varthabharthi


ಅನುಗಾಲ

ಪ್ರಬಂಧಗಳೆಂಬ ಆಪ್ತ ಓದು

ವಾರ್ತಾ ಭಾರತಿ : 1 Apr, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕನ್ನಡದಲ್ಲಿ ಒಳ್ಳೆಯ ಪ್ರಬಂಧಗಳು ಬಂದಿವೆ. ಕಷ್ಟವಾಗುವುದೆಂದರೆ ಇವನ್ನು ಲೇಖಕರು ಒಪ್ಪದ ಒಂದು ವರ್ಗಕ್ಕೆ ಸೇರಿಸುವ ಅನಿವಾರ್ಯತೆಯಿರುವುದು. ಹುಟ್ಟು-ಬದುಕು-ಸಾವು ಈ ಮೂರು ಉರುಳುಗಳಿಗೆ ತಲೆಯೊಡ್ಡುವ ಯಾವನೇ ಬರಹಗಾರನಿಗೆ ಯಾವುದೂ ಲಲಿತವಲ್ಲ, ಹಾಸ್ಯವಲ್ಲ, ಸರಳವಲ್ಲ, ವೈಚಾರಿಕವೂ ಅಲ್ಲ, ಭಾವಸೂಚಕವೂ ಅಲ್ಲ. ಅವು ಒಂದು ಗೊತ್ತಾದ ಇಲ್ಲವೇ ನಿಗದಿತವಾದ ಮನೋಭಾವದ ಸ್ಥಿತಿಯಲ್ಲಿ ಉಂಟಾಗುವ ಅತಾರ್ಕಿಕವಾದ ಯೋಚನಾಶೈಲಿ; ಸಂಚಾರೀ ಮನೋಧರ್ಮ. ಅದು ಸಲುಗೆಯ ಮಾತು; ಗುರಿಯಿರದೆ ಬಿಟ್ಟ ಬಾಣ; ಜೊತೆಗೆ ಗಾಢವಾಗಿ, ನಿಗೂಢವಾಗಿ ಒಳಗೆಲ್ಲೋ ಹರಿಯುವಂತಹ ಜೀವರಸ. ಇವು ಆಪ್ತ ಗೆಳೆಯರಂತೆ. ನಡೆದಾಡುವ ಯಾರದೋ ನೆರಳು ನಮ್ಮದೇ ಎಂದನಿಸುವಂತೆ.

ನಾವೆಲ್ಲ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮಾಧ್ಯಮಿಕ ತರಗತಿಗಳಿಗೆ ಬಂದಾಗ ನಮಗೆದುರಾದ ಬಹುದೊಡ್ಡ ಪದವೆಂದರೆ ‘ಪ್ರಬಂಧ’. ವಿದ್ಯಾರ್ಥಿಗಳಿಗೆ ‘ಪ್ರಬಂಧ’ ಎಂದು ಬರೆಯುವುದೇ ಕಷ್ಟದ ವಿಚಾರವಾಗಿತ್ತು. ಅದನ್ನು ‘ಪ್ರಭಂದ’ ಎಂದು ಬರೆಯುತ್ತಿದ್ದವರೇ ಹೆಚ್ಚು. ನಮ್ಮ ಕನ್ನಡ ಅಧ್ಯಾಪಕರು ‘ಪ್ರಭ’ ‘ಅಂದ’ ಎಂದು ಸಂಧಿ ವಿಂಗಡಿಸಿ ತಮಾಷೆಮಾಡುತ್ತಿದ್ದರು. ಯಾವುದು ಸರಿಯೆಂದು ವಿವರಿಸುತ್ತಿದ್ದರು. ಶಾಲೆಗಳಲ್ಲಿ ಭಾಷಣ ಸ್ಪರ್ಧೆಯನ್ನು ಬಿಟ್ಟರೆ ಪ್ರಬಂಧ ಸ್ಪರ್ಧೆ ಇರಲೇ ಬೇಕಾಗಿತ್ತು. ಉಳಿದಂತೆ ಬರಹಗಳಿಗೆ ಏನು ಹೆಸರಿಡುತ್ತಿದ್ದರೋ ನೆನಪಿಲ್ಲ. ಆನಂತರ ಸಾಹಿತ್ಯ ಮುಂತಾದ ಭ್ರಮೆಯಲ್ಲಿದ್ದವರಿಗೆ ಕವಿತೆ, ಕಥೆ ಮುಂತಾದ ಆಸಕ್ತಿಗಳೇ ಆದ್ಯತೆ ಪಡೆದವೇ ವಿನಾ ಪ್ರಬಂಧಗಳಲ್ಲ. ವಿಜ್ಞಾನದ ಆಸಕ್ತಿಯನ್ನು ಮೊಳೆಸಿಕೊಂಡವರಿಗೆ ಏನು ಬರೆದರೂ ಸಂಶೋಧನೆಯೆಂಬ ಭ್ರಮೆ.

ಪತ್ರಿಕೆಗಳಲ್ಲಿ ಪ್ರಬಂಧ ಎಂಬ ಹೆಸರಿನ ಲೇಖನ/ಬರಹ ಕಂಡರೆ ಓದುಗರಿಗೆ ಸ್ವಲ್ಪನಿರಾಸಕ್ತಿ. ಏಕೆಂದರೆ ಅವು ವರ್ಣರಂಜಿತವಿರಲಿಕ್ಕಿಲ್ಲವೆಂದು ಮತ್ತು ಮನರಂಜನೆಯನ್ನು ನೀಡಲಿಕ್ಕಿಲ್ಲವೆಂಬ ಸಂಶಯ. ಇವುಗಳ ನಡುವೆಯೇ ಕಾಲೇಜಿನಲ್ಲಿ ಉಪಪಠ್ಯವಾಗಿ ಪ್ರಬಂಧಗಳನ್ನು ಒದಗಿಸುತ್ತಿದ್ದರು. ಅವನ್ನು ಪರೀಕ್ಷೆಗಾಗಿಯೇ ಓದುತ್ತಿದ್ದೆವೆಂದು ನೆನಪು. ಭಾಷೆಯ ರಭಸವಾಗಲೀ, ಹಾಸ್ಯ ಪ್ರಸಂಗಗಳಾಗಲೀ ಇಲ್ಲದ ಸಾಹಿತ್ಯ ವಿಮರ್ಶೆಗಳೂ ಇಂತಹ ಉಪಪಠ್ಯಗಳಲ್ಲಿ ಅಡಕವಾಗುತ್ತಿದ್ದವು. ಹಳೆಗನ್ನಡ, ನಡುಗನ್ನಡ ದಾಟಿ ಹೊಸಗನ್ನಡಕ್ಕೆ ಬರುವಾಗಲೇ ವಿದ್ಯಾರ್ಥಿಗಳು ಸುಸ್ತು. ಅಲ್ಲಿ ಒಂದಷ್ಟು ಕವಿತೆಗಳು ರಾಗವಾಗಿ ಓದುವಂಥವಿದ್ದರೆ ಸಂತೋಷವಾಗುತ್ತಿತ್ತು. ನಮ್ಮ ಅಧ್ಯಾಪಕ-ಪ್ರಾಧ್ಯಾಪಕರು ‘‘ಜೇನು ಹುಟ್ಟಿಗೆ ಯಾರೋ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗುಟ್ಟುವ’’ ಎಂದು ರೈಲ್ವೆ ನಿಲ್ದಾಣವನ್ನು ವಿವರಿಸುವಾಗ ನನ್ನಂತಹ ಕೆಲವು ಸಾಹಿತ್ಯಾಸಕ್ತರಿಗೆ ಖುಷಿಯಾಗುತ್ತಿತ್ತೇ ಹೊರತು ಉಳಿದವರು ಕಿಟಿಕಿಯಿಂದ ಆಕಾಶವನ್ನೋ, ಯಾವಾಗ ಪೀರಿಯಡ್ ಮುಗಿಯುತ್ತದೆಯೆಂಬುದನ್ನು ಪಾಠಮಾಡುವವರ ಕೈಗಡಿಯಾರವನ್ನೋ ನೋಡುತ್ತ ಕಾಲಕಳೆಯುತ್ತಿದ್ದದ್ದು ಈಗಲೂ ಹಸಿರಾಗಿದೆ. ಜೊತೆಗೆ ಉಪಪಠ್ಯವಾಗಿ ಕಾದಂಬರಿಗಳಿರುತ್ತಿದ್ದವು. ಕಾದಂಬರಿಗಳನ್ನು ಓದುವಾಗ ನಮಗೆ ನಮ್ಮ ಘನತೆ ಹೆಚ್ಚಾಗುತ್ತಿರುವಂತೆ ಭಾಸವಾಗುತ್ತಿತ್ತು. ಇವುಗಳೊಂದಿಗೆ ಹೊಂದದ ಪದವನ್ನು ಗುರುತಿಸಿ ಎಂದು ಕೇಳಿದರೆ ಪ್ರಬಂಧಗಳನ್ನೇ ಗುರುತಿಸಬೇಕಾಗುತ್ತಿತ್ತು.

ಸಾಹಿತ್ಯದಲ್ಲಿ ಪ್ರಬಂಧಗಳೆಂಬ ವಿಶಿಷ್ಟ ಗದ್ಯ ಪ್ರಕಾರವಿದೆಯೆಂಬುದು ಅರಿವಿಗೆ ಬಂದರೂ ಅದರ ಕುರಿತು ಪ್ರಮುಖ ಅಧ್ಯಯನವೇನೂ ನಡೆದಂತಿಲ್ಲ. ವೀರೇಂದ್ರ ಸಿಂಪಿಯವರ ‘ಕನ್ನಡದಲ್ಲಿ ಲಲಿತ ಪ್ರಬಂಧಗಳು’(1972) ಡಾ. ಬಿ. ಎಚ್. ಶ್ರೀಧರ ಅವರ ‘ಪ್ರತಿಭೆ’, (1978) ಮುಂತಾದವು ಇದ್ದರೂ ಸಮಗ್ರವಾಗಿ ಪ್ರಬಂಧವೆಂದರೇನೆಂಬುದನ್ನು ನಿರೂಪಿಸಿದ್ದನ್ನು ನಾನು ಕಾಣಲಿಲ್ಲ. ಅದರ ಅಗತ್ಯವಿಲ್ಲವೆಂದು ಅನೇಕರು ತಿಳಿದಿರಬಹುದೇನೋ? ವ್ಯಾಕರಣವನ್ನು ಆಳವಾಗಿ ಅಭ್ಯಸಿಸದೆ ಭಾಷಾ ವಿದ್ವಾಂಸರಾಗುವುದಿಲ್ಲವೇ? ರೂಢಿಯ ಬಳಕೆಯನ್ನೇ ಬಂಡವಾಳವಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವಿದ್ವಾಂಸರನ್ನು ಜನಪದ ವಿದ್ವಾಂಸರೆಂದು ಹೇಳಬಹುದೇನೋ?

 ನಾನು ಸಾಹಿತ್ಯ ಪ್ರಬಂಧಗಳೆಂದು ನನ್ನದೊಂದು ಕೃತಿಯನ್ನು ಪ್ರಕಟನೆಗೆ ಕೊಟ್ಟಾಗ ಕೆಲವರಾದರೂ ಇದೇಕೆ ಹೀಗೆ ಎಂದು ಸಂಶಯ ತಾಳಿರಬಹುದು. ವಿಮರ್ಶೆಯೆಂಬ ಗಂಭೀರ ವಿದ್ವತ್ಪೂರ್ಣ ಶೀರ್ಷಿಕೆಯನ್ನು ನೀಡಿದರೆ ಪುಸ್ತಕದ ತೂಕ ತಾನಾಗಿಯೇ ಹೆಚ್ಚುತ್ತದೆಯೆಂದು ಕೆಲವರು ಸಲಹೆ ನೀಡಿದರು. ನನಗೆ ಆ ಧೈರ್ಯವಿರಲಿಲ್ಲ. ಆದ್ದರಿಂದ ನಾನು ಬರೆದ ವಿಮರ್ಶೆಯೂ ಪ್ರಬಂಧವೇ ಆಗಿರಬಹುದೆಂದು ನನ್ನ ಊಹೆ. ನಂತರದಲ್ಲಿ ಪ್ರಬಂಧಗಳ ಹೊಸ ಸೀಮೆಯ ಪರಿಚಯ ಸ್ವಲ್ಪಮಟ್ಟಿಗೆ ಆಯಿತೆಂದು ನನ್ನ ಅನುಭವ.

ಪ್ರಬಂಧವೆಂಬುದಕ್ಕೆ ಶಬ್ದಕೋಶದಲ್ಲಿ ಬರಹ, ಸರಣಿ, ಕಥೆ, ಬಂಧನ, ಎಡೆಬಿಡದ ಕೆಲಸ, ಗ್ರಂಥರಚನೆ, ಒಂದು ಬಗೆ ಗದ್ಯ, ಸಂದರ್ಭ, ಸಂಬಂಧ, ತಮಿಳು ವೇದ ಮುಂತಾದ ನಿಂತು ಓದಿದರೆ ತಲೆತಿರುಗುವಷ್ಟು ಅರ್ಥಗಳಿವೆ. ಛಂದೋಂಬುಧಿ, ಕಾವ್ಯಾವಲೋಕನ, ಬಸವಪುರಾಣಗಳಲ್ಲಿ ಈ ಪದದ ಉಲ್ಲೇಖವಿದೆಯೆಂದು ತಿಳಿದೆ. ಆದರೆ ಅಲ್ಲೂ ಈ ಪದದ ವ್ಯತ್ಪತ್ತಿ ನನಗೆ ಸಿಗಲಿಲ್ಲ. ವ್ಯಾವಹಾರಿಕವಾಗಿ ನಮ್ಮ ವಿಶ್ವವಿದ್ಯಾನಿಲಯಗಳು ಮಹಾ ಪ್ರಬಂಧ, ಸಂಪ್ರಬಂಧ ಎಂದೆಲ್ಲ ಬಳಸುವಾಗ ಅದೇನೆಂದು ವಿಚಾರಿಸುವ ಗೋಜಿಗೆ ನಾನು ಮಾತ್ರವಲ್ಲ ಅಂತಹವುಗಳನ್ನು ರಚಿಸಿದವರೂ ಹೋಗಿರಲಿಕ್ಕಿಲ್ಲವೆಂಬ ನಂಬಿಕೆ ನನಗೆ. ಬ್ಯಾಂಕುಗಳಲ್ಲಿ ಕನ್ನಡದ ಪ್ರಯೋಗವಾದಾಗ ಮ್ಯಾನೇಜರ್ ಕೊಠಡಿಯಲ್ಲಿ ‘ಪ್ರಬಂಧಕರು’ ಎಂಬ ಅಭಿಧಾನವನ್ನು ಕಂಡು ನನಗೆ ಸಂತೋಷದ ಬದಲು ಅಚ್ಚರಿಯಾಯಿತು. ಒಬ್ಬರಲ್ಲಿ ಪ್ರಶ್ನಿಸಿದೆ: ‘‘ಇದೇನು ನಿಮಗೆ ಹೊಸ ತಲೆಬರಹ?’’ ಅವರು ‘‘ನನಗ್ಗೊತ್ತಿಲ್ಲ, ಹೆಡ್ ಆಫೀಸಿನಿಂದ ಎಲ್ಲ ಕಡೆಗೂ ಇಂತಹ ಬೋರ್ಡುಗಳು ಬಂದಿವೆ’’ ಎಂದು ಹೇಳಿ ಅಕ್ಷರಶಃ ಕೈತೊಳೆದುಕೊಂಡರು.

ಇಂತಹ ಸಮಯದಲ್ಲಿ ಕನ್ನಡದ ಹಳಬರು, ಹೊಸಬರು ಪ್ರಬಂಧಗಳನ್ನು ಬರೆಯುತ್ತಿದ್ದರು. ಅವುಗಳನ್ನು ನಾನೂ ಕುತೂಹಲದಿಂದಲೇ ಓದುತ್ತಿದ್ದೆ. ಪ್ರಬಂಧಗಳೆಂದು ಓದಿದ್ದು ಕಡಿಮೆ. ಅವುಗಳನ್ನು ಕಥೆಗಳೆಂದು ಓದಲೇ, ವೈಚಾರಿಕ ಬರಹಗಳೆಂದು ಒದಲೇ, ಹರಟೆಗಳೆಂದು ಓದಲೇ ಎಂಬ ಸಂದಿಗ್ಧದಲ್ಲಿ ಗಮನಿಸಿದರೆ ಆಗಲೇ ಅವುಗಳ ವೈವಿಧ್ಯ ನಿರೂಪಿಸಲ್ಪಟ್ಟಿತ್ತು. ವೈಚಾರಿಕ ಪ್ರಬಂಧಗಳು, ಲಲಿತ ಪ್ರಬಂಧಗಳು, ಹಾಸ್ಯ ಪ್ರಬಂಧಗಳು ಹೀಗೆಲ್ಲ ವಿಭಜಿಸಿ ಪ್ರಕಟಿಸಲಾಗುತ್ತಿತ್ತು. ಗೊರೂರು ರಾಮಸ್ವಾಮಿ ಅಯ್ಯಂಗಾರರು ಬರೆದ ಕೆಲವು ಕಥೆಗಳಿಗೆ ಸಾಹಿತ್ಯಾಸಕ್ತರು ಪ್ರಬಂಧಗಳು ಎಂಬ ಚೌಕಟ್ಟನ್ನು ನೀಡಿ ದೂರಮಾಡಿದಂತೆ ಕಂಡಿತು. ಅವರೇ ‘ಹೊಸಗನ್ನಡ ಪ್ರಬಂಧ ಸಂಕಲನ (1961)’ ಎಂಬ ಪುಸ್ತಕವನ್ನು ಹೊರತಂದಿದ್ದರು. ಅದರಲ್ಲಿ ಕನ್ನಡದ ಅನೇಕ ಹಿರಿಯರು ಬರೆದ ಲೇಖನಗಳೂ ಅಥವಾ ಅವರ ಕೃತಿಗಳಿಂದ ಆಯ್ದ ಭಾಗಗಳೂ ಇದ್ದವು. ಗೋರೂರರು ಈ ‘ಪ್ರಬಂಧ’ಗಳನ್ನು ಇಂಗ್ಲಿಷಿನ ‘ಎಸ್ಸೆ’ಗಳಿಗೆ ಸಮೀಕರಿಸಿದರು. ಸ್ವತಂತ್ರ ಮತ್ತು ಅನೌಪಚಾರಿಕ ಪ್ರಸಂಗ ವಿವರಣೆಗಳನ್ನೇ ಪ್ರಬಂಧಗಳೆಂದು ಆಯ್ದುಕೊಂಡಂತೆ ಕಾಣುತ್ತಿತ್ತು. ನವರತ್ನ ರಾಮರಾಯರ ನೆನಪುಗಳಲ್ಲಿನ ‘ಕೊಲೆಪಾತಕನ ಶಿಕಾರಿ’ ಒಂದು ಪ್ರಸಂಗ, ಶಿವರಾಮ ಕಾರಂತರ ‘ಸೀತೈತಾಳರು’ ಎಂಬ ಕಥನಬರಹ, ಮೈಸೂರು ವಾಸುದೇವಾಚಾರ್ ಅವರು ಬರೆದ ‘ಟೈಗರ್ ವರದಾಚಾರ್ಯರು’ ಎಂಬ ವ್ಯಕ್ತಿ ಕಥನ ಇವೆಲ್ಲ ಪ್ರಬಂಧಗಳಾಗಿದ್ದವು. ಹೇಗೂ ಇರಲಿ, ಇವೆಲ್ಲ ಒಳ್ಳೆಯ ಓದಿನ ಮುದವನ್ನು ನೀಡುವ ಬರಹಗಳಾಗಿದ್ದವು.

ಇವನ್ನು ಓದಿದನಂತರ ನನಗುಳಿದ ಸಂದೇಹಗಳಿಗೆ ಔಷಧ ರೂಪವಾಗಿ ಗೊರೂರರು ಬರೆದ ಪ್ರಸ್ತಾವನೆಯನ್ನೋದಿದೆ. ಆನಂತರ ತಿಳಿಯಿತು: ಅವರಿಗೂ ಪ್ರಬಂಧ ಎಂದರೇನೆಂದು ಮನವರಿಕೆಯಾಗಿರಲಿಲ್ಲ. ಇದೊಂದು ರೀತಿಯ ‘ಹಣ’ದ ನಿರೂಪಣೆಯಂತೆ. ಎಲ್ಲರಿಗೂ ಬೇಕು; ಎಲ್ಲರಿಗೂ ಗೊತ್ತಿದೆ; ಆದರೆ ಹೇಳಲು ಹೊರಟರೆ ಗಂಟಲಲ್ಲೇ ಉಳಿಯುವ ಸ್ವಾದ. ಗೊರೂರರು ಹೇಳುವುದು ಹೀಗೆ; ‘‘ಎಸ್ಸೆ ಎಂದರೆ ಏನು? ಎಂಬುದರ ಲಕ್ಷಣವನ್ನು ವಿವರಿಸಬಹುದಾದರೂ ಅಷ್ಟರಿಂದಲೇ ಅದರ ಸ್ವರೂಪವನ್ನು ಪೂರ್ಣವಾಗಿ ತಿಳಿಸಿದಂತೆ ಆಗುವುದಿಲ್ಲ. ಹೇಗೆ ಹೂವಿನ ಬಣ್ಣ ಗಾತ್ರ ವಾಸನೆ ಆಕಾರದಿಂದ ಮಾತ್ರವೇ ಹೂವನ್ನು ಪೂರ್ತಿ ವರ್ಣಿಸುವುದಕ್ಕಾಗುವುದಿಲ್ಲವೋ ಹಾಗೆ.’’ ಹೇಗೆ ವಿವರಿಸಿದರೂ ಇನ್ನು ಸ್ವಲ್ಪಉಳಿಯಿತು ಎಂಬಂತಿರುವ ಈ ಪ್ರಕಾರಕ್ಕೆ ಅವರು ಹೇಳಿದ ‘‘ಭಾವನೆಗಳನ್ನು ಗುರುತಿಸುವ ಒಂದು ಆತ್ಮೀಯ ನಿರೂಪಣೆ; ಭಾವಗದ್ಯ’’ ಎಂಬ ವ್ಯಾಖ್ಯಾನವೂ ಹೊಂದುವುದಿಲ್ಲ. ಹಾಗೆ ಹೇಳಿದರೆ ನಮ್ಮ ಅನೇಕ ವಿಮರ್ಶಕರು, ಗಂಭೀರ ಲೇಖಕರು ಬರೆದ ‘ವೈಚಾರಿಕ ಪ್ರಬಂಧ’ಗಳ ಗತಿಯೇನಾಗಬೇಕು?

ಇಂಗ್ಲಿಷ್ ಮತ್ತಿತರ ಐರೋಪ್ಯ ಅಥವಾ ಪಾಶ್ಚಾತ್ಯ ಜಗತ್ತಿನಲ್ಲಿ ಅನೇಕ ಶತಮಾನಗಳಿಂದ ಪ್ರಬಂಧಗಳು ಪ್ರಕಟವಾಗಿ ಸಾಹಿತ್ಯದ ಒಂದು ಮುಖ್ಯ ಅಂಗವಾಗಿವೆ. ಇನ್ನೇನೂ ಬರೆಯದಿದ್ದರೂ ಪ್ರಬಂಧಗಳನ್ನೇ ಬರೆದು ಪ್ರಖ್ಯಾತರಾದವರನೇಕ. ಇತರ ಪ್ರಕಾರಗಳಲ್ಲಿ ಬರೆದೂ ಪ್ರಬಂಧಕಾರರಾಗಿ ಪ್ರಖ್ಯಾತಿಯನ್ನು ಪಡೆದವರೂ ಸಾಕಷ್ಟಿದ್ದಾರೆ: ಚಾರ್ಲ್ಸ್ ಲ್ಯಾಂಬ್, ವಿಲಿಯಮ್ ಹ್ಯಾಜಲಿಟ್, ಬೇಕನ್, ಆರ್ವೆಲ್, ಮುಂತಾದವರನ್ನು ತಕ್ಷಣಕ್ಕೆ ಹೆಸರಿಸಬಹುದು.

ಕನ್ನಡದಲ್ಲೂ ಅನೇಕರು ಈ ಪ್ರಕಾರದಲ್ಲಿ ವ್ಯವಹರಿಸಿದ್ದಾರೆ. ಬೇಂದ್ರೆಯವರು ಸಾಕಷ್ಟು ಪ್ರಬಂಧಗಳನ್ನು ಬರೆದರು. ಅವರ ‘ಸಾವಿನ ಕೂಡ ಸರಸ’ ಎಂಬ ಪ್ರಬಂಧವನ್ನು ಗೋರೂರರು ಆಯ್ದುಕೊಂಡಿದ್ದರು. ‘ನಿರಾಭರಣ ಸುಂದರಿ’ ಎಂಬ ಅಪರೂಪದ ಗದ್ಯ ಕೃತಿಯಲ್ಲಿ ಬೇಂದ್ರೆಯವರು ಇವನ್ನು ‘ಹರಟೆಗಳು’ ಎಂದು ಕರೆದಿದ್ದಾರೆ. (ಈ ನಿಸ್ಪಹತೆ ಎಲ್ಲ ಪ್ರಬಂಧಖೋರರಿಗಿಲ್ಲ!) ಅವರು ಹಾಸ್ಯ, ಭಾವ, ವಿಚಾರ, ವ್ಯಂಗ್ಯ, ವಿಷಾದ ಇವನ್ನೆಲ್ಲ ಒಟ್ಟುಮಾಡಿ ಒಂದು ಹೊಸಬಗೆಯ ತಿಂಡಿಯನ್ನು ಉಣಬಡಿಸಿದ್ದಾರೆ. ವಿಮರ್ಶೆಯನ್ನು ಹೊಗಳಿಕೆಯೆಂದು ಲೇವಡಿಮಾಡಿದ್ದಾರೆ. (‘ಹಳತಿಗೆ ಹೊಳಪು ಮತ್ತು ಇತರ ಸಾಹಿತ್ಯ ಪ್ರಬಂಧಗಳು’ ಎಂಬ ನನ್ನ ಕೃತಿಯಲ್ಲಿರುವ ‘ಬೇಂದ್ರೆಯವರ ಹರಟೆಗಳು’ ಎಂಬ ಪ್ರಬಂಧದಲ್ಲಿ ಈ ಕುರಿತು ಚರ್ಚಿಸಿದ್ದೇನೆ.)

 ಇನ್ನು ಲಘು ಪ್ರಬಂಧಗಳು ಎಂಬ ರೀತಿಯಲ್ಲಿ ಅನೇಕ ಕೃತಿಗಳು ಬಂದಿವೆ; ಬರುತ್ತಿವೆ. ಇವು ನಿಜಕ್ಕೂ ಲಘುವಾಗಬಾರದು. ಹೇಳಿ ಮುಗಿಯಬಾರದು. ಮಳೆನಿಂತ ಮೇಲೂ ಮರದಿಂದ, ಸೂರಿನಿಂದ, ತೊಟ್ಟಿಕ್ಕುವ ಹನಿಗಳಂತೆ ಇವು ನಮ್ಮನ್ನು ಕಾಡಬೇಕು. ಹಗುರಾಗಲೂ ಬಾರದು. ಹೂ ತುಂಬಿದ ಮರದ ನೆರಳಿನಂತೆ ಹೂವಿಗಿಂತಲೂ ಹಗುರಾದರೂ ಭೂಮಿತೂಕದ ಹಕ್ಕಿಯಾಗಬೇಕು. ಶ್ರೀನಿವಾಸ ವೈದ್ಯರ ‘ಗಂಡಭೇರುಂಡ’ ಎಂಬ ಮಾಸ್ತಿ ಸಂಪ್ರದಾಯದ ಒಂದು ಒಳ್ಳೆಯ ಕಥೆಯು ಶಿವಕುಮಾರ್ ಅವರು ಪ್ರಕಟಿಸುತ್ತಿದ್ದ ಅಪರಂಜಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆದ್ದರಿಂದ ಅದನ್ನು ಲಘುಹರಟೆಯೆಂದೋ, ಹಾಸ್ಯ ಲೇಖನವೆಂದೋ, ನಗೆಬರೆಹವೆಂದೋ ಓದಿದವರೇ ಜಾಸ್ತಿ. (ಅವರ ‘ಶ್ರದ್ಧಾ’ ಎಂಬ ಕಥೆಯೂ ಹೀಗೆಯೇ ಪ್ರಕಟವಾಗಿತ್ತು!) ಹೀಗೆ ಓದಿದ್ದರಿಂದ ಕನ್ನಡ ಕಥಾಪ್ರಪಂಚಕ್ಕೆ ಅನ್ಯಾಯವಾಯಿತೆಂದೇ ನನ್ನ ತರ್ಕ. ಬೀಚಿ, ವಿ.ಜಿ.ಭಟ್ಟ, ಬಿಳಿಗಿರಿ ಮುಂತಾದವರ ಬರಹಕ್ಕೂ ಈ ಗತಿ ಪ್ರಾಪ್ತವಾಗಿದೆ. ಹೀಗಾಗಿ ನಾವು ಏನೇ ಮಾಡಬೇಕಾದರೂ, ಬರೆಯಬೇಕಾದರೂ ಕುಣಿಯುವ ರಂಗಸ್ಥಳವನ್ನು ಆಯ್ಕೆಮಾಡಬೇಕು. ಇಂದು ಹಾಸ್ಯ ಪ್ರಬಂಧಗಳು ಜನಪ್ರಿಯವೇ? ಇರಬಹುದು. ಅದಕ್ಕಾಗಿಯೇ ಒಂದು ವಿಭಾಗವಿದೆ. ಹಲವಾರು ಲೇಖಕರು ಓದುಗರು ನಗಬೇಕೆಂಬ ಇರಾದೆಯಿಂದ ಬರೆಯುತ್ತಾರೆ. ಅವು ಅತ್ತ ಹಾಸ್ಯವೂ ಆಗದೆ, ಇತ್ತ ಹರಟೆಯೂ ಆಗದೆ, ಲಲಿತ ಕಲೆಯ ಒಂದೆಳೆಯೂ ಇರದೆ ಲೇಖಕನನ್ನೂ, ಓದುಗನನ್ನೂ ಹಾಸ್ಯಾಸ್ಪದವಾಗಿಸುವುದುಂಟು. ಇವುಗಳ ಜೊತೆಗೆ ಪ್ರಕಟವಾಗುವ ಹಾಸ್ಯ ಚಿತ್ರಗಳೇ ಕೆಲವೊಮ್ಮೆ ಜೀವರಕ್ಷೆಯಾಗುತ್ತವೆ. ಇನ್ನು ಕೆಲವು ಬಾರಿ ಪ್ರಬಂಧಗಳ ನೆಪದಲ್ಲಿ ತನ್ನನ್ನು ವೈಭವೀಕರಿಸುವುದು, ಇನ್ನೊಬ್ಬರನ್ನು ಹಳಿಯುವುದು ಇವೆಲ್ಲ ನಡೆಯುತ್ತವೆ.

 ಅನೇಕ ಬಾರಿ ಪ್ರಬಂಧಗಳು ಎಲ್ಲೋ ಶುರುವಾಗಿ ಎಲ್ಲೋ ತಲುಪುವ, ಅಥವಾ ಒಂದು ವಿಚಾರಕ್ಕೆ ಸಂಬಂಧಿಸಲು ತಿಣುಕುವ ವ್ಯಾಯಾಮವಾಗುತ್ತವೆ. ಜನಪ್ರಿಯವಾದ ‘ತೆಂಗಿನ ಮರ ಮತ್ತು ದನ’ ಇದಕ್ಕೆ ಯಥೋಚಿತವಾದ ಪ್ರಬಂಧ. (ಗೊತ್ತಿಲ್ಲದವರಿಗೆ ನೆನಪು ಮಾಡಲು ಸ್ವಲ್ಪದರಲ್ಲೆ ವಿವರಿಸುತ್ತೇನೆ: ನಾಳೆೆ ತೆಂಗಿನ ಮರ ಅಥವಾ ದನ ಈ ಕುರಿತು ಪ್ರಬಂಧ ಬರೆಯಲು ಹೇಳುತ್ತೇನೆಂದು ಶಿಕ್ಷಕರು ಹೇಳಿದ್ದರಿಂದ ವಿದ್ಯಾರ್ಥಿಗಳು ಅಭ್ಯಾಸ ಮಾಡಿದರು. ದುರದೃಷ್ಟಕ್ಕೆ ದನದ ಬಗ್ಗೆ ಅಭ್ಯಾಸ ಮಾಡಿದವನಿಗೆ ತೆಂಗಿನ ಮರದ ಕುರಿತು ಬರೆಯಲು ಹೇಳಿದರು. ಆತ ತಾನು ದನದ ಬಗ್ಗೆ ಕಲಿತದೆಲ್ಲವನ್ನೂ ಹೇಳಿ ಕೊನೆಗೆ ಹುಲ್ಲು ಮೇಯುವಾಗ ಅದು ತಪ್ಪಿಸಿಕೊಳ್ಳದಂತೆ ಅದನ್ನು ತೆಂಗಿನಮರಕ್ಕೆ ಕಟ್ಟುತ್ತಾರೆ ಎಂದು ಮುಗಿಸಿದನಂತೆ; ಇನ್ನೊಬ್ಬ ದುರದೃಷ್ಟಶಾಲಿ ತೆಂಗಿನಮರದ ಕುರಿತು ಕಲಿತು ಬಂದರೆ ಆತನಿಗೆ ದನದ ಬಗ್ಗೆ ಬರೆಯಲು ಹೇಳಿದರು. ಆತನೂ ಹೀಗೆಯೇ ತೆಂಗಿನಮರದ ಬಗ್ಗೆ ತಾನು ಕಲಿತದ್ದೆಲ್ಲವನ್ನು ಬರೆದು ಕೊನೆಗೆ ಅದಕ್ಕೆ ದನವನ್ನು ಕಟ್ಟುತ್ತಾರೆ ಎಂದು ಮುಗಿಸಿದನಂತೆ.) ಹೀಗೆಂದರೆ ಪ್ರಬಂಧಗಳನ್ನು ಅಲಕ್ಷಿಸಿದಂತಾಗುವುದಿಲ್ಲ. ಇಪ್ಪತ್ತನೇ ಶತಮಾನದ ಸಾಹಿತ್ಯದ ಕುರಿತು ಕರ್ನಾಟಕ ಸಾಹಿತ್ಯ ಅಕಾಡಮಿಯು ಕಾವ್ಯ, ಸಣ್ಣಕತೆ, ಸಂಶೋಧನೆ, ಸಾಹಿತ್ಯ ವಿಮರ್ಶೆ, ಮಕ್ಕಳ ಸಾಹಿತ್ಯ, ಹೀಗೆ ಐದು ಸಂಪುಟಗಳನ್ನು ತಂದಿತು. ನಾಟಕ, ಕಾದಂಬರಿಯಂತಹ ಪ್ರಕಾರಗಳನ್ನು ಪ್ರಕಟಿಸುವುದು ಶಕ್ಯವಲ್ಲವೆಂದು ಅಕಾಡಮಿ ತಿಳಿಯಿತೋ ಏನೋ ಗೊತ್ತಿಲ್ಲ. ಆದರೆ ಪ್ರಬಂಧಗಳನ್ನು ಪ್ರಕಟಿಸದೆ ಭವಿಷ್ಯದ ಕಾಲಕೋಶವನ್ನು ಕಿಂಚಿದೂನ ಮಾಡಿತೆಂದು ಅನ್ನಿಸುತ್ತದೆ.

ಕನ್ನಡದಲ್ಲಿ ಒಳ್ಳೆಯ ಪ್ರಬಂಧಗಳು ಬಂದಿವೆ. ಕಷ್ಟವಾಗುವುದೆಂದರೆ ಇವನ್ನು ಲೇಖಕರು ಒಪ್ಪದ ಒಂದು ವರ್ಗಕ್ಕೆ ಸೇರಿಸುವ ಅನಿವಾರ್ಯತೆಯಿರುವುದು. ಹುಟ್ಟು-ಬದುಕು-ಸಾವು ಈ ಮೂರು ಉರುಳುಗಳಿಗೆ ತಲೆಯೊಡ್ಡುವ ಯಾವನೇ ಬರಹಗಾರನಿಗೆ ಯಾವುದೂ ಲಲಿತವಲ್ಲ, ಹಾಸ್ಯವಲ್ಲ, ಸರಳವಲ್ಲ, ವೈಚಾರಿಕವೂ ಅಲ್ಲ, ಭಾವಸೂಚಕವೂ ಅಲ್ಲ. ಅವು ಒಂದು ಗೊತ್ತಾದ ಇಲ್ಲವೇ ನಿಗದಿತವಾದ ಮನೋಭಾವದ ಸ್ಥಿತಿಯಲ್ಲಿ ಉಂಟಾಗುವ ಅತಾರ್ಕಿಕವಾದ ಯೋಚನಾಶೈಲಿ; ಸಂಚಾರೀ ಮನೋಧರ್ಮ. ಅದು ಸಲುಗೆಯ ಮಾತು; ಗುರಿಯಿರದೆ ಬಿಟ್ಟ ಬಾಣ; ಜೊತೆಗೆ ಗಾಢವಾಗಿ, ನಿಗೂಢವಾಗಿ ಒಳಗೆಲ್ಲೋ ಹರಿಯುವಂತಹ ಜೀವರಸ. ಇವು ಆಪ್ತ ಗೆಳೆಯರಂತೆ. ನಡೆದಾಡುವ ಯಾರದೋ ನೆರಳು ನಮ್ಮದೇ ಎಂದನಿಸುವಂತೆ.

 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)