varthabharthi


ಸಂಪಾದಕೀಯ

ಮೋದಿಯ ಹೆಸರಲ್ಲಿ ಆಯ್ಕೆಯಾದವರಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ?

ವಾರ್ತಾ ಭಾರತಿ : 29 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಸರಕಾರವಿದ್ದರೆ ರಾಜ್ಯಗಳು ಅಭಿವೃದ್ಧಿಯಾಗುತ್ತವೆ ಎಂಬ ನಂಬಿಕೆ ಒಂದು ಕಾಲದಲ್ಲಿತ್ತು. ರಾಜ್ಯದಲ್ಲಿ ಬೇರೆಯೇ ಪಕ್ಷವಿದ್ದಾಗ, ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತದೆ. ರಾಜ್ಯ-ಕೇಂದ್ರದಲ್ಲಿ ಒಂದೇ ಸರಕಾರವಿದ್ದಾಗ ಸಮನ್ವಯದ ಕಾರಣದಿಂದ ರಾಜ್ಯ ಅಭಿವೃದ್ಧಿಯೆಡೆಗೆ ಸಾಗುತ್ತದೆ , ಸಂಸದರಿಗೂ ಕೇಂದ್ರದ ಮೇಲೆ ಒತ್ತಡ ಹೇರಿ, ರಾಜ್ಯಕ್ಕೆ ಅನುದಾನಗಳನ್ನು ತರಲು ಸುಲಭವಾಗುತ್ತದೆ ಎಂದು ಜನರು ಭಾವಿಸಿದ್ದರು. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮಾತ್ರವಲ್ಲ, ರಾಜ್ಯ ಅತಿ ಹೆಚ್ಚು ಬಿಜೆಪಿ ಸಂಸದರನ್ನು ಆರಿಸಿ ದಿಲ್ಲಿಗೆ ಕಳುಹಿಸಿಕೊಟ್ಟಿದೆ. ಆದರೆ ಇಂದು ಕೇಂದ್ರದಿಂದ ಅತಿ ಹೆಚ್ಚು ಅನ್ಯಾಯಕ್ಕೊಳಗಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಗುರುತಿಸಿಕೊಂಡಿದೆ. ಕೇಂದ್ರದ ನೀತಿಗಳಿಂದಾಗಿ ಎಲ್ಲ ರಾಜ್ಯಗಳು ಹಂತ ಹಂತವಾಗಿ ತಮ್ಮ ಅಧಿಕಾರಗಳನ್ನು ಕಳೆದುಕೊಳ್ಳುತ್ತಿವೆ ಮಾತ್ರವಲ್ಲ, ತಮ್ಮದೇ ಹಣವನ್ನು ಕೇಂದ್ರದಿಂದ ಅಧಿಕಾರಯುತವಾಗಿ ಕೇಳಲು ಹಿಂಜರಿಯುತ್ತಿವೆ. ಜಿಎಸ್‌ಟಿಯ ಬಗ್ಗೆ ಡೋಲು ಬಾರಿಸಿ, ಇನ್ನು ವ್ಯಾಪಾರ ವಹಿವಾಟು ಸುಲಲಿತವಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿತ್ತು. ಆದರೆ ಜಿಎಸ್‌ಟಿ ವ್ಯಾಪಾರವನ್ನು ಇನ್ನಷ್ಟು ಗೊಂದಲ ಮಯವಾಗಿಸಿತು ಮಾತ್ರವಲ್ಲ, ರಾಜ್ಯಗಳ ತೆರಿಗೆ ಪಾಲನ್ನು ತನ್ನಲ್ಲೇ ಇಟ್ಟುಕೊಂಡು, ರಾಜ್ಯ ಸರಕಾರಗಳನ್ನು ವಂಚಿಸಿದೆ.

2020-21ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಕೇಂದ್ರ ಸರಕಾರದಿಂದ 8,538 ಕೋಟಿ ರೂ. ತೆರಿಗೆ ಪಾಲು ಮತ್ತು 1,310 ಕೋಟಿ ರೂ. ಅನುದಾನ ಇನ್ನೂ ಬಂದಿಲ್ಲ. ಸಿಗಬೇಕಾದ ವಿಶೇಷ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಹಣಕಾಸು ಸಚಿವೆ ಎಲ್ಲವನ್ನೂ ದೇವರ ತಲೆಗೆ ಕಟ್ಟಿ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬನೇ ಒಬ್ಬ ಸಂಸದ ಕರ್ನಾಟಕದ ಪಾಲನ್ನು ಕೊಡಿ ಎಂದು ಕೇಂದ್ರವನ್ನು ಕೇಳುವ ಧೈರ್ಯವನ್ನು ಪ್ರದರ್ಶಿಸಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೂ ತಮ್ಮ ಸಿಟ್ಟನ್ನು ಉಗುಳಲೂ, ನುಂಗಲೂ ಆಗದ ಸ್ಥಿತಿಯಲ್ಲಿದ್ದಾರೆ. ರಾಜ್ಯದ ಜನರು ಕಟ್ಟಿದ ತೆರಿಗೆಯ ಪಾಲನ್ನೇ ಕೊಡಲು ಸಿದ್ಧವಿಲ್ಲ ಎಂದ ಮೇಲೆ, ಇನ್ನುಳಿದ ಅನುದಾನಗಳ ಗತಿಯೇನಾಗಬೇಕು? ಇದೇ ಸಂದರ್ಭದಲ್ಲಿ, ಬಿಜೆಪಿಗೆ ಪೂರಕವಾಗಿರುವ ಪಕ್ಷಗಳಿರುವ ಇತರ ರಾಜ್ಯಗಳು ತಮ್ಮ ಪಾಲಿನ ಹಣವನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಕಿತ್ತುಕೊಳ್ಳುತ್ತಿವೆ. ಬಿಹಾರ, ತಮಿಳುನಾಡು, ಆಂಧ್ರದಂತಹ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಬಲಾಢ್ಯವಾಗಿರುವ ಕಾರಣ, ಬಿಜೆಪಿಗೆ ಅವುಗಳ ಸಹಾಯ ಅಗತ್ಯವಿರುವ ಕಾರಣದಿಂದ ಆ ರಾಜ್ಯಗಳ ಬೇಡಿಕೆ ಸುಲಭದಲ್ಲಿ ಈಡೇರುತ್ತಿವೆೆ.

ಈ ಹಿಂದೆ ನೆರೆ ಪರಿಹಾರದ ಸಂದರ್ಭದಲ್ಲಿ ಕೇಂದ್ರ ಸರಕಾರ ಕರ್ನಾಟಕದತ್ತ ತಿರುಗಿಯೂ ನೋಡದೇ ಇದ್ದಾಗ, ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿ ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೇಂದ್ರದ ಸರ್ವಾಧಿಕಾರದ ವಿರುದ್ಧ ರಾಜ್ಯ ಬಿಜೆಪಿಯ ಮುಖಂಡರು, ಸಚಿವರೂ ಆಗಿರುವ ಸಚಿವ ಮಾಧುಸ್ವಾಮಿ ಧ್ವನಿಯೆತ್ತಿದ್ದಾರೆ. ಅವರೇನೂ ಪಕ್ಷದ ವಿರುದ್ಧ ಅಥವಾ ಪಕ್ಷದ ಮುಖಂಡರ ವಿರುದ್ಧ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿಲ್ಲ. ಬದಲಿಗೆ, ಕೇಂದ್ರದ ಸರ್ವಾಧಿಕಾರ ನೀತಿಗಳಿಂದಾಗಿ ಕರ್ನಾಟಕದ ಅಭಿವೃದ್ಧಿ ಕಷ್ಟವಾಗುತ್ತಿದೆ ಎನ್ನುವ ಕಳವಳವನ್ನು ತಮ್ಮ ಮಾತಿನಲ್ಲಿ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರದ ಪ್ರಮುಖ ಸ್ಥಾನದಲ್ಲಿದ್ದುಕೊಂಡೂ, ಕೇಂದ್ರದ ಅನ್ಯಾಯವನ್ನು ಎತ್ತಿ ಮಾತನಾಡಿದ ಮಾಧುಸ್ವಾಮಿ ನಿಜವಾದ ಅರ್ಥದಲ್ಲಿ ಕರ್ನಾಟಕವನ್ನು ಪ್ರೀತಿಸುತ್ತಿದ್ದಾರೆ. ರಾಜ್ಯದ ಕುರಿತ ಅವರ ಕಳಕಳಿಯೇ ಅವರಿಂದ ಕೇಂದ್ರದ ವಿರುದ್ಧ ಈ ಮಾತುಗಳನ್ನಾಡಿಸಿದೆ. ಇದೇ ಸಂದರ್ಭದಲ್ಲಿ ‘ರಾಜ್ಯ ಸಂಸದರು ಸದನದಲ್ಲಿ ಕರ್ನಾಟಕದ ಪರವಾಗಿ ಧ್ವನಿ ಎತ್ತದ’ ಕುರಿತಂತೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮೆದುರುಗಡೆಯೇ ಇರುವ ಸಂಸದ ತೇಜಸ್ವಿ ಸೂರ್ಯ ಅವರಲ್ಲಿ ‘ನೀವಿದನ್ನು ಸಂಸತ್ತಿನಲ್ಲಿ ಮಾತನಾಡಬೇಕು’ ಎಂದೂ ಒತ್ತಾಯಿಸಿದ್ದಾರೆ. ಒಬ್ಬ ರಾಜಕಾರಣಿ ಯಾವುದೇ ಪಕ್ಷಕ್ಕೆ ಸೇರಿರಲಿ, ಅಂತಿಮವಾಗಿ ತನ್ನೊಳಗಿನ ಪ್ರಾದೇಶಿಕತೆಯನ್ನು ತನ್ನ ನಾಯಕನ ಜೀತಕ್ಕೆ ಒಪ್ಪಿಸಬಾರದು. ತನ್ನನ್ನು ಆರಿಸಿದ ಜನರಿಗಾಗಿ ತನ್ನ ವರಿಷ್ಠರ ಜೊತೆಗೆ ಗುದ್ದಾಡಿಯಾದರೂ ಅನುದಾನಗಳನ್ನು ತರುವವನು ಜನನಾಯಕ. ತನ್ನ ವರಿಷ್ಠನಿಗಾಗಿ ತನ್ನ ನೆಲದ ಹಿತಾಸಕ್ತಿಯನ್ನು ಬಲಿಕೊಡುವವನು ಸಮಯ ಸಾಧಕನಾಗಿಯಷ್ಟೇ ಇತಿಹಾಸದಲ್ಲಿ ದಾಖಲಾಗುತ್ತಾನೆ.

     ರಾಜ್ಯದ ಸಂಸದರು ರಾಜ್ಯಕ್ಕಾಗಿ ಅನುದಾನಗಳನ್ನು ತರುವುದಿರಲಿ, ನೆರೆ ಪರಿಹಾರಕ್ಕೆ ಕೇಂದ್ರದ ಸಹಾಯವನ್ನು ಮುಖ್ಯಮಂತ್ರಿ ಯಾಚಿಸುತ್ತಿದ್ದಾಗ ಇದೇ ಸಂಸದ ತೇಜಸ್ವಿ ಸೂರ್ಯ ಅವರು ‘ಪರಿಹಾರ ಅಗತ್ಯವಿಲ್ಲ, ರಾಜ್ಯದ ಬೊಕ್ಕಸದಲ್ಲಿ ಹಣವಿದೆ’ ಎಂಬ ಹೇಳಿಕೆಯನ್ನು ನೀಡಿ ಸ್ವತಃ ಮುಖ್ಯಮಂತ್ರಿಯಿಂದಲೇ ಛೀಮಾರಿಗೊಳಗಾಗಿದ್ದರು. ರಾಜ್ಯ ಸಂಕಷ್ಟದಲ್ಲಿದ್ದಾಗ, ಕೇಂದ್ರ ನೆರವಿಗೆ ಬಾರದೇ ಇದ್ದರೆ ರಾಜ್ಯದ ಸಂಸದರೆಲ್ಲ ಒಟ್ಟಾಗಿ ವರಿಷ್ಠರಿಗೆ ಒತ್ತಡ ಹೇರಬೇಕು. ಆದರೆ ಪ್ರಧಾನಿ ಮೋದಿಯವರ ಮುಂದೆ ನಿಂತು ಪರಿಹಾರಕ್ಕಾಗಿ ಮನವಿ ಮಾಡುವ ಧೈರ್ಯವಿಲ್ಲದೆ, ‘ನಮಗೆ ಪರಿಹಾರವೇ ಅಗತ್ಯವಿಲ್ಲ’ ಎಂದವರು ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ ಎಂದು ಸದನದಲ್ಲಿ ಮಾತನಾಡುವುದನ್ನು ಊಹಿಸುವುದಕ್ಕೆ ಸಾಧ್ಯವೇ? ಸಂಸದರೆಲ್ಲ ಯಾಕೆ ಕರ್ನಾಟಕಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಸಂಸತ್ತಿನಲ್ಲಿ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೂ ಉತ್ತರ ಸರಳವಿದೆ. ಅವರ್ಯಾರೂ ತಮ್ಮ ಸಾಧನೆಗಳ ಮೂಲಕ ಗೆದ್ದಿಲ್ಲ. ಚುನಾವಣೆಯುದ್ದಕ್ಕೂ ಅವರು ಮೋದಿಯವರ ಹೆಸರನ್ನು ಬಳಸಿ ಮತ ಯಾಚನೆ ಮಾಡಿದ್ದಾರೆ. ಮೋದಿಯವರ ಸಾಧನೆಗಳ ಕುರಿತ ಸುಳ್ಳುಗಳನ್ನು ಜನರಲ್ಲಿ ಹರಡಿ ಚುನಾವಣೆಯನ್ನು ಗೆದ್ದಿದ್ದಾರೆ. ಹೀಗಿರುವಾಗ, ಪ್ರಧಾನಿ ಮೋದಿಯವರ ಮುಂದೆ ನಿಂತು ಮಾತನಾಡುವ ಧೈರ್ಯವಾದರೂ ಹೇಗೆ ಬರಬೇಕು? ಜನರಿಗಾದರೂ ಈ ಸಂಸದರಲ್ಲಿ ರಾಜ್ಯದ ಅಭಿವೃದ್ಧಿಯನ್ನು ಬಯಸುವ ನೈತಿಕತೆ ಎಷ್ಟಿದೆ? ಮೋದಿಯವರ ಬಣ್ಣ ದ ಮಾತುಗಳಿಗೆ ಮರುಳಾಗಿ ಮತಗಳನ್ನು ನೀಡಿದ ರಾಜ್ಯದ ಜನರು, ಇಂದು ಮೋದಿಯವರ ಬಣ್ಣದ ಮಾತುಗಳಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸದ್ಯದ ರಾಜ್ಯದ ಸ್ಥಿತಿಗೆ ಕನ್ನಡದ ವೌಲ್ಯಗಳ ತಳಹದಿಯಲ್ಲಿ ತಲೆ ಎತ್ತ ಬಲ್ಲ ಪ್ರಾದೇಶಿಕ ಪಕ್ಷವೊಂದೇ ಪರಿಹಾರ. ಜೆಡಿಎಸ್ ತನ್ನನ್ನು ತಾನು ಪ್ರಾದೇಶಿಕ ಪಕ್ಷವೆಂದು ಕರೆದುಕೊಳ್ಳುತ್ತದೆಯಾದರೂ, ಅದಕ್ಕೆ ಅಸ್ತಿತ್ವವಿರುವುದು ರಾಷ್ಟ್ರೀಯ ಪಕ್ಷಗಳ ಜೊತೆಗೆ ಸಮಯ ಸಾಧಕತನದ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮಾತ್ರ. ಕುಟುಂಬಕ್ಕೆ ಅಧಿಕಾರ ಸಿಗುವುದಾದರೆ, ದೇವೇಗೌಡರೇ ನೇರವಾಗಿ ಮೋದಿಯ ಮನೆ ಬಾಗಿಲು ತಟ್ಟಲು ಸಿದ್ಧರಿದ್ದಾರೆ. ಕರ್ನಾಟಕದ ಹಿತಾಸಕ್ತಿಯೊಂದನ್ನೇ ಪ್ರಣಾಳಿಕೆ ಮಾಡಿಕೊಂಡು ತಲೆಯೆತ್ತಿ ನಿಲ್ಲಬಲ್ಲ, ಕರ್ನಾಟಕದ ಅಭಿವೃದ್ಧಿಗೆ ಅನುದಾನಗಳನ್ನು ನೀಡುವುದಾದರೆ ಮಾತ್ರ ಬೆಂಬಲ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಬಲ್ಲ ಪ್ರಾದೇಶಿಕ ಪಕ್ಷವೊಂದು ಕರ್ನಾಟಕದಲ್ಲಿ ಅರಳಿದರೆ, ಕೇಂದ್ರದ ದರ್ಪಕ್ಕೆ ಅದು ಉತ್ತರವನ್ನು ನೀಡೀತೇನೋ? ಆಗ ಮಾತ್ರ ತಮಿಳುನಾಡು, ಆಂಧ್ರಪ್ರದೇಶದಂತಹ ರಾಜ್ಯಗಳು ಕೇಂದ್ರವನ್ನು ಬೆದರಿಸಿ ತಮ್ಮ ಹಕ್ಕುಗಳನ್ನು ಪಡೆಯುವಂತೆ, ಕರ್ನಾಟಕವೂ ತನ್ನ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)