varthabharthi


ಸಂಪಾದಕೀಯ

ರಸ್ತೆ ಅಪಘಾತಗಳಿಗೆ ಕೊನೆ ಯಾವಾಗ?

ವಾರ್ತಾ ಭಾರತಿ : 30 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸರಕಾರ ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಅಸು ನೀಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಿದ್ದ ಗಡ್ಕರಿ ಅವರು, ಕೋವಿಡ್ ವೈರಾಣುವಿನಿಂದ ಮೃತ ಪಟ್ಟವರಿಗಿಂತ ರಸ್ತೆ ಅಪಘಾತದಲ್ಲಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದರು. ಸಚಿವರ ಹೇಳಿಕೆಯಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಜಾಗತಿಕ ಚಾಲನಾ ಶಿಕ್ಷಣ ಕಂಪೆನಿಯೊಂದು ನಡೆಸಿದ ಅಧ್ಯಯನ ವರದಿಯ ಪ್ರಕಾರ ವಿಶ್ವದಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅಧ್ಯಯನ ನಡೆಸಲಾದ ಐವತ್ತಾರು ದೇಶಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾ, ಥಾಯ್ಲೆಂಡ್ ಮತ್ತು ಅಮೆರಿಕ ದೇಶಗಳಿವೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸುರಕ್ಷಿತ ರಸ್ತೆಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದೆ. ಜಪಾನ್ ಹಾಗೂ ಸ್ವೀಡನ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

 ರಸ್ತೆ ಅಪಘಾತಗಳಿಗೆ ಒಂದಲ್ಲ, ಎರಡಲ್ಲ ಹಲವಾರು ಕಾರಣಗಳಿವೆ. ನಮ್ಮ ನಗರ, ಪಟ್ಟಣಗಳ ರಸ್ತೆಗಳ ನಿರ್ವಹಣೆ, ಕಿತ್ತು ಹೋದ ಡಾಂಬರು, ಅವೈಜ್ಞಾನಿಕ ಜಾಮರ್‌ಗಳು, ಸುರಕ್ಷಿತವಲ್ಲದ ತಿರುವುಗಳು, ದಾರಿ ತುಂಬ ಪ್ರಾಣ ಘಾತುಕ ಗುಂಡಿಗಳು, ಹೀಗೆ ನಾನಾ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ. ಆದರೆ ನಮ್ಮ ದೇಶದ ಬಹಳಷ್ಟು ರಸ್ತೆ ಅಪಘಾತಗಳಿಗೆ ಬೇಕಾಬಿಟ್ಟಿ ವಾಹನ ಚಾಲನೆಯೇ ಮುಖ್ಯ ಕಾರಣವಾಗಿದೆ ಎಂದರೆ ತಪ್ಪಿಲ್ಲ. ನಿತ್ಯವೂ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪಾದಚಾರಿ ಮಾರ್ಗದ ಒತ್ತುವರಿಯಿಂದಾಗಿ ಏಕಾಏಕಿ ಮುಖ್ಯ ರಸ್ತೆಗೆ ನುಗ್ಗುವ ಪಾದಚಾರಿಗಳು, ವಾಹನ ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದು ಹೀಗೆ ಹಲವಾರು ಕಾರಣಗಳಿಂದಾಗಿ ಜಗತ್ತಿನಲ್ಲಿ ಅಪಘಾತ ಸಂಭವಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಬರುವಂತಾಗಿದೆ. ರಸ್ತೆ ಅಪಘಾತಕ್ಕೆ ಬಲಿಯಾಗುವವರ ಕುಟುಂಬಗಳು ಅನುಭವಿಸುವ ಯಾತನೆ, ದುಬಾರಿ ವೈದ್ಯಕೀಯ ಖರ್ಚು ವೆಚ್ಚಗಳನ್ನು ಗಮನಿಸಿದರೆ ತುಂಬಾ ಆತಂಕವುಂಟಾಗುತ್ತದೆ. ಅಪಘಾತದಲ್ಲಿ ಸಿಲುಕಿ ಸಾಯುವವರು ಒಂದು ಕಡೆಯಾದರೆ, ಅಪಘಾತದಲ್ಲಿ ಗಾಯಗೊಂಡು ಶಾಶ್ವತವಾಗಿ ಅಂಗ ವೈಕಲ್ಯಕ್ಕೊಳಗಾಗುವವರದು ಇನ್ನೂ ದಾರುಣ ಕತೆಯಾಗಿದೆ.

ರಸ್ತೆ ಅಪಘಾತ ತಡೆಗೆ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ಸಚಿವ ಗಡ್ಕರಿ ಅವರು ಸಂಸತ್ತಿನಲ್ಲಿ ಭರವಸೆ ನೀಡಿದ್ದಾರೆ. ಆದರೆ ಅಪಘಾತ ತಡೆಯುವಲ್ಲಿ ಸರಕಾರದ ಪಾತ್ರ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ವಾಹನ ಚಾಲಕರ ಪಾತ್ರವೂ ಇದೆ. ಸರಕಾರವೇನೋ ಸುರಕ್ಷತೆಗೆ ಪೂರಕವಾದ ರಸ್ತೆ ನಿರ್ಮಾಣ, ಅಗಲೀಕರಣ, ಸಮರ್ಪಕ ನಿರ್ವಹಣೆ, ವಾಹನಗಳ ಚಾಲನಾ ಪರವಾನಿಗೆಗೆ ಕಠಿಣ ನಿಯಮಾವಳಿಗಳನ್ನು ಮಾಡಬಹುದು. ಆದರೆ ಅಪಘಾತ ತಡೆಯಲು ಇದಿಷ್ಟೇ ಸಾಕಾಗುವುದಿಲ್ಲ. ಸಂಚಾರಿ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ವಾಹನ ಚಾಲಕರು, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಬಾರದು. ಅನೇಕ ಅಪಘಾತಗಳಿಗೆ ಕಾರುಗಳು ಮಾತ್ರವಲ್ಲ, ದ್ವಿಚಕ್ರ ವಾಹನ ಚಾಲಕರ ತರಾತುರಿಯೂ ಕಾರಣವಾಗುತ್ತದೆ. ಇದರ ಬಗ್ಗೆ ವಾಹನ ಚಾಲಕರು ಎಚ್ಚರದಿಂದ ವರ್ತಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಹನಗಳಿರುವುದು ಕೂಡ ಅಪಘಾತಕ್ಕೆ ಕಾರಣವಾಗುವ ಇನ್ನೊಂದು ಅಂಶವಾಗಿದೆ. ಮೂವರು ಸದಸ್ಯರನ್ನು ಹೊಂದಿರುವ ಕುಟುಂಬಗಳಲ್ಲಿ ನಾಲ್ಕು ಕಾರುಗಳು, ಐದು ದ್ವಿಚಕ್ರವಾಹನಗಳಿರುತ್ತವೆ. ಒಂದು ಬಹುದೊಡ್ಡ ವಾಹನದಲ್ಲಿ ಒಬ್ಬರೇ ಓಡಾಡುತ್ತಿರುತ್ತಾರೆ. ಇದರಿಂದಾಗಿ ರಸ್ತೆಗಳಲ್ಲಿ ವಾಹನ ದಟ್ಟಣೆಯಾಗಿ ಅಪಘಾತಗಳು ಸಂಭವಿಸುತ್ತವೆ. ಹಾಗಾಗಿ ಸರಕಾರ ವಾಹನ ವಹಿವಾಟಿನ ಮೇಲೆ ನಿಯಂತ್ರಣ ಹೇರಬೇಕು. ಸಾರ್ವಜನಿಕ ಸಾರಿಗೆಯನ್ನು ಜನಪ್ರಿಯಗೊಳಿಸಬೇಕು. ಆಗ ಮಾತ್ರ ಅಪಘಾತಗಳನ್ನು ತಡೆಯಬಹುದಾಗಿದೆ. ಆಟೊಮೊಬೈಲ್ ಉದ್ಯಮಗಳನ್ನು ಬದುಕಿಸಲು ದೇಶದ ಜನರ ಅಮೂಲ್ಯ ಪ್ರಾಣಗಳನ್ನು ಬಲಿಕೊಡುವುದು ಬೇಡ. ಆಟೊಮೊಬೈಲ್ ಉದ್ದಿಮೆಯೂ ಉಳಿಯಬೇಕು. ದೇಶದ ಜನರ ನಿತ್ಯ ಸಂಚಾರಿ ಬದುಕೂ ಸುರಕ್ಷಿತವಾಗಿ ಇರಬೇಕು. ಈ ನಿಟ್ಟಿನಲ್ಲಿ ರಸ್ತೆ ಅಪಘಾತ ತಡೆಯಲು ಸರಕಾರ ಅಗತ್ಯದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು.

ರಸ್ತೆ ಅಪಘಾತಗಳು ಮತ್ತು ಸಾವುಗಳು ಒಂದೆಡೆಯಾದರೆ ಇನ್ನೊಂದೆಡೆ ನಮ್ಮ ಮಹಾನಗರಗಳಲ್ಲಿ ವಿಪರೀತ ವಾಹನಗಳ ದಟ್ಟಣೆಯಿಂದಾಗಿ ತೀವ್ರ ಸ್ವರೂಪದ ವಾಯು ಮಾಲಿನ್ಯ ಉಂಟಾಗುತ್ತಿದೆ. ಉಸಿರಾಡಲು ಗಾಳಿಯೂ ವಿರಳವಾಗುತ್ತಿರುವಂತಹ ಆತಂಕದ ದಿನಗಳನ್ನು ನಾವು ಎದುರಿಸುತ್ತಿದ್ದೇವೆ.

 ವಾಯು ಮಾಲಿನ್ಯದಿಂದಾಗಿ ಜಗತ್ತಿನಲ್ಲಿ ಪ್ರತಿ ವರ್ಷ ಎಪ್ಪತ್ತು ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ ಆಫ್ರಿಕಾ ಮತ್ತು ಏಶ್ಯದ ಜನರ ಸಂಖ್ಯೆ ಹೆಚ್ಚಿಗಿದೆ. ವಾಯು ಮಾಲಿನ್ಯದಿಂದಾಗಿ ಶ್ವಾಸಕೋಶ ಹಾಗೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ನಮ್ಮ ದೇಶದ ರಾಜಧಾನಿ ದಿಲ್ಲಿಯಲ್ಲಿ ಉಸಿರಾಡುವ ಗಾಳಿಯೂ ಮಲಿನಗೊಂಡು ಆಗಾಗ ವಾಹನ ಸಂಚಾರದ ಮೇಲೆ ಸರಕಾರ ಕಡಿವಾಣ ಹಾಕುತ್ತಲೇ ಇದೆ. ಬೆಂಗಳೂರು ಕೂಡ ಇದಕ್ಕೆ ಹೊರತಲ್ಲ. ಬೆಂಗಳೂರು ದೇಶದ ಎರಡನೇ ಅತ್ಯಂತ ಕಲುಷಿತ ನಗರ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಇತ್ತೀಚಿನ ವರದಿ ತಿಳಿಸಿದೆ.

ರಸ್ತೆ ಅಪಘಾತ ಹೆಚ್ಚಳ ಮತ್ತು ವಾಯು ಮಾಲಿನ್ಯಕ್ಕೂ ಕಾರಣವಾಗುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಳ್ಳಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)