varthabharthi


ಸಂಪಾದಕೀಯ

ಕ್ರೈಸ್ತರ ಮೇಲಿನ ದಾಳಿಯ ಹಿಂದಿರುವ ಜೂದಾಸ!

ವಾರ್ತಾ ಭಾರತಿ : 3 Apr, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಒಂದೆಡೆ ಕ್ರೈಸ್ತ ಸನ್ಯಾಸಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವಾಗಲೇ ‘ಯೇಸುವಿಗೆ ಜೂದಾಸನು ದ್ರೋಹ ಎಸಗಿದಂತೆ ಕೇರಳಕ್ಕೆ ಎಲ್‌ಡಿಎಫ್ ದ್ರೋಹ ವೆಸಗಿದೆ’ ಎಂದು ಪ್ರಧಾನಿ ಭಾಷಣ ಬಿಗಿಯುತ್ತಾರೆ. ಕೇರಳವನ್ನು ಉಗ್ರರ ನಾಡು, ಭಯೋತ್ಪಾದಕರ ಬೀಡು ಎಂದು ಕರೆಯುತ್ತಲೇ, ಮಗದೊಂದೆಡೆ ಕೇರಳದಲ್ಲಿರುವ ಕ್ರೈಸ್ತರ ಮತಗಳಿಗಾಗಿ ಬಿಜೆಪಿ ಜೊಲ್ಲು ಸುರಿಸುತ್ತಿದೆ. ಪ್ರಧಾನಿ ಮೋದಿಯ ಮಾತುಗಳಲ್ಲಿರುವ ಕಪಟತನ ಮತದಾರರ ಮುಖಕ್ಕೆ ರಾಚುವಂತಿದೆ. ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ‘ಫ್ರೀಡಂ ಹೌಸ್’ ಇತ್ತೀಚೆಗೆ ಬಿಡುಗಡೆಗೊಳಿಸಿದ ವರದಿಯೊಂದು ಭಾರತದಲ್ಲಿ ಅಸಹಿಷ್ಣುತೆಯ ವಾತಾವರಣವಿದ್ದು ಪತ್ರಕರ್ತರು, ಪ್ರತಿಭಟನಾಕಾರರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ವ್ಯಾಪಕವಾಗಿ ನಡೆಯುತ್ತಿವೆ. ಈ ಎಲ್ಲಾ ಕಾರಣಗಳಿಂದಾಗಿ ಭಾರತವು ಪೂರ್ಣ ಸ್ವಾತಂತ್ರದಿಂದ ಭಾಗಶಃ ಸ್ವಾತಂತ್ರದೆಡೆಗೆ ಸಾಗುತ್ತಿದೆಯೆಂದು ಅದು ಹೇಳಿದೆ.

ಇತ್ತೀಚೆಗೆ ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಕೇರಳದ ಕ್ರೈಸ್ತ ಸನ್ಯಾಸಿನಿಯರ ಮೇಲೆ ನಡೆದ ಹಲ್ಲೆ ಘಟನೆಯು ವರದಿಯ ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿದೆ. ಮಾರ್ಚ್ 19ರಂದು ಸೆಕ್ರೇಡ್ ಹಾರ್ಟ್ ಧಾರ್ಮಿಕ ಸಂಘಟನೆಗೆ ಸೇರಿದ ಇಬ್ಬರು ಕ್ರೈಸ್ತ ಸನ್ಯಾಸಿನಿಯರು, ಇಬ್ಬರು ಧಾರ್ಮಿಕ ಶಿಕ್ಷಣದ ವಿದ್ಯಾರ್ಥಿನಿಯರ ಜೊತೆ ದಿಲ್ಲಿಯಿಂದ ಒಡಿಶಾಗೆ ಪ್ರಯಾಣಿಸುತ್ತಿದ್ದಾಗ ಅವರನ್ನು ಕೆಲವು ಬಜರಂಗದಳ, ಎಬಿವಿಪಿ ಕಾರ್ಯಕರ್ತರು ಬಲವಂತವಾಗಿ ರೈಲಿನಿಂದ ಕೆಳಗಿಳಿಸಿದರು. ಈ ಕ್ರೈಸ್ತ ಸನ್ಯಾಸಿಯರು, ಇಬ್ಬರು ಬಾಲಕಿಯರನ್ನು ಮತಾಂತರಕ್ಕಾಗಿ ಕೊಂಡೊಯ್ಯುತ್ತಿದ್ದ್ದಾರೆಂದು ಆಪಾದಿಸಿದ ಕೇಸರಿ ಕಾರ್ಯಕರ್ತರು ಹದಿಹರೆಯದ ಬಾಲಕಿಯರ ಗುರುತುಚೀಟಿಯನ್ನು ತೋರಿಸುವಂತೆ ಹೇಳಿದರು ಮತ್ತು ಅವರ ಧರ್ಮ ಯಾವುದೆಂದು ತನಿಖೆ ನಡೆಸಿದರು. ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದರು. ಈ ನನ್‌ಗಳು ಕೇರಳದವರಾಗಿರುವುದರಿಂದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದರು. ಕ್ರೈಸ್ತರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಸಂಘಪರಿವಾರದ ದಾಳಿ ಭಾರತಕ್ಕೆ ಹೊಸತೇನೂ ಅಲ್ಲ. ಸ್ವತಂತ್ರ ಭಾರತದಲ್ಲಿ 1990ರ ದಶಕಗಳಿಂದಲೇ ಕ್ರೈಸ್ತ ವಿರೋಧಿ ಹಿಂಸಾಚಾರ ಆರಂಭಗೊಂಡಿತು. 1999ರಲ್ಲಿ ಒಡಿಶಾದ ಗ್ರಾಮವೊಂದರಲ್ಲಿ ಕ್ರೈಸ್ತ ಧರ್ಮದ ಪಾಸ್ಟರ್ ಗ್ರಹಾಂ ಸ್ಟುವರ್ಟ್ ಸ್ಟೇನ್ಸ್ ಅವರನ್ನು ಜೀವಂತವಾಗಿ ದಹಿಸಿದ ಘಟನೆಯಿಂದ ಇಡೀ ದೇಶವೇ ಆಘಾತಕ್ಕೀಡಾಗಿತ್ತು. ಪ್ರಸಕ್ತ ಜೈಲಿನಲ್ಲಿರುವ ಬಜರಂಗದಳದ ದಾರಾಸಿಂಗ್ (ರಾಜೇಂದ್ರ ಪಾಲ್) ಈ ಹೇಯಕೃತ್ಯದ ಸೂತ್ರಧಾರಿಯಾಗಿದ್ದ. ಗ್ರಹಾಂ ಸ್ಟೇನ್ಸ್ ಅವರು ಕುಷ್ಠರೋಗಿಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಜನರನ್ನು ಮತಾಂತರಿಸುತ್ತಿದ್ದು, ಆತ ಹಿಂದೂ ಧರ್ಮಕ್ಕೆ ಬೆದರಿಕೆಯಾಗಿದ್ದಾನೆಂದು ಆರೋಪಿಸಿತ್ತು.

      ಆಗ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವಿತ್ತು ಮತ್ತು ಲಾಲ್‌ಕೃಷ್ಣ ಅಡ್ವಾಣಿ ಗೃಹ ಸಚಿವರಾಗಿದ್ದರು. ಮೊದಲಿಗೆ ಅಡ್ವಾಣಿ ಅವರು ತನಗೆ ಬಜರಂಗ ದಳ ಕಾರ್ಯಕರ್ತರ ಬಗ್ಗೆ ಚೆನ್ನಾಗಿ ತಿಳಿದಿದ್ದು, ಈ ಬರ್ಬರ ಕೃತ್ಯವನ್ನು ಎಸಗಿದವನು ಆ ಸಂಘಟನೆಗೆ ಸೇರಿದವನಾಗಿರಲಿಕ್ಕಿಲ್ಲವೆಂದು ಹೇಳಿದ್ದರು. ಗ್ರಹಾಂ ಸ್ಟೇನ್ಸ್ ಹತ್ಯೆ ಘಟನೆ ಎಷ್ಟು ಭಯಾನಕವಾಗಿತ್ತೆಂದರೆ ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರು, ಈ ಹತ್ಯೆಯು ‘ಜಗತ್ತಿನ ಕರಾಳಕೃತ್ಯಗಳ ಪಟ್ಟಿಗೆ ಸೇರಿದೆ’ ಎಂದು ಆಘಾತ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಎನ್‌ಡಿಎ ಸರಕಾರವು ಮುರಳಿ ಮನೋಹರ ಜೋಷಿ, ಜಾರ್ಜ್ ಫೆರ್ನಾಂಡಿಸ್ ಹಾಗೂ ನವೀನ್ ಪಟ್ನಾಯಕ್ ನೇತೃತ್ವದ ಉನ್ನತ ಮಟ್ಟದ ಸಚಿವರ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿತ್ತು. ಎನ್‌ಡಿಎ ಸರಕಾರವನ್ನು ಅಸ್ಥಿರಗೊಳಿಸುವ ಅಂತರ್‌ರಾಷ್ಟ್ರೀಯ ಸಂಚಿನ ಭಾಗವೆಂದು ಈ ತಂಡವು ಅಭಿಪ್ರಾಯಿಸಿತು. ಇದೇ ವೇಳೆ ಘಟನೆಯ ತನಿಖೆಗಾಗಿ ಎಲ್.ಕೆ. ಅಡ್ವಾಣಿ ಅವರು ವಾಧ್ವಾ ಆಯೋಗವನ್ನು ನೇಮಿಸಿದರು. ದಾರಾಸಿಂಗ್ ಬಜರಂಗದಳ ಕಾರ್ಯಕರ್ತನಾಗಿದ್ದು ಆತ ವನವಾಸಿ ಕಲ್ಯಾಣ ಆಶ್ರಮ, ವಿಶ್ವ ಹಿಂದೂ ಪರಿಷದ್‌ನಂತಹ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಮತ್ತು ಗ್ರಹಾಂ ಸ್ಟೇನ್ಸ್ ಹತ್ಯೆ ಘಟನೆಯಲ್ಲಿ ಆತ ಮುಖ್ಯ ಪಾತ್ರ ವಹಿಸಿದ್ದನೆಂದು ವಾಧ್ವಾ ಆಯೋಗ ಅಭಿಪ್ರಾಯಿಸಿತು. ಗ್ರಹಾಂ ಸ್ಟೇನ್ಸ್ ಅವರು ಬಡಜನರು, ರೋಗಿಗಳ ಸೇವೆಯಲ್ಲಿ ನಿರತರಾಗಿದ್ದು ಅವರು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಕ್ರೈಸ್ತರ ಸಂಖ್ಯೆಯಲ್ಲಿ ಯಾವುದೇ ಗಣನೀಯ ಏರಿಕೆಯಾಗಿಲ್ಲವೆಂದು ಅದು ತಿಳಿಸಿತ್ತು.

ಆನಂತರ ಆದಿವಾಸಿ ಪ್ರದೇಶಗಳಾದ ಗುಜರಾತ್‌ನ ಡಾಂಗ್ಸ್, ಮಧ್ಯಪ್ರದೇಶದ ಜಬುವಾ ಹಾಗೂ ಒಡಿಶಾದಲ್ಲಿ ಕ್ರೈಸ್ತ ವಿರೋಧಿ ಹಿಂಸಾಚಾರಗಳು ಪದೇ ಪದೇ ವರದಿಯಾಗತೊಡಗಿದವು. ಪ್ರತಿ ವರ್ಷವೂ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಕ್ರೈಸ್ತರ ವಿರುದ್ಧ ಹಿಂಸಾಚಾರದ ಘಟನೆಗಳು ನಡೆಯತೊಡಗಿದವು. 2008ರಲ್ಲಿ ಒಡಿಶಾದ ಕಂದಮಾಲ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ನೂರಾರು ಕ್ರೈಸ್ತರು ಪ್ರಾಣಗಳನ್ನು ಕಳೆದುಕೊಂಡರು ಮತ್ತು ನೂರಾರು ಚರ್ಚ್‌ಗಳು ಬೆಂಕಿಗಾಹುತಿಯಾದವು ಹಾಗೂ ಸಾವಿರಾರು ಕ್ರೈಸ್ತರು ನಿರ್ವಸಿತರಾದರು. ದಿಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ರಾಷ್ಟ್ರೀಯ ಜನತಾ ನ್ಯಾಯಾಧಿಕರಣವು, ‘‘ಕಂದಮಾಲ್‌ನಲ್ಲಿ ನಡೆದಿರುವುದು ರಾಷ್ಟ್ರೀಯ ಅಪಮಾನವಾಗಿದೆ ಮತ್ತು ಮಾನವತೆಯ ಸಂಪೂರ್ಣ ವಿರೂಪವಾಗಿದೆ, ಈ ಹಿಂಸಾಚಾರದಲ್ಲಿ ಬದುಕುಳಿದವರಿಗೆ ಈಗಲೂ ಬೆದರಿಕೆ ಮುಂದುವರಿದಿದೆ, ಅವರಿಗೆ ರಕ್ಷಣೆ ಹಾಗೂ ನ್ಯಾಯದಾನದ ಲಭ್ಯತೆಯನ್ನು ನಿರಾಕರಿಸಲಾಗುತ್ತಿದೆ’’ ಎಂದು ಹೇಳಿದೆ. ಆದಿವಾಸಿ ಪ್ರದೇಶಗಳಲ್ಲಿ ಮಿಶನರಿಗಳ ಸಮಾಜಸೇವಾ ಚಟುವಟಿಕೆಗಳಿಗೆ ತಡೆಯೊಡ್ಡುವುದೇ ಈ ಅಪಪ್ರಚಾರದ ಹಿಂದಿರುವ ದುರುದ್ದೇಶವಾಗಿದೆ. ಆದಿವಾಸಿಗಳಿಗೆೆ ಸೂಕ್ತ ವೈದ್ಯಕೀಯ ಸೌಲಭ್ಯದ ಜೊತೆ ಅವರನ್ನು ಸಬಲೀಕರಣಗೊಳಿಸುವ ಕಾಯಕದಲ್ಲೂ ಮಿಶನರಿಗಳು ತೊಡಗಿದ್ದಾರೆ. ಇದು ಆರೆಸ್ಸೆಸ್‌ಗೆ ಅಸಹನೆಯ ವಿಷಯವಾಗಿದೆ. ಆರೆಸ್ಸೆಸ್ ಇದೀಗ ಆದಿವಾಸಿಗಳು, ಬುಡಕಟ್ಟು ನಿವಾಸಿಗಳನ್ನು ವೈದಿಕೀಕರಣ ಮಾಡುವ ಪ್ರಯತ್ನದಲ್ಲಿದೆ. ಅವರನ್ನು ಹಿಂದುತ್ವ ರಾಜಕೀಯದ ಭಾಗವಾಗಿಸಿ, ತಮ್ಮ ಆಯುಧಗಳನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

1980ರ ದಶಕದ ಬಳಿಕ ವಿಶ್ವಹಿಂದೂ ಪರಿಷತ್ ಹಾಗೂ ವನವಾಸಿ ಕಲ್ಯಾಣ ಆಶ್ರಮಗಳು, ಮಿಶನರಿಗಳು ಕೆಲಸ ಮಾಡುತ್ತಿರುವ ಆದಿವಾಸಿ ಪ್ರದೇಶಗಳಲ್ಲಿ ಸಕ್ರಿಯವಾಗಿವೆ. ಇಲ್ಲಿ ಸಾಮಾಜಿಕ ಕಾರ್ಯಕರ್ತರು ಆದಿವಾಸಿಗಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು, ಮಿಷನರಿಗಳು ಶಿಕ್ಷಣ, ಆರೋಗ್ಯದಂತಹ ವಿಷಯದಲ್ಲಿ ಆದಿವಾಸಿಗಳಿಗಾಗಿ ದುಡಿಯುವುದು ಆರೆಸ್ಸೆಸ್‌ಗೆ ಬೇಡವಾಗಿದೆ. ಕ್ರೈಸ್ತರ ಮೇಲಿನ ದಾಳಿಯ ಹಿಂದೆೆ ಆರೆಸ್ಸೆಸ್ ಎನ್ನುವ ಜೂದಾಸನ ಸಂಚಿದೆ ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ಇದರ ಜೊತೆಗೆ ಕೇಂದ್ರದ ಚುನಾಯಿತ ಸರಕಾರವು ಝಾನ್ಸಿಯಲ್ಲಿ ನಡೆದಂತಹ ಕೃತ್ಯಗಳಲ್ಲಿ ತೊಡಗಲು ಕೇಸರಿ ಕಾರ್ಯಕರ್ತರಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ. ಧರ್ಮದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವವರ ಸಮೂಹವನ್ನು ಸೃಷ್ಟಿಸುವಂತಹ ಈ ಕೇಂದ್ರ ಸರಕಾರದ ಪ್ರವೃತ್ತಿಯಿಂದ ಪ್ರಜಾಪ್ರಭುತ್ವಕ್ಕೆ ಭಾರೀ ಗಂಡಾಂತರ ಕಾದಿದೆ. ಚುನಾವಣೆಯ ಹೊತ್ತಿನಲ್ಲಿ ತಮಿಳುನಾಡು ಮತ್ತು ಕೇರಳದಲ್ಲಿ ಕ್ರೈಸ್ತರನ್ನು ಓಲೈಸಲು ಗರಿಷ್ಠ ಪ್ರಯತ್ನ ಮಾಡುತ್ತಿರುವ ಬಿಜೆಪಿ, ಉತ್ತರ ಭಾರತದಲ್ಲಿ ಕ್ರೈಸ್ತರ ಮೇಲಿನ ದಾಳಿಗೆ ಪರೋಕ್ಷ ಬೆಂಬಲ ನೀಡುತ್ತಿದೆ. ಮುಖ್ಯವಾಗಿ ಕ್ರೈಸ್ತರ ಮೇಲಿನ ದಾಳಿಗೆ ಹಿಂದುಳಿದ ವರ್ಗ ಮತ್ತು ದಲಿತರನ್ನೇ ಆರೆಸ್ಸೆಸ್ ಬಳಸಿಕೊಳ್ಳುತ್ತಿದೆ. ವೈದಿಕ ಚಿಂತನೆಗಳ ಸಂತ್ರಸ್ತರನ್ನೇ, ಸಂತ್ರಸ್ತರ ವಿರುದ್ಧ ಬಳಸುವ ತಂತ್ರ ಹಳೆಯದು. ಈ ನಿಟ್ಟಿನಲ್ಲಿ ತಳಸ್ತರದ ಜನರಲ್ಲಿ ಜಾಗೃತಿಯನ್ನು ಬಿತ್ತುವುದು, ವೈದಿಕೀಕರಣದ ಅಪಾಯಗಳ ಕುರಿತು ಅವರನ್ನು ಎಚ್ಚರಿಸುವುದು ಮತ್ತು ಅಹಿಂದ ವರ್ಗ ಸಂಘಟಿತವಾಗುವುದು ಆರೆಸ್ಸೆಸ್ ಸಂಚುಗಳನ್ನು ವಿಫಲಗೊಳಿಸಲು ಇರುವ ದಾರಿಗಳಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)