varthabharthi


ಸಂಪಾದಕೀಯ

ವಿಶ್ವವಿದ್ಯಾನಿಲಯದ ಘನತೆಯನ್ನು ಕುಗ್ಗಿಸಿದ ಲಂಚ ಪ್ರಕರಣ

ವಾರ್ತಾ ಭಾರತಿ : 31 Mar, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

 ಇದೊಂದು ಅಸಂಗತ ಪ್ರಹಸನದಂತಿದೆ. ಸಮಾಜವನ್ನು ರೂಪಿಸುವ ಅತ್ಯುನ್ನತ ಸಂಸ್ಥೆಗಳಲ್ಲಿ ಒಂದಾದ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗಾಗಿ ಒಬ್ಬ ಉಪನ್ಯಾಸಕ ಲಂಚ ನೀಡುತ್ತಾನೆ. ಅದೂ ಯಾರಿಗೆ? ಸಮಾಜದಲ್ಲಿ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಗುರುತಿಸಿಕೊಂಡಿರುವ ರೌಡಿ ಶೀಟರ್‌ಗೆ. ವಿಜ್ಞಾನ ವಿಭಾಗದ ಪ್ರಾಧ್ಯಾಪಕರೊಬ್ಬರು ಉಪ ಕುಲಪತಿ ಹುದ್ದೆಗಾಗಿ ರಾಮಸೇನೆಯ ಮುಖಂಡ, ರೌಡಿ ಶೀಟರ್ ಪ್ರಸಾದ್ ಅತ್ತಾವರ ಎಂಬಾತನಿಗೆ ಸುಮಾರು 17 ಲಕ್ಷ ರೂಪಾಯಿ ಲಂಚ ನೀಡಿರುವುದು ಈಗ ಚರ್ಚೆಯಲ್ಲಿದೆ. ಆರೋಪಿಯ ಬಂಧನವೂ ಆಗಿದೆ. ಆದರೆ ಜನರು ಯಾರನ್ನು ಮೊದಲು ಖಂಡಿಸಬೇಕು? ಎಂಬ ಗೊಂದಲದಲ್ಲಿದ್ದಾರೆ. ಲಂಚ ಸ್ವೀಕರಿಸುವುದು, ಹಫ್ತಾ ವಸೂಲಿ ಮಾಡುವುದು ಒಬ್ಬ ರೌಡಿ ಶೀಟರ್‌ನ ಕಾಯಕವಾಗಿದೆ. ಹತ್ತರಲ್ಲಿ ಹನ್ನೊಂದು ಎಂಬಂತೆ ಒಬ್ಬ ಉಪನ್ಯಾಸಕನನ್ನೂ ಅವನು ವಂಚಿಸಿದ್ದಾನೆ. ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕಾದ ಒಬ್ಬ ಉಪನ್ಯಾಸಕ, ರೌಡಿ ಶೀಟರ್ ಮೂಲಕ ವಿಶ್ವವಿದ್ಯಾನಿಲಯದ ಅತ್ಯುನ್ನತ ಹುದ್ದೆಯನ್ನು ತನ್ನದಾಗಿಸಲು ಯತ್ನಿಸಿದರಲ್ಲ, ಅದು ಬೆಚ್ಚಿ ಬೀಳಬೇಕಾದ ಅಂಶ. ಉಪನ್ಯಾಸಕರಿಗೆ ವಂಚಿಸಿದಾತ ಕ್ರಿಮಿನಲ್ ಹಿನ್ನೆಲೆಯನ್ನು ಮಾತ್ರ ಹೊಂದಿರುವುದಲ್ಲ, ಧರ್ಮದ ಹೆಸರಲ್ಲಿ ಸಮಾಜದೊಳಗೆ ಅಶಾಂತಿಯನ್ನು ಎಬ್ಬಿಸಿದ ಕುಖ್ಯಾತಿಯೂ ಈತನಿಗಿದೆ. ಒಬ್ಬ ಉಪನ್ಯಾಸಕನಾದವನು ಇಂತಹವರ ಜೊತೆಗೆ ಸ್ನೇಹವನ್ನಿಟ್ಟುಕೊಳ್ಳುವುದೇ ಪ್ರಶ್ನಾರ್ಹ. ಇಲ್ಲಿ, ಈತನ ಮೂಲಕ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯನ್ನು ಹಣದ ಮೂಲಕ ಕೊಂಡುಕೊಳ್ಳಲು ಮುಂದಾಗಿದ್ದಾರೆ. ಸಮಾಜ ಆತಂಕ ಪಡಬೇಕಾದುದು ಈ ಉಪನ್ಯಾಸಕನ ಬಗ್ಗೆ.

‘ಒಬ್ಬ ರಾಜಕಾರಣಿ, ಅಧಿಕಾರಿಗಳನ್ನು ಗುಮಾನಿಯಿಂದ ನೋಡುವಂತೆಯೇ ಒಬ್ಬ ಶಿಕ್ಷಕನನ್ನೂ ನಾವು ಗುಮಾನಿಯಿಂದ ನೋಡಬೇಕಾಗುತ್ತದೆ’ ಎಂದು ಹಿರಿಯ ಚಿಂತಕ ಡಿ. ಆರ್. ನಾಗರಾಜ್ ಅವರು ಒಂದೆಡೆ ಬರೆಯುತ್ತಾರೆ. ಇಂದು ಸಮಾಜ ರಾಜಕಾರಣಿಗಳನ್ನು, ಅಧಿಕಾರಿಗಳನ್ನು, ಪತ್ರಕರ್ತರನ್ನು ಶಂಕಿಸಿದಷ್ಟು ಉಪನ್ಯಾಸಕರನ್ನು ಶಂಕಿಸಿದ್ದು ತೀರಾ ಕಡಿಮೆ. ಇತ್ತೀಚಿನ ದಿನಗಳಲ್ಲಿ ವೈದ್ಯರೂ ಜನಸಾಮಾನ್ಯರ ವಿಮರ್ಶೆಗೆ, ದಾಳಿಗೆ ಒಳಗಾಗುತ್ತಿದ್ದಾರೆ. ಆದರೆ ಶಿಕ್ಷಕರನ್ನು ಸಮಾಜ ಈಗಲೂ ಗೌರವ ಸ್ಥಾನದಿಂದಲೇ ನೋಡುತ್ತಿದೆ. ಸಮಾಜವನ್ನು ಒಳಿತಿನ ದಾರಿಯೆಡೆಗೆ ಮುನ್ನಡೆಸುವವರು ಎಂದು ನಂಬಿದೆ. ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. ರಾಜಕಾರಣಿಗಳು, ಅಧಿಕಾರಿಗಳು, ಸ್ವಾಮೀಜಿಗಳಷ್ಟೇ ಉಪನ್ಯಾಸಕರೂ ಅಪಾಯಕಾರಿಗಳಾಗಿ ಪರಿವರ್ತನೆ ಹೊಂದುತ್ತಿದ್ದಾರೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಬಳಿ ಅಧಿಕಾರವಿದೆ. ಆದರೆ ಉಪನ್ಯಾಸಕರು ಯಾವ ರೀತಿ ಅಪಾಯಕಾರಿಗಳಾಗಬಲ್ಲರು? ಎಂಬ ನಿರ್ಲಕ್ಷವನ್ನು ಸಮಾಜವೂ ತಳೆದಿದೆ. ಆದರೆ ಇಂದು ಶಾಲೆಗಳಲ್ಲಿ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೆದುಳಿಗೆ ವಿಭಜನೆಯ ಬೀಜಗಳನ್ನು ಉಪನ್ಯಾಸಕರೂ ಯಶಸ್ವಿಯಾಗಿ ಬಿತ್ತುತ್ತಿದ್ದಾರೆ. ಸಮಾಜಕ್ಕೆ ಇನ್ನೇನು ತೆರೆದುಕೊಳ್ಳಲಿರುವ ವಿದ್ಯಾರ್ಥಿಗಳ ಮೆದುಳೆಂಬ ಭೂಮಿಯನ್ನು ಹದ ಮಾಡಿ, ಅಲ್ಲಿ ರಾಜಕಾರಣಿಗಳಿಗೆ ಅವರ ವಿಷ ಬೀಜ ಬಿತ್ತಲು ಅನುಕೂಲ ಮಾಡಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಶಾಲೆಗಳಿಗೂ ಸಂಘಪರಿವಾರ, ಆರೆಸ್ಸೆಸ್‌ನ ಮುಖಂಡರು ಕಾಲಿಡತೊಡಗಿದ್ದಾರೆ. ಅವರು ಎಳೆ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಹೆಸರಿನಲ್ಲಿ ದ್ವೇಷವನ್ನು ಕಲಿಸಿ ಕೊಡುತ್ತಿದ್ದರೆ, ಈ ಶಿಕ್ಷಕರು ಅವುಗಳನ್ನು ವೌನವಾಗಿ ಬೆಂಬಲಿಸುತ್ತಾರೆ. ಮಕ್ಕಳಿಗೆ ಜಾತ್ಯತೀತ ವೌಲ್ಯಗಳನ್ನು ಕಲಿಸಿ ಕೊಡುವ ಬದಲು, ಆರೆಸ್ಸೆಸ್‌ನ ಜಾತೀಯ ವೌಲ್ಯಗಳನ್ನು ಕಲಿಸಿಕೊಡುವ ಉಪನ್ಯಾಸಕರ ಸಂಖ್ಯೆ ಹೆಚ್ಚುತ್ತಿದೆ.

 ಅನೇಕ ಸಂದರ್ಭಗಳಲ್ಲಿ ಉಪನ್ಯಾಸಕರು ಕೈಗೊಂಬೆಗಳಾಗಿರುತ್ತಾರೆ. ಕಿರುಕುಳ, ವರ್ಗಾವಣೆ ಇತ್ಯಾದಿಗಳಿಗೆ ಹೆದರಿ, ರಾಜಕಾರಣಿಗಳು ಹೇಳಿದ್ದಕ್ಕೆಲ್ಲ ತಲೆದೂಗಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುತ್ತಾರೆ. ಇತ್ತೀಚೆಗೆ ಕೊಕ್ಕಡದಲ್ಲಿ ನಡೆದ ಘಟನೆ ಇದಕ್ಕೆ ಉತ್ತಮ ಉದಾಹರಣೆ. ಮಸೀದಿ ಉದ್ಘಾಟನೆಯ ಸಂದರ್ಭದಲ್ಲಿ ಮಧ್ಯಾಹ್ನದ ಊಟಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟ ಆರೋಪದಲ್ಲಿ ಸಂಘಪರಿವಾರ ಮುಖಂಡರ ದಾಳಿಯನ್ನು ಮುಖ್ಯೋಪಾಧ್ಯಾಯರೊಬ್ಬರು ಎದುರಿಸಬೇಕಾಯಿತು. ವೈರಲ್ ಆಗಿರುವ ಆಡಿಯೋದಲ್ಲಿ ಮುಖ್ಯೋಪಾಧ್ಯಾಯರು ಸಂಘಪರಿವಾರದ ಮುಖಂಡನಿಗೆ ಹೆದರಿ ಕ್ಷಮೆಯಾಚಿಸುವುದು, ಸಂಘಪರಿವಾರದ ಕೃತ್ಯಗಳನ್ನು ಸಮರ್ಥಿಸುವುದು ದಾಖಲಾಗಿದೆ. ಶಿಕ್ಷಣ ಕ್ಷೇತ್ರದ ಜೊತೆಗೆ ಕ್ರಿಮಿನಲ್‌ಗಳು ಹೇಗೆ ಸಮಾಜವನ್ನು ತಪ್ಪು ದಿಕ್ಕಿಗೆ ಒಯ್ಯುತ್ತಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. ದುಷ್ಟರನ್ನು ತಿದ್ದ ಬೇಕಾದ ಶಿಕ್ಷಕರು, ದುಷ್ಟರು ಹೇಳಿದ್ದಕ್ಕೆ ತಲೆಯಾಡಿಸಿ ಅವರ ಮುಂದೆ ಕ್ಷಮೆಯಾಚನೆ ಮಾಡಬೇಕಾದಂತಹ ಒಂದು ಸಮಾಜದೊಳಗೆ ನಾವು ಬದುಕುತ್ತಿದ್ದೇವೆ. ಈ ದುರಂತಕ್ಕೂ ನೇರ ಕಾರಣ ರಾಜಕಾರಣಿಗಳೇ ಆಗಿದ್ದಾರೆ. ರಾಜಕಾರಣಿಗಳು ಮತ್ತು ಸಮಾಜದ ನಡುವೆ ಸೇತುವೆಯಾಗಿ ನಿಂತಿರುವುದು ಈ ಕ್ರಿಮಿನಲ್‌ಗಳೇ ಆಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಬೆದರಿಸಲು, ದಾಂಧಲೆ ನಡೆಸಲು, ಸಮಾಜದ ಶಾಂತಿಯನ್ನು ಕೆಡಿಸಲು ಕ್ರಿಮಿನಲ್ ಹಿನ್ನೆಲೆಯಿರುವ ಕಾರ್ಯಕರ್ತರು ಅನಿವಾರ್ಯವಾಗುತ್ತಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಈ ಕಾರ್ಯಕರ್ತರ ಒತ್ತಡಗಳಿಗೆ ರಾಜಕಾರಣಿಗಳು ಮಣಿಯಬೇಕಾಗುತ್ತದೆ. ಪೊಲೀಸರು, ಶಿಕ್ಷಕರು ತಮ್ಮ ವರ್ಗಾವಣೆ, ಭಡ್ತಿ ಮೊದಲಾದ ಕೆಲಸಕ್ಕೆ ಅನಿವಾರ್ಯವಾಗಿ ಇವರನ್ನೇ ಸೇತುವೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಹಾಗೆಯೇ, ಈ ಕ್ರಿಮಿನಲ್ ಹಿನ್ನೆಲೆಯ ಕಾರ್ಯಕರ್ತರ ವಿರೋಧ ಕಟ್ಟಿಕೊಂಡರೆ, ರಾಜಕಾರಣಿಗಳ ವಿರೋಧವನ್ನೂ ಪರೋಕ್ಷವಾಗಿ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಶ್ರೀಸಾಮಾನ್ಯರು ಹೆದರುತ್ತಾರೆ.

 ಕುಲಪತಿ ಹುದ್ದೆಗಾಗಿ ರಾಮಸೇನೆಯ ಮುಖಂಡನಿಗೆ ಲಂಚ ನೀಡಿದ ಕಾರಣವೂ ಇದೇ ಆಗಿದೆ. ಆರೋಪಿ ವಿವಿಧ ರಾಜಕಾರಣಿಗಳ ಜೊತೆಗೆ ಗುರುತಿಸಿಕೊಂಡವನು ಎನ್ನುವ ನಂಬಿಕೆಯಿಂದಲೇ ಉಪನ್ಯಾಸಕ ಲಂಚ ನೀಡಿದ್ದಾರೆ. ಒಂದು ಹುದ್ದೆಗಾಗಿ ಲಂಚ ನೀಡುವುದೇ ಅಪರಾಧ. ಅದೂ ಒಬ್ಬ ಕ್ರಿಮಿನಲ್ ಹಿನ್ನೆಲೆ ಹೊಂದಿದ ಆರೋಪಿಯನ್ನು ಅದಕ್ಕಾಗಿ ನೆಚ್ಚಿಕೊಂಡದ್ದು, ವಿಶ್ವವಿದ್ಯಾನಿಲಯದ ವೌಲ್ಯಗಳಿಗೆ ಮಾಡಿದ ಅವಮಾನವಾಗಿದೆ. ವಿಶ್ವವಿದ್ಯಾನಿಲಯಗಳು ತಲುಪಿದ ಪತನದ ಆಳವನ್ನು ಇದು ಹೇಳುತ್ತದೆ. ವಿದ್ಯಾಸಂಸ್ಥೆಗಳನ್ನು ಇಂತಹ ಕ್ರಿಮಿನಲ್‌ಗಳು ನಿಯಂತ್ರಿಸುತ್ತಾರೆ ಎಂದಾದರೆ, ಆ ವಿದ್ಯಾಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಂದ ದೇಶ ಏನನ್ನು ನಿರೀಕ್ಷಿಸಬಹುದು? ಉಪನ್ಯಾಸಕರೇ ಕ್ರಿಮಿನಲ್‌ಗಳು, ರಾಜಕಾರಣಿಗಳ ಹಿಂದೆ ಅಲೆಯುತ್ತಿದ್ದರೆ, ವಿದ್ಯಾರ್ಥಿಗಳ ಸ್ಥಿತಿ ಏನಾಗಬೇಕು? ಬಂಧಿಸಲ್ಪಟ್ಟ ಆರೋಪಿ, ಈ ಹಿಂದೆ ಹೀಗೆಯೇ ಎಷ್ಟು ಮಂದಿಗೆ ವಂಚಿಸಿದ್ದಾನೆ ಎನ್ನುವುದೂ ತನಿಖೆಯಾಗಬೇಕು. ಇಂತಹ ಕ್ರಿಮಿನಲ್‌ಗಳಿಗೂ ವಿಶ್ವವಿದ್ಯಾನಿಲಯಗಳಿಗೆ ಇರುವ ನಂಟವನ್ನು ಬಯಲುಗೊಳಿಸಿ, ವಿಶ್ವವಿದ್ಯಾನಿಲಯಗಳನ್ನು ಕ್ರಿಮಿನಲ್ ಮುಕ್ತ, ರಾಜಕೀಯ ಮುಕ್ತವಾಗಿಸಿ ಅವುಗಳ ಘನತೆಯನ್ನು ಉಳಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)