕಾರವೊಂದರಿಂದ ಇದಕ್ಕಿಂತ ಬೇರೆಯಾದುದನ್ನು ನಾವು ನಿರೀಕ್ಷಿಸುವಂತಿಲ್ಲ. ಇನ್ನೊಂದು ಪಕ್ಷದಿಂದ ಆರಿಸಿ ಬಂದ ಶಾಸಕರನ್ನು ಖರೀದಿಸಿ ಸರಕಾರವನ್ನು ಉರುಳಿಸಲಾಯಿತು. ಸುಪ್ರೀಂಕೋರ್ಟ್ ಅನರ್ಹ ಎಂದ ಈ ಶಾಸಕರನ್ನೇ ಮತ್ತೆ ಬಿಜೆಪಿಯಿಂದ ಚುನಾವಣೆಗೆ ನಿಲ್ಲಿಸಿ ಹಣ ಸುರಿದು ಅವರನ್ನು ಗೆಲ್ಲಿಸಲಾಯಿತು. ಒಂದು ರೀತಿಯಲ್ಲಿ, ಇಂತಹದೊಂದು ಅನೈತಿಕ ಸರಕಾರವನ್ನು ಸಮರ್ಥಿಸಿದ, ಅನರ್ಹ ಶಾಸಕರನ್ನು ಚುನಾವಣೆಯಲ್ಲಿ ಗೆಲ್ಲಿಸಿದ ಜನರೂ ಈ ಸಿಡಿಯಲ್ಲಿ ಬೆತ್ತಲಾಗಿದ್ದಾರೆ. ಅಮಾನ್ಯ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ನ್ಯಾಯಾಲಯಕ್ಕೂ ಸಿಡಿಯಲ್ಲಿ ಪಾಲಿದೆ. ಸಂವಿಧಾನವನ್ನು ಗಾಳಿಗೆ ತೂರಿ, ನೈತಿಕತೆಯನ್ನು ಕಳೆದುಕೊಂಡು ಸರಕಾರ ರಚಿಸಿದರೆ, ಅದನ್ನು ‘ಚಾಣಕ್ಯ ತಂತ್ರ’ ಬಣ್ಣಿಸುವ ಮಾಧ್ಯಮಗಳೂ ಈ ಸಿಡಿಯೊಳಗೆ ನಗ್ನವಾಗಿವೆ. ಇದೀಗ, ಸಿಡಿಯನ್ನು ತೋರಿಸಿ ಶಾಸಕರನ್ನು ಬ್ಲಾಕ್‌ಮೇಲ್ ಮಾಡಿ ಈ ಸರಕಾರ ವನ್ನು ರಚಿಸಲಾಗಿದೆಯೇ? ಎನ್ನುವುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಬರೇ ಜಾರಕಿಹೊಳಿಯ ಸಿಡಿಯಷ್ಟೇ ಅಲ್ಲ, ನೂತನ ಸರಕಾರ ರಚನೆಯಾಗಿರುವ ರೀತಿಯೇ ತನಿಖೆಗೆ ಒಳಗಾಗಬೇಕಾಗಿದೆ. ಇನ್ನಷ್ಟು ಸಿಡಿಗಳು ಹೊರ ಬಿದ್ದರೆ, ನೂತನ ಸರಕಾರದ ರಚನೆಗಾಗಿ ಅನುಸರಿಸಿದ ಅನೈತಿಕ ಮಾರ್ಗಗಳು ಬಹಿರಂಗವಾಗುವ ಸಾಧ್ಯತೆಗಳಿವೆ.

ಜಾರಕಿಹೊಳಿ, ಸರಕಾರವನ್ನು ಉರುಳಿಸಲು ನಡೆಸಿದ ಅನೈತಿಕ ಮಾರ್ಗಕ್ಕೆ ಹೋಲಿಸಿದರೆ, ರಮೇಶ್ ಜಾರಕಿಹೊಳಿಯನ್ನು ಹನಿಟ್ರಾಪ್ ಮಾಡಿದ ಸಂತ್ರಸ್ತೆಯ ಕೃತ್ಯ ಏನೇನೂ ಅಲ್ಲ. ಜಾರಕಿ ಹೊಳಿಯಂತೆ ತನ್ನ ಕೃತ್ಯವನ್ನು ಆಕೆ ಸಮರ್ಥಿಸಿಕೊಂಡಿಲ್ಲ. ಹೆಮ್ಮೆಯಿಂದ ಹೇಳಿಕೊಂಡಿಲ್ಲ. ಸಂತ್ರಸ್ತೆ ಅಧಿಕೃತವಾಗಿ ದೂರು ನೀಡುವುದರೊಂದಿಗೆ ಜಾರಕಿಹೊಳಿ ಪ್ರಕರಣ ತಿರುವನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ತನ್ನ ಪಾಲಕರಿಗೆ ಮತ್ತು ತನಗೆ ರಕ್ಷಣೆಯನ್ನು ನೀಡಿದರೆ ತಾನು ಸಿಟ್ ಮುಂದೆ ಹಾಜರಾಗುವುದಕ್ಕೂ ಸಿದ್ಧ ಎಂದಿದ್ದಾಳೆ. ಸಂತ್ರಸ್ತೆಯ ಆತಂಕದಲ್ಲೂ ಸತ್ಯವಿದೆ. ಆಕೆ ಬೇರೆ ಬೇರೆ ರೀತಿಯಲ್ಲಿ ಸಮಾಜದಿಂದ ದಾಳಿಯನ್ನು ಎದುರಿಸಬೇಕಾಗಿದೆ. ಒಂದು ಸರಕಾರವನ್ನೇ ಉರುಳಿಸಿ, ಇನ್ನೊಂದು ಸರಕಾರದ ರಚನೆಗೆ ಕಾರಣಕರ್ತನೆಂದು ಸ್ವಯಂ ಹೇಳಿಕೊಳ್ಳುವ ನಾಯಕನೊಬ್ಬನ ರಾಜಕೀಯ ಬದುಕು ಸಂತ್ರಸ್ತೆಯಿಂದಾಗಿ ಬೀದಿಗೆ ಬಿದ್ದಿದೆ. ಅಷ್ಟೇ ಅಲ್ಲ, ಇಡೀ ಸರಕಾರವೇ ಅಭದ್ರತೆಯನ್ನು ಅನುಭವಿಸುತ್ತಿದೆ. ನೂರಾರು ಕೋಟಿ ರೂಪಾಯಿ ಚೆಲ್ಲಿ ರಚನೆಯಾಗಿರುವ ಸರಕಾರವೊಂದು ಓರ್ವ ಯುವತಿಯಿಂದಾಗಿ ಅಭದ್ರತೆಯನ್ನು ಅನುಭವಿಸಿದರೆ, ಆ ಯುವತಿಯನ್ನು ರಾಜಕಾರಣಿಗಳು ಸುಮ್ಮನೆ ಬಿಟ್ಟಾರೆ? ಇದೇ ಸಂದರ್ಭದಲ್ಲಿ ರಾಜಕಾರಣಿಗಳ ಅನುಯಾಯಿಗಳೂ ಆಕೆಯ ಮೇಲೆ, ಆಕೆಯ ಕುಟುಂಬದ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ.

ಪ್ರಕರಣದಲ್ಲಿ ಯುವತಿ ಮುಖ್ಯ ಸಾಕ್ಷಿಯಾಗಿರುವುದರಿಂದ ಆಕೆಯ ಸಾವು ಹಲವರಿಗೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಕೆಗೆ ರಕ್ಷಣೆ ನೀಡುವಲ್ಲಿಂದಲೇ ತನಿಖೆ ಆರಂಭವಾಗಬೇಕು. ಸರಕಾರ ಆಕೆಯ ಪಾಲಕರಿಗೂ, ಆಕೆಗೂ ಪೂರ್ಣ ಪ್ರಮಾಣದ ರಕ್ಷಣೆ ನೀಡುವ ಭರವಸೆಯನ್ನು ನೀಡಬೇಕು. ಇದೇ ಸಂದರ್ಭದಲ್ಲಿ ಸಿಟ್ ತನಿಖೆಯ ಕುರಿತಂತೆಯೂ ಆಕೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾಳೆ. ಆರೋಪಿ ಸ್ಥಾನದಲ್ಲಿ ಇಡೀ ಸರಕಾರ ನಿಂತಿರುವಾಗ, ಅದೇ ಸರಕಾರದ ಮೂಗಿನ ನೇರಕ್ಕಿರುವ ಸಂಸ್ಥೆಯೊಂದು ತನಿಖೆ ನಡೆಸಿದರೆ, ಆಕೆಗೆ ನ್ಯಾಯ ಸಿಕ್ಕೀತೆ? ಅನುಮಾನಕ್ಕೆ ಕಾರಣವಾದ ಹಲವು ಅಂಶಗಳು ಸಂತ್ರಸ್ತೆ ಸಾರ್ವಜನಿಕರ ಮುಂದಿಟ್ಟಿದ್ದಾಳೆ. ಈ ನಿಟ್ಟಿನಲ್ಲಿ, ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆದಾಗಷ್ಟೇ ಸಂತ್ರಸ್ತೆಗೆ ನ್ಯಾಯ ದೊರಕೀತು. ತನಿಖೆ ಕೇವಲ ಜಾರಕಿಹೊಳಿಯ ಬಿಡುಗಡೆಯಾದ ಸಿಡಿಗಷ್ಟೇ ಸೀಮಿತವಾಗಬಾರದು. ಹಿಂದಿನ ಸರಕಾರ ಉರುಳುವಲ್ಲಿ ಸಿಡಿಯ ಪಾತ್ರವೆಷ್ಟು, ಈಗಾಗಲೇ ಯಾರೆಲ್ಲ ಸಿಡಿಯಿಂದಾಗಿ ಬ್ಲಾಕ್‌ಮೇಲ್‌ಗೆ ಒಳಗಾಗುತ್ತಿದ್ದಾರೆ, ಈ ಸಿಡಿಯ ಮೂಲಕ ಸರಕಾರವನ್ನೇ ನಿಯಂತ್ರಿಸುತ್ತಿದ್ದಾರೆಯೇ ಮೊದಲಾದ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಅಗತ್ಯವಿದೆ.

ಈಗಾಗಲೇ ಸಂತ್ರಸ್ತೆ ದೂರು ನೀಡಿರುವುದರಿಂದ, ಯಾವುದೇ ಸಾಕ್ಷಗಳನ್ನು ನಾಶ ಪಡಿಸದಂತೆ ತಡೆಯುವುದಕ್ಕಾಗಿ ಜಾರಕಿಹೊಳಿಯವರನ್ನು ಬಂಧಿಸುವುದು ಅತ್ಯಗತ್ಯವಾಗಿದೆ. ಆಗ ತನಿಖೆಯ ಕುರಿತಂತೆ ಸಂತ್ರಸ್ತೆಗೂ ಆತ್ಮವಿಶ್ವಾಸಬರಬಹುದು. ಆರಂಭದಲ್ಲೇ ಜಾರಕಿಹೊಳಿಯವರು ಸಿಡಿ ನನ್ನದಲ್ಲ ಎಂದಿದ್ದಾರೆ. ನಾನು ಅಂತಹ ಚಟುವಟಿಕೆಯಲ್ಲಿ ಪಾಲ್ಗೊಂಡೇ ಇಲ್ಲ ಎಂದೂ ತಿಳಿಸಿದ್ದಾರೆ. ಸಂತ್ರಸ್ತೆ ದೂರಿನಲ್ಲಿ, ಕೆಲಸ ಕೊಡಿಸುವುದಾಗಿ ರಮೇಶ್ ಅವರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾಳೆ. ಯಾರ ಮಾತು ನಿಜ ಎನ್ನುವುದು ಸ್ಪಷ್ಟವಾಗಬೇಕಾದರೆ ಸಿಡಿ ಅಸಲಿಯೋ, ನಕಲಿಯೋ ಎನ್ನುವುದು ಸಾಬೀತಾಗಬೇಕು. ಅದನ್ನು ಸಾಬೀತು ಮಾಡುವುದು ತನಿಖಾಧಿಕಾರಿಗಳಿಗೆ ಕಷ್ಟವೇನೂ ಇಲ್ಲ. ಒಂದು ವೇಳೆ ಅಸಲಿಯೆಂದು ಸಾಬೀತಾದರೆ, ‘ಸಿಡಿ ನನ್ನದಲ್ಲ’ ಎಂದ ಜಾರಕಿಹೊಳಿ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಾರೆ. ಸಂತ್ರಸ್ತೆಯ ಹೇಳಿಕೆಯನ್ನು ಅವರೇ ಸಮರ್ಥಿಸಿದಂತಾಗುತ್ತದೆ. ಸಚಿವರಾಗಿದ್ದುಕೊಂಡು, ಕೆಲಸ ಕೇಳಿ ಬಂದ ಹೆಣ್ಣನ್ನು ಲೈಂಗಿಕವಾಗಿ ಬಳಸಿಕೊಂಡವರು ಜಾರಕಿಹೊಳಿ ಒಬ್ಬರೇ ಇರಲಾರರು. ನೀರು ಮೂಗಿಗೆ ಬಂದಾಗ, ಜಾರಕಿಹೊಳಿ ಇನ್ನುಳಿದವರ ಹೆಸರನ್ನೂ ಬಾಯಿ ಬಿಡಬಹುದು. ಆದುದರಿಂದ, ನಾಡಿನ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಪ್ರಕರಣ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ತಂಡದಿಂದ ನಡೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)